ನಾನು ಹುಟ್ಟಿನಿಂದ ಅನಾಥನಲ್ಲ. ನನ್ನ ಜೊತೆ ಮನೆ ತುಂಬಾ ಮಂದಿ ಇದ್ದರು. ಒಬ್ಬರಾದ ನಂತರ ಒಬ್ಬರು ನನ್ನನ್ನು ಕೈಯಲೆತ್ತಿಕೊಂಡು, ನನ್ನೊಂದಿಗೆ ಸಮಯವನ್ನು ಬಹಳ ಚೆನ್ನಾಗಿ ಖುಷಿಯಾಗಿ ಕಳೆಯುತ್ತಿದ್ದರು. ಕೆಲವೊಮ್ಮೆ ನನ್ನೊಂದಿಗೆ ಕಳೆಯುವ ಸಮಯ ಅವರನ್ನೆಲ್ಲ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿತ್ತು. ಅಷ್ಟೊಂದು ಮೈಮರೆತು ನನ್ನ ಜೊತೆ ಇರುತ್ತಿದ್ದರು. ಕೆಲವರಂತೂ ನನ್ನನ್ನು ಬಿಟ್ಟು ಒಂದು ಕ್ಷಣ ಇರುತ್ತಿರಲಿಲ್ಲ. ಏಕೆಂದರೆ ಅವರಿಗೆ ಬೇಕಾದಂತಹ ಎಲ್ಲಾ ಒಳ್ಳೆಯ ಗುಣಗಳು ನನ್ನಲ್ಲಿ ಇದ್ದವು. ಒಟ್ಟಿಗೆ ಇದ್ದಾಗ ಕೆಲವೊಮ್ಮೆ ಅತ್ತಿದ್ದಾರೆ, ಕೆಲವೊಮ್ಮೆ ನಕ್ಕಿದ್ದಾರೆ. ನಾನು ಅವರನ್ನು ಭಾವನಾ ಲೋಕಕ್ಕೆ ಕರೆದೊಯ್ಯುತ್ತಿದ್ದದ್ದಂತೂ ನಿಜ. ಇಷ್ಟೆಲ್ಲ ಹೇಳಿದ ಮೇಲೂ ನಾನು ಯಾರು ಇರಬಹುದೆಂದು ತಾವೆಲ್ಲ ಊಹಿಸಿರಬಹುದು. ನಾನು ಕಣ್ರೀ… ಮೊದಲೆಲ್ಲ ತಮಗೆ ಬಹಳಾನೇ ಆಪ್ತವಾಗಿದ್ದ ಪುಸ್ತಕ. “ಪುಸ್ತಕ” ಎಂಬುದು ನನ್ನ ಹೆಸರು. ಕಣ್ಣಿಗೆ ಕಾಣದಂಗೆ ದೂರ ಹೋಗಿದ್ದ ಪುಸ್ತಕ ಮತ್ಯಾಕೆ ಬಂದಿದೆ? ಇದು ತಲೆ ತಿನ್ನೋಕೆ…. ತಲೆನೋವು ಅಂತೆಲ್ಲ ಬೈಬೇಡಿ. ನಾನು ಒಂದಿಷ್ಟು ವಿಷಯಗಳನ್ನು ತಮ್ಮಲ್ಲಿ ಕೇಳಬೇಕಿತ್ತು. ನನ್ನನ್ನು ನೀವೆಲ್ಲ ದೂರ ಮಾಡಿರುವುದಕ್ಕೆ ನನಗೆ ಬೇಜಾರಿಲ್ಲ. ಆದರೆ ದೂರ ಮಾಡಲು ಕಾರಣಗಳೇನು? ಎಂದು ತಿಳಿದುಕೊಂಡೇ ನಾನು ಇವತ್ತು ಇಲ್ಲಿಂದ ಹೋಗೋದು.
ನನ್ನಲ್ಲಿ ಏನು ಕಮ್ಮಿಯಾಗಿತ್ತು ನಿಮಗೆ? ನಿಮ್ಮ ತಾಯಿ ನಿಮಗೆ ಜನ್ಮ ಕೊಟ್ಟಿರಬಹುದು. ಆದರೆ ಆ ಜನ್ಮಕ್ಕೆ ಒಂದು ಅರ್ಥವನ್ನು ಕೊಟ್ಟಿದ್ದು ನಾನು. ನಿಮ್ಮ ಓದು-ಬರಹ, ಹಾಡು-ಕುಣಿತ, ಮಗ್ಗಿ-ಲೆಕ್ಕ, ನಾಟಕ….. ಹೀಗೆ ಎಲ್ಲದಕ್ಕೂ ನಾನೇ ಬೇಕಿತ್ತು. ನಿಮಗೆಲ್ಲ ಬೇಸರವಾಗದಿರಲಿ ಅಂತ ನಾನು ತರ ತರ ರೂಪಗಳನ್ನು ಹೊತ್ತು ಬರುತ್ತಿದ್ದೆ. ಪ್ರತಿದಿನ ಪ್ರತಿಯೊಂದರಲ್ಲೂ ಹೊಸತನದ ರುಚಿಯನ್ನು ತಮಗೆ ಉಣಬಡಿಸುತ್ತಿದ್ದೆ. ನಾನ್ಯಾವತ್ತು ನಿಮಗೆ ವಾಕರಿಕೆ ಬರುವ ಹಾಗೆ ನಿಮ್ಮೊಂದಿಗೆ ನಡೆದುಕೊಂಡಿಲ್ಲ. ಎಲ್ಲ ತರದ ರೇಟುಗಳಲ್ಲೂ ಕೂಡ ನಾನು ನಿಮಗೆ ಲಭ್ಯವಿದ್ದೆ. ಬಿಟ್ಟು ಬಿಡದೆ ನನ್ನನ್ನು ಪೂಜಿಸಿ, ಆದರಿಸಿ, ಗೌರವಿಸಿ, ಒಂದೊಳ್ಳೆ ಜೀವನವನ್ನು ಕಟ್ಟಿಕೊಂಡಿದ್ದೀರಿ. ನನ್ನನ್ನು ಎತ್ತಿಕೊಳ್ಳಿ ಅಂತ ನಾನು ಯಾವತ್ತೂ ನಿಮ್ಮ ಮುಂದೆ ಅತ್ತಿರಲಿಲ್ಲ, ರಂಪಾಟ ಮಾಡಿರಲಿಲ್ಲ.
ನಿಮಗೆ ಜ್ಞಾನದ ಹಸಿವು ಹೆಚ್ಚಾಗಿ, ಓದಬೇಕೆನ್ನುವ ದಾಹ ಉಂಟಾದರೆ, ಕ್ಷಣಮಾತ್ರದಲ್ಲಿ ನನ್ನನ್ನು ಎತ್ತಿಕೊಂಡು ಮುದ್ದಿಸುತ್ತಿದ್ದೀರಿ. ದಶಕದ ಹಿಂದಿನವರೆಗೂ ನೀವೆಲ್ಲ ನನಗೆ ತೋರಿದ ಪ್ರೀತಿಗೆ ನಾನು ಯಾವತ್ತೂ ಚಿರಋಣಿ. ನನಗೆ ಹೊಸ ಹೊಸ ಅಂಗಿಗಳನ್ನು ತೊಡಿಸಿ ಖುಷಿಪಡುತಿದ್ರಿ. ಒಂದು ಸಣ್ಣ ಧೂಳಿನ ಕಣ ನನ್ನ ಮೈಮೇಲೆ ಬಿದ್ರು ಕೂಡ ಅದನ್ನು ಪಟ್ಟನೆ ಒರೆಸಿ ಬಿಡುತ್ತಿದ್ರಿ. ನನಗಾಗಿ ನಿಮ್ಮ ಮನೆಯಲ್ಲಿ ಒಂದು ವಿಶೇಷ ರ್ಯಾಕ್ ನೇ ಮನೆಯಂತೆ ಮಾಡಿದ್ರಿ. ಮಗು ಬಿದ್ದ ತಕ್ಷಣ ಹೆತ್ತ ತಾಯಿ ಓಡೋಡಿ ಬರುವಂತೆ, ರ್ಯಾಕ್ ನಲ್ಲಿ ನಾನೇನಾದ್ರೂ ಸೊಂಟ ಜಾರಿ ಬಿದ್ರೆ, ತಕ್ಷಣ ನನ್ನನ್ನು ಎಬ್ಬಿಸಿ ನಿಲ್ಲಿಸಿ ನನಗೊಂದು ಆಸರೆ ಕೊಡುತ್ತಿದ್ರಿ. ಮತ್ತೊಮ್ಮೆ ಬೀಳದಿರಲಿ ಎನ್ನುವ ಕಾಳಜಿ ಅದಾಗಿತ್ತು. ಕೆಲವು ಸಲ ನನ್ನೊಂದಿಗೆ ಇದ್ದು ಇದ್ದು ಸಾಕಾಗಿ ಸುಖಕರ ನಿದ್ರೆಗೆ ಜಾರಿದ್ದು ಉಂಟು. ಕೆಲವರಂತೂ ನಾನು ಒಬ್ಬನೇ ಇದ್ರೆ ಬೇಜಾರು ಆಗುತ್ತೆ ಅಂತ ಪ್ರತಿದಿನ ನನ್ನಂತೆ ಇರುವ ಹೊಸ ಹೊಸ ಸ್ನೇಹಿತರನ್ನು ತಂದು ನನ್ನ ರ್ಯಾಕ್ ಮನೆಯಲ್ಲಿ ಜೋಡಿಸುತ್ತಿದ್ದರು. ಹಿರಿಯರು-ಕಿರಿಯರು ಎನ್ನುವ ಯಾವ ಭೇದ-ಭಾವವಿಲ್ಲದೆ ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದೆ.
ಆದರೆ ಸುಮಾರು ಏಳು-ಎಂಟು ವರ್ಷಗಳ ಈಚೆಗೆ ನೀವೇಕೆ ನನ್ನನ್ನು ಮೊದಲಿನ ಹಾಗೆ ಪ್ರೀತಿಸುತ್ತಿಲ್ಲ? ಮೊದಲಿನ ಹಾಗೆ ಕಾಳಜಿಯಿಂದ ಮಾತನಾಡಿಸುತ್ತಿಲ್ಲ, ನೋಡಿಕೊಳ್ಳುತ್ತಿಲ್ಲ ಏಕೆ?
ನನಗೆ ಗೊತ್ತು, ನನಗಿಂತ ನಿಮಗೆ ಬೇರೊಬ್ಬರು ಇಷ್ಟವಾಗಿದ್ದಾರೆ ಅಂತ. ಅವರ ಹೆಸರು “ಮೊಬೈಲ್” ಅಲ್ಲವೇ? ಅವರು ಈಗಿನ ಕಾಲದಲ್ಲಿ ಎಲ್ಲರ ಕೈಯಲ್ಲೂ ಸುಲಲಿತವಾಗಿ ಓಡಾಡುವ ಮಗನಂತೆ ಆಗಿಬಿಟ್ಟಿದ್ದಾರೆ. ಬರೀ ಮಗ ಅಲ್ಲ, ಮನೆ ಮಗ…. ಮನದ ಮಗ…. ಅದರಲ್ಲಿ ಬಣ್ಣ ಬಣ್ಣದ ವಿಡಿಯೋಗಳು, ಹಾಡುಗಳು, ಹರಟೆಗಳು ಎಲ್ಲವೂ ನೋಡೋಕೆ ಸಿಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಅದಕ್ಕೆ ಹೆಚ್ಚೆಚ್ಚು ದುಡ್ಡು ಕೊಟ್ಟು ಮನೆಗೆ ತಂದಿರುತ್ತೀರಿ. ಒಂದು ಕ್ಷಣ ಕೂಡ ಅದು ಕಣ್ಣೆದುರಿಗೆ ಕಾಣದೆ ಹೋದರೆ ಜೀವ ಹೋದಂತೆ ಚಡಪಡಿಸುತ್ತೀರಿ. ಬದುಕಿಗೆ ಅದು ಅನಿವಾರ್ಯವಲ್ಲ ಅಂತ ನಾನು ಯಾವತ್ತೂ ಹೇಳಲ್ಲ. ಆದರೆ ಹೆಚ್ಚು ಅನಿವಾರ್ಯವಾಗಿ ಇರಬೇಕಾದವನು ನಾನು. ಅದೂ ಜ್ಞಾನವನ್ನು ಕಟ್ಟಿಕೊಳ್ಳುತ್ತಿರುವ ಮಕ್ಕಳ ಬದುಕಿನಲ್ಲಿ ನಾನೇ ಅಗ್ರಸ್ಥಾನದಲ್ಲಿರಬೇಕು. ಅವರ ಭವಿಷ್ಯದ ಗೋಪುರಕ್ಕೆ ನಾನೊಂದು ಅಡಿಪಾಯದ ಕಲ್ಲು ಇದ್ದಂತೆ. ಇದನ್ನು ಯಾಕೋ ದೊಡ್ಡವರಾಗಲಿ, ಸಣ್ಣವರಾಗಲಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಅದು ಬಂದಾಗಿನಿಂದ ನನ್ನ ಮುಖವನ್ನು ನೋಡಲು ಕೂಡ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಮೊಬೈಲ್ ಅದೆಷ್ಟೇ ರೋಗಗಳನ್ನು ತಂದರೂ ಕೂಡ ನಿಮಗೆ ಅದೇ ಬೇಕು. ನನ್ನನ್ನು ದಿನಕ್ಕೊಮ್ಮೆಯಾದರೂ ನೋಡಿ. ನನಗೋಸ್ಕರ ಸ್ವಲ್ಪ ಸಮಯವನ್ನು ಮೀಸಲಿಡಿ. ನಾನು ನಿಮ್ಮನ್ನು ಹೆಮ್ಮೆಯಿಂದ ಬಾಳುವಂತೆ ಮಾಡುತ್ತೇನೆ ಎಂದು ಅದೆಷ್ಟೋ ಸಲ ಪರಿಪರಿಯಾಗಿ ಕೈಮುಗಿದು ಕಾಲಿಗೆ ಬಿದ್ದು ಬೇಡಿಕೊಂಡಿದ್ದೇನೆ. ಆದರೂ ನನ್ನ ಮನವಿಗೆ ಬೆಲೆ ಸಿಕ್ಕಿಲ್ಲ. ನೀವೆಲ್ಲ ಸೇರಿ ನನ್ನನ್ನು ಅದೆಷ್ಟೇ ದೂರ ಮಾಡಿದರೂ, ನನ್ನ ಬೆಲೆ ಅಂತೂ ಕಡಿಮೆ ಆಗಲ್ಲ. ಒಂದಿಲ್ಲ ಒಂದು ದಿನ ನನ್ನ ಮಾತಿಗೆ ಬೆಲೆ ಬಂದೇ ಬರುತ್ತದೆ. ಮತ್ತೇ ನಾನು ಪ್ರೀತಿಯಿಂದ ನಿಮ್ಮೆಲ್ಲರ ಕೈಯಲ್ಲಿ ಆಡಿ ಬೆಳೆಯುತ್ತೇನೆ ಎಂಬ ನಿರೀಕ್ಷೆಯಲ್ಲಿ ಸದಾ ಇರುತ್ತೇನೆ.
ಇಂತಿ ನಿಮ್ಮಿಂದ ದೂರವಾದ
ನೊಂದ ಪುಸ್ತಕ
📕📗📘📙📕📗📘📙📕
ಭುವನೇಶ್ವರಿ. ರು. ಅಂಗಡಿ
ನರಗುಂದ, ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.