You are currently viewing ಸ್ವಾತಂತ್ರ ಹೋರಾಟಗಾರ್ತಿ ಸೀತಾಬಾಯಿ ಬಸಪ್ಪ ತಿಮಸಾನಿ

ಸ್ವಾತಂತ್ರ ಹೋರಾಟಗಾರ್ತಿ ಸೀತಾಬಾಯಿ ಬಸಪ್ಪ ತಿಮಸಾನಿ

ಹೊರಗಡೆ ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ,ಬಲಿದಾನದ ಕಿಚ್ಚು,ಸ್ವಾತಂತ್ಯ್ರ ಪಡದೇ ತೀರುತ್ತೇವೆ ಎನ್ನುವ ದೇಶಭಕ್ತರ ಹುಚ್ಚು,ಎಲ್ಲೆಡೆ ಗುಂಡು, ಬಂದೂಕು, ಮಚ್ಚು ಇಂತಹ ಸಂದರ್ಭದಲ್ಲಿ ಬಹುದೊಡ್ಡ ಜಮಿನ್ದಾರ ಮನೆತನದಲ್ಲಿ ಮುದ್ದಾದ ಗಂಡು ಮಗುವೊಂದಯ ಜನ್ಮ ತಾಳುತ್ತದೆ,ಮನೆಯಲ್ಲಿ ಗಂಡು ಹುಟ್ಟಿದ ಸಂಭ್ರಮ ಮುಗಿಲು ಮುಟ್ಟುತ್ತದೆ ಆದರೆ ಜನ್ಮಕೊಟ್ಟು ಮಗುವಿನ ಜೊತೆಗೆ ಬೆಚ್ಚಗೆ ಆಡಿ,ಹಾಡಿಕೊಂಡು ಇರುವ ಸಮಯದಲ್ಲಿ ಮಗುವನ್ನು ಮನೆಯಲ್ಲಿ ಸಂಬಂಧಿಕರಿಗೆ ನೋಡಿಕೊಳ್ಳಲು ಹೇಳಿ ಪತಿಯ ಜೊತೆಗೆ ಸತ್ಯಾಗ್ರಹದಲ್ಲಿ ಬಾಗವಹಿಸಿ ಬ್ರಿಟೀಷರ ವಿರುದ್ದ ಘೋಷಣೆಯ ಆರೋಪದ ಮೇಲೆ ಜೈಲು ಸೇರಿ ಶಿಕ್ಷೆ ಅನುಭವಿಸಿದ ಆ ಬಾಣಂತಿಯೇ ಸ್ವಾತಂತ್ರ್ಯ ಹೋರಾಟಗಾರ್ತಿ ಮಂಟೂರದ ಶ್ರೀಮತಿ ಸೀತಾಬಾಯಿ ಬಸಪ್ಪ ತಿಮಸಾನಿಯವರು.
ಸ್ವಾತಂತ್ರ ದೊರೆಯಬೇಕಾದರೆ ಕೇವಲ ಬೆರಳೆಣಿಕೆಯ ಹೋರಾಟಗಾರರ ಹೆಸರುಗಳು ರಾರಾಜಿಸುತ್ತವೆ ಇಂತವರ ಮಧ್ಯ ಸಾವಿರಾರು ಹೋರಾಟಗಾರರ ಹೆಸರು ತೆರೆಯ ಮರೆಯಲ್ಲಿ ಅವಿತುಕೊಂಡು ಬಿಟ್ಟಿವೆ, ಅಂತಹ ತೆರೆಯ ಮರೆಯಲ್ಲಿ ಸೇವೆ ಮಾಡಿದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ್ತಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದ ಸೀತಾಬಾಯಿ ಬಸಪ್ಪ ತಿಮಸಾನಿಯವರು.

ಅದು ಕ್ರಿ.ಶ 1925ರ ಸಮಯ ಸ್ವಾತಂತ್ರ್ಯ ದೊರೆಯುತ್ತಿದೆ ಅನ್ನುವ ಸಂದಿಗ್ಧ ಕಾಲ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರ ಕುಟುಂಬಕ್ಕೆ ಅನ್ನ, ವಸ್ತ್ರ, ವಸತಿಗೆ ನೆರವಾಗಲು ಅಂದಿನ ವಿಜಾಪುರ ಜಿಲ್ಲೆಗೆ ಬಂದಿದ್ದರು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿದ್ದ ಹೋರಾಟಗಾರ್ತಿ ಸೀತಾಬಾಯಿ ಈ ವಿಷಯ ತಿಳಿದು ಪತಿ ಬಸಪ್ಪ ತಿಮಸಾನಿಯೊಂದಿಗೆ ವಿಜಾಪುರಕ್ಕೆ ಹೊರಟು ನಿಂತರು. ಮಂಟೂರ ಗ್ರಾಮದಿಂದ ವಿಜಾಪುರಕ್ಕೆ ಆಗಮಿಸಿದ ಅವರು ತುಂಬಿದ ಸಭೆಯಲ್ಲಿ ಜೊತೆಯಾಗಿ ಕುಳಿತು ಕೊಳ್ಳದೆ ನಿಯಮದಂತೆ ಮಹಿಳೆಯರು ಪುರುಷರಿಗೆ ಬೇರೆ ಬೇರೆ ಆಸನದ ವ್ಯವಸ್ಥೆ ಮಾಡಲಾಗಿದ್ದರಿಂದ, ಸೀತಾಬಾಯಿ ಒಂದು ಕಡೆ ಕುಳಿತರೆ ಅವರ ಪತಿ ಬಸಪ್ಪ ತಿಮಸಾನಿಯವರು ಮತ್ತೊಂದು ಕಡೆಯಲ್ಲಿ ಕುಳಿತರು.

ವೇದಿಕೆಯಲ್ಲಿ ಮಾತು, ಕತೆ, ಭಾಷಣದ ನಂತರ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ನಿರಾಶ್ರಿತರಾಗಿರುವ ಸಾವಿರಾರು ಸಂಖ್ಯೆಯ ನಿರಾಶ್ರಿತರಿಗೆ ಹಾಗೂ ಅವರ ಕುಟುಂಬಗಳಿಗೆ ಸಹಾಯ ಮಾಡಲು ಹಣ ನಾಣ್ಯ ಚಿನ್ನ ವಸ್ತ್ರಗಳನ್ನು ಮಹಾತ್ಮ ಗಾಂಧೀಜಿಯವರಿಗೆ ಕೊಡಲು ಆರಂಭಿಸಿದರು. ಇದನ್ನು ನೋಡಿದ ಸೀತಾಬಾಯಿ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ನಾನು ಸಹ ಏನಾದರೂ ಕೊಡಬೇಕು ಎಂದೆನಿಸಿತು. ಆದರೆ ಇವರು ಯಾವ ವಸ್ತುವನ್ನೂ ಸಹ ಅಲ್ಲಿಗೆ ತೆಗೆದುಕೊಂಡು ಹೋಗಿರದ ಕಾರಣ ಪಶ್ಚಾತ್ತಾಪ ಪಟ್ಟುಕೊಂಡರು. ಪತಿ ದೂರದಲ್ಲಿದ್ದರು ಅವರನ್ನು ಕೇಳದೆ ಶ್ರೀಮಂತ ಜಮೀನ್ದಾರ್ ಕುಟುಂಬದ ಸೀತಾಬಾಯಿ ಎದ್ದು ನಿಂತು ನೇರವಾಗಿ ಮಹಾತ್ಮಗಾಂಧೀಜಿಯವರ ಹತ್ತಿರ ನಡೆದರು ಹೋಗಿ ತನ್ನ ಕೈಯಲ್ಲಿ, ಕೊರಳಲ್ಲಿ, ಕಿವಿಯಲ್ಲಿ ಇರುವ ಅಂದಿನ ಕಾಲದಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ ಎಲ್ಲ ಚಿನ್ನಾಭರಣಗಳನ್ನು ನೀಡಿ ಖುಷಿಯಿಂದ ನಿಟ್ಟುಸಿರು ಬಿಟ್ಟರು.
ಕಣ್ಣಲ್ಲಿ ಯಾವೂದೇ ಪ್ರಶ್ನೆ, ನೋವು, ಗೊಂದಲ,ಆತಂಕ ಯಾವವೂ ಕಾಣಲಿಲ್ಲ ಸೀತಾಬಾಯಿಯನ್ನು ನೋಡಿದ ಮಹಾತ್ಮಗಾಂಧೀಜಿಯವರು “ಈಗ ನಿನ್ನ ಮನಸ್ಸು ಹೇಳಿದಂತೆ ನೀನು ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯವಾಗಲಿ ಎಂದು ನನಗೆ ಚಿನ್ನಾಭರಣಗಳನ್ನು ನನಗೆ ದಾನ ಮಾಡಿ, ನಂತರ ಮನೆಗೆ ಹೋಗಿ ಪತಿಗೆ ಕಾಡಿಸಿ, ಬೇಡಿ ಮತ್ತೆ ಚಿನ್ನಾಭರಣ ಪಡೆಯುವುದಾದರೆ ಈ ತರಹ್ ದಾನದ ಅವಶ್ಯಕತೆ ನಮಗಿಲ್ಲ” ಎಂದರು.




ಸ್ವಾತಂತ್ರ ಹೋರಾಟಗಾರ್ತಿ ಸೀತಾಬಾಯಿ ಬಸಪ್ಪ ತಿಮಸಾನಿ ಈ ಸಂದರ್ಭದಲ್ಲಿ ಆಡಿದ ಮಾತುಗಳು ಎಂಥವರನ್ನು ಮಂತ್ರ ಮುಗ್ದರನ್ನಾಗಿಸಿತು,ದೇಶಭಕ್ತಿ ಉಕ್ಕಿ ಹರಿಸಿತು. “ನಾನು ನನ್ನ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಬಯಸಿದವಳು ನಾನು ಸ್ವ ಇಚ್ಚೆ ಯಿಂದ ಸ್ವಾತಂತ್ರ ಹೋರಾಟಗಾರರ ಸಲುವಾಗಿ ಆಭರಣ ಕೊಟ್ಟಿದ್ದೇನೆ, ನಿಮಗೊಂದು ಮಾತು ಕೊಡುತ್ತೇನೆ ಜಿ ಇನ್ನು ಮುಂದೆ ನನ್ನ ಜೀವಿತಾವಧಿಯಲ್ಲಿ ಮಾಂಗಲ್ಯ ಬಿಟ್ಟು ಬೇರೆ ಯಾವ ಚಿನ್ನಾಭರಣವನ್ನು ಧರಿಸುವುದಿಲ್ಲ ಎಂದು ನಿಮ್ಮ ಮುಂದೆ ನಾನು ಪ್ರಮಾಣ ಮಾಡುತ್ತೇನೆ “ಎಂದು ಹೇಳಿ ಆಭರಣ ಕೊಟ್ಟು ಬಂದು ನಿರಾಳರಾದರು. ಕೊಟ್ಟ ಮಾತಿನಂತೆ ತಮ್ಮ ಜೀವಿತಾವಧಿಯಲ್ಲಿ ಒಂದೇ ಒಂದು ದಿನವೂ ಸಹ ಮಾಂಗಲ್ಯವನ್ನು ಹೊರತು ಪಡಿಸಿ ಬೇರೆ ಯಾವ ಚಿನ್ನಾಭರಣಗಳನ್ನು ದರಿಸದೆ ಪತಿ ಬಸಪ್ಪ ತಿಮಸಾನಿ ಜೊತೆಗೆ ಸ್ವಾತಂತ್ರ ಚಳುವಳಿಯಲ್ಲಿ ಭಾಗಿಯಾಗುತ್ತಾ ನಿರಾಶ್ರಿತರಿಗೆ ಮಂಟೂರಲ್ಲಿ ಆಶ್ರಯ ನೀಡಿ ಚಿರಸ್ಥಾಯಿಯಾಗಿದ್ದರು. ಅವರ ಆದರ್ಶಗಳನ್ನು ಅವರ ಪುತ್ರರು, ಮೊಮ್ಮಕ್ಕಳು ಸಹಿತ ಮೂರನೆಯ ತಲೆಮಾರಿನ ಕುಟುಂಬದ ಸದಸ್ಯರು ಪಾಲಿಸುತ್ತಿದ್ದಾರೆ ಎನ್ನುವುದಕ್ಕೆ ನ್ಯಾಯವಾದಿ ದಯಾನಂದ್ ಪಾಟೀಲರ ಕುಟುಂಬವನ್ನೊಮ್ಮೆ ನೋಡಿದರೆ ಅರ್ಥವಾಗುತ್ತದೆ ಶ್ರೀಮತಿ‌ ಸೀತಾಬಾಯಿ ತಿಮಸಾನಿ ಅವರ ಪುತ್ರ ಮಾಜಿ ಸಂಸದ ದಿ.ಎಸ್.ಟಿ.ಪಾಟೀಲ್ ಅವರು ಮಹಾತ್ಮ ಗಾಂಧಿ ಅವರ ಭಾವಚಿತ್ರದ ಮುಂದೆ ಹಚ್ಚಿದ ದೀಪ ಇಂದಿಗೂ ಬೆಳಗುತ್ತಿದೆ ನಿರಾಭರಣದ ಬೆಳಕನ್ನು ಸೂಸುತ್ತಿದೆ.

ವೆಂಕಟೇಶ ಪಿ ಗುಡೆಪ್ಪನವರ
ಪತ್ರಕರ್ತರು/ಸಾಹಿತಿಗಳು
ಬಸವ ವೃತ್ತ ಹತ್ತಿರ
ಉತ್ತೂರ ತಾ.ಮುಧೋಳ
ಜಿ.ಬಾಗಲಕೋಟೆ
ಮೊ.9902447371