You are currently viewing ಅಕ್ಕ ಕೊಟ್ಟ ಐದು ರೂಪಾಯಿಗಳು

ಅಕ್ಕ ಕೊಟ್ಟ ಐದು ರೂಪಾಯಿಗಳು

ಗೌಡ್ರಹಳ್ಳಿಯಲ್ಲಿ ಅವತ್ತು ಹಬ್ಬದ ಸಂಭ್ರಮ ಮನೆಮಾಡಿತ್ತು.ಬೀದಿಗಳನ್ನು ಸ್ವಚ್ಚಗೋಳಿಸಿ,ಬೀದಿಯ ತುಂಬಾ ನೀರು ಸಿಂಪಡಿಸಿ,ಊರತುಂಬಾ ತಳಿರು ತೋರಣ ಕಟ್ಟಿ ಅಲಂಕಾರಗೊಳಿಸಲಾಗಿತ್ತು. ವಿವಿಧ ವಾದ್ಯ ಮೇಳಗಳು ಮೆಳೈಹಿಸಿದ್ದವು. ತಮ್ಮೂರಿನ ಬಡಹುಡುಗನೊಬ್ಬ ಜಿಲ್ಲಾಧಿಕಾರಿಯಾಗಿ ಪ್ರಥಮ ಭಾರಿಗೆ ತಮ್ಮ ಗ್ರಾಮಕ್ಕೆ ಬರುವುದನ್ನು ಊರಿನ ಜನರು ಹರ್ಷದಿಂದ ಸ್ವಾಗತಿಸಲು ತಯಾರಾಗಿತ್ತು.ಊರಲ್ಲಿರುವ ಗ್ರಾಮ ದೇತೆಯ ಗುಡಿಯ ಮುಂದೆ ಭವ್ಯವಾದ ವೇದಿಕೆ ಹಾಕಲಾಗಿತ್ತು. ಅಲ್ಲಿ ಬಡವ, ಬಲ್ಲಿದ ಎಂಬ ಭೇದ ಭಾವ ವಿರಲಿಲ್ಲ. ಜಾತಿ,ಮತ,ಧರ್ಮ,ಪಂಥ, ಪಂಗಡಗಳ ಆಟ-ಮೇಲಾಟಗಳು ಇರಲಿಲ್ಲ. ತಮ್ಮ ಊರಿನ ಹುಡುಗನೊಬ್ಬ ಜಿಲ್ಲಾಧಿಕಾರಿಯಾಗಿ ವೇದಿಕೆಗೆ ಆಗಮಿಸಿದ ಬಳಿಕ ಕೂಡಿದ ಊರಿನ ಜನರಲ್ಲಿ ಹರ್ಷೋಧ್ಘಾರ ಮುಗಿಲು ಮುಟ್ಟಿತ್ತು.
ಊರಿನ ಹಿರಿಯರು ಗ್ರಾಮದ ಪರವಾಗಿ ಸನ್ಮಾನಿಸಿದರು. ವೇದಿಕೆ ಮೇಲಿದ್ದ ಗಣ್ಯರು ತಮಗೆ ತೋಚಿದಂತೆ ಮಾತನಾಡಿದರು. ಬಳಿಕ ಜಿಲ್ಲಾಧಿಕಾರಿಗಳು ಮಾತನಾಡಲು ಶುರು ಮಾಡಿದರು. ಪ್ರತಿಯೊಬ್ಬರು ಅದೃಷ್ಠವನ್ನು ಬೆನ್ನಹತ್ತ ಬಾರದು. ಶ್ರಮವನ್ನು ಕೈವಶಮಾಡಿಕೊಳ್ಳಬೇಕು ನಮ್ಮ ಜೀವನ ವಿಧಿಯ ಆಟದಂತೆ ನಡೆಯುತ್ತದೆ ಎಂಬುದು ಸತ್ಯವೇನಿಸಿರೂ,ಅದಕ್ಕೆ ಮನಸ್ಸಿನ ದಾರಿದ್ರ್ಯವೇ ಕಾರಣ. ನಾನು ಇಂದು ನಿಮ್ಮ ಮುಂದೆ ಉನ್ನತ ಅಧಿಕಾರಿಯಾಗಿ ನಿಂತಿರುವುದರ ಹಿಂದೆ ಅಕ್ಕನ ಋಣವಿದೆ. ಅವಳ ತ್ಯಾಗವಿದೆ. ಅಪ್ಪನ ಶ್ರಮವಿದೆ. ಉಳ್ಳವರ ಉದಾಸೀನತೆಯಿದೆ ಎಂದು ಗತಕಾಲದ ನೆನೆಪಿನ ಅಂಗಳಕ್ಕೆ ಜಾರಿ ಹೋದೆ.



ಅಂದು ಅಪ್ಪ ಕಂಠಪೂರ್ತಿ ಕುಡಿದು ಬಂದು ರಾತ್ರಿ ಗೌಡರ ಮನೆಯಲ್ಲಿ ಜಗಳವಾಡಿ ಸಂಬಂಧವನ್ನೇ ಕಡಿದುಕೊಂಡು ಮನೆಯಿಂದ ತೂರಾಡುತ್ತಾ ಹೊರಟು ಹೋದ. ನಂತರ ನಮಗೇಲ್ಲಾ ತಲೆಯ ಮೇಲೆ ಮರವೇ ಕಳಚಿ ಬಿದ್ದಾಂತಾಯಿತು. ರಾತ್ರಿಯಲ್ಲಾ ಒದ್ದೆಯಾದ ಕಣ್ಣಿನಲ್ಲಿ ನಿದ್ದೆ ಬಾರದೆ ಆಕಾಶದಲ್ಲಿ ಹೆಪ್ಪುಗಟ್ಟಿದ ಕಪ್ಪು ಮೊಡಗಳ ನಡುವೆ ನಕ್ಷತ್ರಗಳು ಕಳೆದು ಹೋಗಿದ್ದವು. ಮಗ್ಗಲು ಹೊರಳಿಸಿದರೂ ಅಪ್ಪ ಏಲ್ಲಿ ಹೋದ ಇಷ್ಟೋತ್ತಿನಲ್ಲಿ ? ಯಾರ ಮನೆಗೆ ಹೋದ ? ಹೀಗೇಕೆ ಮಾಡಿದ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ಒದ್ದಾಡಿಬಿಟ್ಟೆ ಬೀರುಗಾಳಿಗೆ ಸಿಕ್ಕಿಸಿಕೊಂಡ ತರಗೆಲೆಯಂತೆ. ಮುಂದೆ ದಾರಿಯಾವುದಯ್ಯಾ ವೈಕುಂಟಕ್ಕೆ ಎಂಬ ದಾಸವಾಣಿಯನ್ನು ನೆನೆಯುತ್ತಾ ನೆನೆಯುತ್ತಾ ಮಲಗಿದೆ. ಕಣ್ಣು ಬಿಟ್ಟಾಗ ಮೂಡಣದಲ್ಲಿ ಭೂಮಂಡಲವೆಲ್ಲಾ ಸೂರ್ಯನ ಕೋಪಕ್ಕೆ ಸಿಕ್ಕು ಧಗಧಗಿಸುವಂತೆ ಊರಿಯತೋಡಗಿತ್ತು.

ಕುಂಬಿಯ ಮೇಲೆ ಹಾಸಿಗೆಯನ್ನು ಬೀಸಾಕಿದೆ. ಇಂದು ಶೆಗಣಿ ಬಳಿದುಕೊಡುವ ಅಪ್ಪನಿರಲಿಲ್ಲ. ರಾತ್ರಿಯೇ ಮನೆ ಬಿಟ್ಟು ಹೋಗಿರುವುದರಿಂದ ಲಗುಬಗೆಯಿಂದ ಎದ್ದುಬಂದು ಎತ್ತು,ಎಮ್ಮಿಯ ಶೆಗಣಿಯನ್ನು ಬುಟ್ಟಿಯಲ್ಲಿ ತುಂಬಿಕೊಂಡು ತಿಪ್ಪೆಯಲ್ಲಿ ಹಾಕಿ ಬಂದೆ ಅಪ್ಪ ಇರದಿದ್ದರೂ ಹೆಂಡಿಕಸ ಬಳಿಯುವ ಕೆಲಸ ಮುಗಿಸಿದೆ. ಅಪ್ಪನ ಕೆಲಸ ಮಾಡಿರುವುದರಿಂದ ಗೌಡರ ಮನೆಯವರು ನನ್ನ ಮೇಲೆ ಕೋಪ ಮಾಡಿಕೊಂಡಿರಲಿಕ್ಕಿಲ್ಲ ಎಂದು ಮನಸಿನಲ್ಲಿಯೆ ಅಂದುಕೊಂಡೆ. ಹಾಗೆಯೇ ಊರ ಮುಂದೆ ಮೂರು ಕಾಲದಲ್ಲಿಯೂ ಮಲಪ್ರಭೆಯಂತೆ ಹರಿಯುತ್ತೀರುವ ಹಳ್ಳಕ್ಕೆ ಹೋಗಿ ಕೈ ತೊಳೆದುಕೊಂಡು ಜಳಕಾ ಮಾಡಿ ಗೌಡ್ರ ಮನೆಯ ಕಡಗೆ ಹೋಗಬೇಕು ನಿಜ. ಆದರೆ ಹೆಜ್ಜೆಗಳು ಭಾರವಾದವು. ಮಸ್ಸಿನಲ್ಲಿ ಆತಂಕ ಭಯ ಪ್ರಾರಂಭವಾಯಿತು.ಶಾಲೆಗೆ ಹೋಗಲೇಬೇಕು ಎಂಬ ಅನಿವಾರ್ಯತೆಯಿಂದ ಅತ್ತಿತ್ತ ನೋಡಿ ಗೌಡ್ರ ಮನೆಗೆ ಹೋಗಿ ಪಾಠಿಚೀಲ ಹೆಗಲಿಗೆ ಏರಿಸಿಕೊಂಡು ಇನ್ನೇನು ಬಾಗಿಲು ದಾಟಬೇಕು ಅನ್ನವಷ್ಟರೊಳಗೆ ಒಳಗಿನಿಂದ ಮಲ್ಲಮ್ಮಮ್ಮಗೌಡಸೇನಿಯ ಬಾಯಿಯಿಂದ ಮಾತು ತೂರಿ ಬಂತು ‘ ನಿಮ್ಮ ಅಪ್ಪ ನಮ್ಮಕೂಡಾ ಜಗಳಾ ಮಾಡಿ ಮಾನಕಳೆದು ಹೋಗ್ಯಾನ ನಮ್ಮ ಮನ್ಯಾಗ ಕೆಲಸ ಮಾಡವ್ರು ಯಾರು ಇಲ್ಲ ನಮ್ಮ ಮನ್ಯಾಗ ಅಡಿಗಿ ಮಾಡವ್ರು ಯಾರು ಇಲ್ಲ. ನಿನಗ ಸಾಲಿಗೆ ಹೋಗ್ಹಾಕ ನಮಗ ಬುತ್ತಿಕಟ್ಟಾಕ ಆಗುವುದಿಲ್ಲ. ನಿಮ್ಮ ದಾರಿ ನೀವು ನೋಡಿಕೊಳ್ರಿ’ ಎಂದು ಮಲ್ಲಮ್ಮಗೌಡಸೇನಿ ಕಡ್ಡಿ ಮುರಿದು ಎರಡು ತುಂಡುಮಾಡಿದ್ಹಾಂಗ ಹೇಳಿದರು. ಈ ಮಾತು ಕೇಳಿದ ನನಗೆ ಅಳುವುದನ್ನುಬಿಟ್ಟು ಮತ್ತೇನೂ ಬದುಕಿನ ಬಗ್ಗೆ ಏನು ಗೋತ್ತಿರಲಿಲ್ಲ.

ಆಗ ನನಗ ಅಂದಾಜು ಹನ್ನೊಂದು ವರ್ಷ ವಯಸ್ಸು ಇರಬೇಕು ಯಾಕಂದರೆ ಐದನೇ ತರಗತಿಯಲ್ಲಿ ಓದುತ್ತಿದ್ದೆ. ಗೌಡಸೇನಿ ಮಾತುಗಳು ಎದಿಯೊಳಗಿನಿಂದ ಆಯ್ದು ಬೆನ್ನಾಗ ಪಾರಾದ ಅಂಬಿನಂತಿದ್ದವು. ಮಾತುಗಳನ್ನು ಕೇಳಿ ಕಣ್ಣೀರು ಕಪಾಳದ ಮೇಲೆ ಹಾಯ್ದು ಅವು ಮೂಗಿನ ಹತ್ತಿರ ಇಳಿದು ಸಿಂಬಳಿನೊಂದಿಗೆ ಸೇರಿ ಗದ್ದವನ್ನೇಲ್ಲಾ ತೊಳೆಯುತ್ತಿತ್ತು. ತೊಟ್ಟ ಅಂಗಿಯ ಚುಂಗಿನಿಂದ ಕಣೀರನ್ನು ಒರೆಸುತ್ತಾ,ಎಡಗೈಯಿಂದ ಚಡ್ಡಿಯನ್ನು ಮೇಲೆ ಏರಿಸುತ್ತಾ ಹತ್ತಿರದ ಕವಡಿಪುರ ಸರಕಾರಿ ಪ್ರಾಥಮಿಕ ಶಾಲೆ ತಲುಪುವದರೊಳಗೆ ಹೆಣ ಬಿದ್ದು ಹೋಗಿತ್ತು.

ಹೆಡ್ ಮಾಸ್ಟರ ಪಾಠ ಮಾಡಲು ಶುರು ಮಾಡಿದರು. ಮೊದಲೆ ಕಳೆದ ರಾತ್ರಿ ಊಟ ಮಾಡುವ ವ್ಯಾಳ್ಯಾದಾಗ ಅಪ್ಪನ ಜಗಳ ಶುರುವಾಯ್ತು. ಅಪ್ಪನನ್ನು ಗ್ರೌಡ್ರ ಮಂದಿ ಹೊಟ್ಟಿಯೊಳಗಿದ್ದ ಶಿವ ಹೊಬರುವವರೆಗೂ ಹಿಟ್ಟು ನಾದಿದಂತೆ ತದಕಿದ್ದರು. ಆ ಘಟನೆಯು ಕಣ್ಣ ಮುಂದೆ ಕಟ್ಟಿದಂತಾಗಿತ್ತು. ಬಿಟ್ಟ ಕಣ್ಣು ಬಿಟ್ಟಂತೆ ಕುಳಿತರು ಸದಾ ರಾತ್ರಿಯ ದೃಶ್ಯ ಮತ್ತೆ ಮತ್ತೆ ಚಲನಚಿತ್ರದ ಪಾತ್ರಗಳಂತೆ ಮರುಕಳಿಸಿದಂತಾಯಿತು. ಮಾಸ್ತಾರರು ಹೇಳುತ್ತೀರು ಪಾಠವನ್ನು ಕೇಳುವ ಮನಸ್ಥಿಯಿರಲಿಲ್ಲ. ಮೇಷ್ಟ್ರು ಪಾಠದ ಮಧ್ಯದಲ್ಲಿ ಎಲ್ಲರ ಕಡೆಗೂ ಕಣ್ಣು ಹಾಯಿಸುತ್ತಿದ್ದರು. ಮೇಷ್ಟ್ರು ನೋಡುವುದಕ್ಕೂ ನನ್ನ ಕಣ್ಣು ಮುಚ್ಚುವುದಕ್ಕೂ ಅಷ್ಟೇ ತಡ ಮೇಷ್ಟ್ರ ಕೈಯಲ್ಲಿದ್ದ ಈಚಲ ಮರದ ಜರ್ಲ ನನ್ನ ಬೆನ್ನಿಗೆ ಮುತ್ತಿಟ್ಟು ಕೆಳಗೆ ಜಾರಿತ್ತು.‘ನಿದ್ದೆ ಮಾಡ್ತಿಯಾ, ಲೇ ಮಗನೇ ,ಕುಂಡಿ ತುಂಬುವ್ಹಂಗ ಹೆಡಿಗಿಗಟ್ಟಲೆ ಕೂಳು ತಿಂದು ಬರುವುದು. ಶಾಲೆಯೊಳಗ ನಿದ್ದಿ ಮಾಡುವುದು ’ಎಂದು ವಿದ್ಯಾರ್ಥಿಗಳ ಮುಂದೆ ಮನಬಂದಂತೆ ಬೈದರು. ನಾನು ಏನೂ ಹೇಳಿದರು ಮಾಸ್ತಾರರಿಗೆ ಅರ್ಥ ಮಾಡಿಸುವಷ್ಟು ಬುದ್ದಿ ಆಗ ನನ್ನಲ್ಲಿ ಇರಲಿಲ್ಲ. ಅವರಎದುರು ನಿಂತು ಮಾತನಾಡುವ ಶಕ್ತಿಯೂ ನಮಗ ಇರಲಿಲ್ಲ. ಮಾಸ್ತಾರರಿಗೇನು ಗೋತ್ತು;ಉಪವಾಸವಿದ್ದರೂ ಹಾಳಾದ ನಿದ್ದೆಗೆ ಬುದ್ದಿಯಿಲ್ಲ ಎಂಬುದು.ಎಂದು ಮನಸಿನಲ್ಲಿ ಅಂದುಕೊಂಡು ಬರೆ ಹಚ್ಚಿದ ನಾಯಿ ಮರಿಯಂತೆ ಗೊಳಿಡುತ್ತಾ ನಿಂತೆ. ಮಾಸ್ತರರ ಜರ್ಲಿನ ಏಟಿಗೆ ಬೆನ್ನ ಮೇಲೆ ಬಾಸುಂಡಿ ಎದ್ದು, ಯಾರಾದರೂ ಹುಡುಗರುಮೈ ಮುಟ್ಟಿದರೆ ಸಾಕು ಅಯ್ಯೋ ಎಂಬ ಸಣ್ಣ ಧ್ವನಿ ಬಾಯಿಂದ ಹೊರಬರುತಿತ್ತು.



ಈಗ ನನಗೆ ಮತ್ತೊಂದು ಚಿಂತೆ ಕಾಡತೊಡಗಿತು.ಶಾಲೆ ಬಿಟ್ಟ ಬಳಿಕ ಯಾರಲ್ಲಿ ಹೋಗುವುದು? ಎಲ್ಲಿಗೆ ಹೋಗುವುದು ? ಒಂದು ಕ್ಷಣ ಕತ್ತಲೆ ಕವಿದಂತಾಯಿತು.ಶಾಲೆಗೆ ಸಲಾಮು ಹೊಡೆದು ಬಿಡಬೇಕು ಅಂದುಕೊಂಡೆ. ಹನ್ನೊಂದನೇ ವಯಸ್ಸಿನಲ್ಲಿಯೇ ನನಗೆ ಜೀವನವೇ ನಿಸಾರವೇನಿಸಿತು. ಒಂದು ಕ್ಷಣ ಜೀವನವೇ ಬೇಡ ಅನಿಸಿತು. ಮತ್ತೊಂದು ಕಡೆ ಅಪ್ಪ ದೊಡ್ಡ ಗೌಡ್ರ ಮನೆಯಲ್ಲಿ ಯಾತಕ್ಕಾಗಿ ಇರಬೇಕು ? ತುತ್ತು ಅನ್ನಕ್ಕಾಗಿ ಮಾತ್ರ ಬದುಕಬೇಕು ಅಷ್ಟೇ ಹೊರತು ಯಾವುದೇ ಸ್ವಾತಂತ್ರ್ಯ ವಿರಲಿಲ್ಲ. ದೊಡ್ಡ ಗೌಡ್ರ ಮನೆಗೆ ಹಂಡೆ ಹೊತ್ತು ನೀರು ತರುವುದು, ಬೆಳಗಿನಿಂದ ಸಂಜೆಯವರೆಗೂ ಹೊಲದಲ್ಲಿ ಮೈ ಹಣ್ಣು ಹಣ್ಣಾಗುವವರೆಗೂ ದುಡಿದರೂ ಅದಕ್ಕೆ ಕವಡೆ ಕಾಸಿನಷ್ಟು ಬೆಲೆಯೂ ಇರಲಿಲ್ಲ.

ಅವ್ವ ತೀರಿಕೊಂಡಾಗ ಅಪ್ಪನಿಗೆ ಮೂವತ್ತಾರರ ಪ್ರಾಯವಿರಬೇಕು. ಶ್ರೀಮಂತರ ಮನೆಯಲ್ಲಿ ಹುಟ್ಟಿದ ಅವ್ವ ಅಪ್ಪನೊಂದಿಗೆ ಸಪ್ತಪದಿ ತುಳಿದು ಬಂದು ಕಷ್ಟಕಾಲದಲ್ಲಿಯೂ ಕುಟುಂಬದ ರಥವನ್ನು ಸ್ವಾಭಿಮಾನದಿಂದ ಸಸಾರವಾಗಿ ಎಳೆದವಳು. ಸಣ್ಣ ವಯಸ್ಸಿನಲ್ಲಿಯೇ ಐದು ಮಕ್ಕಳನ್ನು ಹೆತ್ತು ಭೂತ ಚೇಷ್ಟೆಗೆ ಬಲಿಯಾದವಳು. ಎಂದು ಅವ್ವ ಬದುಕಿದ ರೀತಿಯನ್ನು ಜನರು ಇಂದಿಗೂ ಮೆಲುಕು ಹಾಕುತ್ತಾರೆ ಅಂದು ಅಪ್ಪನಿಗೆ ಹಲವಾರು ಜನರು ಮರು ಮದುವೆಗೆ ಒತ್ತಾಯಿಸಿದರೂ,ಮದುವೆಯಾಗದೆ ಹಾಗೆಯೇ ಉಳಿದುಬಿಟ್ಟ. ನಮ್ಮ ಬದುಕಿನಲ್ಲಿ ತಂದೆ ಮತ್ತು ತಾಯಿಯಾಗಿ ಎರಡು ಪಾತ್ರವನ್ನು ಒಟ್ಟಿಗೆ ನಿಭಾಯಿಸಿದ ನೆನೆಪು..ನಮಗಾಗಿ ಅಪ್ಪ ತನ್ನ ಯೌವ್ವನವನ್ನು,ಬದುಕನ್ನು ತ್ಯಾಗ ಮಾಡಿದ್ದು ಸಣ್ಣ ಕೆಲಸವಲ್ಲ. ಅವನು ಋಷಿಯಂತೆ ವಿಷಯವಾಸನೆಗಳಿಂದ ಬಹುದೂರ ಹೋಗಿದ್ದ ಅಪ್ಪನ ನೆನೆಪುಗಳು ಹೆಜ್ಜೆಗಳೊಂದಿಗೆ ಸರಸವಾಡತೊಡಗಿದವು. ಪಡುವಣ
ದಿಕ್ಕಿನಲ್ಲಿ ಸೂರ್ಯಜಾರತೊಡಗಿದ ಅಷ್ಟೋತ್ತಿಗೆ ಗೌಡ್ರಹಟ್ಟಿ ತಲುಪಿದೆ.ಅಗಸಿ ಬಾಗಿಲು ಹತ್ತೀರ ಬಂದಾಗ ‘ಲೇ ತಮ್ಮಾ ಬಾಇಲ್ಲಿ ’ ಎಂದು ಸಂಗಯ್ಯ ಕರೆದು ನಿಮ್ಮಪ್ಪ ನಂದೂರು ಗ್ರಾಮಕ್ಕೆ ಹೋಗುತ್ತೇನೆ.ಎಂದು ಹೇಳಿ ಹೋಗ್ಯಾನ.ಎಂದು ಹೇಳಿದ ಮೇಲೆ ಮನಿಸ್ಸಿಗೆ ನಿರಾಳವೇನಿಸಿತು.

ನೇರವಾಗಿ ದೊಡ್ಡಗೌಡ್ರ ಮನೆಗೆ ಹೋಗಲು ಭಯವಾಯಿತು. ಮನೆಯ ಮಾಳಿಗೆಯ ಮೇಲೆ ಪಾಠಿಚೀಲ ಇಟ್ಟು, ಪಕ್ಕದಲ್ಲಿರುವ ಕಟ್ಟೆಯ ಮೇಲೆ ಕುಳಿತೆ,ಬೀದಿ ದೀಪವಿರಲಿಲ್ಲ. ಹೀಗಾಗಿ ಒಬ್ಬರ ಮುಖ ಮತ್ತೊಬ್ಬರಿಗೆ ಕಾಣುತ್ತೀರಲಿಲ್ಲ. ಗೌಡ್ರಮನೆಯಲ್ಲಿ ಹಚ್ಚಿಟ್ಟ ಚೀಮಣಿ ದೀಪದ ಬೆಳಕಿನಲ್ಲಿ ಗೌಡಸೇನಿ ಹೊಲದಿಂದ ಬಂದ ಆಳುಮಕ್ಕಳಿಂದ ಕೆಲಸ ಒಪ್ಪಿಸಿಕೊಳ್ಳುತಿದ್ದಳು. ದುಂಡನೆಯ ಕುಂಕುಮ ಹಣೆಯ ಮೇಲೆ ಎದ್ದುಕಾಣುತಿತ್ತು. ಕಿಟಕಿಯಿಂದ ನೋಡಿಯೇ ತಿಳಿದುಕೊಂಡು ಇದೆ ಸರಿಯಾದ ಸಮಯ ಎಂದು ಮನೆಯೊಳಗೆ ಹೋದೆ. ಅಪ್ಪ ದೊಡ್ಡಗೌಡ್ರ ಮನೆಯಿಂದ ಹೋದ ಮೇಲೆ ಶಾರದಾ ಅಕ್ಕನೂ ಸರಿಯಾಗಿ ಊಟಮಾಡಿರಲಿಲ್ಲ. ಅವಳ ಮುಖವೂ ಬಾಡಿತ್ತು. ಅಕ್ಕ ಅಡಿಗೆ ಮನೆಯಲ್ಲಿದ್ದಳು ನಾನು ಕಾಣುವುದೆ ತಡ ಎರಡು ರೋಟ್ಟಿಗೆ ಹುಣಸಿ ಚಟ್ನಿ ಹಚ್ಚಿ ಸುತ್ತಿಕೊಟ್ಟಳು.ಹಸಿವಿನಿಂದ ರೋಸಿಹೋದ ಒಡಲು ಅನ್ನಕ್ಕಾಗಿ ತವಕಿಸುತಿತ್ತು. ಕತ್ತಲಲ್ಲಿ ಕುಳಿತು ಎರಡು
ರೋಟ್ಟಿಯನ್ನು ನಾಲ್ಕು ತುತ್ತಿನಲ್ಲಿ ತಿಂದುತೇಗಿದೆ. ಒಳಗೆ ಹೋಗಿ ಒಂದು ಚರಿಗೆ ನೀರನ್ನು ಗಟಗಟ ಕುಡಿದು ಮೆಲ್ಲನೆ ಮಾಳಿಗೆ ಹತ್ತಿದೆ. ಅಂದು ರಾತ್ರಿ ಆಕಾಶದಲ್ಲಿ ನಕ್ಷತ್ರಗಳು ಪಳಪಳನೇ ಹೊಳೆಯುತ್ತಿದ್ದವು. ನಕ್ಷತ್ರಗಳ ರಾಶಿಯಲ್ಲಿ ಚಂದಿರನು ರಾಜನಂತೆ ಕಂಗೋಳಿಸುತಿದ್ದ.ನೋಡುತಿದ್ದಂತೆ ನಿದ್ದೆಗೆ ಜಾರಿಬಿಟ್ಟೆದ್ದೆ.

ಶಾಲೆಗಳಿಗೆ ರಜೆ ಬಿಟ್ಟಾಗ ದೊಡ್ಡಗೌಡ್ರಮನ್ಯಾಗ ಗಳೆ ಹೊಡೆಯುವುದು,ದನಗಳಿಗೆ ಮೇವು (ಹುಲ್ಲು) ತರುವುದು. ಆಡುಗಳನ್ನು ಕಾಯುವುದಾಡು ಮೇಯಿಸಲು ಹೋದಾಗ ಹೊಲದ ತಗ್ಗಿನಲ್ಲಿ ನಿಂತಿರುವ ನೀರಿನಲ್ಲಿ ಈಜಾಡುವುದು. ಕುಂಟಲಪಿ, ಸರಗೇರಿ, ಕಬಡ್ಡಿ, ಗಿಡ ಮಂಗನಾಟವಾಡುತ್ತಾ ಎಲ್ಲಾ ನೋವುಗಳನ್ನು ಮರೆತು ಬಿಡುತಿದ್ದೇವು. ನಮ್ಮ ವಾರಿಗೆಯ ಹುಡುಗರ ಜೊತೆ ವೃದ್ದರು ಬರುತಿದ್ದರು. ಅವರು ತೋರಿಸುವ ಪ್ರೀತಿಗೆ ಸೋತು ಹೋಗಿದ್ದೆ. ಹೀಗಾಗಿ ಒಮ್ಮೊಮ್ಮೆ ಶಾಲೆಗೂ ಚಕ್ಕರ ಹೊಡೆದದ್ದುಂಟು! ಇಲ್ಲಿ ಜಾತಿ ಇರಲಿಲ್ಲ, ಕುಲಗೋತ್ರವಿರಲಿಲ್ಲ, ಬಡವ ಬಲ್ಲಿದ ಎಂಬ ತಾರತಮ್ಯವಿರಲಿಲ್ಲ. ಸಿಟ್ಟು ಮಾಡಿಕೊಂಡು ಬಯ್ಯುವವರು ಇರದ ಕಾರಣ ಅಡವಿಯಲ್ಲಿ ನಿರಾತಂಕವಾಗಿ ಹಾರಾಡುವ ಭಾನಾಡಿಗಳಂತೆ ಇರುತಿದ್ದೇವು. ನನ್ನಂತೆ ಬಡತನದ ಯಾತನೆಯನ್ನು ಅನುಭವಿಸಿದ ಲಿಂಗನಿಗೂ ಅಕ್ಷರ ಕಲಿಬೇಕು ಎಂಬ ಹಸಿವು ಇತ್ತು ಅವನು ಓಡಿ ಬಂದು ಅಣ್ಣಾ ನಾನು ಶಾಲೆಗೆ ಹೋಗಬೇಕು ಎಂದು ತನ್ನಮನಸಿನ ಇಂಗಿತವನ್ನು ವ್ಯಕ್ತಪಡಿಸಿದ. ಆಗ ನನ್ನ ಜೀವನದಲ್ಲಿ ನಡೆದ ಘಟನೆ ತಟ್ಟನೆ ನೆನಪಿಗೆ ಬಂತು.

ಒಂದು ದಿನ ಶಾಲಾ ಮಾಸ್ತಾರರು ಅಪ್ಪನನ್ನು ಕರೆದು ‘ಹೇ ಯಜಮಾನ ಇಲ್ಲಿ ಬಾ, ನಿನ್ನ ಮಗ ಶ್ಯಾಣ ಅದಾನ ಇಂವುನ್ನ ಯಾವುದರೂ ಚಲೊ ಶಾಲೆಗೆ ಹಚ್ಚಿ ಬಾ,ಇಲ್ಲಾಂದ್ರ ಗೌಡ್ರ ಮನ್ಯಾಗ ನಿನ್ನಗತಿ ಶೆಗಣಿ ಬಳ್ಯಾವ ಅಕಾನ ’ ಎಂದು ಹೇಳಿರುವುದರಿಂದ ಅಪ್ಪ ಹತ್ತಿರ ಕವಡಿಪುರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಮ್ಮಿಗೆ ಐದನೇ ತರಗತಿಗೆ ಹೆಸರು ಹಚ್ಚಿಬಂದ್ರು. ಅಪ್ಪನ ಜಗಳದಿಂದ ಮನೆಯೊಡತಿ ಗೌಡಸೇನಿ ಯಾವುದೇ ರಕ್ತ ಸಂಬಂಧದ ಮೂಲಾಜು ಇಟ್ಟುಕೊಳ್ಳದೆ ‘ಇದು ಧರ್ಮ ಛೆತ್ರವಲ್ಲ ; ಬಂದವರಿಗೆಲ್ಲಾ ಅನ್ನಾ ಹಾಕಾಕ, ಯಾರು ಬೆವರು ಹರಿಸಿ ದುಡಿತಾರ ಅವರು ಮಾತ್ರ ಊಟ ಮಾಡಲು ಯೋಗ್ಯರು ಎಂದು ಖುಲ್ಲಂ ಖೂಲ್ಲಾ ಹೇಳಿದ್ದರು.’

ಕೊನೆಗೂ ಒಂದು ದಿನ ಕವಡಿಪುರದ ಶಾಲೆಗೆ ಹೋಗುವ ದಾರಿಯಲ್ಲಿ ಅಪ್ಪ ಇದ್ದಕ್ಕಿದಂತೆ ಪ್ರತ್ಯಕ್ಷವಾಗಿಬಿಟ್ಟ ! ನನಗಂತೂ ನಂಬಲಾಗಲಿಲ್ಲ. ಅಪ್ಪನನ್ನೂ ಅಪ್ಪಿಕೊಂಡು ದುಃಖ ತಡೆದುಕೊಳ್ಳಲು ಆಗದೆ ತೆಕ್ಕೆಬಡಿದು ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. ಅಪ್ಪನೂ ಕ್ಷಣಕಾಲ ಭಾವುಕನಾದ ಅಲ್ಲಿಯೆ ಇದ್ದ ಚಪ್ಪರ ಹೋಟೆಲ್ಗೆ ಕರೆದುಕೊಂಡು ಹೋಗಿ ಹೊಟ್ಟೆತುಂಬಾ ಪುರಿಚಟ್ನಿ ತಿನಿಸಿದನು. ಅಪ್ಪ ಏನೇನೋ ಕೇಳಿದ ಅದು ನನಗೆ ಅರ್ಥವಾಗಲಿಲ್ಲ.

ಪ್ರತಿ ದಿನ ಊರಿಗೆ ಹೋಗಿ ಬರುವುದು ತ್ರಾಸ ಆಗುತ್ತದೆ. ಇನ್ನೂ ಮೇಲೆ ಇಲ್ಲಿಯೆ ಇದ್ದು ಬಿಡು. ಕೋಳಿ ಅಡಿವೆಮ್ಮನ ಮನೆಯಲ್ಲಿ ಹೈಸ್ಕೂಲ ಹುಡುಗರು ಬಾಡಿಗೆ ಇರುತ್ತಾರೆ. ತಿಂಗಳಿಗೆ ಎರಡು ರೂಪಾಯಿ ಬಾಡಿಗೆ ಇದೆ. ಪಕ್ಕದಲ್ಲಿರವ ಉಚಿತ ಪ್ರಸಾದ ನಿಲಯದಲ್ಲಿ ಊಟಮಾಡು. ಎಂದು ಹೇಳಿ ಹತ್ತು ರೂಪಾಯಿ ಕೊಟ್ಟು ಗಾಳಿಯಂತೆ ಬರ್ರೆಂದು ಹೋಗಿ ಮರೆಯಾಗಿಬಿಟ್ಟ ! ಅಂದು ಹೋದವನೂ ಮೂರು ತಿಂಗಳು ಗತಿಸಿದರೂ ಬರಲಿಲ್ಲ. ಕೋಳಿ ಅಡಿವೆಮ್ಮನಿಗೆ ಮಕ್ಕಳು ಇರಲಿಲ್ಲ.ಅವಳಲ್ಲಿರುವ ವಾತ್ಸಲ್ಯ,ಮಮತೆಯನ್ನು ಕಂಡು ನನಗೆ ಹರ್ಷವೆನಿಸಿತು. ಬಾಡಗಿ ಇದ್ದ ಹುಡುಗರು ನಾನು ಶಾಲೆಯಿಂದ ಬಂದ ತಕ್ಷಣ ‘ಅಜ್ಜಿ ನಿನ್ನ ಮೊಮ್ಮಗ ಬಂದ ನೋಡು’ ಎಂದು ಹೇಳಿ ಹಾಸ್ಯ ಮಾಡುತ್ತೀದ್ದರು. ಅವರು ಅನ್ನುವುದನ್ನು ಮಕ್ಕಳಿಲ್ಲದ ಆ ಜೀವ ಕೇಳಿ ಒಳಗೊಳಗೆ ಸಂಭ್ರಮಿಸುತಿತ್ತು. ಮಾತೃವಿನಲ್ಲಿರುವ ಅಕ್ಕರೆಯು ಅವಳ ಮುಖದಲ್ಲಿ ಮಂದಹಾಸ ನಗೆ ಬುಗ್ಗಿಯಾಗಿ ಹೊರಹೊಮ್ಮುತಿತ್ತು. ಅವಳ ಕರುಣೆ,ತಾಯ್ತನದ ವಾತ್ಸಲ್ಯದಲ್ಲಿ ನಾನು ಮಿಂದು ಹೋಗಿದ್ದೆ.

ಹೀಗೆ ಹಲವು ತಿಂಗಳುಗಳು ಕಾಲ ಚಕ್ರದಲ್ಲಿ ಗತಿಸಿ ಹೋದವು. ವಾರ್ಷಿಕ ಪರೀಕ್ಷೆಗಳು ಸಮೀಪಿಸುತಿದ್ದಂತೆ ಶಾಲೆಯ
ಮುಖ್ಯಗುರುಗಳು ತರಗತಿಗಳಿಗೆ ಬಂದು ಯಾರು ಇನ್ನೂ ಫೀಜು ತುಂಬಿಲ್ಲ ಅವರು ನಾಳೆಯೇ ತುಂಬಬೇಕು. ಯಾರು ಫೀಜ್ ಕಟ್ಟುವುದಿಲ್ಲ ಅವರನ್ನು ಪರೀಕ್ಷಗೆ ಕುರಿಸಿಕೊಳ್ಳುವುದಿಲ್ಲ ಎಂದು ಜೋರು ಮಾಡಿದರು. ಅಪ್ಪ ಕೊಟ್ಟ ಹಣ ತೀರಿ ಹೋಗಿತ್ತು. ಮುಂದೆ ಏನು ಮಾಡುವುದು ಎಂದು ತಿಳಿಯಲಿಲ್ಲ. ಮತ್ತೇ ನನಗೆ ಗೌಡ್ರಹಳ್ಳಿಗೆ ಹೋಗುವುದು
ಅನಿವಾರ್ಯವಾಯಿತು. ಯಾರನ್ನಾರೂ ಕೇಳಿದರೆ ಕೊಡಬಹುದು ಎಂದು ಭಾವಿಸಿಕೊಂಡು ಗೌಡ್ರಹಳ್ಳಿಗೆ ಬಂದೆ, ಮತ್ತೆ ಅದೇ ದೊಡ್ಡಗೌಡ್ರ ಮನೆಗೆ ಹೇಗೆ ಹೋಗುವುದು ಎಂಬ ಮುಜೂಗರವಾಯಿತು. ಕತ್ತಲಾಗುವವರೆಗೂ ಮನೆಯ ಮಾಳಿಗೆಯ ಮೇಲೆ ಯಾರಿಗೂ ಕಾಣದಂತೆ ಕುಳಿತುಕೊಳ್ಳಬಹುದಿತ್ತು. ಕುಳಿತುಕೊಂಡೆ ಇದ್ದಕ್ಕಿದ್ದಂತೆ ಅಕ್ಕ ಕುಳ್ಳು ತೊಗೊಂಡು ಹೋಗಲು ಮಾಳಿಗೆಯ ಮೇಲೆ ಬಂದಳು. ನಾನು ಕುಂಬಿಯ ಮರೆಯಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ನನ್ನ ತೆಲೆಯ ಮೇಲಿನ ಗಾಂಧಿ ಟೋಪ್ಪಿಗೆ ಕಂಡು ಯಾರು ? ಎಂದು ಕೂಗಿದಳು.
ಮೆಲ್ಲಗೆ ತಲೆ ಕೆಳಗೆ ಹಾಕಿ ಎದ್ದು ನಿಂತುಕೊಂಡೆ,ಅಕ್ಕನನ್ನು ನೋಡಿದ ತಕ್ಷಣ ನನಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ನೋವು ಒಮ್ಮಿಂದೊಮ್ಮೆಲೆ ಕಿತ್ತುಬಂದಂತಾಗಿ ಒಳಗಿರುವ ದುಃಖ ಕಾರಂಜಿ ನೀರಿನಂತೆ ಒತ್ತರಿಸಿ ಬಂತು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ .!! ಅವಳು ಅತ್ತಳು !! ಒಂದೀಷ್ಟು ಸಮಯ ಕಳೇದ ಬಳಿಕ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ಆದಳು. ಆಗ ಅಕ್ಕ ನನಗೆ ಅಕ್ಕಮಹಾದೇವಿಯಂತೆ ಕಂಡಳು. ಅವಳು ಏನನ್ನೂ ಮಾತನಾಡದೆ ಮೌನವಾಗಿದ್ದಳು. ಒಂದು ಚೂರು ವ್ಯಾಳೆ ಆದ ಬಳಿಕ ಒಮ್ಮಿಂದೊಮ್ಮೇಲೆ ಓ ದೇವರೆ ! ನಿನಗಾದರೂ ಕರಣೆ ಬಾರದೆ ಎಂದು ಅವಳಿಗರಿವಿಲ್ಲದಂತೆ ಮಾತು ಹೊರಬಂತು. ಅಕ್ಕ ಸುಮ್ಮನಿದ್ದಳು, ನಾನೇ ಮಾತು ಮುಂದುವರಿಸಿದೆ ಅಪ್ಪ ಬಂದು ಹೋಗಿದ್ದು,ಉಚಿತ ಪ್ರಸಾದ ನಿಲಯಕ್ಕೆ ಸೇರಿಸಿದ್ದು. ಕೋಳಿ ಅಡಿವೇಮ್ಮನ ಮನೆಯಲ್ಲಿ ಬಾಡಗಿ ಇರಿಸಿ ಹೋಗಿದ್ದು. ಅವಳು ನನ್ನನ್ನು ಮೊಗನಂತೆ ಕಾಣುತ್ತಾಳೆ. ಈಗ ಅಪ್ಪ ಬೆಳಗಾವಿ ಜಿಲ್ಲೆಗೆ ಹೋಗ್ಯಾನ ಅಂತ,ಅಲ್ಲೆ ಯಾರದೋ ತ್ವಾಟದಾಗ ಜೀತಾ ಅದಾನಂತ,ಅವರ ಮಾಲಿಕರು ಹೋಗು ಅಂದಾಗ ಬರತೀನಿ ಅಂತ ಶಾಲೆಗೆ ಪತ್ರ ಹಾಕ್ಯಾನ ಎಂದು ಎರಡ್ಮೂರು ತಿಂಗಳು ನಡೆದ ಎಲ್ಲಾ ಸಂಗತಿಗಳನ್ನು ಹೇಳಿದೆ. ಎಲ್ಲವನ್ನು ಕೇಳಿದ ಮೇಲೆ ದೀರ್ಘವಾದ ನಿಟ್ಟೂಸೀರು ಬಿಟ್ಟುಳು.

ನಾನು ತಲೆ ಕೇಳಹಾಕಿ ‘ಶಾಲೆಯಲ್ಲಿ ಪರೀಕ್ಷೆಯ ಫೀಜ್ ತುಂಬದಿದ್ದರೆ ಪರೀಕ್ಷೆಗೆ ಹಾಜರು ಮಾಡಿಕೊಳ್ಳುವದಿಲ್ಲಾಂತ ’ಎಂದು ಮೆಲುದನಿಯಲ್ಲಿ ನುಡಿದೆ.
ಫೀ ಎಷ್ಟು ? ಎಂದುಅಕ್ಕ ಕೇಳಿದಳು.
ಐದು ರೂಪಾಯಿ ! ಅಂದೆ,ಅದಕ್ಕೆ ಅಕ್ಕ ಐದು ರೂಪಾಯಿನಾ ! ಎಂದು ಉದ್ಘಾರ ತೆಗೆದಳು.
ನನಗೂ ಅಕ್ಕನ ಕಡೆ ಏಲ್ಲಿಂದ ಬರತಾವ ಅನಿಸಿ,ಮುಂದೇನು ಗತಿ.ಎಂದು ಒಂದು ವರ್ಷಕಲಿತದ್ದು ಹೊಳಿ ನೀರಾಗ ಹುಣಸೆ ಹಣ್ಣು ತೊಳೆದ್ಹಾಂಗ ಅನಿಸಿತು.
‘ನೀನು ಇಲ್ಲೆ ಇರು ನಾನು ಬರುತ್ತೇನೆ ’ಎಂದು ಅಕ್ಕ ಕುಳ್ಳು ತೊಗೊಂಡು ಕೆಳಗೆ ಹೋದಳು.
ಕಣ್ಣು ಬಿಡುವುದರೊಳಗೆ ಮತ್ತೇ ಮಾಳಗಿ ಮೇಲೆ ಬಂದು ತೋಗೊ ‘ಐದು ರೂಪಾಯಿ’ ನೋಟು ಮಡಿಚಿ ಕೈಯಲ್ಲಿಟ್ಟು ಏಲ್ಲಿಯಾದರೂ ಕಳಕೊಂಡಿ ಮಡಚಿ ಬಕಣ(ಜೇಬು)ದಾಗ ಇಟಗೋ,ಎಂದು ಎಚ್ಚರಿಕೆಯಿಂದ ಇರಲು ಹೇಳಿದಳು. ನೀನು ಊಟ ಮಾಡ..ಬಾ ಅವ್ವ ಮತ್ತು ಉಳಿದವರು ಹಿತ್ತಲ ಬಾಗ¯ದಾಗ ಆಳು ಮಕ್ಕಳ ಜೊತೆ ಮಾತಾಡಿಕೊಂತ ಕುಂತಾರ.ಎಂದು ಕರೆದುಕೊಂಡು ಹೋದಳು. ‘ಹೊಟ್ಟೆ ತುಂಬಾ ಉಣಸಿದಳು ಮುಂಜಾನೆ ಬೇಗನೆ ಎದ್ದು ಶಾಲೆಗೆ ಹೋಗು’ ಎಂದು ಹೇಳಿದಳು.ಎಂತಹ ವಿಚಿತ್ರ.ಕಾಗೆಯ ಗೂಡಿನಲ್ಲಿ ಕೋಗಿಲೆ ಜನಿಸಿದಂತೆ ಅಲ್ಲವೇ ? ಅನಿಸಿತು.

ಅವತ್ತು ಎಂದಿನಂತೆ ಮಾಳಿಗಿ ಮ್ಯಾಲೆ ಮಲಗಿಕೊಂಡೆ, ಆ ರಾತ್ರಿ ಮಾತ್ರ ಹಿಂದಿನ ರಾತ್ರಿಗಳಿಗಿಂತ ಭಿನ್ನವಾಗಿತ್ತು. ಪೂರ್ಣಿಮೆಯ ಚಂದಿರ ಎಲ್ಲ ಮೋಡಗಳನ್ನು ಸರಿಸಿ, ನಕ್ಷತ್ರಗಳ ರಾಶಿ ರಾಶಿ ಸೈನಿಕರ ಮಧ್ಯ ರಾಜನಂತೆ ಪಡುವಣ ದಿಕ್ಕಿನಲ್ಲಿ ಉದಿಸಿದನು. ಜಗವೆಲ್ಲ ಮೌನವಾಗಿದ್ದಾಗ ಕಡಲ ಅಲೆಗಳು ಉಕ್ಕುವಂತೆ ಮಾಡಿದನು. ಹಾಲ್ಗಡಲಲ್ಲಿ ಜಗವನ್ನೇಲ್ಲಾ ತೇಲಿಸಿದನು. ಅದನ್ನು ಕಣ್ಣು ತಂಬಿಕೊಂಡು ನಾನು ಹಿರಿಹೊಳೆಯಾದೆ.

ಈಗ ಅಕ್ಕ ನನ್ನನ್ನೂ ಕಾಡತೊಡಗಿದಳು. ಅವ್ವ ಸಂಗಮ್ಮ ಹೆತ್ತ ಗಂಡು ಮಗುವು ಸತ್ತು ಹೋಯಿತು. ಆಗ ಅವ್ವನ ರೋಧನ ಮುಗಿಲು ಮುಟ್ಟಿತು. ಅವಳ ದುಃಖವನ್ನು ನೋಡದ ಮಲ್ಲಮ್ಮಗೌಡಸೇನಿ ತಾನು ಹೆತ್ತ ಹೆಣ್ಣು ಮಗು ಶಾರದಾನನ್ನು ಅವ್ವನ ಉಡಿಯೊಳಗ್ಹಾಕಿ ಕಳಿಸಿದ್ದರಂತೆ. ಅಂದಿನಿಂದ ಶಾರಕ್ಕ ಅವ್ವ ಸಾಯುವವರೆಗೂ ನಂದೂರಿನಲ್ಲಿಯೇ ಇದ್ದಳು. ಸಂಗಮ್ಮ ಮನೆತನದಿಂದ ಬಡವರಾಗಿದ್ದರೂ ಅವಳು ಮನಸು ಬಹಳ ದೊಡ್ಡದು ಬಡವರು,ನಿರ್ಗತಿಕರು ಮನೆಗೆ ಬಂದರೆ ತನ್ನಲ್ಲಿ ಇದ್ದಷ್ಟು ಕೊಟ್ಟು ಕಳಿಸಿಕೊಡುವುದು ಅವಳ ಸ್ವಭಾವವಾಗಿತ್ತು. ಹೀಗಾಗಿ ಅಕ್ಕ ಶಾರದಾ ಶ್ರೀಮಂತರ ಮನೆಯಲ್ಲಿ ಹುಟ್ಟಿದರೂ ಅವಳಲ್ಲಿ ಶ್ರೀಮಂತಿಕೆ ಅಹಂಕಾರವಿರಲಿಲ್ಲ. ಬಡತನದ ಸ್ವಾಭಿಮಾನವಿತ್ತು. ಅವ್ವ ಸಂಗಮ್ಮನ ಗುಣಗಳು ಶಾರಕ್ಕನಿಗೆ ಬಳುವಳಿಯಾಗಿ ಹರಿದು ಬಂದಿದ್ದವು. ಹೀಗಾಗಿ ಅವಳೂ ಕರುಣೆ,ಮಮತೆಯ ಕಡಲಾಗಿದ್ದಳು. ಹಸಿದು ಬಂದವರಿಗೆ ಹೊಟ್ಟೆ ತುಂಬಾ ಉಣಿಸಿ ಕಳಿಸುವಂತ ಗುಣವಂತೆಯಾಗಿದ್ದಳು ಅಕ್ಕನ ತ್ಯಾಗ,ಋಣಾತ್ಮಕ ಗುಣಗಳು ಗೋವಿನ ಜೋಳದ ತೆನೆಯ ಕಾಳುಗಳು ಉದುರುವಂತೆ ನೆನಪಿನಾದಲ್ಲಿ ಉದುರಿದವು.

ಅಕ್ಕ ಪಕ್ಕದ ಊರಿನ ಜಾತ್ರೆಗೆ ಅಂತ ಕೊಟ್ಟ ರೊಕ್ಕವನ್ನು ಜಾತ್ರೆಯಲ್ಲಿ ಬಳದೇ ಹಾಗೆ ಉಳಿಸಿಕೊಂಡಿದ್ದಳು. ಅದೇ ಐದು ರೂಪಾಯಿಗಳನ್ನು ಇತರಂತೆ ಜಾತ್ರೆ ಯಲ್ಲಿ ಖರ್ಚು ಮಾಡಿದ್ದರೆ: ನಾನು ಇಂದು ಕೂಲಿ ಮಾಡಿಕೊಂಡು
ಇರಬೇಕಾಗಿರುತಿತ್ತು.ಆದರೆ ಅಕ್ಕನಿಗೆ ಮುಂದೊಂದು ದಿನ ಕಷ್ಟಕಾಲ ಬಂದೀತು. ಎಂದು ಅನಿಸಿರಬೇಕು. ಅನಿಸುತ್ತದೆ. ಅಕ್ಕ ಶಾಲೆಗೆ ಹೋದವಳು ಅಲ್ಲ ! ಅವಳು ಶಾಲೆಯ ಹತ್ತಿರ ಸುಳಿದವಳು ಅಲ್ಲ; ಅಕ್ಷರ ಮಂತ್ರ ಕಲಿತವಳೂ ಅಲ್ಲ ! ಅವಳಲ್ಲಿರುವ ನಾನು ಕಲಿಯಬೇಕು ಎಂಬ ಕಕ್ಕುಲಾತಿ ನನ್ನನ್ನು ಉನ್ನತ ಅಧಿಕಾರಿಯನ್ನಾಗಿ ಮಾಡಿದೆ. ಎಂದು ಹೇಳಿದಾಗ ವೇದಿಕೆ ಮುಂದೆ ಕುಳಿತ ಸಭೀಕರ ಕಣ್ಣು ಒದ್ದೆಯಾಗಿದ್ದವು. ಈಗ ನಾನು ಧರಿಸಿದ ಕೋಟು ನಿಮ್ಮ ಕಣ್ಣಗೆ ರಾಚುತ್ತದೆ ನಿಜ. ಅದರ ಒಳಗಿರುವ ಮನಸಿನ ಮೇಲೆ ನೂರಾರು ಗಾಯಗಳಿವೆ. ನೋವುಗಳಿವೆ. ವ್ಯೆಥೆಗಳಿವೆ. ಸಂಕಟಗಳಿವೆ. ಈ ನೆಲಕ್ಕೆ ಬಲವಾದ ಹಠವಿದೆ. ತನ್ನ ಒಡಲಿಗೆ ಬಿದ್ದ
ಪ್ರತಿಯೊಂದು ಬೀಜಗಳಿಗೂ ಜೀವಂತಿಕೆಯ ಶಕ್ತಿಯನ್ನು ತುಂಬುತ್ತದೆ.ಅದೇ ನೆಲದ ಗುಣಗಳು ಮನುಷ್ಯರಿಗೆ ಬರುತ್ತವೆ. ಎಂದು ಹೇಳಿದೆ ಈ ಮಾತನ್ನುಕೇಳಿ ಸಭೆಯಲ್ಲಿ ಕುಳಿತ ವಯೋವೃದ್ಧನೊಬ್ಬ ‘ಭಲೇ ’ ಎಂದು ಕೂಗಿದನು.ಎಲ್ಲರೂ ಅವನನ್ನು ಅನುಸರಿಸಿದರು.

ಗಂಗಾಧರ ಅವಟೇರ
ಉಪನ್ಯಾಸಕರು.
ಶ್ರೀ ಮಹೇಶ್ವರ ಸಂಯುಕ್ತ ಪ.ಪೂ.ಕಾಲೇಜು.ಇಟಗಿ-583232
ತಾ.ಕುಕನೂರು. ಜಿ.ಕೊಪ್ಪಳ.
9449416270
E-mail- gangadhar.kp@gmail.com