You are currently viewing ಗಂಡ ಹೀರೋ ಆದ್ರೆ ತಂದೆ ಸೂಪರ್ ಹೀರೋ….

ಗಂಡ ಹೀರೋ ಆದ್ರೆ ತಂದೆ ಸೂಪರ್ ಹೀರೋ….

ನಿನ್ನೆಯಷ್ಟೇ ವಿಶ್ವ ಅಪ್ಪಂದಿರ ದಿನವನ್ನು ಆಚರಿಸಿದ್ದೇವೆ. ಎಲ್ಲರ ಅಪ್ಪಂದಿರ ಫೋಟೋಗಳು ಅವರವರ ಮೊಬೈಲ್ ಸ್ಟೇಟಸ್ ನಲ್ಲಿ ರಾರಾಜಿಸಿದವು. ಆದರೆ ಅವರಲ್ಲಿ ಅದೆಷ್ಟು ಜನ ನೇರವಾಗಿ ಅಪ್ಪನಿಗೆ ಶುಭಾಶಯಗಳನ್ನು ತಿಳಿಸಿದ್ದಾರೋ ನಾ ಕಾಣೆ. ಅಪ್ಪನಿಗಂತೂ ಇದು ಯಾವುದರ ಪರಿವೇ ಇರುವುದಿಲ್ಲ. ಏಕೆಂದರೆ ಅಪ್ಪನು ಯಾವತ್ತು ತನ್ನ ಸ್ಟೇಟಸ್ ಅನ್ನು ಹೆಚ್ಚಿಸಿಕೊಳ್ಳಲು ದುಡಿದವನಲ್ಲ. ಮಕ್ಕಳ ಸ್ಟೇಟಸ್ ಚೆನ್ನಾಗಿಟ್ಟು ಅದರಿಂದ ಖುಷಿಪಡುವವನು. ಅದೇನೇ ಇರಲಿ ಅಪ್ಪ ಅಂದ್ರೆ ಆಕಾಶದಂತೆ ಕೊನೆಯಿಲ್ಲದ ನಿಲುಕದ ಅಗಾಧ ಶಕ್ತಿ.

ಅದೇನೋ ಗೊತ್ತಿಲ್ಲ, ಹೆಣ್ಣು ಮಕ್ಕಳಿಗೆ ಅಪ್ಪನೆಂದರೆ ವಿಶೇಷ ಅನುಭವ. ಅಪ್ಪನಿಗೂ ಅಷ್ಟೇ. ಹೆಣ್ಣು ಮಕ್ಕಳೆಂದರೆ ಸರ್ವಸ್ವ. ಮುಕ್ಕೋಟಿ ದೇವತೆಗಳನ್ನು ಕೂಡ ಅವನು ತನ್ನ ಮಗಳಲ್ಲಿ ಕಾಣುತ್ತಾನೆ. ಹೋಲಿಕೆ ಮಾಡಿ ನೋಡಿದರೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಅವರ ಅಪ್ಪನಿಗೆ ಹೆಚ್ಚು ಭಯಪಡುವುದಿಲ್ಲ. ಇದಕ್ಕೆ ಕಾರಣ ಅವನ ಅಕ್ಕರೆ ಸಕ್ಕರೆಯ ಸಿಹಿಗಿಂತಲೂ ತುಸು ಹೆಚ್ಚೇ ಎಂದರೆ ಅತಿಶಯೋಕ್ತಿ ಆಗಲಾರದು. ಬಾಲ್ಯದಿಂದ ಹಿಡಿದು ಮದುವೆಯ ತನಕ ಅದೇನೇ ಕಷ್ಟದ ಸುಳಿಗಳು ಎದುರಾದರೂ ಎಲ್ಲದರಿಂದ ಪಾರು ಮಾಡುವ ದಿವ್ಯ ಶಕ್ತಿ ಅವನು. ಅಮ್ಮನೆಂದರೆ ಎಷ್ಟು ತ್ಯಾಗಗಳು ನೆನಪಾಗುವುದೋ, ಅದರ ಎರಡು ಪಟ್ಟು ತ್ಯಾಗಗಳು ಅಪ್ಪನಲ್ಲಿ ಅಡಗಿರುತ್ತವೆ. ಆದರೆ ಅವೆಲ್ಲವೂ ಗೌಣ. ವಯಸ್ಸು ಯಾವುದೇ ಇರಲಿ, ನಿವೃತ್ತಿ ಇಲ್ಲದೇ ದುಡಿಯುವ ದಣಿವರಿಯದ ಜೀವ ಅದು.



ಅಪ್ಪ ಅದೆಷ್ಟೋ ಕಾಳಜಿ ವಹಿಸಿ 20 ವರುಷಾನೋ,25 ವರುಷಾನೋ ಮಗಳನ್ನು ಅಂಗೈಯಲ್ಲಿಟ್ಟು ಜೋಪಾನ ಮಾಡುತ್ತಾನೆ ಕಪ್ಪೆ-ಚಿಪ್ಪಿನೊಳಗಿನ ಮುತ್ತಿನಂತೆ. ಪ್ರತಿ ಬೆವರ ಹನಿಯೂ ಹೇಳುತ್ತದೆ ಅವನ ನಿಸ್ವಾರ್ಥ ಪ್ರೇಮವನ್ನು. ಅದೇನೇ ಗಳಿಕೆ ಇರಲಿ,ಅದೇನೇ ಉಳಿಕೆ ಇರಲಿ ಎಲ್ಲವೂ ಅವನ ಮಕ್ಕಳಿಗಾಗಿ. ಸಾಲವಾದರೂ ಪರವಾಗಿಲ್ಲ, ಮಗಳಿಗೆ ಏನು ಕೊರತೆಯಾಗದಿರಲಿ ಅಂತ ಎಲ್ಲವನ್ನು ಧಾರೆಯೆರೆಯುತ್ತಾನೆ. ಬಾಲ್ಯದಲ್ಲಿ ತಂದೆಯ ಕೈಯ ಕಿರುಬೆರಳು ಹಿಡಿದು ಬೆಳೆದ ಹೆಣ್ಣು ಮಕ್ಕಳು, ಮದುವೆಯ ದಿನದಿಂದ ಗಂಡನ ಕೈಯ ಕಿರುಬೆರಳು ಹಿಡಿಯುತ್ತಾರೆ. ಕಿರು ಬೆರಳು ಬದಲಾದರೂ ಅಪ್ಪನ ಜವಾಬ್ದಾರಿ ಕಡಿಮೆ ಆಗಲ್ಲ. ಮಗಳು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವ ದಿನ ಅದೆಷ್ಟೇ ತಡೆ ಹಿಡಿದರೂ ಅಪ್ಪನ ಕಣ್ಣೀರಿನ ಕಟ್ಟೆ ಒಡೆಯಲಾರದೆ ಇರೋಕೆ ಸಾಧ್ಯನೇ ಇಲ್ಲ. ಟವೆಲ್ ನ ಅಂಚಿನಿಂದ ಕಣ್ಣೀರು ಒರೆಸಿಕೊಂಡಾಗಲೇ ಗೊತ್ತಾಗೋದು ಅಪ್ಪನಿಗೂ ಅಳು ಬರುತ್ತಾ ಅಂತ. ಬಹುಶಃ ಎಲ್ಲಾ ಅಪ್ಪಂದಿರು ಕಣ್ಣೀರು ಹಾಕುವ ಒಂದೇ ಒಂದು ದಿನವೆಂದರೆ ಅದು ಮಗಳು ಗಂಡನ ಮನೆಗೆ ಹೋಗುವ ದಿನ. ಕೊಟ್ಟ ಮನೆ ತಣ್ಣಗಿರಲಿ ಅಂತ ಅಪ್ಪ ಹರಸಿದರೆ, ತವರು ಮನೆ ತಂಪಾಗಿರಲಿ ಅಂತ ಮಗಳ ಬಯಕೆ. ಅಪ್ಪ-ಮಗಳ ಸಂಬಂಧದ ಐಸಿರಿಗೆ ಮತ್ತಾವ ಸಿರಿಯೂ ಸಾಟಿಯಲ್ಲ.

ಎಲ್ಲಾ ಹೆಣ್ಣು ಮಕ್ಕಳಿಗೂ ಆಕೆಯ ಗಂಡಾನೇ ಹೀರೋ. ಅವನು ಕುರುಡ ಇರಲಿ, ಕುರೂಪಿ ಇರಲಿ, ಕಪ್ಪು ಇರಲಿ ಹೇಗಾದರೂ ಇರಲಿ ಅವನೇ ಹೀರೋ. ಜೊತೆಗೆ ಆ ಹೀರೋಗೆ ತಕ್ಕ ಹೀರೋಯಿನ್ ಕೂಡ ತಾವೇ ಎಂದು ಅತಿಯಾಗಿ ಬೀಗುತ್ತಾರೆ. ಗಂಡ ಅದೆಷ್ಟೇ ಸುಖದ ಸುಪ್ಪತ್ತಿಗೆಯಲ್ಲಿಟ್ಟು ನೋಡಿಕೊಂಡರೂ ಕೂಡ, ಅಪ್ಪನ ಪ್ರೀತಿಯನ್ನು ಮರೆಸಲು ಸಾಧ್ಯವಿಲ್ಲ. ಇದು ಗಂಡನನ್ನು ಹೀಗಳೆದು ಹೇಳುವ ಮಾತಲ್ಲ. ಅಪ್ಪನನ್ನು ಹೊಗಳಿ ಹೇಳುವ ಮಾತು. ಗಂಡನ ಮುಂದೆ ಹೆಂಡತಿ ತನ್ನ ಅಪ್ಪನನ್ನು ಹೊಗಳಿ ಮಾತನಾಡಿದರೆ ಸಾಕು, ಗಂಡನಿಗೆ ಎಲ್ಲಿಲ್ಲದ ಕೋಪ. ಇಲ್ಲಿ ಗಂಡನಾದವನು ಕೋಪ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಪ್ರತಿ ಗಂಡಸು ಕೂಡ ತನ್ನ ಮಗಳಿಗೆ ಹೀರೋ ಆಗಲು ಬಯಸುತ್ತಾನೆ. ಆದರೆ ತನ್ನ ಹೆಂಡತಿಗೆ ಅವರಪ್ಪಾನೇ ಸೂಪರ್ ಹೀರೋ ಆಗೋದ್ರಲ್ಲಿ ತಪ್ಪೇನು? ಗಂಡನಾದವನು ಆರ್ಥಿಕವಾಗಿ ಅನುಕೂಲತೆಗಳು ಇದ್ದಾಗ ಮಾತ್ರ ಹೆಂಡತಿಯ ಆಸೆಗಳನ್ನು ಪೂರೈಸಬಲ್ಲ. ಆದರೆ ಅಪ್ಪನಾದವನು ತನ್ನ ಮಗಳ ಆಸೆಗಳನ್ನು ಈಡೇರಿಸಲು ತನ್ನ ಆರ್ಥಿಕ ಪರಿಸ್ಥಿತಿಯನ್ನು ಮೀರಿಯೂ ಪ್ರಯತ್ನ ಪಡುತ್ತಾನೆ.

ಜೊತೆಗೆ ಇಂದಿನ ಅದೆಷ್ಟೋ ಕುಟುಂಬಗಳಲ್ಲಿ ಹೆಂಡತಿಯ ತಂದೆ ಮನೆಗೆ ಬಂದರೆ ಸಾಕು, ಬೇಗ ಕಳಿಸು ನಿಮ್ಮ ಅಪ್ಪನನ್ನು ಅನ್ನುವ ಪರಿಸ್ಥಿತಿಗಳು ಎದುರಾಗಿವೆ. ಅಪ್ಪನೆಂದೂ ಮಗಳನ್ನು ಬೈದ ಉದಾಹರಣೆಗಳಿಲ್ಲ. ಮಗಳ ಎದುರೇ ಅವಳ ಅಪ್ಪನನ್ನು ಬೈದರೆ ಅವಳ ಮನಸ್ಥಿತಿಯ ಬಗ್ಗೆ ಒಂದು ನಿಮಿಷ ವಿಚಾರ ಮಾಡಿ. ಇಲ್ಲಿ ಬೇಕಾಗಿರುವುದು ನಿಮ್ಮ ಶ್ರೀಮಂತಿಕೆ ಅಲ್ಲ.ಬದಲಾಗಿ ಹೃದಯವಂತಿಕೆ. ಪ್ರತಿ ಹೆಣ್ಣಿಗೂ ಕೂಡ ಅಪ್ಪನನ್ನು ಆರೈಕೆ ಮಾಡುವ ಜವಾಬ್ದಾರಿಗಳುಂಟು. ಹಕ್ಕುಗಳುಂಟು. ಹೆಚ್ಚಾಗಿ ಅಪ್ಪನ ಋಣ ತೀರಿಸಲು ಹೆಣ್ಣು ಮಕ್ಕಳ ಜೀವ ಯಾವಾಗಲೂ ತುಡಿತಾ ಇರುತ್ತದೆ. ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರು ಎಂಬ ಮಾತಿನಂತೆ ನೀವು ಹೀರೋ ಆಗಿಯೇ ಉಳಿಯಬೇಕಾದರೆ, ನಿಮ್ಮ ಹೆಂಡತಿಯ ಸೂಪರ್ ಹೀರೋ ವನ್ನು ಗೌರವಿಸಿ.ಆದರಿಸಿ.ಉತ್ತಮರಲ್ಲೇ ಮಹತ್ತಮರಾಗಿ. ಆಗ ನೀವು ನಿಮ್ಮ ಮಗಳಿಗೆ ಸೂಪರ್ ಹೀರೋ ಆಗುವುದು ಗ್ಯಾರಂಟಿ.

ಭುವನೇಶ್ವರಿ.ರು.ಅಂಗಡಿ
ನರಗುಂದ,ಗದಗ
9945095539


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.