“ಇರುವುದೊಂದೇ ರೊಟ್ಟಿ”

ಲೇಖಕರು : ಡಾ. ಸಂಗಮೇಶ ಎಸ್. ಗಣಿ

ಹೊಟ್ಟೆ ಮತ್ತು ಬೌದ್ಧಿಕ ಹಸಿವು ನೀಗಿಸುವ ದೊಡಮನಿಯವರ ‘ಇರುವುದೊಂದೇ ರೊಟ್ಟಿ

‘ಅಕ್ಷರಕ್ಕಿಂತ ಅನ್ನ ಅಗತ್ಯ’ ಎಂಬುದು ಈ ಬದುಕು ಉದ್ದಕ್ಕೂ ಅರುಹುತ್ತ ಬಂದ ಕಠೋರ ಸತ್ಯ. ಮನುಷ್ಯ ಈ ಸತ್ಯವನ್ನು ಕಂಡುಕೊಳ್ಳಲು ಆತುಕೊಂಡ ಆಯಾಮಗಳು ವಿಭಿನ್ನವಾಗಿವೆ. ಯಾವುದೇ ಜೀವಿಯ ಮೊದಲ ಆದ್ಯತೆ ಅನ್ನ, ಅನಂತರದ್ದು ಅಕ್ಷರ. ಹೊಟ್ಟೆಯ ಹಸಿವು ನೀಗಿಸಿಕೊಳ್ಳಲು ಅನ್ನ ಅವಶ್ಯಕವಾದರೆ, ಬೌದ್ಧಿಕ ಹಸಿವಿಗೆ ಅರಿವು ಅಗತ್ಯ. ಹೊಟ್ಟೆ ಹೊರೆದುಕೊಳ್ಳವವನು ಮಾತ್ರ ಮನುಷ್ಯ ಆಗಲಾರ. ಅಂತಿಮವಾಗಿ ಮನುಷ್ಯನನ್ನಾಗಿಸುವುದು ಅಕ್ಷರ.

ಕೊನೆಗೆ ಅಕ್ಷರಗಳ ಅನುಸಂಧಾನವೂ ಅನ್ನದ ಮಾರ್ಗ ಕಂಡುಕೊಳ್ಳಲು ಇರುವ ಆತ್ಯಂತಿಕ ದಾರಿ ಎಂಬುದೂ ನಿಜ. ಈ ಹಿನ್ನೆಲೆಯಲ್ಲಿ ಡಾ. ಸದಾಶಿವ ದೊಡಮನಿ ಅವರ ಕವನ ಸಂಕಲನ ‘ಇರುವುದೊಂದೇ ರೊಟ್ಟಿ’ ಅನ್ನ-ಅಕ್ಷರಗಳ ತಾತ್ವಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತದೆ ಎಂಬುದು ವಿಶೇಷ.

ಬೇಯುವಿಕೆ ಬದುಕನ್ನು ಹದಗೊಳಿಸುತ್ತದೆ, ಅದರ ಸ್ವಾದವನ್ನೂ ಹೆಚ್ಚಿಸುತ್ತದೆ. ವ್ಯಕ್ತಿಗತ ಬದುಕು ಕಷ್ಟದ ಕುಲುಮೆಯಲ್ಲಿ ಕುದ್ದಷ್ಟೂ ಸಮಷ್ಟಿ ಬದುಕಿನ ರುಚಿ ಹೆಚ್ಚಿಸಲು ಕವಿಗೆ ತನ್ನದೇ ಅನುಭವದವ್ಯಂಜನಗಳನ್ನು ಜೋಡಿಸಲು ಸಾಧ್ಯವಾಗುತ್ತದೆ.

ನೆನಪುಗಳ ಗೋನಿಗೆ ಯಾತನೆಯ ನೊಗ ಹೊತ್ತುಕೊಂಡಿರುವ ಕವಿ ತನ್ನ ಅಪ್ಪ, ಅವ್ವ ಪಟ್ಟ  ಪಾಡಪರಂಪರೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಇಡೀ ಸಮುದಾಯವೇ ಅನುಭವಿಸಿದ ತನ್ನೊಡಲ ನೋವಕಡಲಿಗೆ ಈಜುಬೀಳುತ್ತಾರೆ. ಬಿದ್ದರೂ ಜಯಿಸುವ ಅದಮ್ಯ ಹಂಬಲ ಇದ್ದೂ ತಣ್ಣನೆಯ ವಿಷಾದವುಕ್ಕಿಸುತ್ತಾರೆ;

‘….ಅಪ್ಪ ಕಟ್ಟಿದ ಮನೆ- ಮಹಲು, ಗುಡಿ- ಗುಂಡಾರ

ಅಪ್ಪನ ಬೆವರ ಹನಿಯ ಫಲ

………..

‘ಸೂರ್ಯ, ಚಂದ್ರರ ಜೊತೆಯಲ್ಲಿ ಹೈರಾಣದ ಕತೆ ಹೇಳುತ್ತಲೇ ಇದ್ದಾನೆ

ತೊಡೆಯ ಮೇಲೆ ಮೊಮ್ಮಗಳು ಹೂಂಗುಟ್ಟುತ್ತಲೇ

ಇದ್ದಾಳೆ’ (ಅಪ್ಪ)

‘ನೋವಿರಲಿ ನಲಿವಿರಲಿ

ಅವ್ವನದು ಬೆಳದಿಂಗಳ ಹಾಡು

…..

ಇದ್ದಾಳೆ ; ನಮ್ಮೊಂದಿಗೆ

ಮುಂದೆಯೂ ಇರುತ್ತಾಳೆ

ಕಣ್ಣ ಮುಂದಿನ ಬೆಳಕಾಗಿ

ನೆತ್ತಿಯ ಮೇಲಿನ ನೆರಳಾಗಿ’ (ಅವ್ವ)

ಈವರೆಗೂ ಕ್ರಮಿಸಿದ ಹಾದಿ ಕಾಡು- ಮೇಡುಗಳಿಂದ ಕೂಡಿದ್ದರೂ ಅಪ್ಪ ಅವ್ವ ಆಸರೆಗೋಲಾಗುವ ಭರವಸೆ ಕಳೆದಕೊಳ್ಳದ ಕವಿ ‘ಮುಂದೊಂದು ದಿನ ಇವರು’ ಎಂಬ ಕವಿತೆಯಲ್ಲಿ ;

‘…ಏಕೆಂದು ಕಾರಣ ಕೇಳಬೇಡಿ

ನಾವು ಹೆಬ್ಬೆರಳನ್ನೇ ಕಳೆದುಕೊಂಡು

ಏಕಲವ್ಯ ಆಗಿರುತ್ತೇವೆ

ಎಡಗೈಲಿ ಸಾಧಿಸಲು

ಶತಮಾನಗಳನ್ನೇ ಕಾಯುತ್ತೇವೆ’ ಶೋಷಣೆಯನ್ನು ಸಹಿಸಿಕೊಂಡು ಬಂದಿರುವ ತನ್ನ ಸಮುದಾಯದ ಮೇಲೆ ಸಾಧಿಸಿದ ಪ್ರಭುತ್ವದ ವಿರುದ್ಧ ಪ್ರತಿರೋಧ ಒಡ್ಡುವಲ್ಲೂ ಸಂಯಮ ಕಾಪಿಟ್ಟುಕೊಳ್ಳುತ್ತಾರೆ ಕವಿ ದೊಡಮನಿಯವರು.

ಮಾತೂ ಮಲಿನಗೊಂಡ ಹೊತ್ತಿದು. ಆಡುವ ನುಡಿ ಕೇಡಿನ ಕಿಡಿ ಹೊತ್ತಿಸುವ ವಿಷಮ ಘಳಿಗೆಯಲ್ಲಿ ಮನಸ್ಸಿನ ಶುಚಿತ್ವಕ್ಕೆ ಪುಣ್ಯಜಲ ಹುಡುಕವ ಕವಿಗೆ, ವಿವೇಚನೆ ಕಳೆದುಕೊಂಡಿರುವ ಸಮಾಜದ ಚಲನೆಯ ಕಡೆಗೆ ಲಕ್ಷ್ಯವಿದೆ. ವೈಚಾರಿಕ ಮೊಂಡುತನಕ್ಕೆ ವಿವೇಕದ ಸಾಣೆ ಹಿಡಿಯ ಬಯಸುವ ಇವರು, ‘…ನೆಲದವ್ವನ ಉಡಿಯೊಳಗಣ ಬೆಂಕಿ‌ ಕಿಡಿಗಳು ಕಲಿಗಾಲದ ಕುಡಿಗಳ’ ಬಗೆಗಿನ ಎಚ್ಚರಿಕೆ ಪ್ರಕಟಿಸುತ್ತಾರೆ. ಅಲ್ಲದೇ,

‘…ಈ ಒಡಲ ಗಾಯ, ನೋವಿಗೆ ಮದ್ದು ಯಾವುದು ? ಎಲ್ಲಿ ಹುಡುಕುವುದು? ಹೇಳು’ ಎಂದೂ ಪ್ರಶ್ನಿಸುತ್ತಾರೆ.

ಜಾತಿ, ಮತ, ವರ್ಗ, ವರ್ಣ, ಕೋಮು ಸಂಘರ್ಷಗಳು ಸದ್ಯದ ಸಮಾಜದ ಶಾಂತಿಯನ್ನು ಕದಡುತ್ತಿವೆ. ಪ್ರೀತಿ ಇಲ್ಲದೇ ಇರುವುದರಿಂದಲೇ ದ್ವೇಷಾಸೂಯೆಗಳು ಹೆಚ್ಚುತ್ತಿವೆ. ಮನುಷ್ಯತ್ವ ಮಾಯವಾಗುತ್ತಿದೆ. ಪರಿಶುದ್ಧ ಪ್ರೀತಿಯ ಹುಡುಕಾಟದಲ್ಲಿ ಇರುವ ಕವಿಗೆ ಬುದ್ಧನ ಕಾರುಣ್ಯದ ಕಿರಣಗಳು ಈ ಬದುಕನ್ನು, ಸಮಾಜವನ್ನು ಸೋಂಕಬೇಕಿದೆ ಎಂಬ ಆಶಯ ಕವಿಯದು.

‘ಹೌದು ಬುದ್ಧ

ನಾವು ನಿನ್ನನ್ನು ಅಕ್ಷರಶಃ ಮರೆತಿದ್ದೇವೆ

ಬುದ್ಧಿಯನ್ನು ಕಳೆದುಕೊಂಡಿದ್ದೇವೆ

ದುರ್ಬುದ್ಧಿಯನ್ನು ಕಲಿತುಕೊಂಡಿದ್ದೇವೆ

ದೀಪ ಹಚ್ಚುವ ಸಮಯದಲ್ಲಿ

ಬೆಂಕಿ ಹಚ್ಚುತ್ತಿದ್ದೇವೆ

ಪ್ರೀತಿಯನ್ನು ಹಂಚಿ, ಪ್ರೀತಿಯನ್ನು ಬೇಡುವ ಕೈಯಲ್ಲಿ

ಮದ್ದು ಗುಂಡುಗಳ ಹಂಚುತ್ತಿದ್ದೇವೆ

ಮನುಷ್ಯತ್ವವನ್ನು ಕೊಲ್ಲುತ್ತಿದ್ದೇವೆ’ ಎಂದು ಹೇಳುವ ಮೂಲಕ ಮನುಷ್ಯನ ಕೊಳಕುಗಳನ್ನು ಕಾಣಿಸುತ್ತ, ಕಲ್ಮಶಗಳನ್ನು ತೊಳೆಯುವ ಅಗತ್ಯವನ್ನೂ ಪ್ರತಿಪಾದಿಸುವ ಕವಿ ದೊಡಮನಿಯವರು,

‘ದೀಪವೇ

ಹೃದಯ ಜೋಳಿಗೆಯೊಡ್ಡಿ ಬೇಡುತ್ತಿದ್ದೇನೆ

ಶಾಂತಿ- ಸೌಹಾರ್ದತೆಯ ಬೆಳಕ ನೀಡು

ನಾನುಂಡು, ಮಕ್ಕಳಿಗೆ ಹಾಲುಣಿಸಿ ಕಕ್ಕುತ್ತೇನೆ ನಂಜು'(ಬುದ್ಧನಗು) ಎಂದು ಬುದ್ಧನನ್ನು ಪ್ರಾರ್ಥಿಸುತ್ತಾರೆ.

ವ್ಯಕ್ತಿಯ ಜಡತ್ವ ನಿವಾರಣೆಗೆ, ಸಮಾಜದ ಸ್ವಾಸ್ಥ್ಯಕ್ಕೆ ಬುದ್ಧಾನುಸಂಧಾನವೇ ಮದ್ದು ಎಂಬ ನಂಬಿಕೆ ಯಾವ ಕಾಲದ ಕವಿಗೂ ಇರಬೇಕಾದುದೇ. ಸದಾಶಿವರಿಗೂ ಈ ಸತ್ಯ ಮನವರಿಕೆಯಾಗಿದೆ. ಅಂತಲೇ ಅವರು ಶಾಂತಿ, ಸೌಹಾರ್ದ ಬಾಳಿನ ಕನಸಿನ ಸಾಕಾರಕ್ಕೆ ತುಡಿಯುತ್ತ

‘ಮಂದಿರ-ಮಸೀದಿ

ಗುಡಿ- ಚರ್ಚುಗಳ

ಕಟ್ಟುವ ಮುನ್ನ

ಕಟ್ಟಿಕೊಳ್ಳಿರೋ…

ನಿಮ್ಮ ಮನವ

ನಿಮ್ಮ ಗುಣವ’ ಎಂದು ‘ಕಟ್ಟುವ ಮುನ್ನ’ ಕವಿತೆಯಲ್ಲಿ ಕರೆಕೊಡುತ್ತಾ, ಕಟ್ಟುವ ಕ್ರಿಯೆ ಕುರಿತು ಎಚ್ಚರವನ್ನು ಅರಹುತ್ತಾರೆ.

ಮನುಷ್ಯ ಸಂಬಂಧಗಳು ಸಡಿಲಗೊಂಡಿರುವ ಇಂದಿನ ದಿನಗಳಲ್ಲಿ

‘…ಕಸಿದು ಕದ್ದು ತಿನ್ನುವ ಈ ಕಾಲದಲ್ಲಿ

ಇದ್ದುದರಲ್ಲಿಯೇ ಹಂಚಿ ತಿನ್ನುವ

ನಿನ್ನಿಂದ ಕಲಿಯುವುದು

ಬಹಳ, ಬಹಳ ಇದೆ ಮಗಳೇ! ….'(ಸಂಸ್ಕೃತಿ) ಎನ್ನುವ  ಕವಿಯು, ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದ್ದಾರೆ. ಹೀಗಾಗಿ ರೈತನ ದಾರುಣತೆ ಸೇರಿದಂತೆ ಸಮಾಜದ ನಿಶ್ಚಲತೆ, ದುಡಿಯುವ ವರ್ಗ, ಶ್ರಮಿಕ ಸಮುದಾಯಗಳ ಬಗೆಗಿನ ಅಸಮಾಧಾನ, ಅನುಕಂಪ, ಅಸಹಾಯಕತೆ, ಸಂಕಟಗಳನ್ನು ಮಾನವೀಯ ನೆಲೆಯಲ್ಲಿ ಕಂಡರಿಸಿದ್ದಾರೆ.

ಪ್ರೀತಿ, ಪ್ರೇಮ, ವಿರಹ, ಸ್ನೇಹ -ಸಂಬಂಧಗಳು, ಗಾಂಧಿ, ಬುದ್ಧ, ಬಸವ ಇವರನ್ನೂ ಇವರ ಕಾವ್ಯ ಕಾಣಿಸಿದೆ.

ಅಪ್ಪ, ಅವ್ವ, ತಮ್ಮ, ಮಕ್ಕಳು ಇವರ ಕಾವ್ಯಕ್ಕೆ ವಸ್ತುವಾಗಿ ಒದಗಿದ್ದರೂ, ಸಮಾಜದ ಸುತ್ತಣ ಸಂಗತಿಗಳೂ ಇವರನ್ನು ಬಹುವಾಗಿ ಕಾಡಿವೆ. ವಿಷಾದ, ತಣ್ಣನೆಯ ಪ್ರತಿರೋಧ ಇವರ ಕಾವ್ಯದ ಸ್ಥಾಯಿಭಾವ.

ಜೀವನದಲ್ಲಿ ಹಸಿವು ಹಣ್ಣು ಮಾಡಿದಷ್ಟು ಇನ್ನಾವುದೂ ಮಾಡಲಾರದು. ಕವಿಗೆ ಬಡತನದ ದಾರುಣತೆ, ಹಸಿವಿನ ಕ್ರೂರತೆ ತೀವ್ರವಾಗಿ ಬಾಧಿಸಿದೆ. ಹೊಟ್ಟೆಯ ಹಸಿವಿಗೆ ಅನ್ನ, ಬೌದ್ಧಿಕ ಹಸಿವೆಗೆ ಅಕ್ಷರ ಎರಡನ್ನೂ ಆತ್ಯಂತಿಕವಾಗಿ ಆಶಿಸಿದ ಕವಿ ತಮ್ಮ  ಸಂಕಲನದ ಶಿರೋನಾಮೆ ಹೊಂದಿರುವ ‘ಇರುವುದೊಂದೇ ರೊಟ್ಟಿ’ ಕವಿತೆಯಲ್ಲಿ

‘…ಉರಿವ ಎದೆಯ ಒಲೆಯ ಮೇಲೆ

ಕನಸುಗಳ ರೊಟ್ಟಿ ಸುಟ್ಟು

ಕರುಳ ಕುಡಿಗಳನು ಸಲಹುತ್ತ

ನಗುನಗುತ್ತಲೇ ಬಾಳುವ ಅವ್ವ

ಯಾವ ದೇವರುಗಳಿಗೂ ಕಮ್ಮಿಯಲ್ಲ

ಅಪ್ಪ ಅವ್ವನ ಹೊರತು ಅನ್ಯ ದೇವರುಗಳು

ನನಗೆ ಕಾಣುವುದಿಲ್ಲ’ ಎಂದು ಹೇಳುವುದು ಮುಖ್ಯವೆನಿಸುತ್ತದೆ. ತಾಯಿ ಜೀವದಾಯಿ.

ಜಗದ ಸಕಲ ಜೀವಾತ್ಮರನ್ನು ಹೆತ್ತು ಪೋಷಿಸುವ ಶಕ್ತಿದಾತೆ ಆ ಜೀವದಾತೆ. ಹುಟ್ಟಿಗಂಟಿಕೊಂಡು ಬಂದ ಹಸಿವನ್ನು ನೀಗಿಸಿಕೊಳ್ಳಲು ತಾಯಿಯ ಮೊರೆಹೋಗುವ ಅನಿವಾರ್ಯತೆಯು ಇಲ್ಲಿ ಅರಿವು, ಅನುಭವ, ಅನುಭಾವವೂ ಆಗಿ ಅಕ್ಷರರೂಪು ತಾಳಿದೆ.

‘…ಅವಳು ಹರಿದ ಬದುಕನ್ನೇ

ಹೊಲಿಯುತ್ತಿದ್ದಾಳೆ

ಹಸಿದ ಒಡಲಿಗೆ ಅನ್ನವೀಯುತ್ತಿದ್ದಾಳೆ’ ಎಂಬ ಸಾಲುಗಳು ಅವ್ವನ ಅಸ್ತಿತ್ವ ಹಾಗೂ ಒಟ್ಟು ಜೀವಜಗತ್ತನ್ನು ಪೊರೆಯವ ತಾಯ್ತನದ ಮಹತ್ವವನ್ನು ತಿಳಿಸುತ್ತವೆ.‌

ಅಪ್ಪ ಅವ್ವ ಸಾಕ್ಷಾತ್ ದೇವರು ಎಂದು ಪರಿಭಾವಿಸಿದ ದೊಡಮನಿಯವರಿಗೆ ಬದುಕು ಹಲವು ಕ್ರೂರ ಮುಖಗಳನ್ನು ಪರಿಚಯಿಸಿದೆ.

‘ಓದಿ ಓದಿ ಬರೆದರೂ

ಬದುಕಿಗೆ ಭಾಷ್ಯ ಬರೆಯಲಿಲ್ಲ

ಓದದೇ ಬರೆದೆ

ಬದುಕಿನ ಭಾಷ್ಯವೇ ತಾನಾಯಿತು!’ ಎಂದು ಹೇಳುವಲ್ಲಿ ಬದುಕಿನ ವ್ಯಾಖ್ಯಾನವನ್ನು ಭಿನ್ನವಾಗಿ ಕಟ್ಟಿಕೊಡುವ ಪ್ರಯತ್ನ ಕಾಣುತ್ತದೆ.

ಬಡತನ, ಹಸಿವು, ಹತಾಶೆ, ಸಾವು ನೋವು ಮುಂತಾದ ಅಂಶಗಳನ್ನು ಕೇಂದ್ರಕಾಳಜಿಯಾಗಿಸಿಕೊಂಡ ದೊಡಮನಿಯವರ ಕಾವ್ಯ ಕುರಿತು ಕವಿ ಸುಬ್ಬು ಹೊಲೆಯಾರ್ ‘ದುಃಖದ ಮುಗುಳ್ನಗೆ’ ಎಂದು ಮುನ್ನುಡಿದಿರುವುದು ಔಚಿತ್ಯಪೂರ್ಣವಾಗಿದೆ. ಅರವಿಂದ ಮಾಲಗತ್ತಿ ಅವರು ಬೆನ್ನುಡಿಯಲ್ಲಿ ‘ವಾಚ್ಯ ಸೂಚ್ಯಗಳ ನಡುವೆ ಸಮ್ಮಿಳಿತವಾಗಿ ಇವರ ಕವಿತೆಗಳು ಎದ್ದು ನಿಂತಿವೆ” ಎಂದಿದ್ದಾರೆ.

ದಲಿತ ಬಂಡಾಯ ಎನ್ನುವ ಲೇಬಲ್ ಕಳಚಿಕೊಂಡಿರುವ ಇಂದಿನ ಕಾವ್ಯ ಸಮಾಜದಲ್ಲಿನ ಅಪಸವ್ಯಗಳಿಗೆ ಧ್ವನಿಯಾಗುವ ಪ್ರಯತ್ನಗಳನ್ನು ಜಾರಿಯಲ್ಲಿಟ್ಟಿದೆ. ಕವಿಗಳೂ ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಕವಿತೆ ಕಟ್ಟುತ್ತಿದ್ದಾರೆ.‌

ಕವಿ ದೊಡಮನಿಯವರೇ ‘ಅತಿಯಾದ ಉಪಮೆ, ರೂಪಕ, ಸಂಕೇತ, ಪ್ರತಿಮೆಗಳ ಸೋಗಿನಿಂದಾಗಲಿ, ಸಂಕೀರ್ಣತೆಯ ಭಾರದಿಂದಾಗಲಿ ಬಾಗದೇ ನಿರಾಭರಣ ಸುಂದರಿಯಾಗಿ, ಸಹಜತೆಯ ಬಂಧವೇ ಕಾವ್ಯದ ಶಕ್ತಿಯಾಗಿ ಮೈದಾಳಿದೆ’ ಎಂದು ತಮ್ಮ ಕಾವ್ಯ ಕುರಿತು ಷರಾ ಬರೆದುಕೊಳ್ಳುತ್ತಾರೆ.

ಒಟ್ಟಾರೆ ‘ಹಸಿವು ಯಾರನ್ನೂ ಕಾಡದಿರಲಿ’ ಎಂಬ ಸದಾಶಯದೊಂದಿಗೆ ಕವಿತೆ ಕಟ್ಟುವ ಸದಾಶಿವ ಅವರ ಕಾವ್ಯ ಭಾಷೆಯ ಸರಾಗ ಬಳಕೆಯಿಂದ ಆಶಯಗಳನ್ನು ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದ್ದರೂ, ತೀವ್ರ ವಾಚ್ಯದಲ್ಲಿ ವಿರಮಿಸುವ ಮಿತಿಯನ್ನು ದಾಟಿಕೊಂಡರೆ ಹೆಚ್ಚು ಧ್ವನಿಪೂರ್ಣವಾಗಿ ಹೊಮ್ಮುವುದರಲ್ಲಿ ಸಂದೇಹವಿಲ್ಲ. ಈ ಮಿತಿಗಳಾಚೆಗೂ ಸದಾಶಿವ ದೊಡಮನಿಯವರ ಕಾವ್ಯ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಹೆಚ್ಚು ಕಾಲ ಜೀವಿಸಬಲ್ಲುದೆಂಬುದು ನಿಸ್ಸಂಶಯ.

ಡಾ. ಸಂಗಮೇಶ ಎಸ್. ಗಣಿ

ಮುಖ್ಯಸ್ಥರು, ಕನ್ನಡ ವಿಭಾಗ

ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜು, ಹೊಸಪೇಟೆ

9743171324

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.