“ಕಣ್ಣ ಹಿಂದಿನ‌ ಕಡಲು”

ಲೇಖಕರು : ಮಾರುತಿ ದಾಸಣ್ಣವರ ಕವಿತೆ

ಸದಾ ಕಾಡುವ "ಕಣ್ಣ ಹಿಂದಿನ ಕಡಲು"

ಮಡಿಕೇರಿಯಲ್ಲಿ ಸದ್ಯಕ್ಕೆ ನವೋದಯ ವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ  ಮೂಲತಃ ಗೋಕಾಕ ತಾಲೂಕಿನವರಾದ ಶ್ರೀ ಮಾರುತಿ ದಾಸಣ್ಣವರ ತಮ್ಮ ಹೊಸ ಕವನ ಸಂಕಲನ “ಕಣ್ಣ ಹಿಂದಿನ ಕಡಲು” ತುಂಬ ಪ್ರೀತಿಯಿಂದ ಕಳಿಸಿದ್ದಾರೆ. ಮಾರುತಿ ದಾಸಣ್ಣವರ ಅವರು ಬಹಳ ಅಪರೂಪದ ಸ್ನೇಹಿತರು  .ಅಷ್ಟೇ ಸಂಕೋಚದ  ವ್ಯಕ್ತಿ. ಮಾತಾಡಿದರೆ ಮುತ್ತು‌ ಉದುರುತ್ತಾವೆ ಅಂತಾರಲ್ಲ ಹಾಗೆ! ಬರೆಯುವದೂ ಮುತ್ತಿನಂತಹ ಕಾವ್ಯ, ಕಥೆಯನ್ನೇ! ನಾನೋ ಅವರಿಗೆ ವಿರುದ್ಧ .ತುಂಬ ಮಾತಾಳಿ . ಬರೆಯುವದು ಜಾಳು ಜಾಳು ತುಂಬ ಸಶಕ್ತವಾದ ಕವಿತೆಗಳು ತುಂಬಿರುವ ಒಂದು ಸಂಕಲನವನ್ನು ಅವರು ಕಟ್ಟಿಕೊಟ್ಟಿದ್ದಾರೆ .ಅದರ ಓದನ್ನು ಹಿಡುದಿಡುವ ಪ್ರಯತ್ನ‌ ಇಲ್ಲಿದೆ.ಬಹುಶಃ ಒಂದೇ ಏಟಿಗೆ ಹಿಡಿದಿಡಲಾಗದ ಕವಿತೆಗಳು  .ಇವುಗಳಂದಿಗೆ ಸಂವಾದ ಮಾಡುತ್ತಲೇ ಇರಬೇಕು ಎನ್ನಿಸವಂತಹ ಕವಿತೆಗಳು ಇವು. ಬಹು ಕಾಲದ ಮೇಲೆ ಒಂದು ಅಪರೂಪದ ಕವಿತೆಗಳ ಗುಚ್ಛವನ್ನು ಕನ್ನಡ ಲೋಕ ಎದುರುಗೊಳ್ಳುತ್ತಿದೆ ಎಂಬ ವಿನಮ್ರ ಭಾವ ನನ್ನದು.. ಕವಿ ಮಾರುತಿಯವರದು ಅವಸರದ ಮನಸ್ಥಿತಿಯಲ್ಲ.ಕವಿತೆ ಅವರಿಗೆ ಒಂದು ಧ್ಯಾನ.ನಿರಂತರ ಅನುರಣನದ ಮೂಲಕ ಅವರು ಕವಿತೆಯನ್ನು ಒಲಿಸಿಕೊಳ್ಳಬಲ್ಲ ತಾಳ್ಮೆಯ ಗುಣದವರು.ಹೀಗೆ ತಾಳ್ಮೆಯಿರದಿದ್ದರೆ ಒಂದು ಕವಿತೆ ಮೈದಾಳಲಾರದು. ಒಂದು ಕವಿತೆಗಾಗಿ ಅವರಿ ಬಹುಕಾಲ ಧ್ಯಾನಿಸಬಲ್ಲರು.ಅಂತೆಯೆ ಹದಿನೈದು ವರ್ಷಗಳ ಅವಧಿಯಲ್ಲಿ ಕೇವಲ ಮೂರು  ಸಂಕಲನಗಳನ್ನು  ತಂದಿದ್ದಾರೆ.ಮೂರೂ ಸಂಕಲನ ಸೇರಿ ನೂರಕ್ಕೂ ಮಿಕ್ಕಿ ಕವಿತೆಗಳಿರಲಿಕ್ಕಿಲ್ಲ ಎಂಬ ಊಹೆ ನನ್ನದು .ಇದ್ಯಾವುದೂ ಲೆಕ್ಕ ಹಾಕುವ ಮಾತಲ್ಲ ,ಬದಲಾಗಿ ಕವಿತೆ ಸೃಷ್ಟಿಯ ಕುರಿತಂತೆ ಅವರ ಧ್ಯಾನಸ್ಥ ಗುಣದ ಬಗೆಗೆ ನಾನು ಹೇಳಿದ್ದೇನೆ ಅಷ್ಟೇ. ಈ ಸಂಕಲನದಲ್ಲಿ ೩೨ ಕವಿತೆಗಳಿವೆ. ಇಲ್ಲಿ ಬುದ್ಧ ಮತ್ತು ಅಪ್ಪ ಮತ್ತೆ ಮತ್ತೆ ಪ್ರತ್ಯಕ್ಷರಾಗುತ್ತಾರೆ. ಅವರ “ನಮ್ಮ‌ಮುಂದಿನ ಸಸಿಗಳು” ಒಂದು‌ ಕವಿತೆ ಬಹಳಷ್ಟು ನನ್ನನ್ನು ಕಾಡಿದ ಕವಿತೆ.

.ಅಂತರ್ಜಾಲದ

 ಅನಂತ ಸಾಗರದಿಂದೆದ್ದು

ಕಣ್ಣುಜ್ಹುತ್ತ ಬಂದ ಮಗ

(ಥೇಟ್ ವೈಶಂಪಾಯನದಿಂದೆದ್ದ

ದುರ್ಯೋಧನ..)

ಕಥೆ ಹೇಳು ಅಂದ.

ಅಚ್ಚರಿಯ ಹುದುಲೊಳಗೆ

ಒದ್ದಾಡಿದೆ,ಗುದ್ದಾಡಿದೆ.

ಇದು ಕನಸಾಗದಿರಲೆಂದು

ಹಂಬಲಿಸಿದೆ….

ಅಂತರ್ಜಾಲದ  ಅನಂತ ಸಾಗರದಿಂದ ನಮ್ಮ‌ಮಕ್ಕಳು ಎದ್ದು ಬರುವುದೆ ಕಡಿಮೆ. ಅವರು ಎದ್ದು ಬಂದರೂ ದುರ್ಯೋಧನ ಎದ್ದ ಅನುಭವವೇ! ತಂದೆ ತಾಯಿಯನ್ನು‌ ಮಾತನಾಡಿಸಲು ಇಂದಿನ‌ ಮಕ್ಕಳಿಗೆ ಪುರುಸೊತ್ತೆಲ್ಲಿದೆ? ಈ ಎಲ್ಲ ಪ್ರಶ್ನೆಗಳನ್ನು ಎದುರಿಸಿದ  ಅಪ್ಪ ಅಚ್ಚರಿಯ ಹುದುಲೊಳಗೆ ಮುಳುಗಿದ್ದು ನಮಗೆ ಸೂಚಿಸುತ್ತದೆ.ಮಗ ಕಥೆ ಹೇಳು ಎಂದಾಗಲೇ ಅವನಿಗೆ ಒದ್ದಾಟ ಗುದ್ದಾಟ ಶುರುವಾಗುತ್ತೆ.ಮಗ ಕಥೆ ಹೇಳು ಎಂದು ಅವನ ಹತ್ತಿರ ಬಂದದ್ದೇ ಒಂದು ಆಕಸ್ಮಿಕ. ಅದಕ್ಕೆ ಅಪ್ಪ ಇದು ಕನಸಾಗದಿರಲಿ ಎನ್ನುತ್ತಾನೆ.ಅಂತೆಯೆ ಮಗ ಕಥೆ ಕೇಳಲು ಬಂದಾಗ ಉಬ್ಬಿದೆ ಸಮುದ್ರಲಂಘನ ಪೂರ್ವ ಹಣಮಂತನಂತೆ ( ಭೋ ಪರಾಕು ಹೆಳಲಿದ್ದವಳು ನನ್ನಾಕೆ ಮಾತ್ರ) ನಿಜಕ್ಕೂ ಮಗ ಕಥೆ ಕೇಳಲು ಬಂದನಲ್ಲ ಎಂದು ಕವಿತೆಯ ನಾಯಕನಿಗೆ ಖುಷಿಯಾಗುತ್ತದೆ.ಆತ ತನ್ನ ಆ ಖುಷಿಯನ್ನು ತನಗಾದ ಸಂಭ್ರಮವನ್ನು ರಾಮಾಯಣಕಾಲದ ಹಷಮಂತ ರಾವಣನ ರಾಜ್ಯಕ್ಕೆ ಹೋಗುವಾಗ ಸಾಗರವನ್ನು ಹಾರಲು ತಯಾರಾದ ರೀತಿಗೆ ಹೋಲಿಸುತ್ತಾರೆ.ಕವಿತೆಯಲ್ಲಿ‌ ಮಗನ ತಾಯಿಯ ಪಾತ್ರವೂ ಇದೆ. ತನ್ನ ಗಂಡನ ಪರಾಕ್ರಮವನ್ನು ಮೆಚ್ಚಬೇಕಾದವಳು ಅವಳು ತಾನೇ! ಅದಕ್ಕೆ ಭೋಪರಾಕು ಹೇಳಲು ಅವಳಿದ್ದಾಳಲ್ಲ ಎನ್ನುತ್ತಾರೆ. ಕಥೆ ಕೇಳಿದ ಮಗನಿಗೆ ಕವಿ ಕಥೆ ಹೇಳತೊಡಗುತ್ತಾರೆ. ಹಳೆಯ ರೀತಿಯಲ್ಲಿ ಒಂದೂರು,ಒಬ್ಬ ರಾಜ ..ಹೋಗೆ ಕಥೆ ಪ್ರಾರಂಭವಾದಾಗ  ಆ ಕುವರನಿಗೆ ಸಿಟ್ಟು ಬರದಿರುತ್ತದೆಯೆ? ತಥ್ ಇದು ಸವಕಲು‌ಕಥೆ ಎಂಬ ಒಂಸೇ ಮಾತಿನಲ್ಲಿ ಇಸಾಕಿ ಬಿಡ್ತಾನೆ. ಮಗನ ಮಾತಿಗೆ  ತಂದೆ

ಒಂದು ದೊಡ್ಡ ರಾಜ್ಯ

ಅದನಾಳುವ ರಾಜ..ರಾಣಿ

ಎಂದು ಆರಂಭಿಸಿದೆ..

” ಥತ್! ಇದು ಸವಕಲು ಕಥೆ”

ಮುಖ ಸೊಂಡರಿಸಿದ.

ಜರ್ರನೇ ಜರಿದು ಬಿದ್ದೆ

ಪಾತಾಳಕ್ಕೆ…ಜರ್ರನೇ ಜಗ್ಗಿ ಬಿದ್ದೆ ಎನ್ನುವದು  ಕವಿ ಮುಟ್ಟಿದ ರಸಾತಳದ ಸಂಕೇತ.  ಎಂಥ  ಕಥೆ ಹೇಳಬೇಕು ಎಂದರೆ  ಮಗ ನಿಗೆ ಈ ಸಾಮಾನ್ಯ ಕಥೆಗಳಲ್ಕಿ ಆಸಕ್ತಿಯಿಲ್ಲ ಆತನಿಗೆ ಬೇಕಾಗಿರೊದು ರಕ್ತ ಸುರಿಸೋ ಕಥೆ.,ಅಪ್ಪನಿಗೆ ಮಗ –

“:ಥ್ರಿಲ್ಲಿಂಗ್ ಕಥೆ ಹೇಳು” ಎಂದ

“ಅಂದರೆ…..?

ಎಂದೆ ಬೆಪ್ಪನಂತೆ…

” ರಕ್ತ ..ದ್ವೇಷ..ಕಾಮ..” ಎಂದ

ನಟನಿಗೆ ಕಥೆಯ ತಿಳಿಸುವ

ನಿರ್ದೇಶಕನಂತೆ

ಮಗನಿಗೆ ಬೇಕಾಗಿರುವದು ಥ್ರಿಲ್ಕಿಂಗ್  ಕಥೆ.

” ಏ ತಲೆಕೆಟ್ಟಿದೆಯೇನೋ”

ಗದರಿದಳೀಕೆ…

ರಪ್ಪನೇ ನೋಡಿದ ಅವಳತ್ತ.

ಅವನ‌ ಕೆಂಗಣ್ಣ ರಕ್ತಕ್ಕೆ

ನಡುಗಿದಳಾಕೆ…

ಏನಾದರೂ ಹೇಳುವ

ಮೊದಲೇ….

ನಾನೂ ಕಂಪಿಸುತ್ತಿದ್ದೆ

ಇಡೀ ಕವಿತೆ ಎರಡು ತಲೆಮಾರುಗಳ ಸ್ತಿತ್ಯಂತರವನ್ನು ತಿಳಿಸುವ ಕವಿತೆ.ಇಂದು ಯುವಜನಾಂಗ ಹೇಗೆ ಹಿಂಸಾಮುಖಿಯಾಗಿ ವರ್ತಿಸುತ್ತಿದೆ ಎನ್ನುವದು ಕವುತೆಯ ವಸ್ತು. ಕವಿತೆಯಲ್ಲಿ ನಮ್ಮನ್ನು‌ ಕಾಡುವದು ನಮ್ಮ ಮಕ್ಕಳೇ ರಕ್ತಪಿಪಾಶುವಾಗುವ ದುಸ್ಥಿತಿ.ಇಂತಹದೆ ಹಲವು ಎದೆಯನ್ನು‌ಕಾಡುವ ಕವಿತೆಗಳನ್ನು ಕವಿ ಮಾರುತಿ ಈ ಸಂಕಲನದಲ್ಕಿ ಕೂಡಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿ ತುಂಬ ಕಾಡುವ ಕವಿತೆಗಳಲ್ಲಿ ಆತ ತನ್ನ ಹಳೆಯ ಪ್ರೇಮಿಯನ್ನು ಹುಡುಕಿ ಅವಳ‌ಮನೆಗೆ ಹೋದಾಗ ಎದುರಾಗುವ ಫಜಿತಿಯನ್ನು ಕಟ್ಟಿಕೊಡುವ ಪದ್ಯ “ಅವಳ ಗದ್ದ ಹಚ್ಚೆ “.ಎಷ್ಟು ಚಂದ ಕವಿತೆ ಅವರ ಮನದ ನವಿರಾದ ತಾಕಲಾಟಗಳನ್ನು ಬಿಚ್ಚಿಡುತ್ತದೆಯಂದರೆ ಇಲ್ಲಿ ನಮಗೆ‌ ಮಾತನಾಡಲು ಅವಕಾಶವೇ ಇಲ್ಲ.ಬಹಳ ದಿನದ‌ಮೇಲೆ ಅವಳ‌ಮನೆಗೆ ಆತ ಬಂದಿದ್ದಾನೆ.ಅವರವರ ಮದುವೆಯಾಗಿ ಅವರು ಬೇರೆ ಬೇರೆ ಕಡೆ ಸೆಟಲ್ ಆಗಿದ್ದಾರೆ. ಆತ ತನ್ಬ ಬಾಲ್ಯ ಗೆಳತಿಯನ್ನು ಬೆಟೊಯಾಗಲು ಬಂದಿದ್ದಾನೆ.ಅವನಲ್ಕಿ ಕಳೆದ ಹಲವು ಮಧುರ  ನೆನಪುಗಳಿವೆ.ಆಕೆಗೂ ಮನದಲ್ಲಿ ಹಲವು ಭಾವ ತರಂಗಳಿವೆ ಅದು ಅವಳ ತಂದ ಚಹಾದ ಕಪ್ಪಿನ ಟ್ರೇ ನಡುಗುವದರಲ್ಲೇ ಗೊತ್ತಾಗುತ್ತದೆ ಸಣ್ಣಗೇ ಇಬ್ಬರ ನಡುವೆ ಕಳೆದು ಹೋದ ದಿನಗಳ ಒಸರು ವಿಕೆ ಆರಂಭ ವಾದಂತೆ ಕಾಣುವದರೊಳಗೇ ಅವಳ ಗಂಡ “ಏನಾಯ್ತು” ಎಂಬ ಅವನ  ರಕ್ಕಸ ಪ್ರಶ್ನೆಗೆ ಬೆಚ್ಚಬಿ( ಎ)ದ್ದೆವು ಮುಳುಗುತ್ತಿದ್ದವರು ಎದ್ದದ್ದು ,ಬಿದ್ದವರು ಎದ್ದದ್ದು ಇದೆಲ್ಲವನು ತುಂಬ ಸೂಕ್ಷ್ಮವಾಗಿ ಕವಿತೆ ಹರಡುತ್ತ ಹೋಗುತ್ತದೆ. ಈಗ ಅವರೇನು ಅದೇ ಹರೆಯದ ಹುಡುಗರಲ್ಲ .ಆಗಲೇ ಹಚ್ಚಿದ ಡೈ,ತೊಳೆದು ನರೆತ ಕೂದಲ ಹಾದಿ ಬೈತಲೆಯ ಎರಡೂ ಬದಿ.. ಆದರೆ ಆಕೆ ತುಂಬ ಜಾಣೆ ಗಂಡನ ಏನಾಯ್ತು ಎಂಬ ಪ್ರಶ್ನೆಗೆ ನಡೆದಿರುವ ಎರಡೂ ಎದೆಗಳ ನಡುವಿನ ಗಲಿಬಿಲಿಯನ್ನು ಸುಧಾರಿಸಿಬಿಡುವಂತೆ ಪಟಪಟನೆ ಅರಳು ಹುರಿದಂತೆ ಮಾತಾಡಿ ಎಲ್ಲ ಸುಧಾರಿಸಿ ಬಿಡುತ್ತಾಳೆ. ಇಲ್ಲಿ ಅವಳ ಗಂಡನನ್ನು ಬೇಕೆಂತಲೇ ರಕ್ಕಸ ಪ್ರಶ್ನೆ ಯ ಒಡೆಯನಾಗಿ ಕವಿ ನಿರೂಪಿಸುತ್ತಾರೆನೋ ಎಂಬ ಸಣ್ಣ ಸಂಶಯ ಕಾಡುತ್ತದೆ. ಆಕೆ ವಾಸ್ತವವಾದಿ ಗಡಿದಾಟದ ಬಂಧ ಅವಳ ಸುತ್ತ.ಇವನೋ ಭಾವನಾಜೀವಿ.ಅಬಳು ಹೇಳಿದ ಈಗಿನ ಸ್ತಿತಿಯ ಯಾವೊಂದೂ ಮಾತು ಇವನ ಕಿವಿಯಲ್ಲಿ ಬೀಳೋದೇ ಇಲ್ಕ. ಈತ ಅದೇ ಉಸುಕಿನ‌ಮನೆ, ಕೆಸರಿನ ಡ್ಯಾಮು, ಗುಬ್ಬಿ ಗೂಡು,ಹಸಿರು ಬೋರಂಗಿ, ನಮ್ಮನ್ನು ತೊಯಿಸಿ ನಗುತ್ತಿದ್ದ ಮಳೆ ಆಸರೆಯಾಗುತ್ತಿದ್ದ ಬಿದುರು ಮೆಳೆ.. ಹೀಗೆ ನೆನಪಿನ ದಿಬ್ಬಣ ದಲ್ಕಿ‌ಮುಳುಗಿದ್ದಾಗಲೇ ಆತ  “ಇನ್ನೊಮ್ಮೆ ಬರ್ರಿ..ನನಗೆ ಆಪಿಸಿಗೆ ಟೈಮಾತು” ಎಂದದ್ದು ಅವನೆದ್ದಾಗ ಈತ ಅನಿವಾರ್ಯ ಹೊರಬೀಳಲೇಬೇಕಾಗುತ್ತದೆ. ಆಕೆಗೂ ಏನೂ ಮಾಡಲಾಗದ ಅನಿವಾರ್ಯ ಪರಿಸ್ತಿತಿ .ಆದರೂ ಅವಳ ಕಣ್ಣ ಅಂಚಲ್ಲಿ ಸಣ್ಣಗೆ ಜಿನುಗಿದ್ದ ಪಸೆ ಈತನಿಗೂ ಕಂಡು ಆತ ಹೊರಬೀಳುತ್ತಾನೆ.ಕವಿತೆ ವಾಸ್ತವ ಮತ್ತು‌ಕನಸುಗಳ ತಾಕಲಾಟದಲ್ಲಿ ಬೆಳೆಯುತ್ತದೆ.ಆದರೆ ವಾಸ್ತೌನ್ನು ಎದುರಿಸುವದೇ ಅನಿವಾರ್ಯ ಎಂಬ ಸತ್ಯ ಕೂಡ ಕವಿತೆ ಯಲ್ಲಿದೆ. ಎಲ್ಲಿಯೂ ಕವಿ ಯಾರ ಪರವಾಗಿಯೂ ವಕೀಲಿ ಮಾಡದೇ ಕವಿತೆಯನ್ನು ಬೆಳೆಸುತ್ತ ಹೋಗಿರುವದು ಕವಿತೆಯ ವಿಶಿಷ್ಠವಾಗಿದೆ.ಇದಕ್ಕಿಂತ ಮೊದಲೇ ಓದಿಕೊಳ್ಳಬೇಕಾದ ಕವಿತೆ ” ಕಣ್ಣ ಪಸೆಯ ಹಿಂದೆ” ಎನ್ನುವದು.ಇಲ್ಲಿ ಪ್ರೀತಿಯನ್ನು ಅಗಲಿದ ನೋವನ್ನೂ ಕವಿತೆ ಎಷ್ಟು ಸಹಜವಾಗಿ ಚಿತ್ರಿಸಿದೆಯಂದರೆ ತನಗಾದ ನೋವನ್ನು ತುಂಬಿಕೊಂಡಿದದರೂ ಅವುಡಿಗಚ್ಚಿ ಹೊಡಿದ ,ದುಃ ಖ ಹೊರಹಾಕದ ಸಾತ್ವಿಕತೆ ಅಲ್ಕಿದೆ ಹೊರಟವಳ ಬಗೆಗೆ ಒಂದಿನಿತೂ ಕ್ರೋಧವಿಲ್ಲದ ಇಲ್ಲಿನ ಪ್ರೇಮಿ ಅವಳಿಗೆ ಒಳಿತನು ಹಾರೈಸುವದು ಎಲ್ಲೊ ಒಂದೆಡೆ ಪಲಾಯನವಾದವೇ ? ಎನ್ನು ಸಂಶಯ ಕಾಡಿದರೀ ಆ ಸಂದರ್ಭದಲ್ಕಿ ನಿರುಪಾಯನಾದ ಆತ ಇನ್ನೇನು ಮಾಡಬಹುದಿತ್ತು? ಎಂಬ ಪ್ರಶ್ನೆಯೂ ಎದುರಾಗುತ್ತದೆ.ಕಣ್ಣ ಪಸೆ ಒರೆಸುತ್ತಲೆ ಹೋಗು ಹೋಗೆನ್ನೊಲವೆ ಹಾದಿ ಹಾಡಲಿ ನಿನಗೆ ಪಯಣ ಹಾಯಾಗಿರಲಿ ಹೋಗು ಒಲವೇ.. ಎಂಬಲ್ಲಿನ ನವಿರುತನವನ್ನು ಹೆಗೆ ಬಣ್ಣಿಸುವದು? ಕವಿತೆಯ ಓದೇ ಸಾಕು! “ಯಾವ ದೂರಿಗಳಿಲ್ಲ, ಕಾವ ಕಾತರವಿಲ್ಲ, ಗಾಯಗಳ ಮರೆತಿರುವೆ, ಹೋಗಿ ಬಾ ಒಲವೆ” ಎನ್ನುವ  ಸಂತ ಸ್ಥಿತಿ ಇಲ್ಲಿನದು. ಹೌದು  ಕವಿ ಅವಳನ್ನೇಕೆ ಅರಸಿಕೊಂಡು ಹೋದ? ಮರೆತ ಬಂಧವಲ್ಲವೇ ಅದು? ಎಂಬ ಪ್ರಶ್ನೆಗೆ ಉತ್ತರ “ಸುಲಭವಲ್ಲ” ಕವಿತೆಯಲ್ಲಿದೆ.ಹೌದೇ?  ಅವರೀಗ ಬೇರೆಯೇ?  ಹೌದು ಲೋಕದ ಕಣ್ಣಿಗೆ! ಆದರ‌ಎ ಮನದೊಳಗೆ ಅವಳ ಚಿತ್ತಾರವಿನ್ನೂ ಉಳಿದಿದೆ .ಅವನಿಗೆ ನೆನಪುಗಳ ಸುಟ್ಟು ಹಾಕುವದು ಅಷ್ಟು ಸುಲಭವಲ್ಲ ಎಂದು ಗೊತ್ತಿದೆ.ಅಂತೆಯೆ ಹರಿದು ಹಾಕಿದ ಪತ್ರದ ನೆನಪುಗಳನ್ನು ಜೋಪಾನವಾಗಿ ಉಳುಹಿಕೊಂಡ ಪ್ರೇಮಿ ಅವನು. ನಿನ್ನ ಮುಂಗುರುಳು ನನ್ನ ಜೇಬಿನ ಪೆನ್ನಿಗೆ ಸಿಕ್ಕಿಸಿಕೊಂಡು ಬಿಡಿಸಿಕೊಳ್ಳಲು ಪರದಾಡಿದ್ದು ನೆನಪಿದೆ ಸಂಬಂಧಗಳ ಹರಿದುಕೊಳ್ಳುವದು ಅಷ್ಟು ಸುಲಭವಲ್ಲ. ಈ ಕಾರಣಕ್ಕೆ ಆತ ಮತ್ತೊಮ್ಮೆ ಅವಳನ್ನು ಹುಡುಕಿಕೊಂಡು ಬಂದಿದ್ದಾನೆ.

ಕೆ.ಎಸ್.ನ ಮತ್ತು ಸಿದ್ದಲಿಂಗಯ್ಯನವರ ಕವಿತೆಗಳನ್ನು  ನೆನಪಿಗೆ  ತರುವ ಪದ್ಯ “ನಲ್ಲೆಗೆ” .ಇಡೀ ಪದ್ಯದ ತುಂಬ ಪ್ರೇಮಿ ಕವಿ ತನ್ನವಳಿಗೆ  ತನ್ನ ಊರ ಬರ್ಬರ ಬದುಕನ್ನು ವಿವರಿಸುತ್ತಲೇ ಅಲ್ಲಿನ ಶ್ರೀ ಮಂತಿಕೆಯನ್ನು ಗುರುತಿಸುತ್ತಾನೆ.ಸುಂದರ ಭಾವಗೀತೆಯಾಗಿರುವ ಈ ಕವಿತೆ ಉಪ್ಪರಿಗೆ ಮನೆಯಲ್ಲ ನುಣುಪಾದ ನೆಲವಿಲ್ಲ ಇಟ್ಟಿಗೆಯ ಪೇರಿಸಿದ ಮಣ್ಣ ಮಹಲು ಹೀಗೆ ಹೇಳುತ್ತಲೇ ಅಲ್ಲಿನ ಇಲ್ಲಗಳ‌ ಪಟ್ಟಿ ಮಾಡುತ್ತಲೇ ಹೋದರೂ ಕೊನೆಯಲ್ಲಿ ಬಾಚಣಿಕೆಯಲಿ ಬಾಚಿ ಒತ್ತಿ ಹೆಳಲನು ಹೆಣೆದು ಮುಡಿಸುವೆನು‌ ಪ್ರೀತಿಯಲಿ ನನ್ನ ನಲ್ಲೆ ಎಂದು ತನ್ನ ಪ್ರೀತಿ ಅಲ್ಲಿ ನಿನಗೆ ಆಸರೆ ಇದೆ ಎಂಥ ಕಷ್ಟಗಳಿಗೂ ಹೆದರಬೇಡ ಎನ್ನುವ ಭರವಸೆ ನೀಡುತ್ತದೆ.ಬಾನ ತೋಟಗಳಿಂದ ತರಲಾರೆ ತಾರೆಗಳ..ಸಾಲು ಓದುವಾಗ ಕನ್ನಡದ ಹಿಂದಿನ‌ ಪ್ರಸಿದ್ದ ಭಾವಗೀತೆಯೊಂದು  ಅನಾಯಾಸ ನೆನಪಾಗಿಬಿಡುತ್ತದೆ.

ಇಲ್ಲಿ ಬುದ್ದ ಮತ್ತು ಅಪ್ಪ ಮತ್ತೆ ಮತ್ತೆ ಪ್ರತ್ಯಕ್ಷರಾಗುತ್ತಾರೆ ಎಂದು ಮೊದಲೇ ಹೇಳಿದೆ.ಮೊದಲ ಕವಿತೆಯಲ್ಲಿಯೇ ನಮಗೆ ಬುದ್ದ ಎದುರಾಗುತ್ತಾನೆ.ಕವಿಯ ಸೌಭಾಗ್ಯವೆಂದರೆ‌ ಅವರು ಬುದ್ದನ ಕೌಶಾಂಬಿಯಲ್ಲಿ ತಮ್ಮ‌ ನೌಕರಿಯ ಕಾರಣಕ್ಕೆ  ಬೆಟಿ ಕೊಡುತ್ತಾರೆ ಮಾತ್ರವಲ್ಲ ಕೆಲವು ದಿನ ಅಲ್ಲಿಯೇ ಉಳಿಯುತ್ತಾರೆ.ಹೀಗಾಗಿ ಅವರಿಗೆ ಬುದ್ಧ ಮತ್ತೆ ಮತ್ತೆ‌ಕಾಡುತ್ತಾನೆ.ಮೊದಲ ಕವಿತೆಯಲ್ಲಿಯೇ ಕಾಡುವ ಬುದ್ದ ಪ್ರತ್ಯಕ್ಷವಾಗುತ್ತಾನೆ. ಮತ್ತು ಆ ಕಾಡುವಿಕೆ ಸಂಕಲನದುದ್ದಕ್ಕೂ ಅಲ್ಲಲ್ಲಿ ಸತತವಾಗಿದೆ.ಬುದ್ದನನ್ನು ಆದರ್ಶವಾಗಿ ಕಂಡೂ ಕಂಡೂ ಅವನನ್ನು ಅನುಸರಿಸಲಾಗದ ಒಂದು ಅಸಾಧ್ಯವಾದ ಮಹಾಮಾನವನಾಗಿಸಿದುದರ ಬಗ್ಗೆ ಕವಿಗೆ ವಿರೋಧ ವಿದೆ .ಇದು ಲಂಕೇಶರಂಥವರು ತೋರಿದ  ದಾರಿ.ಅಂತೆಯೆ ಕವಿತೆ ಕೊನೆಯಲ್ಲಿ ಕಾಡುತ್ತಾನೆ… ಪೂಜೆಯೊಲ್ಲದ ,ಪೂಜ್ಯನಾಗದ ಬರೀ ಗೆಳೆಯನಂತೆ ಎನ್ನು ವ ಸಾಲುಗಳು ಕವಿಯ ವಿಶಿಷ್ಟ ಶಕ್ತಿಗೆ ಸಾಕ್ಷಿಯಾಗಿವೆ.ಕಶಾಂಬಿಯಲ್ಲೇ ಬುದ್ದ ಸಿಗದ ವಾಸ್ತವವನ್ನು ” ಕೌಶಾಂಬಿಯ ಕನಸು”  ಕವಿತೆಯು ಬಿಡಿಸಿಟ್ಟಿದೆ. ಕವಿ ಕಂಡ, ಉಂಡ ಬಾಲ್ಯದ ಬಡತನ , ದುಃಖ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕಿ ಅವನೊಳಗಿನ ನೀವು ಇನ್ನೂ ಪೂರ್ತಿ ನಿರ್ಮೂಲನೆಯಾಗದಿರುವ ಸತ್ಯ ” ಬಟ್ಟಲಲ್ಲಿ ಬಣ್ಣವಿಲ್ಲ” ಕವಿತೆಯಲ್ಲಿದೆ .ಒಹ್ ಪೆನ್ನಿಗೆ ಶಾಹಿಯಿಲ್ಕ ಕಣ್ಣೀರ ತುಂಬಿಟ್ಟಿದ್ದೇನೆ ಎಂಬಂತಹ ಹೊಸ ರೂಪಕಗಳು ಕವಿತಾ ಸಂಕಲನದ ತಾಜಾತನಕ್ಕೆ ಸಾಕ್ಷಿಯಾಗಿದೆ. ಹಾಡಾಗುವ ಎಲ್ಲಸಾದ್ಯತೆಗಳನ್ನೂ ಒಳಗೊಂಡ ಪದ್ಯಗಳಲ್ಲಿ ” ಮೌನಿಯಾದವಳಿಗೆ ” ಎನ್ನುವ ಪದ್ಯ. ಪ್ರೀತಿಗೆಸಿಕ್ಕು ಮಾಗಿದ ಮನಸ್ಥತಿಯನ್ನು ಕವಿತೆ ನನ್ನ ಉಕ್ಕಿನ ಮೆರೆವ ಸೊಕ್ಕ‌ ಮುರಿದು ತಿದ್ದಿ ತೀಡಿದ ನೀ ನವೆದು ಹೋದೆ ನಾದವಾದೆ ನಿನ್ನ ತಂಬೂರಿ ನಾದವಾದೆ ಎನ್ನುತ್ತ ನಮ್ಮನ್ಬೂ ತನ್ನ ಗುಂ ಗುಂ ನಾದದಲ್ಲಿ ತೇಲಿಸುತ್ತದೆ. ಕವಿ ಮಾರುತಿಯವರಿಗೆಅವರು  ಹುಟದಟಿದ ಊರು,ಅಪ್ಪನ ಶ್ರಮಜೀವನ ಇವು ಮತ್ತೆ ಜೀವವುಕ್ಕಿಸುವ ಸಂಗತಿಗಳು .ಅವರ ಕಥೆಗಳಲ್ಲಿ ಮೊದಲಿನ‌ಕವಿತೆಗಳಲ್ಕಿ ಅಪ್ಪನ ಹಾಜರಿ ಢಾಳಾಗಿಯೆ ಇದೆ.ಇಲ್ಲಿಯೂ “ಅಪ್ಪನೆಂದರೆ”ಎಂಬ ಕವಿತೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ಇಲ್ಲಿ ಶ್ರಮಜೀವಿಯಾದ ಅಪ್ಪ ಕೊಡುಗೈ ದೊರೆಯಾಗಿದ್ದುದನ್ನು ವಿಶೇಷವಾಗಿ ಕವಿತೆ ಗುರುತಿಸಿದೆ.ಕವಿತೆಯ ಅಪ್ಪ..ಉದಾರಿ ಬಡತನವ ಹಾಸಿ ಹೊದೆದಿದ್ದರೂ ಸದಾ ಹೇಳುತ್ತಿದ್ದ ” ದೇವರು ಕೊಟ್ಟಾಗ ಕೈ ಬಿಚ್ಚಿ ಕೊಡ್ರಿ, ಕೈ ಚಾಚಬ್ಯಾಡ್ರಿ” ಎಂದು ಎನ್ನುವ ಸಾಲುಗಳು  ಕೇವಲ ಅಪ್ಪನ ಸಿರಿವಂತಿಕೆ ಮಾತ್ರವಾಗದೆ ಆ ಊರಿನ ,ಗ್ರಾಮೀಣ ಜಗತ್ತಿನ ಸಿರಿವಂತಿಕೆಯೂ ಆಗಿ ಕಾಣಿಸುತ್ತವೆ.ಹಾಗೆಯೆ ಹೆಬ್ಬಂಡೆಗೆ ಎನ್ನುವ ಇನ್ನೊಂದು ಕವಿತೆ ಸಮಗ್ರ ಗಂಡು ಕುಲದ ಸ್ವಾರ್ಥದ ಕೇತವಾಗಿದೆ ಆ ಸ್ವಾರ್ಥಿಗಳ ಕೈಲಿ ಸಿಕ್ಜು ನಲುಗುವ ಸ್ತ್ರೀ ಕುಲದ ದುಃಖದ ಸಂಕೇತವಾಗಿಯೂ ನಿಂತಿದೆ ಇಲ್ಲಿನ ಎಲ್ಲ ಕವಿತೆಗಳನ್ನೂ ಪ್ರತಿಯೊಂದನ್ನೂ ವಿವರಿಸಿ ಹೇಳುವ ಉದ್ದೇಶ ನನಗಿಲ್ಲ.ಈಗಾಗಲೇ ಮುನ್ನುಡಿಯಲ್ಲಿ ಹಿರಿಯ ಕವಿ ವಾಸುದೇವ್ ನಾಡಿಗ್ ರವರು ,ಬೆಬ್ನುಡಿಯಲ್ಕಿ ಶಾಂತಿ .ಕೆ ಅಪ್ಪಣ್ಣಾವರು ಗುರುತಿಸಿದಂತೆ ಅವರು ಅಬ್ಬರವಿಲ್ಲದ ಕವಿ ಎನ್ನುವದು ಸಾಬೀತಾಗಿದೆ.ಆದರೆ ಅವರ ನದಿಯ ನಿರಂತರ ಹರಿಯುವಿಕೆಯೇನೂ ಭಂಗ ಬಂದಿಲ್ಲ. ಕವಿತೆಯಂದರೆ ಸೇಡಲ್ಲ, ಪ್ರೀತಿ ಜ್ವಾಲೆಯಲ್ಲ ಬೆಳಕು ಬಯಲಲ್ಲ ಆಕಾಶ ಜ್ಞಾನದಹಮಿಕೆಯಲ್ಲ ಅರಿವಿನ ವಿನಯ ಎಂಬುದನ್ನು ಅರಿತ ಕವಿತೆಗಳ ಲ್ಲಿ ದೀಪ ಹಚ್ಚಿಡುವ ಇರಾದೆಯಿದೆ.ಮುನ್ನುಡಿಯಲ್ಲಿ  ನಾಡಿಗರು ಗುರುತಿಸಿದಂತೆ ಇಡೀ ಸಮಗ್ರ ಕನ್ನಡ ಕಾವ್ಯದ ಪರಂಪರೆಯ ಅರಿವಿದೆ.ಅದನ್ನು ಮುಂದುವರಿಸಿದ ಪ್ರೀತಿಯೂ ಇದೆ.ದಾಸಣ್ಣವವರ ಕವಿತೆಗಳ ಯಾಣ ಹೀಗೆ ಕಣ್ಣ‌ಹಿಂದಿನ ಕಡಲಾಗಿ ಬೆಳೆಯಲಿ ಎಂದು ಹಾರೈಸುವ ಆಸೆ ಪ್ರತಿ ಓದುಗನ ಹಾಗೆ ನನ್ನದೂ ಆಗಿದೆ.

ಡಾ.ಯ.ಮಾ.ಯಾಕೊಳ್ಳಿ

ಸವದತ್ತಿ

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.