You are currently viewing ಕುಲದ ಕತ್ತಲೆ ಕಳೆದು ಸಮತೆಯ ಬೆಳಕು ಬೀರಿದ ಕನಕ…

ಕುಲದ ಕತ್ತಲೆ ಕಳೆದು ಸಮತೆಯ ಬೆಳಕು ಬೀರಿದ ಕನಕ…

ಮನದ ಮಲೀನತೆ ತೊಳೆದು, ಕುಲದ ಕಸವ ಕಳೆದು ಸಮತೆಯ ಹೂ ಅರಳಿಸುವ ಮೂಲಕ ಇಡೀ ಮನುಕುಲವ ಬೆಳಗಿದ ದಾಸ ಶ್ರೇಷ್ಠರಲ್ಲಿ ಭಕ್ತ ಕನಕದಾಸರು ಸರ್ವಶ್ರೇಷ್ಠರು.

ಸಂಸಾರ ಸಂಗದ ಸಖ್ಯವನು ಕಂಡು, ಪರಿಸ್ಥಿತಿಯ ಪರಿಣಾಮ ವೈರಾಗ್ಯಮೂರ್ತಿಯಾಗಿ, ಅಧ್ಯಾತ್ಮದ ಮೇರು ಶಿಖರವಾಗಿ ಮಾನವ ಘನತೆಯನ್ನು ಉನ್ನತಿಗೇರಿಸಿದ ದಾರ್ಶನಿಕ ಕವಿ ಪರಂಪರೆಯಲ್ಲಿ ಕನಕದಾಸರಿಗೆ ವಿಶೇಷ ಸ್ಥಾನವಿದೆ.

ವ್ಯಷ್ಟಿನಿಷ್ಠ ಬದುಕಿನ ಜೊತೆಗೆ ಸಮಷ್ಟಿನಿಷ್ಠ ಬದುಕಿನೆಡೆಗೆ ಸದಾ ತುಡಿದ ಕನಕನ ಜೀವನವೇ ಮಾನವಕುಲಕ್ಕೆ ಮಹಾ ಆದರ್ಶ. ಕನಕನಂಥ ಘನಮಹಿಮನ ಜೀವನದ ಪುಟಗಳನ್ನು ಮುಗುಚಿ ನೋಡುವಾಗ ಕಲಿತನದ ಜೊತೆಗೆ ಕಬ್ಬಿಗನ ಚರಿತ್ರೆ ಅನಾವರಣಗೊಳ್ಳುತ್ತದೆ.

ಈಗಿನ ಹಾವೇರಿ ಜಿಲ್ಲೆ ‘ಬಾಡ’ ಮತ್ತು ‘ಬಂಕಾಪುರ’ ಭಾಗಕ್ಕೆ ಸೇರಿದ್ದ ಸುಮಾರು 78 ಗ್ರಾಮಗಳಿಗೆ ಡಣ್ಣಾಯಕನಾಗಿದ್ದ ಬೀರಪ್ಪ ಮತ್ತು ಬಚ್ಚಮ್ಮ ಎಂಬುವರ ಉದರಸಂಜಾತನಾದ ಕನಕದಾಸರ ಮೂಲ ಹೆಸರು ತಿಮ್ಮಪ್ಪ. ತಿರುಪತಿ ತಿಮ್ಮಪ್ಪನ ವರ ಪ್ರಸಾದದಿಂದಾಗಿ ಹುಟ್ಟಿದ್ದರಿಂದ ಇವರಿಗೆ ತಿಮ್ಮಪ್ಪ ಎಂದು ಹೆಸರಿಡಲಾಯಿತು.

ಕ್ರಿ.ಶ. 1488 ರಲ್ಲಿ ‘ಬಾಡ’ ಗ್ರಾಮದ ಪಾಳೇಗಾರಿಕೆಯ ಕುಟುಂಬದಲ್ಲಿ ಜನಿಸಿದ ಕನಕದಾಸರು, ಮುಂದೊಂದು ದಿನ ಈ ಲೋಕವೇ ಹಾಡಿ-ಹೊಗಳುವಂಥ ವ್ಯಕ್ತಿ ಆಗುತ್ತಾನೆ ಎಂಬುದನ್ನೂ ಯಾರೂ ಊಹಿಸಿರಲಿಲ್ಲ. ಬಾಲಕ ತಿಮ್ಮಪ್ಪ ಪ್ರಬುದ್ಧಾವಸ್ಥೆಗೆ ಬರುವ ಮುನ್ನವೇ ತಂದೆ ತೀರಿಕೊಂಡರು. ಅದಾದ ಕೆಲವೇ ದಿನಗಳಲ್ಲಿ ತಾಯಿಯೂ ಇಹಲೋಕ ತ್ಯಜಿಸಿದರು. ತಬ್ಬಲಿಯಾದ ಬಾಲಕ ತಿಮ್ಮಪ್ಪ ತಾರುಣ್ಯಕ್ಕೆ ಕಾಲಿಡುತ್ತಿರುವ ವೇಳೆಯಲ್ಲಿ ಅವನಿಗೆ ಅನಿರೀಕ್ಷಿತವಾಗಿ ಕನಕ(ಬಂಗಾರ)ಸಿಗುತ್ತದೆ. ಆ ಬಂಗಾರವನ್ನು ದಾನ-ಧರ್ಮ, ದೇವಾಲಯಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಇತ್ಯಾದಿ ಕಾರ್ಯಗಳಿಗೆ ವಿನಿಯೋಗಿಸುತ್ತಾನೆ. ತದನಂತರ ‘ಸುಜ್ಞಾನವಧೂಟಿ’ ಎಂಬ ಹೆಣ್ಣನ್ನು ಮದುವೆ ಆಗಿರುವುದಾಗಿ, ಅವಳಿಗೆ ಒಂದು ಗಂಡುಮಗು ಜನಿಸಿತೆಂದು, ಕಾಲಾನಂತರದಲ್ಲಿ ಮಡದಿ ಮಗು ಇಬ್ಬರೂ ಅಕಾಲಿಕ ಮರಣಕ್ಕೆ ತುತ್ತಾಗಿ, ಕನಕದಾಸರು ಸಂಸಾರ ಜೀವನಕ್ಕೆ ವಿಮುಖರಾಗಿ ಅಂತರ್ಮುಖಿಯಾಗುತ್ತ ನಡೆದರು ಎಂಬ ಉಲ್ಲೇಖಗಳು ಚರಿತ್ರೆಯಲ್ಲಿ ದಾಖಲಾಗಿವೆ. ಈ ಕಾರಣದಿಂದಾಗಿ ತಿಮ್ಮಪ್ಪನಾಯಕ ಕನಕನಾಗಿ ಮಾರ್ಪಡುತ್ತಾನೆ. ತಾತಾಚಾರ್ಯ ಎಂಬ ಗುರುಗಳ ಬಳಿ ಹೋಗಿ ದಾಸದೀಕ್ಷೆಯನ್ನು ಪಡೆದುಕೊಂಡ ಮೇಲೆ ಕನಕದಾಸರಾಗಿ ಪರಿವರ್ತನೆ ಹೊಂದುತ್ತಾರೆ. ಕನಕದಾಸರ ವ್ಯಕಿತ್ವಕ್ಕೆ ಕಲಿತನದ ಜೊತೆಗೆ ಕವಿತನದ ಅಭಿಧಾನವೂ ಅಂಟಿಕೊಂಡಿದೆ. ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂಗತಿಗಳಿಂದಾಗಿ ಮನುಷ್ಯಬದುಕು ವಿಕ್ಷಿಪ್ತಗೊಂಡ ಕಾಲವದು; ಜಾತಿಯು ಆ ಕಾಲಕ್ಕಾಗಲೇ ದೊಡ್ಡ ಸಮಸ್ಯೆಯಾಗಿತ್ತು. ಉನ್ನತ ವಿದ್ಯಾಭ್ಯಾಸ, ವೇದ ಪಾರಾಯಣ ಇತ್ಯಾದಿ ಕಾರ್ಯಗಳು ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿದ್ದವು. ಮುಸ್ಲಿಂರ ಧಾಳಿಯಿಂದಾಗಿ ವಿಜಯನಗರ ಸಾಮ್ರಾಜ್ಯವು ನಲುಗಿ ಹೋಗಿತ್ತು. ಈ ನಡುವೆ ಶ್ರೀಕೃಷ್ಣದೇವರಾಯನ ಕಾಲಾವಧಿಯಲ್ಲಿ ಸಂಗೀತ, ಸಾಹಿತ್ಯ, ಶಿಲ್ಪಕಲೆ ಇತ್ಯಾದಿ ಲಲಿತಕಲೆಗಳಿಗೆ ಎಲ್ಲಿಲ್ಲದ ಪ್ರೋತ್ಸಾಹ ಸಿಕ್ಕಿತು. ಇದೇ ಸಂದರ್ಭದಲ್ಲಿ ದಾಸಕೂಟ ಹುಟ್ಟಿಕೊಂಡಿತು. ಧಾರ್ಮಿಕವಾಗಿ ಹಿಂದೂ ಧರ್ಮದ ಪುನರುತ್ಥಾನ, ಪಾರಂಪರಿಕ ಆಚರಣೆ, ಮೌಲ್ಯಗಳ ಪುನರುಜ್ಜೀವನಗೊಳಿಸುವ ಸಲುವಾಗಿ ಶೈವ, ವೈಷ್ಣವ ಮತಗಳು ಸ್ಥಾಪಣೆಗೊಂಡವು. ಈ ಎಲ್ಲ ಬಗೆಯ ವಿದ್ಯಮಾನಗಳು ಕನಕದಾಸರ ವ್ಯಕ್ತಿತ್ವ ರೂಪಣೆಗೆ ಪ್ರೇರಕ ಸಂಗತಿಗಳಾದವು.


ಸಂಸಾರ ಬಂಧನದಿಂದ ಮುಕ್ತಿ ಹೊಂದಿದರೂ, ಅಲೌಕಿಕತೆಯನ್ನು, ವೈರಾಗ್ಯವನ್ನು ಆದರ್ಶದ ನೆಲೆಯಲ್ಲಿ ಪರಿಭಾವಿಸದೇ ಜೀವನದ ಸಹಜ ಮೌಲ್ಯವನ್ನಾಗಿ ಪ್ರತಿಪಾದಿಸಿದವರು ಕನಕದಾಸರು. ನೆಲಮುಖೀ ಚಿಂತನೆಯ ಅಪ್ಪಟ ದೇಶೀ ಪ್ರತಿಭೆಯಾಗಿ ಹೊರಹೊಮ್ಮಿದರು ಕನಕದಾಸರು. ಸಮಾಜದ ವಾಸ್ತವತೆಗೆ ಎಂದೂ ವಿಮುಖರಾಗದ ಕನಕದಾಸರು ಮನುಷ್ಯನ ಡಾಂಭಿಕತೆ, ಅನ್ಯಾಯ, ಅಧರ್ಮ, ಜಾತಿ-ಕುಲ, ಮತ ಪಂಥಗಳನ್ನು ನೇರವಾಗಿ ಟೀಕಿಸಿ, ಜೀವನಮೌಲ್ಯಗಳನ್ನೂ ಸಾಮಾಜಿಕ ಮೌಲ್ಯಗಳನ್ನೂ ತಮ್ಮ ಸಾಹಿತ್ಯದಲ್ಲಿ ಉದ್ದಕ್ಕೂ ಪ್ರಕಟಪಡಿಸಿದರು.

ಕನಕದಾಸರ ಸಾಹಿತ್ಯ ಸೃಜನೆ ಪ್ರಮಾಣದಲ್ಲಿ ಕಡಿಮೆಯೆನಿಸಿದರೂ ಅವರ ಕೀರ್ತನೆಗಳು, ಕೃತಿಗಳು ಪರಿಣಾಮದಲ್ಲಿ ಮಹತ್ವದ್ದೆನಿಸಿವೆ. ಮೋಹನತರಂಗಿಣಿ, ರಾಮಧಾನ್ಯ ಚರಿತೆ, ನಳಚರಿತ್ರೆ, ಹರಿಭಕ್ತಿಸಾರ, ನರಸಿಂಹ ಸ್ತವನ ಕೃತಿಗಳನ್ನು ಕನ್ನಡ ವಾಙ್ಞಯ ಲೋಕಕ್ಕೆ ನೀಡಿದ ಕನಕದಾಸರು, ನೂರಾರು ಕೀರ್ತನೆಗಳನ್ನು ರಚಿಸಿ ದಾಸಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದರು.

‘ದಾಸ ಸಾಹಿತ್ಯದ ಅಶ್ವಿನಿ ದೇವತೆ’ಗಳಲ್ಲಿ ಒಬ್ಬರಾದ ಕನಕದಾಸರು ಪುರಂದರದಾಸರ ಸಮಕಾಲೀನರಾಗಿದ್ದು, ತಮ್ಮ ಸಾಹಿತ್ಯದ ಮೂಲಕ ಕೀರ್ತನ ಮತ್ತು ಸಂಗೀತ ಕ್ಷೇತ್ರಕ್ಕೆ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ.

ಕನಕದಾಸರ ಮಹತ್ವದ ಕೃತಿ ‘ನಳಚರಿತ್ರೆ’. ಭಾಮಿನಿ ಷಟ್ಪದಿಯಲ್ಲಿ ರಚಿತಗೊಂಡ ಇದರ ಮೂಲ ವ್ಯಾಸಭಾರತದಲ್ಲಿದೆ. ನಳ-ದಮಯಂತಿಯರ ಕಲ್ಯಾಣ ಮಹೋತ್ಸವದ ಪ್ರಸಂಗವು, ರಾಜ್ಯವನ್ನು ಕಳೆದುಕೊಂಡು ಅನೇಕ ವಿಧದ ಕಷ್ಟಕೋಟಲೆಗಳಿಗೆ ಒಳಗಾಗಿ ದಂಪತಿಗಳು ಪಡುವ ಯಾತನೆ ಹೃದಯಸ್ಪರ್ಶಿಯಾಗಿದೆ. ಕನಕನ ಕಾವ್ಯ ಧೀಮಂತಿಕೆ ಇಲ್ಲಿ ವ್ಯಕ್ತವಾಗಿದೆ. ಹರಿನಾಮಸ್ಮರಣೆಯಿಂದುಂಟಾಗುವ ಪ್ರಯೋಜನವನ್ನು ಕುರಿತು ತಿಳಿಹೇಳುವುದರ ಜೊತೆಗೆ ಜೀವನಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಭಕ್ತಿಯ ಅನನ್ಯತೆಯನ್ನೇ ಮುಖ್ಯಮೌಲ್ಯವಾಗಿ ಸಾರಿದ ಕನಕದಾಸರ ಮತ್ತೊಂದು ಕೃತಿ ‘ಹರಿಭಕ್ತಸಾರ’. ಶತಕ ರೂಪದಲ್ಲಿ ರಚನೆಗೊಂಡ ಈ ಕೃತಿಯಲ್ಲಿ ಆತ್ಮ-ಪರಮಾತ್ಮ, ಭಕ್ತಿ-ವೈರಾಗ್ಯ, ಲೌಕಿಕ-ಪಾರಮಾರ್ಥಿಕ ವಿಚಾರಗಳು ಅತ್ಯಂತ ವಿಷದವಾಗಿ ಮೂಡಿಬಂದಿವೆ. ಕನ್ನಡದ ಶ್ರೇಷ್ಠ ಭಕ್ತಿಪ್ರಧಾನ ಕಾವ್ಯಗಳಲ್ಲಿ ಇದಕ್ಕೊಂದು ಅಗ್ರಸ್ಥಾನವಿದೆ.

ಕನಕದಾಸರ ‘ಮೋಹನ ತರಂಗಿಣಿ’ ಪುರಾಣಗಳ ಮೂಲ ಪ್ರೇರಣೆಯಿಂದ ರಚನೆಗೊಂಡ ಶೃಂಗಾರ ಪ್ರಧಾನ ಕಥನಕಾವ್ಯ. ಸಾಂಗತ್ಯ ಛಂದಸ್ಸಿನಲ್ಲಿ ರಚಿಸಲ್ಪಟ್ಟ ಈ ಕಾವ್ಯ ಬೃಹತ್ತಾದ ಮತ್ತು ಮಹತ್ತಾದ ಉದ್ಗ್ರಂಥ. ಭಾಗವತ ಧರ್ಮದ ಪ್ರಚಾರದ ಮುಖ್ಯ ಉದ್ದೇಶದೊಂದಿಗೆ ಕಾವ್ಯ ರಚನೆಗೊಂಡಿದ್ದರೂ, ರಾಜಕೀಯ ಉದ್ದೇಶವೂ ಅಡಕವಾಗಿರುವುದು ಗಮನೀಯ. ಇದು ಒಂದು ಬಗೆಯಲ್ಲಿ ಕೃಷ್ಣಚರಿತೆ. ಇಲ್ಲಿನ ಪಾತ್ರಗಳು ಪುರಾಣದವಾದರೂ ಈ ನೆಲದ ಗುಣಸತ್ವವನ್ನು ಮೈಗೂಡಿಸಿಕೊಂಡೇ ರೂಪುಗೊಂಡಿರುವುದು
ಗಮನಾರ್ಹ. ಪುರಾಣದ ವಸ್ತುವೊಂದನ್ನು ತತ್ಕಾಲೀನ ಜೀವನಕ್ಕೆ ಅನ್ವಯಿಸಿ ಭಕ್ತಿರಸದ ಮೇಲ್ಮೆಯನ್ನು ಕನಕದಾಸರು ಪ್ರಕೃತ ಕೃತಿಯಲ್ಲಿ ಸಾಧಿಸಿದ್ದಾರೆ.

ಕನಕದಾಸರು ಸಮಾಜಮುಖೀ ಚಿಂತಕರು ಎಂಬುದಕ್ಕೆ ಅವರ ‘ರಾಮಧಾನ್ಯಚರಿತೆ’ ಕೃತಿ ಉಲ್ಲೇಖಾರ್ಹ.
ರಾಗಿ ಮತ್ತು ಭತ್ತಗಳ ಮೂಲಕ ರಾಮನ ಮಹಿಮೆಯನ್ನು ಸಾರುವ ಉದ್ದೇಶ ಈ ಕಾವ್ಯದಲ್ಲಿ ಯಶಕಂಡಿದೆ. ದೇವರು ಭಕ್ತರ ಪಕ್ಷಪಾತಿ ಎಂಬುದನ್ನು ತಿಳಿಸುವ ರೀತಿಯಲ್ಲಿ ರಾಗಿ ಮತ್ತು ಭತ್ತಗಳ ನಡುವೆ ವಾದ ನಡೆಯಿಸಿ, ಅದರಲ್ಲಿ ರಾಗಿ ಜಯ ಗಳಿಸಿತೆಂದು ಅದಕ್ಕೆ ರಾಮನು “ರಾಘವ” ಎಂದು ಹೆಸರು ಇರಿಸಿದನು ಎಂಬುದನ್ನು ಕನಕದಾಸರು ಕಲ್ಪಿಸಿರುವರು. ಈ ಮೂಲಕ ಮೇಲು-ಕೀಳು, ಬಡವ- ಬಲ್ಲಿದ ಎಂಬ ಸಾಮಾಜಿಕ ವರ್ಗಸಂಘರ್ಷವನ್ನು ಪ್ರತಿಮಾತ್ಮಕವಾಗಿ ಈ ಕಾವ್ಯ ಕಟ್ಟಿಕೊಡುತ್ತದೆ. ಇಷ್ಟೇ ಅಲ್ಲದೇ ನರಸಿಂಹ ಸ್ತವನಗಳು, ಸಾವಿರಾರು ಕೀರ್ತನೆ, ಉಗಾಭೋಗಗಳು, ಸುಳಾದಿಗಳನ್ನು ರಚಿಸಿದ ಕನಕದಾಸರು, ಜಾತಿ ವ್ಯವಸ್ಥೆಯನ್ನು ನೇರವಾಗಿ ಪ್ರತಿಭಟಿಸಿದರು.


‘ಆತ್ಮ ಯಾವ ಕುಲ, ಜೀವ ಯಾವ ಕುಲ, ತತ್ವೇಂದ್ರಿಯಂಗಳ ಕುಲ ಯಾವುದು ಪೇಳಿರಯ್ಯ?’ ಎಂದು ಪ್ರಶ್ನಿಸುವ ಮುಖಾಂತರ ಸರ್ವರನ್ನೂ ಆತ್ಮಾವಲೋಕನಕ್ಕೆ ಈಡುಮಾಡಿದರು. ಧರ್ಮ, ಸಮಾಜ- ಸಂಸ್ಕೃತಿಯ ಬಗೆಗೆ ವಿಶಿಷ್ಟವಾಗಿ ಚಿಂತಿಸಿದ ಕನಕದಾಸರು ತಮ್ಮ ಅಪಾರವಾದ ಲೋಕಾನುಭವ, ಅಸಾಧಾರಣವಾದ ಕಾವ್ಯ-ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಿ-ತೀಡಿದರು. ‘ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು ಚಳ್ಳಪಿಳ್ಳೆ ಗೊಂಬೆಯಂತೆ ಆಡಿ ಹೋಯಿತು. ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ ಉಳ್ಳೆಪೊರೆಯಂತೆ ನೋಡೊ ಸಂಸಾರದಾಟವೊ’ ಎಂಬುದಾಗಿ ಜನಪದೀಯ ಶೈಲಿಯಲ್ಲಿ ಜೀವನದ ವಸ್ತುಸ್ಥಿತಿಯನ್ನು ಕಟ್ಟಿಕೊಡುವ ಕನಕದಾಸರು, ‘ತನು ನಿನ್ನದು ಜೀವನ ನಿನ್ನದು’, ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂಬ ಕೀರ್ತನೆಗಳ ಮೂಲಕ ಮನುಷ್ಯನ ಮನೋವ್ಯಾಧಿಗಳಿಗೆ ಮದ್ದು ನೀಡಿ, ಆತ್ಮಸ್ಥೈರ್ಯವನ್ನು ತಂದುಕೊಡುತ್ತಾರೆ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ…’ ಎನ್ನುವ ಅವರು ತುತ್ತಿನಚೀಲ ತುಂಬಿಸಿಕೊಳ್ಳುವ ಸಲುವಾಗಿ ಮಾಡುವ ಮನುಷ್ಯ ಪ್ರಯತ್ನಗಳ ವಾಸ್ತವತೆಯನ್ನು ಮನಗಾಣಿಸುತ್ತಾರೆ.

“ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ……?”ಎಂದು ಪ್ರಶ್ನಿಸುವ ಮೂಲಕ ಪ್ರತಿಯೊಬ್ಬರಲ್ಲಿಯೂ ಸ್ವಯಂಅರಿವಿನ ದೀವಿಗೆಯನ್ನು ಹೊತ್ತಿಸಿ, ಸಾಮಾಜಿಕ ಸಮಾನತೆಯ ಆಶಯವನ್ನು ಪ್ರತಿಪಾದಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ಕನಕದಾಸರು ಸಾರಿದ ಸಂದೇಶ, ತಾತ್ವಿಕತೆ ಮೌಲಿಕವಾದುದು. ನಾಡಿನ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಕೊಡುಗೆ ಅವಿಸ್ಮರಣೀಯ. ಇಂದಿನ ದಿನಮಾನಗಳಲ್ಲಿ

ರಾಜಕೀಯ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳು ಅಪವಿತ್ರಗೊಳ್ಳುತ್ತಿವೆ. ಮನುಷ್ಯನು ಜಾತಿ, ಮತ, ಪಂಥ, ಪಂಗಡಗಳಂಥ ಸೀಮಿತ ಪರಿಧಿಯೊಳಗೆ ಬಂಧಿಯಾಗುತ್ತಿದ್ದಾನೆ. ಮನುಷ್ಯತ್ವದ ನೈಜತೆಯನ್ನು ಮರೆಮಾಚಿ ಮುಖವಾಡ ಧರಿಸಿ, ಮಾನವೀಯತೆಗೆ ವಿಮುಖವಾಗುತ್ತಿರುವ ಈ ಹೊತ್ತಿನಲ್ಲಿ; ಮನುಷ್ಯ ‘ಸೋಗಲಾಡಿತನ’ವೇ ಮೌಲ್ಯವೆಂದು ಪರಿಭಾವಿಸುವ ದುಸ್ಥಿತಿಗೆ ಬಂದು ತಲುಪಿದ್ದಾನೆ. ಕೋಮುಘರ್ಷಣೆ, ಅನ್ಯಾಯ, ಅನಾಚಾರ, ಮೋಸ ವಂಚನೆಗಳು ಈ ಸಮಾಜದಲ್ಲಿ ನಡೆಯುತ್ತಲೇ ಇದ್ದು, ನಾಗರಿಕ ಸಮಾಜ ತಲೆತಗ್ಗಿಸುವಂಥ ಪರಿಸ್ಥಿತಿ ತಲೆದೋರಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಮಾನವೀಯತೆಯ ಪ್ರತೀಕರೆನಿಸಿದ ಸರ್ವಶ್ರೇಷ್ಠ ಕನಕದಾಸರ ಬದುಕು-ಬರೆಹಗಳೇ ನಮ್ಮ ಬಾಳಿನ ದೀವಿಗೆಗಳು ಎಂಬುದನ್ನು ಅರಿಯದಿದ್ದರೆ ಕನಕದಾಸರ ಜಯಂತ್ಯುತ್ಸವ ಆಚರಿಸುವುದು ನಿರರ್ಥಕವೆನಿಸುತ್ತದೆ.

ಡಾ. ಸಂಗಮೇಶ ಎಸ್. ಗಣಿ
ಮುಖ್ಯಸ್ಥರು, ಕನ್ನಡ ವಿಭಾಗ.
ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಕಾಮರ್ಸ್ ಕಾಲೇಜ್,
ಹೊಸಪೇಟೆ.
ಮೊ- 9743171324


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.