ರಾಮಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಸೋಮಣ್ಣನೆಂಬ ಪ್ರಾಮಾಣಿಕ ಬಡವ ವಾಸವಾಗಿದ್ದನು.ಅವನಿಗೆ ಮುದ್ದಾದ ಒಂದು ಗಂಡು ಮಗು ಇತ್ತು.ಇವನಿಗೆ ಪ್ರತಿಸ್ಪರ್ಧಿ ಎಂಬಂತೆ ಕಾಳೇಗೌಡ ಎಂಬ ವ್ಯಕ್ತಿ ಇದ್ದನು.ಅವನಿಗೂ ಒಬ್ಬ ಮುದ್ದಾದ ಗಂಡು ಮಗನಿದ್ದ. ಕಾಳೇಗೌಡ ಹುಟ್ಟಿನಿಂದಲೇ ಶ್ರೀಮಂತ.ಆದರೂ ವಿಪರೀತ ಜಿಪುಣ.ಹೀಗಿರುವಾಗ ಅನಕ್ಷರಸ್ಥನಾಗಿದ್ದ ಸೋಮಣ್ಣ ತನ್ನ ಬಡತನದಲ್ಲಿಯೂ ಹೇಗಾದರೂ ಮಾಡಿ ತನ್ನ ಇದ್ದ ಒಬ್ಬ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿ,ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಬೇಕೆಂಬ ಹಂಬಲ ಹೊಂದಿದ್ದ.ಅದರಂತೆ ಪ್ರತಿದಿನ ಕೂಲಿ ನಾಲಿ ಮಾಡಿ ಅದರಿಂದ ಬಂದ ಹಣದಲ್ಲಿ ಮಗನಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದನು.ಇತ್ತ ಕಾಳೇಗೌಡ ಊರಿನ ಪ್ರಭಾವಿ ವ್ಯಕ್ತಿಯಾಗಿದ್ದು ಜೊತೆಗೆ ಶ್ರೀಮಂತನು ಆಗಿದ್ದನು.ಬೇಕಾದಷ್ಟು ಹಣ ಅವನ ಖಜಾನೆಯಲ್ಲಿ ಕೊಳೆಯುತ್ತಿತ್ತು. ಆದರೆ ಅವನ ಮಗನೋ ಹುಟ್ಟು ಸೋಮಾರಿ.ತಂದೆ ಗಳಿಸಿದ್ದ ಹಣವನ್ನು ತಾನು ಖರ್ಚು ಮಾಡದೆ ಮಹಾಜಿಪುಣನಾಗಿದ್ದ.ತನ್ನ ಸ್ನೇಹಿತರೊಂದಿಗೆ ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಸ್ನೇಹಿತರ ಹಣವನ್ನು ಖರ್ಚು ಮಾಡಿಸುತ್ತಿದ್ದ. ಅದೇ ಊರಿನ ಅನಕ್ಷರಸ್ಥ ಸೋಮಣ್ಣ ಶಿಕ್ಷಣದ ಮಹತ್ವವನ್ನು ಅರಿತು,ತನ್ನ ಬಡತನದಲ್ಲೂ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ವ್ಯಾಸಂಗ ಮಾಡಿಸಿದ.ಮುಂದೆ ಮಗನಿಗೆ ಒಂದು ದೊಡ್ಡ ಸರ್ಕಾರಿ ಹುದ್ದೆಯು ಸಿಕ್ಕಿತು.ತಂದೆಯಂತೆ ಮಗನು ಪ್ರಾಮಾಣಿಕವಾಗಿ ಸರ್ಕಾರಿ ಸೇವೆ ಮಾಡಿ,ತಮ್ಮ ಬಡತನಕ್ಕೆ ನಾಂದಿ ಹಾಡಿ ಸುಖಜೀವನ ನಡೆಸುತ್ತಿದ್ದರು.ಆದರೆ ಇತ್ತ ಕಾಳೇಗೌಡ ತನ್ನ ಶ್ರೀಮಂತಿಕೆಯ ಮದದಿಂದ ಮೂರು ತಲೆಮಾರಿಗಾಗುವಷ್ಟು ಆಸ್ತಿ ನನ್ನಲ್ಲೇ ಇರುವಾಗ ಮಗನಿಗೆ ಏಕೆ ಶಿಕ್ಷಣ, ವಿದ್ಯಾಭ್ಯಾಸ ಎಂದು ಅಸಡ್ಡೆ ಮಾಡಿ ಮಗನಿಗೆ ಸರಿಯಾದ ಶಿಕ್ಷಣವನ್ನು ಕೊಡಿಸದೇ ಹಣದ ಹುಚ್ಚು ಹಿಡಿಸಿದ್ದ.ಹಣವಿದ್ದರೆ ವಿದ್ಯೆ ನಮ್ಮ ಕಾಲಕಸವಾಗಿರುತ್ತದೆ ಎಂದು ಮಗನಿಗೆ ಹೇಳಿ ಮಗನ ಜೀವನಕ್ಕೆ ತಂದೆಯೇ ಮುಳುವಾಗಿದ್ದ.ಆದರೆ ಜಿಪುಣನಾಗಿದ್ದ ಕಾಳೇಗೌಡ ತನ್ನ ಮನೆಯಲ್ಲಿದ್ದ ದೊಡ್ಡ ಪೆಟ್ಟಿಗೆಗಳಲ್ಲಿ ಸಾಕಷ್ಟು ಹಣವನ್ನು ಸಂಗ್ರಹಿಸಿಟ್ಟಿದ್ದ.
ಜೊತೆಗೆ ಪ್ರತಿದಿನ ಒಂದು ಬಿಡಿಗಾಸನ್ನು ಖರ್ಚು ಮಾಡದೆ ಬಂದ ಎಲ್ಲಾ ಹಣವನ್ನು ತಮ್ಮ ಮನೆಯಲ್ಲಿನ ಕಬ್ಬಿಣದ ಪೆಟ್ಟಿಗೆಗಳಲ್ಲಿ ಭದ್ರವಾಗಿ ತುಂಬಿಡುತ್ತಿದ್ದ.ಹೀಗಿರುವಾಗ ಅಕ್ಕ-ಪಕ್ಕದ ಊರಿನವರು ಇದನ್ನು ಗಮನಿಸುತ್ತಿದ್ದು,ಅಕ್ಕ-ಪಕ್ಕದ ಊರುಗಳಲ್ಲೆಲ್ಲ ಶ್ರೀಮಂತ ಕಾಳೇಗೌಡನ ಜಿಪುಣತನದ ಪುಕಾರು ಊರಲ್ಲೆಲ್ಲ ಹಬ್ಬಿತ್ತು. ಹೀಗಿರುವಾಗ ಅನ್ಯ ಕಾರ್ಯದ ನಿಮಿತ್ತ ಕಾಳೇಗೌಡ ಕುಟುಂಬ ಸಮೇತರಾಗಿ ಬೇರೆ ಊರಿಗೆ ಹೋಗುವ ಪ್ರಸಂಗ ಬರುತ್ತದೆ. ಜಿಪುಣನಾಗಿದ್ದ ಕಾಳೇಗೌಡ ಮುನ್ನೆಚ್ಚರಿಕೆಯಾಗಿ ತನ್ನ ಕಬ್ಬಿಣದ ಪೆಟ್ಟಿಗೆಗಳಿಗೆ ಭದ್ರವಾದ ಬೀಗವನ್ನು ಜಡಿದು,ತನ್ನ ಮನೆ ಬಾಗಿಲಿಗೆ ದೊಡ್ಡ ಭದ್ರವಾದ ಬೀಗವನ್ನು ಹಾಕಿ ಹೆಂಡತಿ ಮಕ್ಕಳೊಂದಿಗೆ ಹೊರಟನು.ಇತ್ತ ಇದನ್ನೇ ಹೊಂಚು ಹಾಕುತ್ತಿದ್ದ ಕಳ್ಳರ ಗುಂಪೊಂದು ಕಾಳೇಗೌಡನ ಮನೆಗೆ ಸರಿಸುಮಾರು 12 ಗಂಟೆ ರಾತ್ರಿಯ ಕತ್ತಲಿನಲ್ಲಿ ಮನೆಯ ಬಾಗಿಲನ್ನು ಒಡೆದು,ಭಾರಿ ಗಾತ್ರದ ದೊಡ್ಡ ಕಬ್ಬಿಣದ ಪೆಟ್ಟಿಗೆಗಳಲ್ಲಿ ತುಂಬಿಸಿಟ್ಟಿದ್ದ ಹಣವನ್ನೆಲ್ಲಾ ಕದ್ದೊಯ್ದಿದ್ದರು.ಮರುದಿನ ಊರಿಂದ ವಾಪಸ್ ಆಗಿದ್ದ ಕಾಳೇಗೌಡ ಮನೆಯ ಬೀಗ ಒಡೆದು ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಕಂಡು ಗಾಬರಿಯಿಂದ ಓಡಿ ಹೋಗಿ ದೊಡ್ಡ ಪೆಟ್ಟಿಗೆಗಳನ್ನು ತಡಕಾಡುತ್ತಾನೆ.ದೊಡ್ಡ ಪೆಟ್ಟಿಗೆಗಳೆಲ್ಲ ಖಾಲಿಯಾಗಿರುವುದನ್ನು ಕಂಡು ಎದೆ ಒಡೆದು ಪ್ರಾಣ ಬಿಟ್ಟನು.ಇತ್ತ ಸೋಮಣ್ಣನ ಮಗ ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ನೌಕರಿಯಲ್ಲಿದ್ದು ಸಾಕಷ್ಟು ಹಣ ಹೆಸರನ್ನು ಗಳಿಸಿದ್ದು ಇದೇ ಊರಿನ ಕಾರ್ಯಕ್ರಮ ಒಂದಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ.ಆ ಕಾರ್ಯಕ್ರಮಕ್ಕೆ ಅದೇ ಊರಿನ ಕಾಳೇಗೌಡನ ಮಗನು ಬಂದಿದ್ದ ಕೊನೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೋಮಣ್ಣನ ಮಗ ತನ್ನ ಬಡತನದ ಅನುಭವಗಳನ್ನು ಹಂಚಿಕೊಳ್ಳುತ್ತಾ,ನಮ್ಮ ತಂದೆ ಅನಕ್ಷರಸ್ಥನಾಗಿದ್ದರೂ ಬಡತನದಲ್ಲೇ ಉತ್ತಮ ಶಿಕ್ಷಣ ಕೊಡಿಸಿ ನನ್ನ ಜೀವನಕ್ಕೆ ದಾರಿದೀಪವಾದರು ಎಂದು ತಂದೆಯ ಶ್ರಮವನ್ನು ಸ್ಮರಿಸಿದನು.ಅಲ್ಲಿಯೇ ಕುಳಿತಿದ್ದ ಕಾಳೇಗೌಡನ ಮಗ ವೇದಿಕೆಯ ಮೇಲೆ ಬಂದು ತಮ್ಮ ತಂದೆಯ ಜಿಪುಣತನದಿಂದ ಮತ್ತು ಶ್ರೀಮಂತಿಕೆಯ ಮದದಿಂದ ತಾನು ಶಿಕ್ಷಣವನ್ನು ಕಲಿಯದೇ,ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿಯು ಆಗದೇ ಎಡಬಿಡಂಗಿಯಾಗಿರುವ ಕಥೆಯನ್ನು ಹೇಳುತ್ತಾ ಕಣ್ಣೀರು ಹಾಕಿದನು.ಅಲ್ಲಿ ನೆರೆದಿದ್ದ ಎಲ್ಲಾ ಸಭಿಕರನ್ನು ಕುರಿತು ಶ್ರೀಮಂತಿಕೆ ಶಾಶ್ವತವಲ್ಲ.ವಿದ್ಯೆ ಕದಿಯಲಾಗದ ಸಂಪತ್ತು.ವಿದ್ಯೆ ಇದ್ದರೆ ಹಣ,ಹೆಸರನ್ನು ಗಳಿಸಬಹುದು.ಅದಕ್ಕೆ ಉದಾಹರಣೆ ನಮ್ಮ ಊರಿನ ಸೋಮಣ್ಣನ ಮಗನೇ ಎಂದು ಹೇಳಿ ಹೊರಟನು.
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.