You are currently viewing ಸಾಹಿತ್ಯ ಸಾಗರಕ್ಕೆ ಸಾರಂಗಮಠರ ‘ತುಂಬಿದ ತೊರೆ’

ಸಾಹಿತ್ಯ ಸಾಗರಕ್ಕೆ ಸಾರಂಗಮಠರ ‘ತುಂಬಿದ ತೊರೆ’

ಅಧ್ಯಯನ, ಅಧ್ಯಾಪನವನ್ನು ವ್ರತದಂತೆ ಪಾಲಿಸಿಕೊಂಡು ಬರುತ್ತಿರುವ ಹುನಗುಂದದ ದಾನೇಶ್ವರಿ ಸಾರಂಗಮಠ ಅವರು ವಿಮರ್ಶೆಯನ್ನು ವಿನಯಶೀಲ ವಿವೇಚನೆಯ ಅವಲೋಕನಾಭಿವ್ಯಕ್ತಿ ಎಂದು ಪರಿಭಾವಿಸಿದ ಪರಿಣಾಮ ‘ತುಂಬಿದ ತೊರೆ’ ಮೊದಲ ವಿಮರ್ಶಾ ಲೇಖನಗಳ ಸಂಕಲನ ಪ್ರಕಟವಾಗಿದೆ.

ಕನ್ನಡ ಸಾಹಿತ್ಯ ಕ್ಷೇತ್ರ ವೈವಿಧ್ಯಮಯ ಪ್ರಕಾರಗಳಲ್ಲಿ ಮೈಚೆಲ್ಲಿಕೊಂಡಿದೆ. ಹೀಗೆ ಹರವಿಕೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನಕ್ಕೆ ತೊಡಗಿಕೊಂಡ ಪಕ್ವಮನಸ್ಸೊಂದರ ಪ್ರತಿಕ್ರಿಯಾತ್ಮಕ ಮತ್ತು ಅವಲೋಕನಾತ್ಮಕ ರೂಪದಲ್ಲಿ ಸಂಕಲನದ ಬಹುತೇಕ ಲೇಖನಗಳು ರೂಪುಗೊಂಡಿವೆ.

ಒಟ್ಟು ಇಪ್ಪತ್ತಾರು ಲೇಖನಗಳನ್ನು ಒಳಗೊಂಡಿರುವ ಈ ಕೃತಿಯು ಕಾದಂಬರಿ, ಕವಿತೆ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ ಇತ್ಯಾದಿ ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ಕೇಂದ್ರೀಕರಿಸಿಕೊಂಡಿದೆ.

ಕಲ್ಯಾಣದ ಚಾಲುಕ್ಯರ ಪ್ರಸಿದ್ಧ ದೊರೆ ಆರನೆಯ ವಿಕ್ರಮಾದಿತ್ಯನನ್ನು ನಾಯಕನನ್ನಾಗಿಸಿಕೊಂಡ ಸಿದ್ದಯ್ಯ ಪುರಾಣಿಕರ ಕಾದಂಬರಿ ‘ತ್ರಿಭುವನಮಲ್ಲ’ ಕುರಿತು ಸಾರಂಗಮಠರು ದೀರ್ಘ ಲೇಖನವನ್ನು ಬರೆದಿದ್ದಾರೆ. ಪುರಾಣಿಕರು ಐತಿಹಾಸಿಕ ಘಟನೆಗಳನ್ನು ಆಧರಿಸಿ ಬರೆದ ಕಾದಂಬರಿಯಲ್ಲಿ ‘ಸಂಘರ್ಷ’ವನ್ನು ವಸ್ತುನಿಷ್ಠವಾಗಿ ಗ್ರಹಿಸಿರುವುದನ್ನು ಪ್ರಸ್ತಾಪಿಸುವ ಲೇಖಕಿಯು, ಕಾದಂಬರಿಯನ್ನು ಬಹುಸೂಕ್ಷ್ಮವಾಗಿ ಬಹು ಆಯಾಮಗಳಿಂದ ನೋಡಿದ್ದಾರೆ. ಐತಿಹಾಸಿಕ ಘಟನೆಗಳನ್ನು ಅಂಕಿ-ಅಂಶಗಳ ದಾಖಲೆಯೆಂಬಂತೆ ಬರೆದುಬಿಡುವ ಅಪಾಯದಿಂದ ತಪ್ಪಿಸಿದ ಪುರಾಣಿಕರ ಹೆಣೆಗೆತಂತ್ರವನ್ನು ಸಾರಂಗಮಠರು ಸರಿಯಾಗಿ ಗುರುತಿಸಿದ್ದಾರೆ. ವಿಕ್ರಮಾದಿತ್ಯನ ಆಡಳಿತ, ಸ್ತ್ರೀಪರ ನಿಲುವು, ಕ್ಷಮಾಗುಣ ಹೀಗೆ ಅವನ ಒಟ್ಟು ವ್ಯಕ್ತಿತ್ವದ ಘನತೆಯನ್ನು ಕಾದಂಬರಿ ಚಿತ್ರಿಸುವುದನ್ನು ಸಂಭಾಷಣೆಯ ಮೂಲಕವೇ ಉಲ್ಲೇಖಿಸುವ ಲೇಖಕಿ, ಕಾದಂಬರಿ ವಸ್ತುವಿಶೇಷತೆಯು ಯಾವು ಕಾಲಕ್ಕೂ ಪ್ರಸ್ತುತ ಎಂದು ತಮ್ಮ ಅಭಿಪ್ರಾಯ ಮಂಡಿಸುವುದು ಅವರಲ್ಲಿನ ಆಳ ಅಧ್ಯಯನಕ್ಕೆ ಸಾಕ್ಷಿ.

ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಕೃಷ್ಣ ಆಲನಹಳ್ಳಿಯವರ ‘ಕಾಡು’ ವಿಶೇಷವಾದುದು. ಸಾಮಾಜಿಕ ವಸ್ತುವನ್ನು ಹೊಂದಿರುವ ‘ಕಾಡು’ ಕಾದಂಬರಿಯಲ್ಲಿ ಜಾನಪದೀಯ ಅಂಶಗಳನ್ನು ಪ್ರಸ್ತಾಪಿಸುವ ಲೇಖಕಿಯ ಪ್ರಯತ್ನ ಗಮನಾರ್ಹವೂ, ವಿಶೇಷವೂ ಆಗಿದೆ. ‘ಕಾಡು’ ಕಾದಂಬರಿ ಕುರಿತು ಬಂದಿರುವ ಈವರೆಗಿನ ಬಹುತೇಕ ಲೇಖನಗಳು, ಅಧ್ಯಯನಗಳು ಅದರಲ್ಲಿನ ಸಾಮಾಜಿಕ ಅಂಶಗಳು, ಪಾತ್ರವಿಶೇಷತೆ, ಹಳ್ಳಿಯ ಸೊಗಡು, ಭಾಷೆ, ನಿರೂಪಣೆ ಇತ್ಯಾದಿ ಸಂಗತಿಗಳ ಮೇಲೆ ಹೆಚ್ಚು ಕೇಂದ್ರೀಕೃತಗೊಂಡಿವೆ. ಆದರೆ ಸಾರಂಗಮಠರು ಮಾತ್ರ ಕಾದಂಬರಿಯಲ್ಲಿನ ಸಾಮಾಜಿಕ ಅಂಶಗಳಲ್ಲದೆ, ಜಾನಪದೀಯ ಸಂಗತಿಗಳನ್ನು ಪ್ರಸ್ತಾಪಿಸಿರುವುದು ಗಮನೀಯ. ಒಂದು ಹಳ್ಳಿಯ ‘ಕಾಡಿ’ನೊಳಗಿನ ಸಂಕೀರ್ಣ ಸನ್ನಿವೇಶಗಳ ಜೊತೆಗೆ ಸಾಮಾಜಿಕ ಸಂದಿಗ್ಧತೆಯ ಹೆಣೆಗೆಯನ್ನು ಬಿಡಿಸಿ ನೋಡುವ ಲೇಖಕಿಯ ನೋಟಕ್ರಮವು ಸಾರಂಗಮಠರಿಗೆ ದಕ್ಕಿದೆ ಎಂಬುದಕ್ಕೆ ಈ ಲೇಖನ ಪುರಾವೆಯೊದಗಿಸುತ್ತದೆ.

ಕಾದಂಬರಿಗಾರ್ತಿ ಎಂ.ಕೆ. ಇಂದಿರಾ ಅವರ ‘ಫಣಿಯಮ್ಮ’ ಹೆಚ್ಚು ಜನಮನ್ನಣೆ ಪಡೆದುಕೊಂಡ ಕಾದಂಬರಿ. ಅದು ಕನ್ನಡ ಕಾದಂಬರಿ ಲೋಕಕ್ಕೆ ವಿಶಿಷ್ಟ ಸೇರ್ಪಡೆ. ಮಲೆನಾಡ ಸೀಮೆಯಲ್ಲಿ ಸಾಂಪ್ರದಾಯಿಕ ಕುಟುಂಬದಲ್ಲಿ ವೈಧವ್ಯದ ಘೋರ ಶಾಪಕ್ಕೆ ಸಿಕ್ಕು ನಲುಗುವ ಫಣಿಯಮ್ಮ ಎದುರಿಸುವ ಸವಾಲು ಸನ್ನಿವೇಶಗಳನ್ನು ಅತ್ಯಂತ ಮನೋಜ್ಞವಾಗಿ ಕಟ್ಟಿಕೊಡುವ ಇಂದಿರಾ ಅವರ ಕುಸುರಿತನವನ್ನು ಮೆಚ್ಚುವ ಲೇಖಕಿ ದಾನೇಶ್ವರಿ, ಕಾದಂಬರಿ ಬಿಟ್ಟುಕೊಡುವ ಪ್ರಗತಿಪರ ಚಿಂತನೆಗಳನ್ನು ಪ್ರಸ್ತಾಪಿಸುತ್ತಾರೆ. ವೈಧವ್ಯದ ಶಾಪಕ್ಕೆ ಬಲಿಯಾದ ಪಾತ್ರಗಳುಳ್ಳ ಕನ್ನಡದ ಸುಪ್ರಸಿದ್ಧ ಕಾದಂಬರಿಗಳನ್ನೂ ನೆನಪಿಸಿಕೊಳ್ಳುವ ಲೇಖಕಿಗೆ ಕಾದಂಬರಿ ಲೋಕದ ತಿಳಿವು ಇರುವುದು ವೇದ್ಯವಾಗುತ್ತದೆ. ತನ್ನದಲ್ಲದ ಲೋಕವೊಂದರ ತಳಮಳವನ್ನು ತನ್ನದೇಯೆಂಬಂತೆ ಕಟ್ಟಿಕೊಟ್ಟ ಶಿವರಾಮ ಕಾರಂತರ ಶ್ರೇಷ್ಠ ಕಾದಂಬರಿ ‘ಚೋಮನದುಡಿ’. ದಲಿತ, ದಮನಿತ ಲೋಕಗಳ ಪ್ರತಿನಿಧಿ ಎಂಬಂತೆ ಕಾಣಿಸಿಕೊಂಡ ಚೋಮನ ಸಹಜ ಬಯಕೆಗಳೆಲ್ಲ ಆಳ್ವಿಕೆಯ ದರ್ಪ-ದೌರ್ಜನ್ಯಕ್ಕೆ ಬಲಿಯಾಗುವ ದುರಂತವನ್ನು ಚಿತ್ರಿಸಿದ ಕಾರಂತರ ಕಲಾತ್ಮಕ ಗುಣವನ್ನು ಗುರುತಿಸುವ ಲೇಖಕಿ, ‘ಚೋಮನದುಡಿ ಕಾದಂಬರಿಯು ಸಂವೇದನಶೀಲ ಸಹೃದಯ ಓದುಗರನ್ನು ಜಿಜ್ಞಾಸೆಗೆ ಹಚ್ಚುವ ಗುಣವನ್ನು ಪಡೆದುಕೊಂಡಿದೆ’ ಎಂದು ಅಭಿಪ್ರಾಯಿಸುತ್ತಾರೆ.



ದೇಸೀ ಸಂವೇದನೆ, ಗ್ರಾಮ್ಯ ಸಂಸ್ಕøತಿಯೊಂದಿಗೆ ಜಾಗತೀಕರಣದ ಸಂಗತಿಗಳನ್ನು ಜೋಡಿಸಿ ಹೇಳುವುದರಲ್ಲಿ ಚಂದ್ರಶೇಖರ ಕಂಬಾರರು ಹೆಚ್ಚು ಪ್ರಜ್ಞಾಪೂರ್ವಕವಾಗಿ ಅಭಿವ್ಯಕ್ತಿಯನ್ನು ದುಡಿಸಿಕೊಂಡವರು. ಅವರ ಕಾದಂಬರಿ ‘ಶಿವನ ಡಂಗುರ’ವೂ ಇದಕ್ಕೆ ಹೊರತಲ್ಲ. ಅವರ ಕಲ್ಪಿತ ‘ಶಿವಪುರ’ ಯಾವ ಕಾಲದ ‘ಜಗತ್ತೂ’ ಆಗಿದೆ. ಲೇಖಕಿ ಕಾದಂಬರಿಯಲ್ಲಿನ ಕನ್ನಡ ನೆಲದ ಸಂವೇದನೆಯನ್ನು ತನ್ಮೂಲಕ ನೇತ್ಯಾತ್ಮಕ ಅಂಶಗಳನ್ನು ಸಕಾರಣಗಳೊಂದಿಗೆ ಪ್ರಸ್ತಾಪಿಸುತ್ತಾರೆ. ಇದು ಅವರ ಗುಣಗ್ರಾಹಿತ್ವದ ಸಂಕೇತವಾಗಿದೆ. ಅಬ್ಬಾಸ್ ಮೇಲಿನಮನಿಯವರ ‘ಕೆರೆಗಳ ಆಯುಷ್ಯ ಮುಗಿಯದಿರಲಿ’ ಕಥೆ ಅವಲೋಕನ ಮಾಡಿದ ಸಾರಂಗಮಠರು, ಈಜುಗಾರ ನೀರನ್ನು ಹಿಂದೆ ತಳ್ಳಿ ಮುಂದೆ ಹೋಗುವ ಗುಣವನ್ನು ಕಥೆಗಾರರ ಅಬ್ಬಾಸ್ರಲ್ಲಿರುವುದನ್ನು ಗುರುತಿಸುತ್ತಾರೆ. ಎಸ್ಕೆ. ಕೊನೆಸಾಗರ ಅವರ ‘ಊರ್ಮಿಳೆಯ ಉರಿ’ ಕವನ ಸಂಕಲನದ ಬಗ್ಗೆ ಲೇಖಕಿಯು, ಊರ್ಮಿಳೆಯ ಉರಿಯ ಮೂಲಕ ಇಡೀ ಸ್ತ್ರೀಲೋಕದ ಯಾತನೆಯು ಕವಿತೆಗಳಲ್ಲಿ ಉಸುರುತ್ತಿರುವುದನ್ನು ದಾಖಲಿಸುತ್ತಾರೆ. ಅವ್ವನನ್ನು ಅನುಸಂಧಾನ ಮಾಡಿದ ಜಾಜಿಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ ಅವರ ‘ನನ್ನನ್ನು ಕವಿಯಾಗಿಸಿದಳು’ ಕವಿತೆಯಲ್ಲಿ ‘ಅವ್ವ ನಿನ್ನೆಯ ನೆನಪು ಇಂದಿನ ಮೆಲಕು ನಾಳೆಯ ಕನಸು’ ಎಂದು ವ್ಯಾಖ್ಯಾನಿಸುವ ಲೇಖಕಿ ದಾನೇಶ್ವರಿ ಅವರ ಕಾವ್ಯವಿಶ್ಲೇಷಣೆ ಮಾದರಿಯಾಗಿದೆ.

ದೊರೆ ಇಡಿಪಸ್: ಒಂದು ಟಿಪ್ಪಣಿ, ರ್ಯಾಂಡಿ ಪಾಶ್ ಅವರ ‘ದಿ ಲಾಸ್ಟ್ ಲೆಕ್ಚರ್’, ನಾಗರಾಜ ನಾಡಗೌಡರ ‘ವಚನ ಟೀಕು ಸಾಹಿತ್ಯ ಒಂದು ಅಧ್ಯಯನ’, ಶರಣಪ್ಪ ಹೂಲಗೇರಿ ‘ಮಾಡನ್ ಮಾನವರು’, ಸಿದ್ದಲಿಂಗಪ್ಪ ಬೀಳಗಿಯವರ ‘ಜೀವಪರ ಸೌಂದರ್ಯದ ಸಾವಿರದ ಸಾಲುಗಳು’, ಗುರು ಹಿರೇಮಠರ ‘ಬೆಳದಿಂಗಳ ನೊರೆ’, ಜಗದೀಶ ಹಾದಿಮನಿಯವರ ಪ್ರೇಮಮಯಿ’-ಖಂಡಕಾವ್ಯಕ್ಕೊಂದು ಟಿಪ್ಪಣಿ’ ಸೇರಿದಂತೆ ಸ್ಮರಣಸಂಚಿಕೆ, ಸಂಪಾದಕೀಯ, ಮುನ್ನುಡಿ-ಬೆನ್ನುಡಿ ಬಹುಪ್ರಕಾರಗಳ ಬರಹಗಳನ್ನು ಲೇಖಕಿ ದಾನೇಶ್ವರಿ ಸಾರಂಗಮಠರು ಇಲ್ಲಿ ಪೇರಿಸಿದ್ದಾರೆ.

ಕನ್ನಡದ ಮಹತ್ವದ ಕಾದಂಬರಿಗಳೂ ಸೇರಿದಂತೆ ಅನೇಕ ಕೃತಿಗಳ ಆಯ್ಕೆ, ಅಧ್ಯಯನ, ಅವಲೋಕನ, ಪರಿಶೀಲನೆ, ಗುಣಗ್ರಾಹಿತ್ವ, ಸೂಕ್ಷ್ಮಗ್ರಹಿಕೆ, ವಸ್ತುನಿಷ್ಠ ದೃಷ್ಟಿಕೋನ, ಉದ್ವೇಗರಹಿತ ಹೇಳಿಕೆ, ಸಮಚಿತ್ತದ ಸಂವಹನ, ಖಚಿತ ಅಭಿಪ್ರಾಯಗಳ ಮಂಡನೆ, ಬೌದ್ಧಿಕ ಪರಿಭಾಷೆಗಳ ಭಾರಕ್ಕೆ ನಲುಗದ ಭಾಷಾ ಬಳಕೆ ಮತ್ತು ಸರಳ ನಿರೂಪಣೆ ಇವು ದಾನೇಶ್ವರಿ ಸಾರಂಗಮಠ ಅವರ ಬರೆಹಗಳ ವೈಶಿಷ್ಟ್ಯತೆ. ಇಲ್ಲಿನ ವಿಮರ್ಶಾ ಲೇಖನಗಳು ಲಲಿತಪ್ರಬಂಧಗಳನ್ನು ಓದಿದ ಅನುಭವ ನೀಡುತ್ತವೆ ಎಂಬುದು ಸುಳ್ಳಲ್ಲ. ಕೃತಿಯ ಮುನ್ನುಡಿಯಲ್ಲಿ ‘ಕನ್ನಡ ಸಾಹಿತ್ಯದ ತಮ್ಮ ಆಳವಾದ ಓದನ್ನು ಆಗಾಗ ಬರೆಹದ ಮೂಲಕ ನಮ್ಮ ಕಣ್ಣಮುಂದೆ ತರುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಎಸ್ಕೆ. ಕೊನೆಸಾಗರ್ ದಾನೇಶ್ವರಿಯವರ ಬರೆಹಗಳನ್ನು ಮೆಚ್ಚಿಕೊಂಡು ಹಾರೈಸಿದ್ದಾರೆ. ‘ತಮ್ಮ ಓದಿನ ಕಕ್ಷೆಗೆ ಸಿಕ್ಕ ಜ್ಞಾನಶಿಸ್ತುಗಳನ್ನು ಗಂಭೀರವಾಗಿ ದುಡಿಸಿಕೊಂಡವರು…ಬರೆಹದ ಮೂಲಕ ಬಿಗಿ, ಹೊಸ ಹೊಳಹುಗಳ ಕ್ರಮದಲ್ಲಿ ತಮ್ಮ ಓದಿನ, ಬರೆಹದ ವರಸೆಯನ್ನು ಓದುಗರ ಮನಕ್ಕೆ ತಟ್ಟಿಸುವಲ್ಲಿ ದಾನೇಶ್ವರಿಯವರು ಸಫಲರಾಗಿದ್ದಾರೆ’ ಎಂದು ಸಿದ್ದಲಿಂಗಪ್ಪ ಬೀಳಗಿಯವರು ಬೆನ್ನುತಟ್ಟಿದ್ದಾರೆ.

‘ವಿಮರ್ಶೆ ಎಂದರೆ ಇಂದಿನ ತುರ್ತುಗಳಿಗೆ ಬದ್ಧರಾಗಿ ಓದುವುದು’. ಸಾಹಿತ್ಯವೇ ಒಂದು ಅಸಮಗ್ರ ಭಿತ್ತಿ. ಕೃತಿಯೊಂದು ಯಾವಾಗಲೂ ಸಮಗ್ರವಾಗಿರುವುದಿಲ್ಲ. ಅದನ್ನು ಹುಟ್ಟಿಸಿರೋ ವ್ಯವಸ್ಥೆಯೂ ಸಹ ಸಮಗ್ರವಾಗಿರುವುದಿಲ್ಲ” ಎಂಬುದಾಗಿ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ವಿಮರ್ಶಕರಾದವರು ಕೃತಿವಿಮರ್ಶೆಗೆ ತೊಡಗುವಾಗ ಈ ಅಸಮಗ್ರತೆಯ ಅರಿವಿರಿಸಿಕೊಂಡೂ ಅವುಗಳಲ್ಲಿನ ಸಮಗ್ರತೆಯನ್ನು ಕುರಿತು ಹೇಳಹೊರಡುವುದು ಮುಖ್ಯ. ಹೀಗಾಗಿ ಅಪಾರ ಓದು, ಓದಿದ್ದನ್ನು ದಾಟಿಸುವ, ಮೌಲ್ಯಗಟ್ಟುವ, ಆ ಮೂಲಕ ಕೃತಿಕಾರನಿಗೆ ಹೊಸದಾದ ಬೆಳಕೊಂದನ್ನು ತೋರುವ ಕೆಲಸವನ್ನು ಸಮರ್ಥ ವಿಮರ್ಶಕ ಮಾಡುತ್ತಿರುತ್ತಾನೆ. ಲೇಖಕರಾದವರು ತನ್ನ ಪ್ರಾಂತ್ಯದ, ಸಮಕಾಲೀನ ಲೇಖಕರ ಕೃತಿಗಳ ಓದಿನ ಜೊತೆಗೆ ಇತರೆ ಪ್ರಾಂತ್ಯದ, ಮುಖ್ಯ ಲೇಖಕರನ್ನು ಓದುವುದರಿಂದ ತಿಳಿವು ವಿಸ್ತಾರವಾಗುತ್ತದೆ. ವೈವಿಧ್ಯಮಯ ಅನುಭವ ಪ್ರಪಂಚ ಪರಿಚಯವಾಗುತ್ತದೆ. ಭಾಷಾಪ್ರಬೇಧಗಳ ವೈಶಿಷ್ಟ್ಯತೆ ಗೊತ್ತಾಗುತ್ತದೆ. ಅಂತರಶಿಸ್ತೀಯ ಮತ್ತು ಬಹುಶೀಸ್ತೀಯ ಅಧ್ಯಯನ ಕ್ರಮಗಳು ವಿಮರ್ಶಕರಾಗಬೇಕಾದವರಿಗೆ ಊರುಗೋಲಾಗುತ್ತವೆ ಎಂಬುದನ್ನು ಅರಿತು ಬರೆದರೆ ಇನ್ನೂ ಹೆಚ್ಚು ಮೌಲಿಕ ಕೃತಿಗಳು ರಚನೆಯಾಗುವುದುರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ದಾನೇಶ್ವರಿ ಸಾರಂಗಮಠರು ಗಂಭೀರವಾಗಿ ಹೆಜ್ಜೆ ಇರಿಸಿರುವುದು ಸ್ವಾಗತಾರ್ಹವೂ, ಆಶಾದಾಯಕವೂ ಆಗಿದೆ. ನಾಡಿನ ಸಾಹಿತ್ಯ ಸಾಗರಕ್ಕೆ ತಮ್ಮ ‘ತುಂಬಿದ ತೊರೆ’ಯನ್ನು ಸೇರಿಸುವ ಮೂಲಕ ನಾಡಿನ ವಿಮರ್ಶಾ ಲೋಕದಲ್ಲಿ ಭರವಸೆ ಹುಟ್ಟಿಸಿದ್ದಾರೆ. ಇದು ಮೊದಲ ವಿಮರ್ಶಾ ಸಂಕಲನ ಎಂದು ನಂಬಲಾರದಷ್ಟು ಅವರು ಯಶಸ್ವಿಯಾಗಿದ್ದಾರೆ. ಕನ್ನಡ ವಿಮರ್ಶಾಲೋಕ ದಾನೇಶ್ವರಿ ಸಾರಂಗಮಠ ಅವರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ. ಅವರಿಗೆ ಅಭಿನಂದನೆಗಳು.

ಡಾ. ಸಂಗಮೇಶ ಎಸ್. ಗಣಿ
ಮುಖ್ಯಸ್ಥರು, ಕನ್ನಡ ವಿಭಾಗ,
ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಕಾಲೇಜು,
ಹೊಸಪೇಟೆ, 9743171324


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.