ಶೀರ್ಷಿಕೆ : ಅಂತರಂಗದ ಬೆಳಕು
ಲೇಖಕರು : ಹುಸೇನಸಾಬ ವಣಗೇರಿ
ಬೆಲೆ : 80
ಸಂಪರ್ಕಿಸಿ : 7829606194
ಭಾರತದ ಬೆನ್ನೆಲುಬು ಎನಿಸಿಕೊಂಡ ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿರುವ, ಈಗಾಗಲೇ ಕನ್ನಡ ಸಾರಸ್ವತ ಸಾಹಿತ್ಯ ಕ್ಷೇತ್ರದಲ್ಲಿ ಎರಡು ಕವನ ಸಂಕಲನಗಳ ಪ್ರಕಟಣೆಯೊಂದಿಗೆ, ಮತ್ತೇರಡು ಕೃತಿಗಳನ್ನು ಸಂಪಾದಿಸಿರುವ ಹುಸೇನ್ ಸಾಬ್ ಅವರು ತಮ್ಮ ಇವರೆಗಿನ ತಮ್ಮ ಬದುಕಿನ ವಯುಕ್ತಿಕ ಅನುಭವಗಳನ್ನು, ತಾವು ಹುಟ್ಟಿ ಬೆಳೆದ ಗ್ರಾಮೀಣ ಪರಿಸರ – ಅಲ್ಲಿನ ಸಂಸ್ಕೃತಿ, ಬದುಕು – ಬವಣೆ , ಸಾಮಾಜಿಕ ಸಮಸ್ಯೆಗಳನ್ನು, ಸಾಂಸ್ಕೃತಿಕ ಸಂಬಂಧಗಳನ್ನು, ಇತ್ಯಾದಿ ವಿಚಾರಗಳನ್ನು ತಾವು ತಮ್ಮದೇ ಆದ ದೃಷ್ಟಿಕೋನದ ಮುಖೇನ ಸೂಕ್ಷ್ಮವಾಗಿ ಅವಲೋಕಿಸುತ್ತಾ, ಪರಿಚಯಿಸುತ್ತಾ, ಜೊತೆಜೊತೆಗೆ ಚರ್ಚೆಗೆ ಇಂಬು ನೀಡುತ್ತಾ ವ್ಯವಧಾನದ ಬದುಕಿನ ನಡುವೆ ಧ್ಯಾನಸ್ತನಾಗಿ ಬರೆದ ಲೇಖನಗಳನ್ನು ಪ್ರಕಟಿಸುವುದರ ಮುಖಾಂತರ ಇದೀಗ ಮತ್ತೊಂದು ಹೆಜ್ಜೆ ಇಡಲು ಸನ್ನದ್ಧರಾಗಿದ್ದಾರೆ.
ಸಾಮಾನ್ಯವಾಗಿ ಯಾವುದೇ ಭಾಷೆಯ ಲೇಖಕನಿಗೆ ತಾನು ಬಳಸುವ ಭಾಷೆಯ ಕುರಿತಾದ ಅರಿವು ಹಾಗೂ ಒಲವು ಎರಡೂ ಮುಖ್ಯವಾಗುತ್ತವೆ. ಮೂಲತಃ ಉರ್ದು ಭಾಷೆ ಮನೆಮಾತಾಗಿರುವ ಹುಸೇನ್ ಸಾಬ್ ಅವರ ಬರಹದಲ್ಲಿ ಈ ಮೇಲಿನ ಎರಡೂ ಅಂಶಗಳನ್ನು ಸಹ ಗುರುತಿಸಬಹುದಾಗಿದೆ.
ನಮ್ಮ ಭಾರತದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಪ್ರಧಾನ ಕಟ್ಟುಪಾಡು ಅನಾದಿ ಕಾಲದಿಂದಲೂ ಜಾರಿಯಲ್ಲಿದ್ದರೂ ಸಹ, ಕುಟುಂಬದ ಹಿರಿಯನ ಪಟ್ಟ ಮೂಡಿಗೆರಿಸಿಕೊಳ್ಳುವ “ಅಪ್ಪ” ಎಂಬ ಜೀವ ಮಾತ್ರ ಎಲ್ಲರ ಮನ್ನಣೆಗೆ ಪಾತ್ರವಾಗುವುದು ತೀರಾ ವಿರಳವೆ ಅನ್ನಬಹುದು. ಅದಕ್ಕೆ ಆತನ ಹುಂಬತನ, ಗಡಸುತನ, ಮರೆ ಮಾಚಿದಂತಿರುವ ಪರೋಕ್ಷ ಪ್ರೀತಿ, ಕಾಳಜಿ, ಗಂಭೀರ ವ್ಯಕ್ತಿತ್ವವು ಕಾರಣವಾಗಿರಬಹುದು! ಬಹುಷಃ ಹಾಗಾಗಿಯೇ ತಂದೆಯ ಸ್ಥಾನಕ್ಕೆ ಅದರದ್ದೇ ಆದ ಮಹತ್ವ ಮತ್ತು ಪ್ರಾಮುಖ್ಯತೆ ಇದ್ದರೂ ಸಹ ವಯುಕ್ತಿಕ ನೆಲೆಯಲ್ಲಿ ತಾಯಿಗಿರುವಂತೆ ಅಷ್ಟಾಗಿ ಪ್ರಾಮುಖ್ಯತೆ ದೊರೆಯುವುದಿಲ್ಲ. ಆ ಕಾರಣಕ್ಕೆ ಪ್ರಾಯಶಃ ಜಾಗತೀಕ ಸಾಹಿತ್ಯದಲ್ಲಿಯೇ ಅಪ್ಪನ ಕುರಿತಾದ ಕವಿತೆ, ಕಥೆ, ಪ್ರಬಂಧ ಅಥವಾ ಇನ್ನಿತರೆ ಪ್ರಕಾರದಿಂದ ಅಭಿವ್ಯಕ್ತಿಯ ಸ್ವರೂಪದಲ್ಲಿ ದಾಖಲಾಗಿರುವುದು ಅತೀ ವಿರಳವೆ ಅನ್ನಬಹುದು. ಅನಾಸಕ್ತಿಯ ವಿಷಯ ಎಂಬ ಧೋರಣೆಯೂ ಇರಬಹುದು.
ಆದರೆ ಇಲ್ಲಿ ಮೊದಲ ಲೇಖನದಲ್ಲಿಯೇ ಹುಸೇನ್ ಸಾಬ್ ರವರ ಮೇಲೆ ಅವರ ತಂದೆಯ ಗಾಢ ಪ್ರಭಾವವನ್ನು ಕಾಣಬಹುದಾಗಿದೆ. “ಅಪ್ಪನ ಪ್ರೀತಿಯ ಮುಂದೆ ಮತ್ತಾವ ಪರಿಕರವೂ ದೊಡ್ಡದಲ್ಲ” ಎಂದು ನಿವೇದಿಸಿಕೊಳ್ಳುವ, ಅಪ್ಪನನ್ನು ಆತ್ಮೀಯ ಸ್ನೇಹಿತನಾಗಿ ಕಾಣುವ ಲೇಖಕರು ತನ್ನಪ್ಪನ ಬದುಕು ಬವಣೆಯ ಕುರಿತಾದ ಬರಹ ಎಂಥವರನ್ನೂ ಸಹ ಗಾಢವಾಗಿ ಕುಲುಕುವಂಥದ್ದಾಗಿದೆ. ಅದರೊಂದಿಗೆ ಅಪ್ಪನ ನೆಪದಲ್ಲಿ ಕೃಷಿಕನೊಬ್ಬನ ಬದುಕಿನ ಚಿತ್ರಣವೂ ಸಿಗುತ್ತದೆ. ಅದು ಕೇವಲ ಒಬ್ಬ ವ್ಯಕ್ತಿಯನ್ನು ನಿರ್ದೇಶಿಸದೆ ಈ ನಾಡಿನ ಎಲ್ಲಾ ಅನ್ನದಾತರ ಜೀವನದ ಮೇಲೆ ಬೆಳಕು ಚೆಲ್ಲುವಂತೆ ಮನನವಾಗುತ್ತದೆ. “ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ಕೋಪದಲ್ಲಿಯೂ ಪ್ರೀತಿ ತೋರುವ ಆತನ ವ್ಯಕ್ತಿತ್ವ ವರ್ಣಿಸಲಾಗದು” ಎಂಬಂತಹ ಮಾತುಗಳು ಮನವನ್ನು ಸ್ಪರ್ಶಸಿ ಮುದ ನೀಡುವುದರೊಂದಿಗೆ ಕಣ್ಣಾಳಿಗಳಲ್ಲಿ ಕಂಬನಿ ಮೂಡಿಸುತ್ತವೆ. ಒಂದು ಬರಹಕ್ಕೆ ಇರುವ ತಾಕತ್ತು ಅದು.
ಅದೇ ರೀತಿ ಜನ್ಮದಾತೆಯಾದ ಅಮ್ಮನ ಕುರಿತಾಗಿ “ಓದು ಬರಹ ಅವಳಿಗೆ ಗೊತ್ತಿಲ್ಲ, ತನ್ನ ಜೀವನನುಭವದಿಂದ ಕಲಿತ ಅಧ್ಯಾಯಗಳೇ ನಮಗೆಲ್ಲಾ ಪಾಠ, ನನ್ನವ್ವನಿಗೆ ಪ್ರಪಂಚ ಜ್ಞಾನ ಕಡಿಮೆ ಇರಬಹುದು ಆದರೆ ಅವಳ ಪಾಲಿಗೆ ಮಕ್ಕಳೇ ಪ್ರಪಂಚವಿರಬಹುದೇನೋ ಎಂದು ನನಗೆ ಭಾಸವಾಗುತ್ತದೆ” ಎಂಬ ಕಕ್ಕುಲಾತಿಯ ನುಡಿಗಳಿಗೆ ದನಿಯಾಗುವುದರೊಂದಿಗೆ ಆಧುನಿಕತೆಯ ಮುಖವಾಡ ಹಾಕಿಕೊಂಡ ಜಗತ್ತು ಹೇಗೆ ಹೆತ್ತು – ಹೊತ್ತು, ಸಾಕಿ – ಸಲಹಿದ ತಂದೆ – ತಾಯಿಯನ್ನು ಪ್ರಸ್ತುತ ಕಾಲಮಾನದಲ್ಲಿ ಹೇಗೆ ಮತ್ತು ಎಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ, ಯಾವ ಬಗೆಯ ಅಮಾನವೀಯ ಧೋರಣೆಗಳನ್ನು ತಳೆಯುತ್ತಿದೆ ಎಂಬುದರ ಬಗೆಗೆ ಚರ್ಚಿಸುತ್ತಾ ತಮ್ಮ ಇಗೀತವನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ಹೀಗೆ ವಯುಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಗೆ ಪಸರಿಸುವ ಹುಸೇನ್ ಸಾಬ್ ಅವರ ಲೇಖನಗಳು ಸಾರ್ವತ್ರಿಕ ಆಯಾಮಗಳನ್ನು ಇಲ್ಲಿ ಪಡೆದುಕೊಳ್ಳುತ್ತವೆ.
ಒಬ್ಬ ವ್ಯಕ್ತಿಗೆ ತಾನು ಹುಟ್ಟಿ ಬೆಳೆದ ಪರಿಸರದೊಂದಿಗೆ ಅಲ್ಲಿನ ಸಂಸ್ಕೃತಿಯ ಪ್ರಭಾವ ಬಿರುವುದು ಸರ್ವೇ ಸಾಮಾನ್ಯ. ಅದರಿಂದ ಹುಸೇನ್ ಸಾಬ್ ಅವರು ಸಹ ಹೊರತಾಗಿಲ್ಲ ಎಂದು ಹೇಳಬಹುದು. ಮೂಲತಃ ಪ್ರಾಚಿನ ಪರಂಪರೆಯನ್ನು ಹೊಂದಿರುವ ಮುಧೋಳ ಗ್ರಾಮದವರಾದ ಇವರು, ಅಲ್ಲಿನ ಐತಿಹಾಸಿಕ ಬೇರುಗಳನ್ನು, ಅವುಗಳ ಆಳ, ವಿಸ್ತರ ಹಾಗೂ ಹಿನ್ನೆಲೆಯನ್ನು ವಸ್ತುನಿಷ್ಟವಾದ ದಾಖಲೆಗಳ ಆಧಾರದ ಮೇಲೆ ಕೂಲಂಕುಷವಾಗಿ ಪರಿಶೀಲಿಸುವ, ಆ ಮೂಲಕ ಸತ್ಯಾಸತ್ಯತೆಗಳನ್ನು ಕಂಡುಕೊಳ್ಳುವ, ಅದನ್ನು ತಮ್ಮದೊಂದು ಲೇಖನದಲ್ಲಿ ವಿವರಿಸುವುದರೊಂದಿಗೆ ಬೆರಗು ಹುಟ್ಟಿಸುತ್ತಾರೆ. ಒಬ್ಬ ಲೇಖಕನಾಗಿ ತಮ್ಮ ಸಾಂಸ್ಕೃತಿಕ ಜವಾಬ್ದಾರಿಯನ್ನು ಮನಗಂಡು, ಆ ನಿಟ್ಟಿನ ಕಾರ್ಯ ತತ್ಪರತೆ, ಸಂಸ್ಕೃತಿಯ ಕುರಿತಾದ ಒಲವು ಹಾಗೂ ಸಾಮರಸ್ಯದ ಚಿಂತನ – ಮಂಥನಗಳ ಹೊನಲು ಹುಸೇನ್ ಸಾಬ್ ಅವರ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.
ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿದಾಗ ಧರ್ಮ ಎಂಬುದು ತನ್ನ ಮೂಲ ತತ್ವ ಹಾಗೂ ಸದುದ್ದೇಶವನ್ನು ಕಳೆದುಕೊಂಡು, ಅದಕ್ಕೆ ವ್ಯತೀರಿಕ್ತವಾದ ವ್ಯಾಖ್ಯಾನಗಳನ್ನು ಪಡೆದುಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಒಂದು ವೇಳೆ ಕ್ಲಿಷೆ ಅನ್ನಿಸಿದರೂ ಸಹ “ಧರ್ಮ ಎಂದರೇನು; ಯಾವುದು?” ಎಂದು ಪ್ರಶ್ನಿಸುತ್ತ…. ನಿಜ ಅರ್ಥದಲ್ಲಿ ಧರ್ಮ ಎಂದರೆ ಸಮಾನತೆಯುಳ್ಳದ್ದು, ಮಾನವೀಯತೆಯನ್ನು ಒಳಗೊಂಡದ್ದು ಎಂದು ತಮ್ಮ ನಿಲುವನ್ನು ಉಟ್ಕತವಾಗಿ ಪ್ರತಿಪಾದಿಸುತ್ತ, ಕುವೆಂಪುರವರ “ವಿಶ್ವ ಮಾನವ” ಸಂದೇಶವನ್ನು ಎತ್ತಿ ಹಿಡಿಯುತ್ತ, “ಇರುವುದು ಒಂದೇ ಧರ್ಮ, ಅದು ಮನುಷ್ಯ ಧರ್ಮ. ಕತ್ತಲಲ್ಲಿ ಇರುವವನನ್ನು ಬೆಳಕಿಗೆ ತರುವುದು, ಬಾಯಾರಿದವನಿಗೆ ನಿರುಣಿಸುವುದು; ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು” ಎಂಬ ‘ ಶ್ರೀ ಶಿವಕುಮಾರ ಸ್ವಾಮೀಜಿ ‘ ಅವರ ಮಾತುಗಳನ್ನು ಉಲ್ಲೇಖಿಸುತ್ತ…. ಭಾರತೀಯ ಸಂಸ್ಕೃತಿಯಲ್ಲಿ ಧರ್ಮಗಳ ಪ್ರಾಚೀನತೆ, ಮನುಷ್ಯ ಜೀವನದಲ್ಲಿ ಅವುಗಳ ಮಹತ್ವ ಮತ್ತು ಪಾತ್ರ, ಧರ್ಮಗಳು ಬೆಳೆದು ಬಂದ ರೀತಿ, ಬದಲಾದ ಪರಿಸ್ಥಿತಿ ಹಾಗೂ ಸನ್ನಿವೇಶಗಳಲ್ಲಿ ಧರ್ಮಗಳ ಅರ್ಥ ಮತ್ತು ಸ್ವರೂಪ, ಧರ್ಮದ ಹೆಸರಿನಲ್ಲೂ ನಡೆಯುತ್ತಿರುವ ಶೋಷಣೆ, ಆಚರಣೆಗಳಲ್ಲಿ ಅಡಗಿರುವ ಮೌಢ್ಯತೆ, ಅದರ ವಿರುದ್ಧವಾಗಿ ಜರುಗಿದಂತಹ ಹೋರಾಟಗಳು, ಹುಟ್ಟಿದ ಚಿಂತನೆಗಳು ಹಾಗೂ ಸಿದ್ಧಾಂತಗಳು, ಅದಕ್ಕಾಗಿ ಶ್ರಮಿಸಿದ ಮಹಾತ್ಮರು ಹೀಗೆ ಎಲ್ಲರ… ಎಲ್ಲದರ…. ಕುರಿತು ಸಂಕ್ಷಿಪ್ತವಾಗಿ ಒಬ್ಬ ಐತಿಹಾಸಕಾರನಂತೆ, ಸಂಸ್ಕೃತಿಯ ಚಿಂತಕನಂತೆ ಹುಸೇನ್ ಸಾಬ್ ಅವರು ಇಲ್ಲಿ ತಮ್ಮ ವಿವಿಧ ವೈವಿಧ್ಯಮಯ ಆಸಕ್ತಿ ಹಾಗೂ ಸವಿಸ್ತಾರವಾದ ಜ್ಞಾನದ ಮಿಂಚಿನಿಂದ ಗಮನ ಸೆಳೆಯುತ್ತಾರೆ.
ಇದರೊಟ್ಟಿಗೆ ಪ್ರಸ್ತುತ ಕಾಲಘಟ್ಟದಲ್ಲಿ ಯುವ ಪೀಳಿಗೆ ತುತ್ತಾಗುತ್ತಿರುವ ತಲ್ಲಣಗಳು, ಅವರ ಮುಂದಿರುವ ಭವಿಷ್ಯದ ಸವಾಲುಗಳು, ಪ್ರೀತಿ – ಪ್ರೇಮದ ಜಾಲಕ್ಕೆ ಸಿಲುಕಿ ಜೀವಕ್ಕೆ ಕುತ್ತು ತಂದುಕೊಳ್ಳುವ ಹಾಗೂ ಸಮಾಜದ ಸ್ವಾಸ್ತ್ಯವನ್ನು ಕದಡುವಂತಹ ದುರಭ್ಯಾಸಗಳು, ಕೋಪ – ತಾಪ, ಅತಿಯಾದ ಮೊಬೈಲ್ ಬಳಕೆ, ಅದರ ಸಾಧಕ – ಬಾಧಕಗಳು ಇತ್ಯಾದಿ ಸೂಕ್ಷ್ಮ ವಿಚಾರಗಳ ಕುರಿತು ಚರ್ಚಿಸುತ್ತ, ಓದುಗನೊಂದಿಗೆ ಸಂವಾದ ನಡೆಸುತ್ತ ಮತ್ತೆ ಮತ್ತೆ ತಮ್ಮ ಬಾಲ್ಯದ ನೆನಪಿನ ಬುತ್ತಿಯನ್ನು ಬಿಚ್ಚಿ, ಅಂದಿನ ಆಟ – ಪಾಠ, ಮುಗ್ಧತೆ, ಮೈತ್ರಿಗಳ ತುತ್ತುಗಳನ್ನು ತುಂಬು ಆಪ್ತತೆಯಿಂದ ಉಣಬಡಿಸುತ್ತ Generation gap ನಿಂದಾಗಿ ಆದ ಬದಲಾವಣೆಗಳನ್ನು ಹಂಚಿಕೊಳ್ಳುತ್ತಾರೆ.
ಕೊನೆಯಲ್ಲಿ “ಪ್ರತಿ ಕ್ಷಣಗಳನ್ನು ಜೀವಿಸಿ” ಎನ್ನುವ ಲೇಖನದಲ್ಲಿ ಕಂಬಳಿ ಹುಳುವೊಂದು ಕಾಲಾಂತರದಿ ಚಿಟ್ಟೆಯಾಗಿ ರೂಪಾತರ ಹೊಂದಿದಂತೆ, ಕಬ್ಬಿಣದ ಹಲಗೆಯೊಂದು ಕುಲುಮೆಯಲಿ ಬೆಂದು ಮೆದುವಾಗಿ ನಂತರ ನಿರ್ದಿಷ್ಟ ಆಕಾರ ಪಡೆದುಕೊಂಡು ಮತ್ತಷ್ಟು ಗಟ್ಟಿಯಾದಂತೆ ಹುಸೇನ್ ಸಾಬ್ ಅವರು ಲೋಕದನುಭವಗಳನ್ನು ತಮ್ಮ ಅನುಭವಗಳನ್ನಾಗಿಸಿಕೊಂಡು ಒಬ್ಬ ತತ್ವಜ್ಞಾನಿಯಂತೆ, ದಾರ್ಶನಿಕನಂತೆ ತಮ್ಮ ಮಾಗಿದ ಚಿಂತನೆಗಳನ್ನು ಭೀತ್ತರಿಸುತ್ತಾರೆ!
” ಜೀವನದಲ್ಲಿ ಖುಷಿಯಿಂದ ಇರಬೇಕಾದರೆ ಖುಷಿಯನ್ನು ನಾವು ಎಲ್ಲೋ ಹುಡುಕುವ ಅಗತ್ಯವಿಲ್ಲ, ಅದು ನಮ್ಮಲ್ಲೇ ಅಡಗಿರುತ್ತದೆ. ಒತ್ತಡದಿಂದ ಹೊರಬಂದು ಜೀವನದ ಪ್ರತಿ ಕ್ಷಣಗಳನ್ನು ನಾವು ಜೀವಿಸಬೇಕು “.
…… ಎಂಬ ಈ ಮೇಲಿನ ಹುಸೇನ್ ಸಾಬ್ ಅವರ ಮಾತುಗಳು ಲೇಬನಾನಿನ ದಾರ್ಶನಿಕ ಕವಿ ‘ಖಲೀಲ್ ಗಿಬ್ರಾನ್’ ನ “ಹುಚ್ಚ ಜಾನ್” ನ ವಾಕ್ಯಗಳಂತೆ ಸಂಮೋಹಿಸಿದರೆ ಅಚ್ಚರಿಪಡಬೇಕಿಲ್ಲ.
ಪ್ರೀತಿಯ ಶುಭ ಹಾರೈಕೆಗಳೊಂದಿಗೆ….
-ಜಬೀವುಲ್ಲಾ ಎಂ. ಅಸದ್
ಸಾಹಿತಿ ಹಾಗೂ ಚಿತ್ರ ಕಲಾವಿದರು,
ಮೊಳಕಾಲ್ಮುರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.