You are currently viewing ಕತ್ತಲೆ ಬದುಕಲ್ಲಿ ನೆನಪಿನ ಬೆಳಕು

ಕತ್ತಲೆ ಬದುಕಲ್ಲಿ ನೆನಪಿನ ಬೆಳಕು

ಕಲ್ಲು ಬೆಂಚಿನ ಮೇಲೆ ಹಾಯಾಗಿ ಕುಳಿತ ನನಗೆ ಕಂಡಿದ್ದು ವಿಶಾಲವಾದ ಸಮುದ್ರದಲ್ಲಿ ಸೂರ್ಯ ಓಕುಳಿ ಆಡಿದ್ದು ಇನ್ನೇನು ಕಡಲಲ್ಲಿ ಮುಳುಗಬೇಕು ಅನ್ನೋ ಅವಸರ ಸೂರ್ಯನಿಗೆ ಕೆಂಪು ಮಿಶ್ರಿತ ಹಳದಿ ಬಣ್ಣದಲ್ಲಿ ಸಮುದ್ರದ ನೀರು ಕಂಗೊಳಿಸುತ್ತಿತ್ತು. ಕಡಲ ಅಲೆಗಳಿಗೆ ಮುಗಿಲು ಮುಟ್ಟುವ ಬಯಕೆ ಎಷ್ಟೇ ಜಿಗಿದರು ಮುಗಿಲು ಸಿಗದೆ ನಿರಾಸೆಯಾಗಿ ಮತ್ತೆ ಮತ್ತೆ ಪ್ರಯತ್ನ ಪಡುವಂತೆ ಇದ್ದ ಅ ಪ್ರಕೃತಿ ಸೌಂದರ್ಯ ನೋಡುತ್ತಾ ಕುಳಿತೆ. ಸಮುದ್ರದ ದಡದಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ನನಗೆ ತಂಪಾಗಿ ಬೀಸುವ ಗಾಳಿಯು ಜೋಗುಳ ಹಾಡುತಿತ್ತು.

ಹಾಗೆಯೇ ನನಗೆ ನಿದ್ರೆಯ ಮಂಪರು ನನ್ನ ಆವರಿಸಿ ಕಲ್ಲು ಬೆಂಚಿಗೆ ಒರಗಿ ಕುಳಿತೆ.. ನಿದ್ರೆಯ ಲೋಕದಲ್ಲಿ ಕಣ್ಣುಮುಚ್ಚಬೇಕು ಅನ್ನುವಷ್ಟರಲ್ಲಿ ಯಾರೋ ಮಾತನಾಡುವ ಶಬ್ದ ಕೇಳಿಸಿ ತಿರುಗಿ ನೋಡಿದೆ. ಒಂದು ಚಿಕ್ಕ ಹುಡುಗಿಯೊಂದಿಗೆ ಒಬ್ಬಳು ಯುವತಿ ಬದಿಯಲ್ಕಿ ಇದ್ದ ಕಲ್ಲು ಬೆಂಚನ್ನು ನೋಡಿ ಅವಳಷ್ಟಕೆ ಮಾತನಾಡುತಿದ್ದಳು. ಅವಳ ಮುಗ್ದತೆ ಅವಳ ಮುಖದಲ್ಲಿ ಕಾಣುತ್ತಿತ್ತು ತನ್ನ ಮನಸಿನ ನೋವನ್ನು ಹೇಳುವ ರೀತಿಯಲ್ಲಿ ಅ ನಿರ್ಜೀವ ಕಲ್ಲು ಬೆಂಚಿಗೆ ಹೇಳುತಿದ್ದಳು. ಅವಳನ್ನು ನೋಡಿ ನನಗೆ ತಲೆಯಲ್ಲಿ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡಿತು. ಇವಳು ಹುಚ್ಚಿ ಅನ್ಕೊಂಡೆ ಆದರೆ ಅವಳನ್ನು ನೋಡುವಾಗ ಹುಚ್ಚಿ ಹಾಗೆ ನನಗೆ ಕಾಣಿಸಲಿಲ್ಲ ಹಂಸದಂತ ಮೈ ಬಣ್ಣ ಕಣ್ಣಿಗೆ ಕನ್ನಡಕ ಧರಿಸಿ ಅವಳಷ್ಟಕ್ಕೆ ಕಲ್ಲು ಬೆಂಚು ನೋಡಿಕೊಂಡು ಮಾತನಾಡುತ್ತಿದ್ದಳು. ಆದರೆ ಅವಳು ಅವಳಷ್ಟಕ್ಕೆ ಮಾತನಾಡುವುದನ್ನು ನೋಡಿ ನನಗೆ ಅಚ್ಚರಿ ಮೂಡಿತು.



ನಾನು ಅವಳನ್ನೆ ದಿಟ್ಟಿಸಿ ನೋಡುತ್ತಿದ್ದೆ ಆದರೆ ಅವಳಿಗೆ ಯಾವುದರ ಅರಿವಿಲ್ಲದೆ ಅವಳಷ್ಟಕ್ಕೆ ಮಾತನಾಡುವುದರಲ್ಲಿ ಮುಳುಗಿ ಹೋಗಿದ್ದಳು ಅವಳ ಮಾತುಗಳು ನನಗೆ ಅಸ್ಪಷ್ಟವಾಗಿ ಕೇಳಿಸುತ್ತಿತ್ತು ಆದರೆ ಅವಳ ಮಾತಿನಲ್ಲಿ ಏನೋ ಒಂದು ನಡುಕ ದುಃಖ ಆ ವೇದನೆಯನ್ನು ನಾನು ಕಂಡೆ ಆಗಲೇ ಪಕ್ಕದಲ್ಲಿ ಒಬ್ಬರು ವಯಸ್ಸಾದ ಅಜ್ಜ ಕುಳಿತಿದ್ದರು ಅವರಲ್ಲಿ ಸುಮ್ಮನೆ ಹೇಳಿದೆ ನೋಡಿ ತಾತ ಆ ಹುಡುಗಿ ಅವಳಷ್ಟಕ್ಕೆ ಏನೇನು ಮಾತನಾಡುತ್ತಿದ್ದಾಳೆ ಆದರೆ ಅವಳ ಮಾತಲ್ಲಿ ಏನೋ ಒಂದು ಭಾವನೆ ದುಃಖ್ಖ ಇದೆ ಏನು ಗೊತ್ತಿಲ್ಲ ಅವಳಷ್ಟಕ್ಕೆ ಮಾತನಾಡುವಳು ನಾನು ಹುಚ್ಚಿ ಅನ್ಕೊಂಡೆ.ಆದರೆ ನೋಡುವಾಗ ಆ ರೀತಿ ಕಾಣ್ತಾ ಇಲ್ಲ ಎಂದು ನಾನು ಅಂದಾಗ ಆ ಅಜ್ಜ ತಾನು ಸೇರುತ್ತಿದ್ದ ತುಂಡು ಬೀಡಿಯನ್ನು ಅಲ್ಲೇ ಕೆಳಗೆ ಬಿಸಾಡಿ ನನ್ನ ಹತ್ತಿರ ಕರೆದು ನೊಡು ನೀನು ಆ ಹುಡುಗಿಯನ್ನು ಇವತ್ತು ನೋಡುತ್ತಿದ್ದೀಯ ನಾನು ಸುಮಾರು ನಾಲ್ಕು ತಿಂಗಳುಗಳಿಂದ ಅವಳು ಆ ಚಿಕ್ಕ ಹುಡುಗಿಯನ್ನು ಕರೆದುಕೊಂಡು ಇದೇ ಸಮಯಕ್ಕೆ ಬಂದು ಅದೇ ಕಲ್ಲು ಬೆಂಚನ್ನು ನೋಡಿ ತನ್ನ ಮನಸ್ಸಿನ ಸುಖ ಕಷ್ಟಗಳನ್ನು ಅವಳು ತುಂಬಾ ಇಷ್ಟ ಪಟ್ಟ ಹುಡುಗನೊಂದಿಗೆ ಹಂಚುತ್ತಿದ್ದಾಳೆ ಎಂದು ಅಜ್ಜ ಹೇಳಿದಾಗ ಆಗ ನಾನು ಮಾತಿನ ಮಧ್ಯ ಬಂದು ಅಲ್ಲ ಅಜ್ಜ ಅಲ್ಲಿ ಯಾವ ಹುಡುಗ ಇದ್ದಾನೆ ಹೇಳಿ ಬರಿ ಖಾಲಿ ಬೇಂಚನ್ನು ನೋಡಿ ಮಾತನಾಡುತ್ತಿದ್ದಾಳೆ ಅಷ್ಟೇ ಎಂದು ಸ್ವಲ್ಪ ವ್ಯಂಗ್ಯವಾಗಿಯೇ ನಕ್ಕು ಬಿಟ್ಟೆ. ನನ್ನ ನಗುವನ್ನು ನೋಡಿ ಅಜ್ಜ ಕೋಪದಲ್ಲಿ ಗುರಾಯಿಸಿ ನನ್ನ ದಿಟ್ಟಿಸಿ ನೋಡಿ ಹೇ.. ಹುಡುಗ ಏನು ತಿಳಿಯದೆ ಅವಳ ಬಗ್ಗೆ ಅಷ್ಟು ಹಗುರವಾಗಿ ಮಾತನಾಡಬೇಡ ಅವಳ ಭಾವನೆಗಳಿಗೆ ದಕ್ಕೆ ತರಬೇಡ ಎಂದಾಗ ನಾನು ಮೌನವಾಗಿಯೇ ಕುಳಿತೆ.

ಅಜ್ಜ ಮಾತನ್ನು ಮುಂದುವರಿಸಿ ನೊಡು ಅವಳ ಹುಡುಗ ನಾಲ್ಕು ತಿಂಗಳ ಹಿಂದೆ ಬೈಕ್ ಅಪಘಾತದಲ್ಲಿ ಮೃತಪಟ್ಟ ಅವನು ಸಾಯುವ ಹಿಂದಿನ ದಿವಸ ಅದೇ ಕಲ್ಲು ಬೆಂಚಿನ ಮೇಲೆ ಕುಳಿತು ಅವರಿಬ್ಬರೂ ಮಾತನಾಡುತ್ತಿದ್ದರು ಆಮೇಲೆ ಅವಳು ಮುಂಚಿತವಾಗಿ ಹೊರಟು ನಿಂತಾಗ ಅವನು ಅದೇ ಕಲ್ಲು ಬೆಂಚಲ್ಲಿ ಕುಳಿತಿದ್ದ ಅವಳು ಅಲ್ಲೇ ಪಕ್ಕದಲ್ಲಿ ನಿಂತು ಅವನನ್ನು ನೋಡಿ ತನಗೆ ಅವನ ಮೇಲಿರುವ ಕಾಳಜಿ ಹಾಗೂ ಜಾಗರೂಕತೆಯ ಮಾತನ್ನು ಹೇಳಿ ಹೊರಟು ಹೋಗಿದ್ದಳು ಅದೇ ಮಾರನೆಯ ದಿನ ಬೆಳಿಗ್ಗೆ ಅವನು ಬೈಕ್ ಅಪಘಾತದಲ್ಲಿ ಮೃತ ಪಟ್ಟ ಅವತ್ತಿನಿಂದ ಅವಳು ಪ್ರತಿದಿನ ಸಂಜೆ ಸಮಯಕ್ಕೆ ಆ ಚಿಕ್ಕ ಹುಡುಗಿಯನ್ನು ಕರೆದುಕೊಂಡು ಬರುತ್ತಾಳೆ ಅವಳ ಮನೆ ಇಲ್ಲೇ ಹತ್ತಿರದಲ್ಲಿ ಆದರೆ ಅವಳಿಗೆ ಕಣ್ಣು ಕಾಣುವುದಿಲ್ಲ ತಾನು ಒಬ್ಬಳು ಕುರುಡಿ ಅಗಿದ್ದರೂ ಸಹ ಆ ಹುಡುಗ ಅವಳಿಗೆ ಕಣ್ಣಾಗಿ ಜೊತೆಯಾಗಿದ್ದ ಅವಳೆಲ್ಲ ಸುಖ ಕಷ್ಟಗಳಲ್ಲಿ ಒಂದಾಗಿ ಅವಳ ಕತ್ತಲೆ ಲೋಕಕ್ಕೆ ಬೆಳಕಾಗಿ ನಿಂತಿದ್ದ ಕಣ್ಣು ಕಾಣದೆ ಜಗವೆಲ್ಲ ಕತ್ತಲಾಗಿರಲು ಅವನ ಪ್ರೀತಿಯ ಮುಂದೆ ಅವಳ ಕುರುಡು ಬದುಕು ಬೆಳಕಾಗಿ ಬೆಳಗುತ್ತಿತ್ತು ಅವನಿಲ್ಲದ ಈ ಕ್ಷಣದಲ್ಲಿ ಅವಳಿಗೆ ಬರಿ ಕತ್ತಲೆಯ ಜೀವನವಾಗಿದೆ.

ಅವರಿಬ್ಬರಿಗೆ ಇನ್ನು ಎರಡು ತಿಂಗಳಲ್ಲಿ ಮದುವೆ ಗೊತ್ತು ಆಗಿತ್ತು ಜೀವನದ ಆಕಾಶದಲ್ಲಿ ಜೋಡಿ ಹಕ್ಕಿಗಳಂತೆ ಹಾರಾಡುವ ಕನಸು ಕಂಡಿದ್ದ ಅವರಿಗೆ ರೆಕ್ಕೆ ಮುರಿದ ಹಕ್ಕಿಯಾಗಿ ಅವರ ಜೀವನ ಆಗಿವೆ ಅವಳು ಮಾತ್ರ ಅವನ ನೆನಪೇ ಉಸಿರು ಅನ್ನುವಂತೆ ಇದ್ದಾಳೆ ಅವಳನ್ನು ನೋಡುವಾಗ ಹೃದಯ ತುಂಬಿ ದುಃಖ್ಖ ಬರುತ್ತೆ ಎಂದು ಅಜ್ಜ ಹೇಳಿದಾಗ ನನ್ನ ಕಣ್ಣು ಕಣ್ಣೀರಿನ ಉತ್ತರ ನೀಡುತ್ತಿತ್ತು. ಮೆಲ್ಲಗೆ ಅವಳ ಹತ್ತಿರ ಬಂದು ನಿಂತೆ ಅವಳ ಎಲ್ಲ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು.

ಅವರಿಬ್ಬರ ಪ್ರೀತಿಯ ಮುಂದೆ ಎಲ್ಲವೂ ಶೂನ್ಯವೇನಿಸಿ ಅವಳ ಪ್ರತಿಯೊಂದು ಮಾತುಗಳು ನನ್ನ ಎದೆಗೆ ಆಳವಾಗಿ ಗಾಯ ಮಾಡುತ್ತಿತ್ತು ಅವಳು ಕಲ್ಲು ಬೆಂಚನ್ನು ನೋಡುತ್ತಾ ಕಾರ್ತಿಕ್ ನೀನು ಇರದ ಈ ಬದುಕೆಲ್ಲ ನನಗೆ ಕತ್ತಲೆ ಆವರಿಸಿದೆ ಆದರೆ ನಿನ್ನ ನೆನಪುಗಳು ನನಗೆ ನಂದದೀಪವಾಗಿ ಬೆಳಕು ನೀಡುತ್ತಿದೆ ಮರೆತು ಬಿಡದಷ್ಟು ನೆನಪುಗಳನ್ನು ಕೊಟ್ಟಿರುವ ನೀನು ನಿನ್ನ ಸವಿ ನೆನಪುಗಳಲ್ಲಿ ನಾನು ಉಸಿರಾಡುತ್ತಿರುವೆ ನೀನು ನನ್ನೊಂದಿಗೆ ನೆರಳಾಗಿ ಇರುವೆ ಎಂದೇ ಆದರೆ ಈಗ ಕೇವಲ ನೆನಪಾಗಿ ಇರುವೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಕೈ ಹಿಡಿದು ಪ್ರತಿ ಹೆಜ್ಜೆಗೂ ಹೆಜ್ಜೆಯಾಗಿ ಜೊತೆಯಾಗಿ ಬರುತ್ತಿದ್ದೆ ಈಗ ನನ್ನ ಕೈಗಳು ಅನಾಥವಾಗಿದೆ ನಿನ್ನ ಕೈಯ ಸಹಾಯವಿಲ್ಲದೆ.

ನಿನ್ನ ಎದೆ ಬಡಿತವೇ ನನಗೆ ಜೋಗುಳದ ಹಾಡಾಗಿ ನನ್ನ ನಿದ್ದೆಗೆ ಸಹಾಯ ಮಾಡುತ್ತಿತ್ತು ಆದರೆ ನೀನು ನನ್ನ ಬಿಟ್ಟು ಹೋಗಿರುವ ದಿನದಿಂದ ನನ್ನ ನಿದ್ದೆ ಎಲ್ಲವೂ ಮುಳ್ಳಿನ ಮೇಲೆ ಮಲಗಿದಂತ ಆಗಿವೆ. ನಿನ್ನ ನೆನೆದು ನೆನೆದು ಅತ್ತು ಕಣ್ಣೀರೆ ಬತ್ತಿ ಹೋಗಿವೆ ಪ್ರತಿದಿನ ಪ್ರತಿ ನಿಮಿಷ ಕೊರಗಿ ಕೊರಗಿ ಜೀವಂತ ಶವವಾಗಿರುವ ನನಗೆ ನಿನ್ನ ನೆನಪುಗಳೊಂದೇ ನನಗೆ ಆಸರೆ ಎಂದು ಅಲ್ಲೇ ಅತ್ತುಕೊಂಡು ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡಳು ಅವಳನ್ನು ಸಮಾಧಾನ ಮಾಡುವ ಶಕ್ತಿ ಧೈರ್ಯ ನನಗೆ ಸಾಲದೆ ಹೋಯಿತು. ನಾನು ಮುಕಸ್ಮಿತನಾಗಿ ತಟಸ್ಥವಾಗಿ ಕಲ್ಲು ಬೆಂಚಿಗೆ ಒರಗಿ ಕುಳಿತೆ ಒಂದು ಸಲ ಜಗವೆಲ್ಲ ಕತ್ತಲು ನನ್ನ ಆವರಿಸಿ ನಾನು ಕುರುಡನಾಗಿ ಹೋದೆ..!

ದೀಪಕ್ ರಾಜ್ ಶೆಟ್ಟಿ
ಮಾರೂರು, ದಕ್ಷಿಣ ಕನ್ನಡ ಜಿಲ್ಲೆ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ