You are currently viewing ಗಝಲ್

ಗಝಲ್

ಬೆಳಗು ನಗುವ ಹೊತ್ತಿನಲ್ಲಿ ರಂಗೋಲಿಯಂತೆ ಬರುವ
ಜೋಡಿ ಜೀವ ನೀನು
ಬಾಳಿಗೆ ಬೆಳಕು ಚೆಲ್ಲುತ ಮುಗುಳ್ನಗೆ ಬೀರುವ ಜೋಡಿ
ಜೀವ ನೀನು.

ಯುಗ ಯುಗಗಳೇ ಕಳೆದರೂ ನಮ್ಮಿ ಪ್ರೇಮ
ಶಾಶ್ವತವು ಹೇಳಿದೆಯಲ್ಲವೇ.
ಮೊಗವು ಮೊಗ್ಗಿನ ಕಳೆಯಲಿ ಹೊಮ್ಮಿ ಭಾವ ತೂರುವ
ಜೋಡಿ ಜೀವ ನೀನು.

ವಸಂತ ಮಾಸದಿ ಚಿಗುರಿದ ಕನಸುಗಳು
ಉಯ್ಯಾಲೆಯಾಗಿವೆ.
ಶಾಂತ ಮನದಲಿ ಅರಳಿ ಪರಿಮಳ ತೋರುವ
ಜೋಡಿ ಜೀವ ನೀನು

ಹೃದಯ ಹೃದಯಗಳ ಬೆಸುಗೆ ಆ ದೇವನ ಕೃಪೆಯ
ರುಜು ಪಡೆದಿದೆ.
ಚಂದಿರನ ಒಸಗೆಯ ಜೊನ್ನ ಮಳೆ ಕೋರುವ ಜೋಡಿ
ಜೀವ ನೀನು.

ಅಗಲಲಾರದ ಅಮರ ವಿರಹಿಗಳೆಂದು ತಿಳಿದು
ಜಯಾ ಹಾಯಾಗಿಹಳು
ಸಲುಗೆಯ ಮಧುರ ತೋಳಬಂದಿ ಅರುಹಿ ಇರುವ ಜೋಡಿ
ಜೀವ ನೀನು

ಜಯಶ್ರೀ ಭ ಭಂಡಾರಿ
ಬಾದಾಮಿ