You are currently viewing ಎಲ್ಲಿ ಹೋದವೋ ಆ ವಿಶ್ವಕೋಶಗಳು? ಕಣ್ಣಿಗೆ ಕಾಣದಾದವೋ?

ಎಲ್ಲಿ ಹೋದವೋ ಆ ವಿಶ್ವಕೋಶಗಳು? ಕಣ್ಣಿಗೆ ಕಾಣದಾದವೋ?

ಅದೇನೋ ಗೊತ್ತಿಲ್ಲ ನವೆಂಬರ್ ತಿಂಗಳು ಬಂತೆಂದರೆ ಸಾಕು, ನಮ್ಮ ಕರುನಾಡಿನಲ್ಲಿ ಸಂಭ್ರಮವೋ ಸಂಭ್ರಮ. ಏಕೆಂದರೆ ನಮ್ಮ ನಾಡಹಬ್ಬ ದಸರಾದ ಬೆನ್ನಲ್ಲೇ ಬರುವ ಮತ್ತೊಂದು ನಾಡಹಬ್ಬ ಈ ಕನ್ನಡ ರಾಜ್ಯೋತ್ಸವ. ಹಬ್ಬದ ವಾತಾವರಣ ಪ್ರತಿ ಮನೆಯಲ್ಲೂ ಪ್ರತಿ ಮನದಲ್ಲೂ ಇರುತ್ತದೆ. ಅದರಲ್ಲೂ ಕರ್ನಾಟಕ ಎಂದು ನಾಮಕರಣಗೊಂಡ ನಮ್ಮ ರಾಜ್ಯಕ್ಕೆ ಇಂದು 50 ವರ್ಷಗಳ ಸಂಭ್ರಮ. ಕರ್ನಾಟಕ ರಾಜ್ಯೋತ್ಸವದ ಈ ಶುಭದಿನದಂದು ಎಲ್ಲರಿಗೂ ಶುಭವಾಗಲಿ ಎಂದು ಶುಭಾಶಯಗಳು ತಿಳಿಸುತ್ತೇನೆ.
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಹೌದು. ನಾವೆಲ್ಲ ಇಂದು ಕನ್ನಡ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರು. ಯಾರು ಏನೇ ಹೇಳಿದರೂ ನಾವು ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಯನ್ನು ಕೂಡ ಕಲಿಸುತ್ತೇವೆ. ಮಕ್ಕಳ ಜೊತೆಯಲ್ಲಿ ಸೇರಿ ನಾವು ಮತ್ತಷ್ಟು ಕಲಿಯುತ್ತೇವೆ. ಕನ್ನಡವನ್ನು ಬೇರೆ ಅವರಿಂದ ಹೇಳಿಸಿಕೊಂಡು ನಾವು ಎಂದೂ ಪ್ರೀತಿಸಿಲ್ಲ. ಕನ್ನಡ ಎಂಬುದು ನಮ್ಮ ತನುಮನದಲ್ಲೆಲ್ಲ ಮೊದಲಿನಿಂದಲೂ ಇದೆ.

“ಅದು ಯಾಕೋ ಕಣ್ರೀ, ಇತ್ತೀಚೆಗೆ ಕನ್ನಡ ಪುಸ್ತಕದಲ್ಲಿರುವ ಯಾವ ಹಾಡುಗಳು ಅದೆಷ್ಟು ಸಲ ಓದಿದರೂ, ಅದೆಷ್ಟು ಸಲ ಗುಣುಗಿದರೂ ತಲೆಯಲ್ಲಿ ನೆನಪೇ ಉಳಿಯುತ್ತಿಲ್ಲ”. ಇದು ಬಹಳ ದಿನಗಳ ನಂತರ ಬಸ್ ನಲ್ಲಿ ಸಿಕ್ಕ ನನ್ನ ಬಾಲ್ಯದ ಸ್ನೇಹಿತರೊಬ್ಬರ ಅಭಿಪ್ರಾಯ. ಅವರು ಹೇಳಿದ್ದೆ ತಡ ನಾನು ಸುಮಾರು ಹೊತ್ತು ಯೋಚಿಸಿದೆ. ಹೌದಲ್ಲವೇ? ನಾನು ಕೂಡ ಕನ್ನಡ ಪುಸ್ತಕಗಳನ್ನು ಅದೆಷ್ಟೋ ಸಲ ಓದಬೇಕು ಎಂದುಕೊಂಡು ಕೈಯಲ್ಲಿ ಹಿಡಿದುಕೊಳ್ಳುತ್ತೇನೆ. ಹೆಚ್ಚಾನೆಚ್ಚು ಪದ್ಯಗಳ ಮೇಲೆ ಪ್ರೀತಿ ಇರುವುದರಿಂದ ಹಾಡಲು ಪ್ರಯತ್ನಿಸುತ್ತೇನೆ. ಆದರೆ ಅದೇನು ಮಾಡಿದರೂ ಯಾವ ಧಾಟಿಯೂ ಕೂಡ ಅದಕ್ಕೆ ಹೊಂದುವುದಿಲ್ಲ. ಮಕ್ಕಳಿಗೆ ಸರಳವಾಗಿ ಕಲಿಸಬೇಕೆಂದರೆ ಮೊದಲು ನನಗೆ ಬರಬೇಕು ತಾನೆ? ಅದ್ಯಾಕೋ ಬರುತ್ತಿಲ್ಲ. ಆದರೆ ನಾವು ಬಾಲ್ಯದಲ್ಲಿ ಇದ್ದಾಗ ಹೀಗೆ ಇರಲಿಲ್ಲ. ಕನ್ನಡ ಕಲಿಯುವುದೆಂದರೆ ಅದರ ಮಜವೇ ಬೇರೆಯಾಗಿತ್ತು.



ಶಾಲೆಗೆ ಹೆಸರು ಹಚ್ಚುವ ಮುನ್ನವೇ ನಮ್ಮ ಕನ್ನಡ ಕಲಿಕೆ ಪ್ರಾರಂಭವಾಗಿರುತ್ತಿತ್ತು. ಅಪ್ಪ, ಅವ್ವ, ಅಜ್ಜ, ಅಜ್ಜಿ….ಹೀಗೆ ಎಲ್ಲರೂ ಗುರುಗಳೇ. ಆರು ವರ್ಷ ತುಂಬಿ ಸಾಲಿಗೆ ಹೆಸರು ಹಚ್ಚುತ್ಲೆ ಸುಮಾರು ಏಳೆಂಟು ಸಣ್ಣ ಸಣ್ಣ ಕನ್ನಡ ಹಾಡುಗಳನ್ನು ಕಲಿತೇ ಬಿಡುತ್ತಿದ್ದೆವು. ಆಗಿನ ಅಂಗನವಾಡಿಗಳಲ್ಲಿ
ಒಂದು ಎರಡು
ಬಾಳೆಲೆ ಹರಡು
ಮೂರು ನಾಲ್ಕು
ಅನ್ನವ ಹಾಕು…. ಎನ್ನುವ ಹಾಡು ಮಾಮೂಲಿ ಆಗಿತ್ತು. ಜೊತೆ ಜೊತೆಗೆ ಮನೆಯಲ್ಲಿ ಕೆಲವು ಸಣ್ಣ ಪುಟ್ಟ ಕಥೆಗಳನ್ನು ಕಲಿಯುತ್ತಿದ್ದೆವು. ಕಾಗೆಯ ಕಥೆ, ನರಿ ಮತ್ತು ದ್ರಾಕ್ಷಿಹಣ್ಣಿನ ಕಥೆ, ಆಮೆ ಮತ್ತು ಮೊಲದ ಕಥೆ….ಇವೆಲ್ಲ ಆಗಿನ ಕಾಲದಲ್ಲಿ ಟ್ರೆಂಡ್ ಮಾಡಿದ್ದ ಕಥೆಗಳು. ಎಬ್ಬಿಸಿ ನಿಲ್ಲಿಸಿ ಕೈಕಟ್ಟಿ ಕಥೆ ಹೇಳು ಎಂದರೆ ನಾವು ಈಗಲೂ ಈ ಕಥೆಗಳನ್ನು ಹೇಳಬಲ್ಲೆವು. ಅಷ್ಟೊಂದು ಅಚ್ಚಳಿಯದಂತೆ ಸ್ಮೃತಿಪಟಲದಲ್ಲಿ ಅಚ್ಚೊತ್ತಿವೆ. ಇನ್ನು ಆವಾಗಿನ ವಿಶ್ವಕೋಶಗಳೆಂದರೆ ಒಂದು ರೂಪಾಯಿನೋ ಅಥವಾ ಐವತ್ತು ಪೈಸೆನೋ ಕೊಟ್ಟು ಖರೀದಿ ಮಾಡುತ್ತಿದ್ದ ಆ ಅಂಕಲಿಪಿಗಳು. ಅದರಲ್ಲಿ ಏನೆಲ್ಲಾ ಇರುತ್ತಿತ್ತು. ಮೂಲಾಕ್ಷರಗಳು, ಕಾಗುಣಿತಗಳು, ಅರ್ಕಾವಳಿ ಅನುಸ್ವಾರ ಶಬ್ದಗಳು, ಮಾಸಗಳು, ಹುಣ್ಣಿಮೆಗಳು, ಋತುಗಳು ದಿನಗಳು, ಇಂಗ್ಲೀಷ್ ತಿಂಗಳುಗಳು, ಅಮವಾಸ್ಯೆಗಳು, ನಕ್ಷತ್ರಗಳು, ತಿಥಿಗಳು, ಅಳತೆಗಳು, ಒತ್ತಕ್ಷರಗಳು, ಹಾಡುಗಳು, ಕಥೆಗಳು, ಗಾದೆಮಾತುಗಳು…. ಹೇಳುತ್ತಾ ಹೋದರೆ ಈ ಲಿಸ್ಟ್ ಮುಗಿಯುವುದಿಲ್ಲ. ನಿಜವಾಗ್ಲೂ ಆ ಅಂಕಲಿಪಿ ಸೃಷ್ಟಿಕರ್ತನಿಗೊಂದು ದೊಡ್ಡ ಸಲಾಂ. ಏಕೆಂದರೆ ಅಂದಿನ ಕಾಲದ ಎನ್ ಸೈಕ್ಲೊಪಿಡಿಯ ಎಂದರೆ ಅಂಕಲಿಪಿ ಆಗಿತ್ತು. ಪಾಟಿ ಮತ್ತು ಪೇಣೆ(ಬಳಪ) ಜೊತೆ ಖರೀದಿ ಮಾಡುತ್ತಿದ್ದ ಮೂಲಭೂತ ಕಲಿಕಾ ಸಾಧನವಾಗಿತ್ತು. ತರಗತಿಯ ಎಲ್ಲಾ ಪಠ್ಯಪುಸ್ತಕಗಳನ್ನು ತಕ್ಕಡಿಯಲ್ಲಿ ಒಂದು ಕಡೆ ಇಟ್ಟು ಮತ್ತೊಂದು ಕಡೆ ಅಂಕಲಿಪಿಯನ್ನು ಇಟ್ಟು ತೂಗಿದರೆ ಅಂಕಲಿಪಿಯಲ್ಲಿರುವ ಜ್ಞಾನವೇ ಹೆಚ್ಚು ಭಾರವಾಗಿರುತ್ತಿತ್ತು. ಒಂದು ಮಗುವಿನ ನಿತ್ಯ ಜೀವನಕ್ಕೆ ಬೇಕಾದ ಎಲ್ಲಾ ಅಂಶಗಳು ಅದರಲ್ಲಿ ಇರುತ್ತಿದ್ದವು. ಅಷ್ಟು ದೊಡ್ಡ ಕಥೆ ನಮ್ಮ ಅಂಕಲಿಪಿದು. ಇನ್ನು ಕನ್ನಡ ಪುಸ್ತಕವೆಂದರೆ ಎಲ್ಲಾ ಪುಸ್ತಕಗಳಿಗಿಂತಲೂ ಅದೇನೋ ಸ್ವಲ್ಪ ಹೆಚ್ಚು ಖುಷಿ. ಯಾವಾಗಲೂ ಪಾಟಿಚೀಲದಲ್ಲಿ ಅದನ್ನೇ ಮೇಲಿಡುತ್ತಿದ್ದೆವು. ತರಗತಿಗೆ ಶಿಕ್ಷಕರು ಬರುವುದು ಸ್ವಲ್ಪ ತಡವಾದರೂ ಸಾಕು ಪಟ್ಟನೆ ನಮ್ಮ ಕೈಗೆ ಬರುತ್ತಿದ್ದುದು ಕನ್ನಡ ಪುಸ್ತಕ ಮಾತ್ರ. ಮಕ್ಕಳೇ ಓದಿಕೊಳ್ಳಿ ಎಂದು ಶಿಕ್ಷಕರು ಹೇಳಿದರೆ ಸಾಕು, ನಮ್ಮ ಕೈ ಮತ್ತೆ ಮತ್ತೆ ಹೋಗುತ್ತಿದ್ದುದು ಅದೇ ಕನ್ನಡ ಪುಸ್ತಕಕ್ಕೆ. ಉಳಿದ ಪುಸ್ತಕಗಳು ಅದು ಏನು ಪಾಪ ಮಾಡಿದ್ದವೋ ಗೊತ್ತಿಲ್ಲ. ಕನ್ನಡ ಪುಸ್ತಕದ ದರ್ಶನವಾದಷ್ಟು ಉಳಿದ ಪುಸ್ತಕಗಳ ದರ್ಶನ ಆಗುತ್ತಿರಲಿಲ್ಲ. ಗುರುಗಳು ಯಾವುದಾದರೂ ಒಂದು ಪದ್ಯವನ್ನು ಕಲಿಸಿ ಹೋದರೆ ಸಾಕು, ತಿರುಗ ಮುರುಗ ಅದನ್ನು ಓದಿ ಓದಿ ಆ ಪದ್ಯ ಬರುವ ತನಕ ಬಿಡುತ್ತಿರಲಿಲ್ಲ. ಶಿಕ್ಷಕರು ಹೇಳಿಕೊಟ್ಟ ಧಾಟಿ ಬರದೇ ಇದ್ದರೂ ಪರವಾಗಿಲ್ಲ, ಕೊನೆಗೆ ಆ ಪದ್ಯಕ್ಕೆ ನಮ್ಮದೇ ಒಂದು ಧಾಟಿಯನ್ನು ಹಚ್ಚಿ ಹಾಡುತ್ತಿದ್ದೆವು.
ಹೂವನು ಮಾರುತ ಹೂವಾಡಗಿತ್ತಿ
ಹಾಡುತ ಬರುತಿಹಳು…. ಈ ಹಾಡಿನ ಮೇಲಂತೂ ಹೆಣ್ಣು ಮಕ್ಕಳಿಗೆ ಅದೇನೋ ವಿಶೇಷ ಪ್ರೀತಿ. ಅಭಿನಯದೊಂದಿಗೆ ಈ ಹಾಡನ್ನು ಲೆಕ್ಕವಿಲ್ಲದಷ್ಟು ಸಲ ಹಾಡಿದ್ದು ಉಂಟು. ಆ ಹಾಡುಗಳನ್ನು ಹಾಡಲು ಯಾವ ಸಂಗೀತ ತರಗತಿಗಳ ಅವಶ್ಯಕತೆಯೂ ಇರಲಿಲ್ಲ.
ಕೆಲವೊಮ್ಮೆ ನಮ್ಮ ಕನ್ನಡ ಪುಸ್ತಕಗಳು ವಿಭೂತಿ, ಕುಂಕುಮ ಹಚ್ಚಿಕೊಂಡು ಪೂಜೆಯನ್ನು ಕೂಡ ಕಾಣುತ್ತಿದ್ದವು. ಅದು ಯಾವಾಗ ಅಂತೀರಾ? ಆಯುಧ ಪೂಜೆಯ ದಿನದಂದು ಸರಸ್ವತಿ ಪೂಜೆ ಮಾಡುವಾಗ. ಅದರಲ್ಲೂ ಕನ್ನಡ ಪುಸ್ತಕ ಮೇಲೆ ಇರಬೇಕಿತ್ತು. ಅದಕ್ಕಾಗಿ ಒಮ್ಮೊಮ್ಮೆ ಮನೆಯಲ್ಲಿ ಅಣ್ಣ ಮತ್ತು ತಮ್ಮನ ಜೊತೆ ಜಗಳ ಮಾಡಿದ್ದು ಉಂಟು. ಕೆಲವೊಂದು ಸಲ ಊರಲ್ಲಿ ಯಾವುದಾದರೂ ಕಾರ್ಯಕ್ರಮವಿದ್ದರೆ ಕನ್ನಡ ಪುಸ್ತಕದಲ್ಲಿನ ಅದೆಷ್ಟೋ ಹಾಡುಗಳು ಪ್ರೇಕ್ಷಕರಿಗೆ ಮನೋರಂಜನೆಯನ್ನು ಕೊಡುತ್ತಿದ್ದವು. ವೇದಿಕೆಯ ಮೇಲೆ ಮೈಕ್ ಸುಮ್ಮನೆ ನಿಂತಿದ್ದರೆ ಸಾಕು, ಕಾರ್ಯಕ್ರಮ ಪ್ರಾರಂಭವಾಗುವ ತನಕ ಗೆಳತಿಯರೊಂದಿಗೆ ಗೆಳೆಯರೊಂದಿಗೆ ಒಂದು ತಂಡ ಮಾಡಿಕೊಂಡು ಊರ ಜನ ಎಲ್ಲ ಸಾಕು ಅನ್ನೋ ತನಕ ಹಾಡಿದ್ದೇ ಹಾಡಿದ್ದು. ಊರ ಜನ ಎಲ್ಲ ಶಹಬ್ಬಾಶ್! ಎಂದಿದ್ದೇ ಎಂದಿದ್ದು. ಅಷ್ಟು ಪ್ರೀತಿ ಕನ್ನಡ ಹಾಡುಗಳೆಂದರೆ. ಆದರೆ ಇಂದು ಕನ್ನಡ ಹಾಡುಗಳೆಂದರೆ ಅಷ್ಟು ಮನ ಮುಟ್ಟುತ್ತಿಲ್ಲ. ಕಲಿಸಲು, ಕಲಿಯಲು ಬಹಳ ಕ್ಲಿಷ್ಟವಾಗಿವೆ. ಕೆಲವು ಪದಗಳ ಬಳಕೆಯಂತೂ ಮಕ್ಕಳಿಗೆ ಅರ್ಥವೇ ಆಗುತ್ತಿಲ್ಲ. ಮಕ್ಕಳಿಗೆ ಅರ್ಥವಾದರೆ ತಾನೇ ಅವರು ಇಷ್ಟಪಟ್ಟು ಕಲಿಯುವುದು. ಕಲಿತಿದ್ದನ್ನು ರೂಢಿಸಿಕೊಳ್ಳುವುದು. ಆದರೆ ಇಂದು ಕನ್ನಡವು ಕೂಡ ಯಾಕೋ ಕಗ್ಗಂಟಾಗುತ್ತಿದೆ. ಅಂಕಲಿಪಿಗಳ ಬಳಕೆಯಂತೂ ಸಂಪೂರ್ಣವಾಗಿ ನಿಂತೇ ಹೋಗಿದೆ. ಮಕ್ಕಳು ಕನ್ನಡ ಹಾಡುಗಳನ್ನು ಮನಸು ಬಿಚ್ಚಿ ಹಾಡಲು ಮುಜುಗರಪಡುತ್ತಿದ್ದಾರೆ. ಒತ್ತಡಕ್ಕೆ ಸಿಲುಕಿಸಿ ಕಂಠಪಾಠ ಹಾಕಿಸಿ ಕಲಿಸಲು ಹೋದರೂ ಕೂಡ ಕಲಿಸಲು ಆಗುತ್ತಿಲ್ಲ. ಪರೀಕ್ಷೆಯಲ್ಲಿ ಕೇವಲ ನಾಲ್ಕು ಅಥವಾ ಐದು ಅಂಕಗಳನ್ನು ಗಳಿಸಲು ಮಾತ್ರ ಹಾಡುಗಳು ಸೀಮಿತವಾಗಿವೆ. ಕನ್ನಡ ಶಾಲೆಗಳ ಮಕ್ಕಳೇ ಕನ್ನಡ ಹಾಡುಗಳನ್ನು ಹಾಡದಿದ್ದರೆ ಕನ್ನಡವಾದರೂ ಉಳಿದೀತು ಹೇಗೆ?
ಅಂದಿನ ಶಿಕ್ಷಕರು ತರಗತಿ ಮುಗಿದ ನಂತರ ಅದೆಷ್ಟೋ ಕಥೆಗಳನ್ನು ಮಕ್ಕಳಿಗೆ ಹೇಳುತ್ತಿದ್ದರು. ಅದರಿಂದಲೂ ಕೂಡ ಏನೋ ಒಂದು ನೀತಿಯು ಕಲಿಕೆ ಆಗುತ್ತಿತ್ತು. ಆದರೆ ಇಂದು ಅವೇ ಕಥೆಗಳನ್ನು ಹೇಳಲು ಹೋದರೆ ಮಕ್ಕಳು ಆಸಕ್ತಿ ತೋರಿಸುವುದಿಲ್ಲ. ಅದ್ಯಾಕೋ ಗೊತ್ತಿಲ್ಲ? ಬಹುಶಃ ಕಾಲ ಬದಲಾಗಿದೆ ಎಂಬುದು ಕೂಡ ಒಂದು ಕಾರಣವಾಗಬಹುದು. ವಾರ್ಷಿಕ ಸ್ನೇಹ ಸಮ್ಮೇಳನಗಳಲ್ಲಿ ನಾಟಕಗಳಂತೂ ಮಾಯವಾಗಿವೆ. ಏನಿದ್ದರೂ ಚಲನಚಿತ್ರ ಗೀತೆಗಳಿಗೆ ಇರುವಷ್ಟು ಪ್ರಾಮುಖ್ಯತೆ ಬೇರೆ ಹಾಡುಗಳಿಗೆ ಇಲ್ಲ.
ಎಲ್ಲರೂ ಸೇರಿ ಕನ್ನಡವನ್ನು ಉಳಿಸುವುದು ಬೆಳೆಸುವುದು ಒಪ್ಪುವಂತಹ ವಿಷಯ. ಆದರೆ ಮೊದಲು ಪ್ರತಿ ಮನೆ ಮನೆಯಲ್ಲೂ ಕನ್ನಡ ಅಭಿಮಾನದ ಬೀಜವನ್ನು ಬಿತ್ತಿದಾಗ ಮಾತ್ರ ಅದು ಮುಂದೆ ಒಂದು ದಿನ ಬೆಳೆದು ಹೆಮ್ಮರವಾಗಬಲ್ಲದು. ಮನೆಯಲ್ಲಿರುವ ಮಕ್ಕಳಿಗೆ ಕನ್ನಡದ ಹಾಡುಗಳು, ಕನ್ನಡದ ಕಥೆಗಳು, ಕನ್ನಡದ ನಾಟಕಗಳು ಮುಂತಾದವುಗಳ ಪುಸ್ತಕಗಳನ್ನು ಓದಿಸಿ. ಜೊತೆಗೆ ನೀವು ಓದಿ. ಮಕ್ಕಳಿಗೆ ಕನ್ನಡವನ್ನು ಬರೆಯಲು ರೂಢಿ ಮಾಡಿಸಿ. ಕನ್ನಡವನ್ನು ನೀವು ಪ್ರೀತಿಸಿದರೆ ತಾನೇ ಮತ್ತೊಬ್ಬರಿಗೆ ಪ್ರೀತಿಸು ಎಂದು ಹೇಳಲು ಸಾಧ್ಯವಾಗುವುದು. ಅಭಿಮಾನ ಎನ್ನುವುದು ಮಾತಲ್ಲಿ ಬೇಡ, ಕೃತಿಯಲ್ಲಿ ಇರಲಿ.

ಜೈ ಕರ್ನಾಟಕ!!! ಜೈ ಕನ್ನಡಾಂಬೆ!!!

ಭುವನೇಶ್ವರಿ. ರು. ಅಂಗಡಿ
ನರಗುಂದ, ಗದಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.