ನಾವೆಲ್ಲರೂ ನಮ್ಮ ಪೂರ್ವಜರ ಕಾಲದಿಂದ ನೋಡಿಕೊಂಡು ಬರುತ್ತಿರುವ ದೆವ್ವಗಳು ಬಿಳಿ ಸೀರೆ ಅಥವಾ ಗೌನ್ ಗಳನ್ನು ಮಾತ್ರ ಧರಿಸುತ್ತವೆ.ಯಾಕೆ?ದೆವ್ವಗಳಿಗೇನೂ ಬೇರೆ ಬಣ್ಣಗಳ ಅಲರ್ಜಿಯೇ ಎಂದು ಎಂದಾದರೂ ಯೋಚಿಸಿದ್ದೀರಾ?ಹೌದು! ನಿಜವಾಗಿಯೂ ದೆವ್ವಗಳು ಇವೆಯೇ?ಎಂಬ ಜಿಜ್ಞಾಸೆ ಇಂದಿಗೂ ಗೊಂದಲಮಯವಾಗಿದೆ.
ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಅಜ್ಜ-ಅಜ್ಜಿಯಂದಿರು ಕಥೆ ಹೇಳುವಾಗ,ಊರ ಜನರೆಲ್ಲ ಸೋಮಾರಿ ಕಟ್ಟೆ ಮೇಲೆ ಕುಳಿತು ಮಾತನಾಡುವಾಗ,ದೆವ್ವಗಳು ಊರ ಹೊರಗಿನ ನಿರ್ಜನ ಪ್ರದೇಶಗಳಲ್ಲೋ,ಸ್ಮಶಾನಗಳಲ್ಲೋ, ನುಗ್ಗೆಮರ ಮತ್ತು ಹುಣಸೆ ಮರಗಳಲ್ಲಿ ವಾಸವಾಗಿರುತ್ತವೆ ಎಂದು ಕೇಳಿರುತ್ತೇವೆ.ವಿಶೇಷವಾಗಿ ದೆವ್ವಗಳು ಸ್ತ್ರೀ ವೇಷಧಾರಿಗಳಾಗಿರುತ್ತವೆ ಏಕೆ? ಹಾಗಾದರೆ ಪುರುಷ ದೆವ್ವವಾಗುವುದಿಲ್ಲವೇ ಎಂಬ ಪ್ರಶ್ನೆ ಮೂಡುವುದುಂಟು.ನಿಜವಾಗಿಯೂ ಸೂಕ್ಷ್ಮವಾಗಿ ದೆವ್ವಗಳ ಬಗ್ಗೆ ಅಧ್ಯಯನ ಮಾಡುತ್ತಾ ಹೋದರೆ, ಹಿಂದಿನ ಕಾಲದಲ್ಲಿ ಬುದ್ಧಿವಂತರು ತಮ್ಮ ಅಪಾರ ಸಂಪತ್ತನ್ನು ರಕ್ಷಿಸಲು ಆ ಕಡೆ ಹೋಗದಿರಲಿ ಎಂದು ಒಂದು ದೊಡ್ಡ ದೆವ್ವದ ಕಥೆಯನ್ನೇ ಕಟ್ಟಿ ಬಿಡುತ್ತಿದ್ದರು.ಅಲ್ಲದೆ ಹಿಂದಿನ ಕಾಲದಲ್ಲಿ ತಮ್ಮ ಸಂಪತ್ತನ್ನು ಶೇಖರಿಸಿಡಲು ಬ್ಯಾಂಕ್ ಮತ್ತು ಲಾಕರ್ ಗಳ ವ್ಯವಸ್ಥೆಗಳು ಇರಲಿಲ್ಲ. ಆದ್ದರಿಂದ ಯಾವುದಾದರೂ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಿಧಿಯ ರೂಪದಲ್ಲಿ ಅಡಗಿಸಿಡುತ್ತಿದ್ದರು.ಆ ನಿಧಿ ಬೇರೆಯವರ ಪಾಲಾಗದಿರಲಿ ಅಂತ.ಅಷ್ಟೇ ಅಲ್ಲ!ತಾವು ನಡೆಸುವ ಅನೈತಿಕ ಚಟುವಟಿಕೆಗಳು ಅನ್ಯರಿಗೆ ತಿಳಿಯದಿರಲಿ ಎಂದು ಅಲ್ಲೊಂದು ಸುಂದರ ದೆವ್ವದ ಕಥೆ ಸೃಷ್ಟಿಯಾಗಿ ಬಿಡುತ್ತಿತ್ತು.ಹೀಗಿರುವಾಗ ತಮ್ಮ ದೆವ್ವದ ಕಟ್ಟು ಕತೆಯ ಪಾತ್ರಧಾರಿ ರಾತ್ರಿ ವೇಳೆಯಲ್ಲಿ ಬೇರೆ ಬಣ್ಣಗಳಾದರೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ.ಆದ್ದರಿಂದ ಕತ್ತಲೆಯಲ್ಲಿ ಎದ್ದು ಕಾಣಲಿ ಎಂಬ ಕಾರಣಕ್ಕಾಗಿ ನಾವು ನೋಡಿರುವ ದೆವ್ವಗಳಲ್ಲೆಲ್ಲ ಬಿಳಿ ಬಟ್ಟೆಗಳನ್ನೇ ಮಾತ್ರ ನೋಡಿರುತ್ತೇವೆ.ಅಲ್ಲದೆ ದೆವ್ವಗಳು ಆಕರ್ಷಕವಾಗಿ ಕಂಡು ವಿಶೇಷ ಗಮನ ಸೆಳೆಯಲಿ ಎಂದು ಸ್ತ್ರೀ ವೇಷಧಾರಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿರಬಹುದು.
ದೆವ್ವಗಳು ಅಮಾವಾಸ್ಯೆ ಇದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಬಿಂಬಿಸುತ್ತಿದ್ದರು.ಕಾರಣ ಇಷ್ಟೇ ಅಮಾವಾಸ್ಯೆ ದಿನಗಳಲ್ಲಿ ಚಂದ್ರನಿಲ್ಲದ ರಾತ್ರಿ ಎಲ್ಲೆಲ್ಲೂ ಕತ್ತಲು.ಆದ್ದರಿಂದ ಬುದ್ಧಿವಂತರಿಗೆ ದೆವ್ವಗಳ ಕಥೆ ಕಟ್ಟಲು ಸುಲಭವಾಗುತ್ತಿತ್ತು.ಅಲ್ಲದೆ ಆ ನಡು ರಾತ್ರಿಯಲ್ಲಿ ದೆವ್ವಗಳು ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು,ಕೈಗೆ ಬಳೆಗಳನ್ನು ತೊಟ್ಟುಕೊಂಡು ಬರುತ್ತಿದ್ದವು.ಗೆಜ್ಜೆ ಸದ್ದುಗಳನ್ನು ಕೇಳಿದ ದೂರದಲ್ಲಿರುವ ವ್ಯಕ್ತಿಗಳು ದೆವ್ವದ ಆಹ್ವಾನವಾಯಿತು ಎಂದು ಹೆದರಿ ಓಡಿ ಹೋಗುತ್ತಿದ್ದರು. ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕೇಳಿಕೊಂಡು ಬಂದಿರುವ ದೆವ್ವಗಳು ಹಿಂದಿಗಿಂತ ಇಂದು ಮಾಧ್ಯಮ ಲೋಕದಲ್ಲಿ ದೆವ್ವಗಳು ಕಡಿಮೆಯಾಗಿದ್ದಾದರೂ ಏಕೆ? ನೀವೆಲ್ಲ ಕೇಳಿರಬಹುದು ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ವಿಶೇಷವಾಗಿ ಅನಕ್ಷರಸ್ಥರಿಗೆ ದೆವ್ವಗಳು ಮೈಮೇಲೆ ಬರುವುದು.ಜೊತೆಗೆ ದೆವ್ವ ಬಿಡಿಸುವ ತಾಣಗಳು ಇದ್ದಿದ್ದನ್ನು ನಾವೆಲ್ಲರೂ ನೋಡಿದ್ದೇವೆ.ದೆವ್ವಗಳು ವಿದ್ಯಾವಂತ ಡಾಕ್ಟರ್,ಇಂಜಿನಿಯರ್,ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಶ್ರೀಮಂತರಿಗೆ ದೆವ್ವ ಹಿಡಿದ ಪ್ರಸಂಗವನ್ನು ಎಂದಾದರೂ ನೋಡಿದ್ದೀರಾ?ಇಲ್ಲ.ಇವೆಲ್ಲ ಕೇವಲ ಅನಕ್ಷರಸ್ಥ ಅವಿದ್ಯಾವಂತರಿಗೆ ಮಾತ್ರ ಬರುತ್ತಿದ್ದವು.ಆದರೆ ಇವೆಲ್ಲ ಇಂದು ಕಣ್ಮರೆಯಾಗಿದ್ದಾದರೂ ಯಾಕೆ?ಎಂಬ ಪ್ರಶ್ನೆ ಕುತೂಹಲವನ್ನು ಹುಟ್ಟಿಸದೇ ಇರಲಾರದು.ಇನ್ನೊಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.ತೀರ ಇತ್ತೀಚಿಗೆ ಸತ್ತ ವ್ಯಕ್ತಿ ದೆವ್ವವಾಗಿದ್ದಾನೆ ಎಂಬ ಸುದ್ದಿಯನ್ನು ಕೇಳಿರುತ್ತೇವೆ.ಆ ದೆವ್ವ ಹೊಸ ವ್ಯಕ್ತಿ ಸತ್ತು ದೆವ್ವವಾದ ನಂತರ ಕಣ್ಮರೆಯಾಗಿ ಬಿಡುತ್ತಾನೆ. ಅಂದರೆ ಹಳೆ ದೆವ್ವ ಮಾಯವಾಗಿ ಹೊಸ ದೆವ್ವ ಸೃಷ್ಟಿಯಾಗಿರುತ್ತದೆ.ಅಲ್ಲದೆ ದೆವ್ವಗಳು ಒಂಟಿಯಾಗಿರುವಾಗ ಮಾತ್ರ ಕಾಣಿಸುತ್ತವೆ ಎಂದು ಹೇಳುತ್ತಾರೆ. ಆದರೆ ಬಹಳಷ್ಟು ಜನ ಗುಂಪಾಗಿರುವಾಗ ಎಲ್ಲಾದರೂ ದೆವ್ವಗಳನ್ನು ನೋಡಿದ್ದೀರಾ? ಇದಲ್ಲವೇ ಬುದ್ಧಿವಂತರ ಜಾಣತನ!ದೆವ್ವ ಎನ್ನುವುದು ಒಂದು ಕಾಲ್ಪನಿಕ ಸೃಷ್ಟಿ.ಭಯಪಡದೆ ನಿರ್ಭೀತಿಯಿಂದ ಸುಂದರ ಬದುಕು ಕಟ್ಟಿಕೊಳ್ಳೋಣ.
ಧೈರ್ಯಂ ಸರ್ವತ್ರ ಸಾಧನಂ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.