ಮಿಡಿವ ಹೊತ್ತಿನಲ್ಲಿ ಒಲವಿನೆದೆ ಬತ್ತಿಸಿ ಕಿಡಿಯ ಹಚ್ಚಿಸಿದೆಯೆಲ್ಲ ನೀನು
ನುಡಿವ ಚಿತ್ತದ ಸರಸದಲಿ ವಿರಸ ಬಿತ್ತುತ ಅಡಿಯ ಹೆಚ್ಚಿಸಿದೆಯಲ್ಲ ನೀನು
ಮಳೆಯಲಿ ಕೊಡೆಯ ನೆರಳಲಿ ಅರಳಿದ ಅನುರಾಗ ಗಾನ ಮರೆತೆಯೇನು
ಹೊಳೆಯ ದಂಡೆಯ ಮರಳಲಿ ಕೊರಳ ಕೊಂಕಿಸುತ ನಾದ ಬೆಚ್ಚಿಸಿದೆಯಲ್ಲ ನೀನು.
ಪ್ರೀತಿಯ ಪುಟಗಳನು ತಿರುವುತ ಕಾಲ ಕಳೆದಿದ್ದು ಗೊತ್ತಾಗಲೇ ಇಲ್ಲ
ಜತೆಯಲಿ ಹರಟುತ ಮಾಲಗಳಲೆಲ್ಲ ಸುತ್ತುತ ಮೆಚ್ಚಿಸಿದೆಯಲ್ಲ ನೀನು
ಹೃದಯ ಶ್ರೀಮಂತಿಕೆಗೆ ಸೋತು ಬೆಣ್ಣೆಯಂತೆ ಕರಗಿ ಹೋಗಿರುವೆನು
ನಿರ್ದಯದಲಿ ಎದ್ದು ನಡೆದು ಮಾತು ಮನವ ಚುಚ್ಚಿಸಿದೆಯಲ್ಲ ನೀನು
ಹೇಳದೆ ಹೋದ ಕಾರಣ ಹುಡುಕುತ ಜಯಾ ಹುಚ್ಚಿಯಂತಾಗಿಹಳು.
ತಾಳೆಯಾಗದ ನೋವ ಹೂರಣ ಸಿಡುಕುತ ಭಯ ಮುಚ್ಚಿಸಿದೆಯಲ್ಲ ನೀನು