ಸೃಷ್ಟಿಯ ಮೂಲ ಹೆಣ್ಣು. ಹೆಣ್ಣಿಲ್ಲದೆ ಜಗವು ಶೂನ್ಯ ಅಂತೆಯೇ ಹೆಣ್ಣನ್ನು ಆದಿಶಕ್ತಿ, ಪರಾಶಕ್ತಿಯ ಮೂಲ ಎನ್ನುವರು. ಹೆಣ್ಣಿಂದಲೇ ಲೋಕ, ಹೆಣ್ಣಿಂದಲೇ ನಾಕ, ಹೆಣ್ಣಿಂದಲೇ ಶೋಕ. ಹೆಣ್ಣು ಗಂಡು ಒಂದೇ ನಾಣ್ಯದ ಎರಡು ಮುಖಗಳು. ಸಂಸಾರ ಎಂಬ ಒಂದೇ ರಥದ ಎರಡು ಗಾಲಿಗಳು. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲ ನಾಗರಿಕತೆಗಳು ಬೆಳೆದು ಬಂದದ್ದು ನದಿಯ ತೀರದಲ್ಲಿ. ಋಷಿ ಮೂಲ ನದಿ ಮೂಲ ಸ್ತ್ರೀ ಮೂಲ ಕೆದಕ ಬಾರದೆಂದು ತಾತ್ವಿಕರು ಹೇಳಿದ ಒಂದು ನೆನಪು.
ವೇದಗಳ ಕಾಲದಲ್ಲಿ ಹೆಣ್ಣಿಗೆ ಶಿಕ್ಷಣದ ಪ್ರಾಮುಖ್ಯತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿರುವುದಿಲ್ಲ, ನೀಡಿದ್ದರೂ ಸಹಿತ ಕೇವಲ ಬೆರಳೆಣಿಕೆಯ ಸ್ತ್ರೀಯರಿಗೆ ಮಾತ್ರ. ಇಂಥ ಒಂದು ಅಸಮಾನತೆಯ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಆದ್ಯತೆಯನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಆಧುನಿಕತೆ ಬೆಳೆದಂತೆಲ್ಲ ಸ್ತ್ರೀಯು ಸರ್ವರಂಗಗಳಲ್ಲಿ ಪ್ರಮುಖ ಪಾತ್ರಧಾರಿ ಆಗಿದ್ದಾಳೆ. ಗಂಡಿಗೆ ಸರಿ ಸಮಾನವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ತಾನು ಅಬಲೆಯಲ್ಲ ಸಬಲೆ ಎಂದು ಸಾಬೀತು ಮಾಡಿದ್ದಾಳೆ. ಸುಸಂಸ್ಕೃತ ಸುಶಿಕ್ಷಿತ ಹಲವಾರು ಮಹಿಳೆಯರು ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. “ಯತ್ರ ನಾರ್ಯಸ್ತು ಪೂಜ್ಯಂತೆ, ತತ್ರ ರಮಂತೆ ದೇವತಹಃ ” ಎಂದು ಇತಿಹಾಸಕಾರ ಮನು ಹೇಳಿದ್ದಾರೆ ಅಂದರೆ ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬುದೇ ಇದರ ಅರ್ಥ. ಹೆಣ್ಣನ್ನು ತಾಯಿ, ಸಹೋದರಿ, ಮಡದಿ, ಮಗಳು, ಸಹೋದ್ಯೋಗಿ, ಸಹಪಾಠಿ, ವಿವಿಧ ರೂಪಗಳಲ್ಲಿ ಅತ್ಯಂತ ಗೌರವದಿಂದ ಕಾಣುವಂತಹ ಸಂಸ್ಕಾರ ಮತ್ತು ಸಂಸ್ಕೃತಿ ನಮ್ಮ ಭಾರತೀಯರದು . ಹೀಗಾಗಿ ನಮಗೆ ಆಶ್ರಯವಿಟ್ಟ ರಾಷ್ಟ್ರವನ್ನು ಭಾರತ ಮಾತೆ ಎಂದು ಪೂಜಿಸುತ್ತೇವೆ. ಸುತ್ತಮುತ್ತಲು ಹರಿಯುವಂತ ಪುಣ್ಯ ನದಿಗಳನ್ನು ಸ್ತ್ರೀಯ ರೂಪದಲ್ಲಿ ಪೂಜಿಸುತ್ತೇವೆ, ಗಂಗಾ, ಯಮುನಾ, ಸರಸ್ವತಿ, ಕಾವೇರಿ, ಶರಾವತಿ, ನೇತ್ರಾವತಿ……ಹೀಗೆ ಹೆಸರಿಸಬಹುದು. ನೋಡುವ ದೃಷ್ಟಿ ಬದಲಾದರೆ ನಮ್ಮ ಕಣ್ಣೆದುರಿಗೆ ಇರುವ ಸೃಷ್ಟಿ ಬದಲಾಗುವುದು. ಭಾವದಂತೆ ದೈವ ಈ ಸೃಷ್ಟಿ ಮತ್ತು ದೃಷ್ಟಿ ಒಂದಾದಾಗಲೇ ಸಮಷ್ಟಿ. ಈ ಜಗವೂ ಪರಮಾನಂದ ಎನಿಸುವುದು. ಎಲ್ಲದರಲ್ಲೂ ನ್ಯೂನ್ಯತೆಯನ್ನು ಹುಡುಕುವ ಮನಸ್ಥಿತಿಯನ್ನು ಬಿಟ್ಟು ಧನಾತ್ಮಕ ಅಂಶಗಳನ್ನು ಗುರುತಿಸಿ, ಸಾಧ್ಯವಾದರೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಅದಕ್ಕಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಹೆಣ್ಣಿಗೆ ಸಮಾನತೆಯನ್ನು ನೀಡಲಾಗಿದೆ. ಶಿಕ್ಷಣದಲ್ಲಿ ಸಹಿತ ಇದನ್ನು ಬೆಂಬಲಿಸುವಂತೆ ಸಾಕಷ್ಟು ಯೋಜನೆಗಳು ಅನುಷ್ಠಾನದಲ್ಲಿವೆ.
ಭೇಟಿ ಪಡಾವೋ ಭೇಟಿ ಬಚಾವೋ
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಇತ್ಯಾದಿ ಯೋಜನೆಗಳು ಅತ್ಯಂತ ಅರ್ಥಪೂರ್ಣವಾಗಿವೆ. ನನ್ನ ದೃಷ್ಟಿಯಲ್ಲಿ ಹೆಣ್ಣೆಂದರೆ ತ್ರಿಮೂರ್ತಿಗಳ ಶಕ್ತಿಯನ್ನು ಒಂದರಲ್ಲಿಯೇ ವಿಲೀನಗೊಳಿಸಿ ಒಂದು ಅತ್ಯದ್ಭುತವಾದಂತಹ ಶಕ್ತಿಯನ್ನು ರೂಪುಗೊಳಿಸಿದ ತ್ರಿಶಕ್ತಿ. ಈ ತ್ರಿಶಕ್ತಿಯೇ.. ಸ್ತ್ರೀಶಕ್ತಿ ಎಂದರೆ ತಪ್ಪಾಗಲಾರದು. ಎಲ್ಲ ಮಹಿಳೆಯರು ಕೆಟ್ಟವರು ಆಗಿರುವುದಿಲ್ಲ ಕೆಲವೊಂದು ಪರಿಸ್ಥಿತಿಗಳು ಸಂದರ್ಭಗಳು ಅವರನ್ನು ಆ ರೀತಿ ಮಾಡಿರುತ್ತವೆ. ಹಾಗೆಯೇ ಎಲ್ಲ ಗಂಡಸರೂ ಸಹಿತ ಕೆಟ್ಟವರಾಗಿರುವುದಿಲ್ಲ, ಅವರಿಗೂ ಸಹಿತ ಕೆಲವೊಂದಷ್ಟು ಸಂದಿಗ್ಧ ಪರಿಸ್ಥಿತಿಗಳು ಸಂದರ್ಭಗಳು ಕೆಟ್ಟವರನ್ನಾಗಿ ಮಾಡಿರುತ್ತವೆ. ಆದ್ದರಿಂದ ಈ ಲೋಕದಲ್ಲಿ ಜನಿಸುವ ಯಾವುದೇ ಮಗು ಹೆಣ್ಣಿರಲಿ ಗಂಡಿರಲಿ ಜನ್ಮತಹ ಕೆಟ್ಟವರಾಗಿರುವುದಿಲ್ಲ. ಅವರವರು ಬೆಳೆದು ಬಂದ ಪರಿಸರ ಅವರವರ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗಿರುತ್ತದೆ ಎಂಬುದೇ ನನ್ನ ಅಭಿಪ್ರಾಯ.
ಈರಪ್ಪ ಬಿಜಲಿ
ಕೊಪ್ಪಳ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ