You are currently viewing ಚಿರಾಯು ಪರಮಾತ್ಮ

ಚಿರಾಯು ಪರಮಾತ್ಮ

ಬಲಗೈ ನೀಡಿದ್ದು ಎಡಗೈ ಗೆ ತಿಳಿಯಬಾರದು, ಎಂಬ ಮಾತಿನಂತೆ ಬಾಳಿ ಬದುಕಿ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದ, ಪರಮಾತ್ಮನಲ್ಲಿ ಲೀನನಾದ ಕನ್ನಡಿಗರ ಪಾಲಿನ ಪರಮಾತ್ಮ ನಮ್ಮ ಪುನೀತ್ ರಾಜ್ ಕುಮಾರ್. ದಿನಾಂಕ: 17-03-1975 ರಂದು ಚೆನ್ನೈ ನ ಆಸ್ಪತ್ರೆಯಲ್ಲಿ ಕನ್ನಡದ ಮೇರುನಟ ಡಾ|| ರಾಜ್ ಕುಮಾರ್ ಹಾಗೂ ಪಾರ್ವತಮ್ಮ ದಂಪತಿಗಳಿಂದ ಕರುನಾಡಿಗೆ ಬೆಳಕಾಗಿ ಜನಿಸಿದ ನಕ್ಷತ್ರ ಇವರು.ಕುಟುಂಬದವರಿಂದ, ಬಂಧುಗಳಿಂದ, ಕನ್ನಡಿಗರಿಂದ ಪ್ರೀತಿಯಿಂದ ಅಪ್ಪು ಎಂದು ಕರೆಯಿಸಿಕೊಂಡರು. ತಂದೆಯಿಂದ ರಕ್ತಗತವಾಗಿ ಬಂದಿದ್ದ ಅಭಿನಯ ಪ್ರವೃತ್ತಿ ಬಾಲ್ಯದಲ್ಲಿಯೇ ಮಾ|| ಲೋಹಿತ್ ಎಂದು ಮನೆಮಾತಾಗಲು ಕಾರಣವಾಯಿತು.

ಡಾ || ರಾಜ್ ದಂಪತಿ ಹುಟ್ಟಿದ 6 ತಿಂಗಳಿಗೆ ತಮ್ಮ ಮಗುವನ್ನು ಚಿತ್ರರಂಗಕ್ಕೆ ಪ್ರೇಮದ ಕಾಣಿಕೆಯಾಗಿ ನೀಡಿದರು. ಜಗತ್ತನ್ನು ಅರಿಯುವ ವಯಸ್ಸಿಗೆ ಬರುವ ಮುನ್ನವೇ ಬೆಟ್ಟದ ಹೂವು ಚಲನಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ, ಎರಡು ನಕ್ಷತ್ರಗಳು, ಚಲಿಸುವ ಮೋಡಗಳು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದರು. ಮತ್ತೆ ನಾಯಕ ನಟನಾಗಿ ಅಪ್ಪು ಚಿತ್ರದ ಮೂಲಕ ಚಿತ್ರರಂಗಕ್ಕೆ ಪುನರಾಗಮಿಸಿದರು. ಅಪ್ಪು, ಅಭಿ, ಆಕಾಶ್, ಮೌರ್ಯ, ಅಜಯ್, ನಿನ್ನಿಂದಲೇ, ಮಿಲನ, ಅಂಜನೀಪುತ್ರ, ಯಾರೇ ಕೂಗಾಡಲಿ, ಹುಡುಗರು ಮುಂತಾದ ಅದ್ಬುತ ಚಲನಚಿತ್ರದ ಮೂಲಕ ಮನರಂಜನೆ ನೀಡಿದರು. ರಾಜಕುಮಾರ, ಯುವರತ್ನ ಚಿತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಅನೇಕ ಸರ್ಕಾರದ ಯೋಜನೆಗಳಿಗೆ ರಾಯಭಾರಿಯಾದರು.

ಯಾವುದೇ ಪ್ರಚಾರಕ್ಕೆ ಬಾರದೇ ಅನೇಕ ವ್ರದ್ಧಾಶ್ರಮ, ಅನಾಥಾಶ್ರಮಗಳಿಗೆ ಆಶ್ರಯದಾತನಾದರು. ಕನ್ನಡದ ಕೋಟ್ಯಧಿಪತಿಯಾಗಿ ಸೋತವರ ಪಾಲಿನ ಕಷ್ಟವನ್ನೂ ಆಲಿಸುತ್ತ, ಸಹಾಯ ಮಾಡುತ್ತ ಮನಸಿನ ಅಧಿಪತಿಯೂ ಆದರು. ಸರ್ವರನ್ನು ಸಮಭಾವದಿಂದ ಪ್ರೀತಿಸುವ ಪರಮಾತ್ಮ ಅದೆಷ್ಟೋ ನೊಂದವರ ಬಾಳಿಗೆ ಬೆಳಕಾಗಿದ್ದಾರೆ. ಸದಾ ನಗುವನ್ನು ಮುಖದ ಮೇಲೆ ಧರಿಸಿದ್ದ ಕರ್ನಾಟಕದ ಯುವರತ್ನ 29-10-2021 ರಂದು ಹೃದಯಾಘಾತಕ್ಕೆ ಒಳಗಾಗಿ ಅಸು ನೀಗಿದರು. ಸತ್ತ ಮೇಲು ಬದುಕಿದ ಕನ್ನಡಿಗರ ಪ್ರೀತಿಯ ಮೌರ್ಯ ಆಕಾಶದಲ್ಲಿ ರಾಜಕುಮಾರನಾಗಿ ರಾರಾಜಿಸುತ್ತ ನಮ್ಮೆಲ್ಲರ ಹೃದಯದಲ್ಲಿ ಅಜಯನಾಗಿ ಇಂದಿಗೂ ಅಪ್ಪು ಅಜರಾಮರವಾಗಿದ್ದಾರೆ.

ವೀಣಾ ವಿನಾಯಕ್
ಹೊನ್ನಾವರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ