ಉಸಿರ ಗಂಧ ಸೋಕಿ (ಹಾಯ್ಕು ಸಂಕಲನ)

ಲೇಖಕರು : ಎ ಎಸ್. ಮಕಾನದಾರ

ಉಸಿರ ಗಂಧ ಸೋಕಿ (ಹಾಯ್ಕು ಸಂಕಲನ)

ಉಸಿರ ಗಂಧದಲ್ಲಿ ಹಾಯ್ಕು ಅರಳಿದಾಗ :

ನಾಡಿನಾದ್ಯಂತ ಚಿರಪರಿಚಿತ ಲೇಖಕ, ಕವಿಯಾಗಿರುವ ಎ. ಎಸ್.‌ ಮಕಾನದಾರ ಸಾಹಿತ್ಯದಲ್ಲಿ ತಮ್ಮನ್ನು ನಿಷ್ಠಪೂರ್ವಕವಾಗಿ ತೊಡಗಿಸಿಕೊಳ್ಳುತ್ತಾ , ಸೃಜನಾತ್ಮಕತೆಯಿಂದ ಕೂಡಿದ ಹೊಸ ಬಗೆಯ ಕಾವ್ಯ ಪ್ರಕಾರವನ್ನು ನೀಡುವುದು ಅವರ ಸ್ವಭಾವ. ಈಗಾಗಲೇ ಹಲವಾರು ಸಂಕಲನವನ್ನು ನೀಡಿರುವ ಕವಿ ಮಕಾನದಾರ ಪ್ರಸ್ತುತ ನಮ್ಮ ಬೊಗಸೆಯಲ್ಲಿ ʼಉಸಿರ ಗಂಧ ಸೋಕಿʼ ಎಂಬ ʼಹಾಯ್ಕುʼವಿನ ಹೂಗುಚ್ಛವನ್ನು ನೀಡಿದ್ದಾರೆ.

ಇದು ನೋಡಲು ಸುಂದರ, ಅನುಭಾವಿಕವಾಗಿಯೂ ಮಧುರ. ಇಡೀಯಾಗಿ ನೋಡುವುದಕ್ಕಿಂತ ಬಿಡಿ ಬಿಡಿಯಾಗಿ ಆಸ್ವಾದಿಸಬೆಕು. ಹಾಯ್ಕುಗಳ ಪರಿಚಯ ಮಾಡಿಕೊಂಡು ಈ ಸಂಕಲನ ಕೈಗೆತ್ತಿಕೊಳ್ಳಬೇಕು. ಇಲ್ಲವೆಂದರ ಕೊಂಚ ಅರ್ಥಮಾಡಿಕೊಳ್ಳುವಲ್ಲಿ ಗೊಂದಲವಾಗಬಹುದು. ಉಳಿದ ಕಾವ್ಯ ಪ್ರಕಾರಕ್ಕಿಂತ ವಿಭಿನ್ನ. ಹನಿಗವಿತೆ, ಮಿನಿಗವಿತೆ,ಚುಟುಕು ಇವುಗಳಂತೆ ಕೆಲವೇ ಸಾಲನ್ನು ಹೊಂದಿದ್ದರೂ ತನ್ನದೇ ಆದ ನಿಯಮವನ್ನು ಹೊಂದಿದೆ. ಇದು ಮೂಲತಃ ಜಪಾನಿನದು. ಜಪಾನಿನಲ್ಲಿ ಚಾ ಹಬ್ಬ, ಜಜ್ಜುತ್ಸು , ಮಲ್ಲಯುದ್ಧ ,ಕೃಷಿ ಜೊತೆಗೆ ಸಾಹಿತ್ಯಕ್ಕೂ ಹೆಚ್ಚು ಒತ್ತು ನೀಡುತ್ತಿದ್ದರು. ಅದರಲ್ಲೂ ಚಿತ್ರಕಲೆ, ಹಾಯ್ಕು, ಇಕೆಬಾನ್‌ ಇಂದಿಗೂ ಜಪಾನಿನ ನರನಾಡಿಗಳಲ್ಲಿ ಹರಿಯುತ್ತಿದೆ. ಹಾಯ್ಕುಗಳ ಕನ್ನಡದತ್ತಾ ತನ್ನ ರಂಬೆ ಕೊಂಬೆಗಳನ್ನು ಚಾಚಿಕೊಂಡಿದೆ. ಅಂಕುರ ಬೆಟಗೇರಿ ಅವರು ಜಪಾನಿನ ಹಾಯ್ಕುಗಳನ್ನು ಅನುವಾದಿಸಿ ʼಹಳದಿ ಪುಸ್ತʼಕ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ʼಮೂರು ಸಾಲು ಮರ ಮತ್ತು ಕೊಡೆಯಡಿ ಒಂದು ಚಿತ್ರʼ ಎನ್ನುವ ಹಾಯ್ಕುವಿನ ಸಂಕಲನ ಡಾ.ಸಿ. ರವಿಂದ್ರನಾಥ್‌ ಅವರದಾಗಿದೆ. ಹಾಯ್ಕುವನ್ನು ನಾವು ಚರ್ಚಿಸುವುದಕ್ಕಿಂತ ಧ್ಯಾನಿಸಬೇಕು. ಹಾಯ್ಕು ನೋಡಲು ಚಿಕ್ಕದಾದರೂ ಅದರ ಭಾವ, ಸಂವೇದನೆ, ತತ್ವ, ಯಾತನೆ, ಪ್ರೀತಿ, ರೂಪಕ,ಪ್ರತಿಮೆ ಇವೆಲ್ಲ ಮನದಾಳಕ್ಕೆ ತಟ್ಟುವಂತೆ ಮಾಡುತ್ತದೆ. ಸಂಕಲನದಲ್ಲಿ ಅರಳಿದ ಕೆಲವು ಹಾಯ್ಕುಗಳು…

ಧ್ವಜಾರೋಹಣ
ಅಶೋಕ ಚಕ್ರದಡಿ
ಹೂ ನಲುಗಾಟ
***
ನರಳುತಿವೆ
ಧರ್ಮಗಳು,ಹೆಚ್ಚೆಂಬ
ಅಹಮಿನಲಿ
**
ತೊಯ್ದ ತೋಳಿಗೆ
ಕಣ್ಣೀರ ಶಾಹಿ :ರುಜು
ಒಪ್ಪಂದ ಪತ್ರ
***
ನನ್ನ ಕವಿತೆ
ಒಣಗಿದ ನಾಲಿಗೆ
ಭವದ ನೋವು
-*
ಕಾವ್ಯ ಪರಂಪರೆಯೇ ಹಾಗೆ ತನ್ನದೇ ಆದ ಲಯ,ನಿಯಮ,ಲಕ್ಷಣಗಳನ್ನು ಹೊಂದಿರುತ್ತದೆ. ಕೇವಲ ಹದಿನೇಳು ಅಕ್ಷರದಲ್ಲಿ ಬೃಹತಾದ ಅರ್ಥವನ್ನು ನೀಡುವ ಹಾಯ್ಕು ಓದಿದಾಗ ಕಾವ್ಯ ಪ್ರಿಯರಿಗೆ ಇಷ್ಟವಾಗದೇ ಇರಲಾರದು.

ಕವಿ ತಮ್ಮ ಹಾಯ್ಕುವಿನಲ್ಲಿ ಪ್ರೀತಿ,ಸ್ನೇಹ,ದೇಶ,ಭಾಷೆ,ನೆಲ, ಹಾಗೂ ಒಳದನಿಯನ್ನು ಹೊಸತನದಿಂದ ಬಿಚ್ಚಿಟ್ಟಿದ್ದಾರೆ.

“ಕಾದ ಹಂಚಿಗೆ
ಮಸಿ ಬಟ್ಟೆಯ ಪ್ರೀತಿ
ಸಾಂತ್ವನ ನುಡಿ”.

ಇಂತಹ ಇಲ್ಲಿಯ ಹಾಯ್ಕುಗಳನ್ನು ಒಮ್ಮಲ್ಲೇ ಓದಿ ದಕ್ಕಿಸಿಕೊಳ್ಳುವ ಪ್ರಯತ್ನ ಮಾಡಬೇಡಿ.

ಪ್ರಶಾಂತ ಮನಸ್ಸಿನಿಂದ ಒಂದೊಂದಾಗಿ ಅರ್ಥೈಯಿಸಿಕೊಳ್ಳುತ್ತಾ ಹೋಗಿ. ಆಗ ದಣಿದ ಮನಸ್ಸಿಗೆ ಮಧುರ ಗೀತೆ ಆಲಿಸಿದಷ್ಟೇ ಹಿತ ಎನಿಸುವುದು. ಅಲ್ಲದೆ ಅದರ ಸೂಕ್ಷ್ಮ ಭಾವ, ಸಂವೇದನೆ ಅರ್ಥವಾಗಲು ಸಾಧ್ಯ. ಇಲ್ಲಿ ಕವಿ ಎಲ್ಲಿಯೂ ಬೋರಾಗದಂತೆ ಪ್ರತಿ ಪುಟಗಳಿಗೆ ಕಲಾವಿದ ಜಬಿ ವುಲ್ಲಾ ಎಂ ಅಸದ್ ಅವರ ರೇಖಾ ಚಿತ್ರಗಳನ್ನು ಪೋಣಿಸಿರೋದು ಇನ್ನು ವಿಶೇಷವಾಗಿದೆ.

ʼಹಾಯ್ಕುʼವಿನ ಸಂಪೂರ್ಣ ಅಧ್ಯಯನ ಹಾಗೂ ಕವಿಯ ಬರವಣಿಗೆಯ ಪ್ರಬುದ್ಧತೆ ಇಲ್ಲಿನ ಸಾಕಷ್ಟು ಹಾಯ್ಕುಗಳಲ್ಲಿ ನೋಡಬಹುದು.

ಶತಮಾನದ
ನಂಜು ಯಾವ ನದಿಲಿ
ತೊಳೆಯಬೇಕು.
**
ಮೂರು ಸಾಲಿನ ಹದಿನೇಳು ಅಕ್ಷರಗಳ ಚಮತ್ಕಾರ ನಿಜಕ್ಕೂ ಇತಂಹ ಹಾಯ್ಕುನಲ್ಲಿ ನಡೆದಿದೆ. ಇನ್ನಷ್ಟು ಹಾಯ್ಕುವಿನ ಗಂಧ ಓದುಗ ಅನುಭವಿಸಬೇಕೆಂದರೆ ಈ ಸಂಕಲನ ನಿಮ್ಮ ಬೊಗಸೆ ಸೇರಲೇಬೇಕು ಎಂದು ಆಶಿಸುತ್ತಾ ಕವಿ ಎ.ಎಸ್‌.ಮಕಾನದಾರ ಅವರಿಗೆ ಶುಭಕೋರುತ್ತೇನೆ.

ಎಂ.ಜಿ.ತಿಲೋತ್ತಮೆ
ಭಟ್ಕಳ

ನಿರಂತರ ಪ್ರಕಾಶನ
ಎಂ ಆರ್ ಅತ್ತಾರ ಬಿಲ್ಡಿಂಗ್ ಅಮರೇಶ್ವರ್ ನಗರ 5ನೇ ಕ್ರಾಸ್ ರಿಂಗ್ ರೋಡ್ ಹತ್ತಿರ ಗದಗ 582103

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.