ಕೆಂಪು-ಹಳದಿ ಬಾವುಟಕೆ ಕೈ ಎತ್ತಿ
ಕನ್ನಡದ ಮಕ್ಕಳೆಲ್ಲ ಜೈ ಎನ್ನಿ
ಕುವೆಂಪು ಬೇಂದ್ರೆ ಕಾರಂತರ ನಾಡಲಿ
ತಲೆಯೆತ್ತಿ ಬಾಳಲು ಸಜ್ಜಾಗಿ
ಉತ್ತರ ಕನ್ನಡ ನೋಟ ಅಂದ
ದಕ್ಷಿಣ ಕನ್ನಡದ ಮಾತು ಚೆಂದ
ಬೆಳಗಾವಿಲಿ ಸಿಗುತ್ತೆ ಕುಂದಾ
ದಾವಣಗೆರೆ ದೋಸೆ ಆಹಾ! ಆನಂದ
ನೋಡ ಬನ್ನಿ ದುರ್ಗದ ಕೋಟೆ
ಕೊಪ್ಪಳ -ರಾಯಚೂರು ಭತ್ತದ ಮೂಟೆ
ಹಂಪೆ, ಬೇಲೂರು ಕಲ್ಲಿನ ಕವಿತೆ
ಕೊಡಗಿನ ವೀರರು ರಾಷ್ಟ್ರದ ಘನತೆ
ಗಂಧದ ಗುಡಿಯ ಮಂದಿ ನಾವು
ಮೂವತ್ತೊಂದು ಜಿಲ್ಲೆಗಳ ಹೊಂದಿಹೆವು
ಒಂದೊಂದು ಭಾಗದಿ ಒಂದೊಂದು ಸಂಸ್ಕೃತಿ
ಆದರೂ ಜೊತೆಯಾಗೆ ನಡೆದಿಹೆವು
ಪಂಪ-ರನ್ನ-ಪೊನ್ನನ ಕಾವ್ಯ
ಕುಮಾರವ್ಯಾಸನ ಭಾರತ ಭವ್ಯ
ಐವತ್ತೊಂದು ಅಕ್ಷರದ ವರ್ಣಮಾಲೆ
ಬಸವಾದಿ ಶರಣರ ವಚನದ ಓಲೆ
ಚೆನ್ನಮ್ಮ-ಮಲ್ಲಮ್ಮ-ರಾಯಣ್ಣರ ನಾಡು
ಗಂಗಾಧರ ರಾಯರಂತ ಧೀರರ ಬೀಡು
ದಾಸರು ಹಾಡಿದ ಪದಗಳ ಮರ್ಮ
ಅಣ್ಣಾವ್ರ ಚಿತ್ರದಿ ತುಂಬಿದೆ ಧರ್ಮ
ಅಮ್ಮನು ಕೊಟ್ಟ ಮೊದಲನೆ ತುತ್ತು
ಬಾಯಲಿ ಬಂದ ಪದವೆ ಮುತ್ತು
ಕೋಟಿ ಕೋಟಿ ಭಾಷೆಯ ಕಲಿತರೂ
ಕನ್ನಡವೆ ನಮ್ಮ ಪ್ರೀತಿಯ ಸ್ವತ್ತು
ಡಾ.ಭವ್ಯ ಅಶೋಕ್ ಸಂಪಗಾರ್
ಬೆಳಗಾವಿ