“ನೀರು ಹೇರಳ ಇರಲು , ಕುರುಕಲು ತಿಂಡಿ- ಬಿಸಿ ಬಿಸಿ ಕಾಫಿ ಇರಲು, ಚಳಿ ಕಾಯಿಸಲು ಉರುವಲಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ …….”
ಮೈತುಂಬ ಉಣ್ಣೆ ಬ ಟ್ಟೆ , ತಲೆಗೆ ಸ್ಕಾರ್ಫು, ಮೆತ್ತನೆ ಹಾಸಿಗೆ……ಎಂಟಾದರೂ ಹಾಸಿಗೆಯನ್ನು ಬಿಗಿದಪ್ಪಿ,ಅಪ್ಪಿ, ಮಲಗುವ ಸುಖ, ಬಿಸಿ ಬಿಸಿ ಕಾಫಿ ಪರಿಮಳ ,ಮೈ ಗೆ ತುಂಬಾ ಹಿತ ನೀಡುವ ಆ ಸೂರ್ಯ ಕಿರಣಗಳ ಚುಂಬನ…..ಆಹಾ! ಸ್ವರ್ಗ ಸುಖ. ಅದರಲ್ಲೂ ನಮ್ಮ ಉತ್ತರ ಕರ್ನಾಟಕ ಚಳಿ ಪರಮಾನಂದ. ಬೆಳಿಗ್ಗೆ ಮೈ ಕೊರೆವ ಚಳಿ, ಮದ್ಯಾನ್ಹ ಒಳ್ಳೆ ಬಿಸಿಲು. ಆಬಿಸಿಲಿಗೆ ಕಾಯ್ವ ಬಿಸಿ ಬಿಸಿ ನೀರಿನ ಅಭೂತಪೂರ್ವ ಸ್ನಾನ. ಮಲೆ ನಾಡಲ್ಲೋ ಕಟ್ಟಿಗೆಯ ಉರಿಯಿಂದ ನೀರು ಕಾಯಿಸುವುದೇ ತುಂಬಾ ಹಿತ. ಕಾಯಿಸುವವರಿಗೂ ಹುರುಪು, ಸ್ನಾನ ಮಾಡುವವರಿಗೂ ಹುರುಪು. ಹೊರಗಡೆ ಪಾಳಿ ಹಚ್ಚಿದವರು ಮಾತ್ರ ಪಾಪಿಗಳು…! ಚಳಿ ಮತ್ತು ಬಿಸಿಗಳ ಸಮಾಗಮ ಅವರ್ಣನೀಯ.
ಆದರೂ ಎಲ್ಲೋ ಒಂದುಕಡೆ ನನಗಷ್ಟೇ ಕಿರಿ ಕಿರಿ. ಬೆಳಿಗ್ಗೆ ಬೇಗನೇ ಏಳಲೇ ಬೇಕಲ್ಲ. ….! ಅಷ್ಟೊಂದು ಚಳಿಯಲ್ಲಿ ಮನೆಯವರು ,ಮಕ್ಕಳು ಬ್ಲ್ಯಾಕೆಂಟ್ ಗಳ ಗಾಢ ಆಲಿಂಗನ ದಲ್ಲಿ ಮಲಗಿರಲು , ನಾವು ಗೃಹಿಣಿಯರು …ಚಳಿಯನ್ನು ಕೊಡವಿ ಏಳಲೇ ಬೇಕಲ್ಲ…! ಐದು ಗಂಟೆಗೇ ಚಳಿಯಲ್ಲಿ ತರ ತರ ನಡಗುತ್ತ , ಅಂತರಿಕ್ಷಯಾನಿಗಳಂತೆ ವೇಷ ಧರಿಸಿ ನಮ್ಮ ಕಾಯಕ ಪ್ರಾರಂಭಿಸಲೇ ಬೇಕು. ಬೆಡ್ ರೂಮ್ ನಿಂದ ತೂರಿ ಬರುವ ಇವರ ಗೊರಕೆ ಶಬ್ದ ಮಾತ್ರ ನನ್ನನ್ನು ಗೇಲಿ ಮಾಡುತ್ತಲೇ ಇರುತ್ತದೆ….! ಮುದ್ದು ಮಕ್ಕಳೋ ಹಾಸಿಗೆ ಪೂರ್ತಿ ಹುಡುಕಾಡಿದಾಗ ಯಾವುದೋ ಮೂಲೆಯಲ್ಲಿ ತಮ್ಮ ಅಂಗಾಂಗಳನ್ನು ಚಲ್ಲಾಪಿಲ್ಲಿ ಮಾಡಿದ ಸ್ಥಿತಿಯಲ್ಲಿ ಸಿಗುತ್ತಾರೆ. ಅವರಿಗೆ ಮಾತ್ರ ಸಂಪೂರ್ಣ ಬ್ಲ್ಯಾಂಕೆಟ್ ಹೊದಿಸಿ “ ಮಲಗು ಕಂದಾ ಮಲಗು ….” ಎಂದು (ಎದ್ದರೆ ಮನೆ ರಣರಂಗ ಇಲ್ಲವೇ ಆಟದ ಬಯಲು…) ಒಂದು ಮಲ್ಲಿಗೆ ನಗೆ ಬೀರಿ , ಮತ್ತೆ ಗೊರಕೆ ಕೇಳಿದ ತಕ್ಷಣ ,ಇರದ ನನ್ನ ಭಾಗ್ಯ ಕೆ ಶಪಿಸಿ ಮತ್ತೆ ಗಟ್ಟಿ ಮನಸು ಮಾಡಿ ಎಂಟೆದೆ ಬಂಟಳಾಗಿ ಅಡುಗೆ ಮನೆ ಪ್ರವೇಶಿಸಲೇ ಬೇಕು. ಮನುಷ್ಯರೇ ಏಕೆ ಸ್ಕೂಟರ್ಗಳು, ಬೈಕ್ ಗಳು …..ಅವುಗಳೂ ಬೇಗನೇ ಏಳುವುದಿಲ್ಲ. ಮಾಲೀಕರಿಂದ ಎಷ್ಟು ವದೆ ತಿಂದರೂ ಕೆಲವೊಮ್ಮೆ ಜುಮ್ ಎನ್ನುವುದಿಲ್ಲ.
ಚಳಿಗಾಲದಲ್ಲಿ ಬಿಸಿ,ಬಿಸಿ ಊಟ ಸವಿಯುವ ಆನಂದವೇ ಬೇರೆ….!(ಮಾಡುವ ಕಷ್ಟ ಅದು ಬೇರೆ…!) ಎಲ್ಲರಿಗೂ ಎಲ್ಲ ಹೊತ್ತಿನಲ್ಲೂ ಬಿಸಿ ಬಿಸಿ ಊಟ ಬೇಕು. ಬಿಸಿ ಬಿಸಿ ಕಾಫಿ,ಟೀ… ಆಗಾಗ… ಇನ್ನು ಊಟದ ಜೊತೆ ನಂಜಲು ಕುರು ಕುರು ಹಪ್ಪಳ, ಸಂಡಿಗೆಯ ಸಪ್ಪಳ ಚಳಿಗಾಲದಲ್ಲಿ ತುಸು ಹೆಚ್ಚೇ….. ಆದರೆ ಮಾಡುವವರ ಸೊಂಟ ಗಟ್ಟಿ ಇರಬೇಕಷ್ಟೇ….!
ಹೊತ್ತು ಏರಿದಂತೆಲ್ಲ ಬೆಳ್ಳನೇ ಬೆಳಕು, ಸೂರ್ಯ ಸ್ನಾನಕ್ಕೆ ಕೈ ಮಾಡಿ ಕರೆಯುತ್ತದೆ. ಹೊರಗೆ ಹೊರಟರೆ ಮಾತ್ರ ಕೈ ಕಾಲು, ಮುಖದ ಚರ್ಮಗಳು ಬರಗಾಲದ ಹೊಲದಂತೆ ಬಿರಿತು , ಚುಟು ಚುಟು ಎನ್ನಲು ಪ್ರಾರಂಭಿಸ ಬೇಕೇ…! ಒಮ್ಮೆ ತುರುಸಿದರೆ ಮತ್ತೆ ಮತ್ತೆ ತುರಿಸಬೇಕು ಎನಿಸುತ್ತ, ನಾವು ಯಾರ ಮಧ್ಯ, ಎಲ್ಲಿದ್ದೇವೆ ಎಂಬ ಪರಿವೆಯನ್ನೇ ಮರೆಸಿ ಮತ್ತೆ ಮತ್ತೆ ಮೈ ಗಾಯವಾದರೂ ಬಿಡದ ಹಾಗೆ ತುರಿಸುವುದಂತೂ ಬಲು ಮೋಜು. ಚರ್ಮಕ್ಕೆ ಎಣ್ಣೆ, ಕೋಲ್ಡಕ್ರೀಂ, ವ್ಯಾಸಲೀನ್ ಇಲ್ಲದಿದ್ರೆ…ಅವನ್ನು ಪಡೆಯಲು ಆ ಕ್ಷಣಕ್ಕೆ ಏನಾದರೂ ಮಾಡಲೂ ಸರಿಯೇ…..! ಆ ತುರಿತದ ತೀವ್ರತೆಯೇ ಹಾಗೇ. ಇನ್ನು ತಲೆಯಲ್ಲಿ ಫಂಗಲ್ ಇನ್ಫೆಕ್ಷನ್ ಹೆಚ್ಚಾಗಿ ಅದು ಯಾವುದೇ ಭರಪೂರ ಕಾರ್ಯಕ್ರಮವೇ ಇರಲಿ , ಪ್ರಧಾನಿಯೇ ಮುಂದಿರಲಿ ತಲೆ ಕೆರೆಯದಿದ್ದರೆ ಸಮಾಧಾನವೇ ಇಲ್ಲ. ನಮ್ಮ ಬುದ್ದಿ ಎಷ್ಟೇ ಬುದ್ದಿ ಹೇಳಿದರೂ ಆ ಕ್ಷಣಕ್ಕೆ ತಲೆ ಕೆರೆದಾಗಲೇ ಸಮದಾನ-ಪರಮಾನಂದ. ಹೀಗೇ ಚಳಿಗಾಲಕ್ಕೂ ತುರಿಕೆಗೂ ಅದ್ಯಾವ ಜನ್ಮದ ಮೈತ್ರಿಯೋ….! ಈ ಮೈತ್ರಿಗೆ ನಮ್ಮ ಸರ್ಕಾರ ವ್ಯಾಸಲೀನ್, ಕೋಲ್ಡಕ್ರೀಂ ಭಾಗ್ಯ ಒದಗಿಸಿದರೆ ಅದೆಷ್ಟು ಚನ್ನ. ! ಯಾವಾಗಲೂ ಸಾಮಾನ್ಯವಾಗಿ ನಾವು ಪಾದಗಳನ್ನು ತುಂಬಾ ನಿರ್ಲಕ್ಷಿಸುತ್ತೇವೆ. ನಮ್ಮ ದೇಹದ ಭಾರವನ್ನು ಸಹಿಸಿ ಕಲ್ಲು, ಮಣ್ಣು ಎನ್ನದೇ ಹೊತ್ತು ತಿರುಗುವ ಪಾದ ಚಳಿಗಾಲದಲ್ಲಿ ಮುನಿಸಿಕೊಂಡು ಬಿಡುತ್ತವೆ. ಪಾದಗಳು ಸೀಳಿ, ಕೆಲವೊಮ್ಮೆ ರಕ್ತ ಕೂಡ ಬರುವುದುಂಟು. ನೋಡಲೂ ತುಂಬಾ ಅಸಹ್ಯ. ಆಗ ಶುರುವಾಗತ್ತೆ ಬಿಸಿ ನೀರಲ್ಲಿ ಕಾಲಿರಿಸಿ ಸ್ವಚ್ಛ ಗೊಳಿಸುವ ಪೆಡಿಕ್ಯೂರ್. ಆಗ ಪಾದ ನಮ್ಮನ್ನು ನೋಡಿ ಗೇಲಿ ಮಾಡುತ್ತೆ…” ದಿನಾ ಮುಖಕ್ಕೆ ಮಾತ್ರ ಒತ್ತು ನೀಡುವ ನಿಮ್ಮನ್ನು ಹೇಗೆ ಕಾಲು ಮುರಿದು ಕೂಡಿಸಿದ್ದೇನೆ ನೋಡು “ ಎಂದು….ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ….! ನಿಸರ್ಗದ ಮುಂದೆ ಎಲ್ಲವೂ ಕುಬ್ಜ.
ಇನ್ನು ಚಳಿಗಾಲ ದೇಹದಲ್ಲಿರುವ ಅಲ್ಪ ಸ್ವಲ್ಪ ನೋವುಗಳನ್ನೆಲ್ಲ ಬಡಿದೆಬ್ಬಿಸಿ ಬಿಡುತ್ತದೆ. ….! ಈಗೀಗಲಂತೂ ಎಲ್ಲೆಲ್ಲಿಯೂ ಸಂಧಿವಾತ…ಮೇಲೇನೂ ಎಳ್ಳಷ್ಟೂ ಗಾಯ ಮಾಡದೇ , ಒಳಗೊಳಗೇ ಜೀವಹಿಂಡುವ ಈ ನೋವುಗಳು ದೇಹದ ಸಂಧಿಗೊಂದಿಗಳನ್ನೆಲ್ಲ ಜಾಲಾಡಿಸಿ ಬಿಡುತ್ತವೆ.
ನೆಟ್ಟಗಿರುವವರನ್ನೆಲ್ಲ ಸೊಟ್ಟಗೆ ಮಾಡಿ , ಮರೆತು ಹೋದ ಅವ್ವ-ಅಪ್ಪ ರನ್ನು ಕ್ಷಣ ಕ್ಷಣಕ್ಕೂ ನೆನೆಸುವಂತೆ ಮಾಡುತ್ತವೆ. ಅಲೋಪತಿಯ ಗುಳಿಗೆಗಳಿಗೆ ಬಗ್ಗದ ನೋವುಗಳು ತೈಲದ ಮಸಾಜನ್ನೇ ಬಯಸುತ್ತವೆ….! ಈ ತುಂಟ ನೋವುಗಳು ಕ್ಷಣ ಕ್ಷಣ ಕ್ಕೂ ತಂಟೆ ತೆಗೆಯುವವೇ. …..! ಇನ್ನು ರಾತ್ರಿ ಮತ್ತು ನಸುಕಿನಲ್ಲಿ ವೃದ್ಧರು ಮತ್ತು ಮಕ್ಕಳ ಕೆಮ್ಮು, ನೆಗಡಿಗಳು ಚಳಿಗಾಲಕ್ಕೆ ಹಿನ್ನೆಲೆಗಾಯನ ವಿದ್ದಂತೆ. ಕೆಮ್ಮು, ನೆಗಡಿಗಳ ಔಷಧಗಳು, ನೋವು ನಿವಾರಕ ಬಾಮ್ ಗಳು, ವಿಕ್ಸ ಇವೆಲ್ಲಾ ಮನೆಯಲ್ಲಿ ಸ್ಟಾಕ್ ಇರಲೇ ಬೇಕು. ನಮಗೆ ಜೀವನದಲ್ಲಿ ಯಾರೂ ಶಾಲು ಹೊದಿಸಿ ಸನ್ಮಾನ ಮಾಡಿಲ್ಲ ಎಂದು ಬೇಸರ ಪಟ್ಟುಕೊಳ್ಳುವ ಹಾಗಿಲ್ಲ. ನಮಗೆ ನಾವೇ ಶಾಲು ಹೊದಿಸಿಕೊಂಡು ಸನ್ಮಾನ ಮಾಡಿಕೊಳ್ಳುವ ಕಾಲವೇ ಚಳಿಗಾಲ. ನಮ್ಮಲ್ಲಿ, ಆತ್ಮ ಸಮ್ಮಾನ ಹೆಚ್ಚಿಸುವ ಕಾಲ…ಚಳಿಗಾಲ ಪಿಕ್ ಪಾಕೆಟ್ ನಂತಹ ಕೈಚಳಕಗಳಿಗೆ ಕಡಿವಾಣ ಹಾಕುತ್ತದೆ. ಏಕೆಂದರೆ ಎಲ್ಲರೂ ಮೈತುಂಬಾ ಹೊದ್ದು,ಜೇಬಿನಲ್ಲಿ ಕೈ ಯಾವಾಗಲೂ ಇಟ್ಟಿರುತ್ತಾರೆ….!
ಚಳಿಗಾಲದ ಹೆರಿಗೆ, ಬಾಣಂತನ …ಹೆಣ್ಣಿನ ಜೀವನ ಸಾರ್ಥಕ ಗೊಳಿಸಿಬಿಡುತ್ತವೆ. ನನ್ನ ಮೊದಲ ಬಾಣಂತನ ಚಳಿಗಾಲದಲ್ಲಿ ಆದಾಗಲೇ ನನಗೆ “ಹಿಂದಿನ ಮಂದಿ ಡಜನ್ ಗಟ್ಟಲೇ ಮಕ್ಕಳನ್ನು ಹೇಗೆ ಬೇಸರವಿಲ್ಲದೇ ಹೆರುತ್ತಿದ್ದರೆಂದು “ ಅರ್ಥ ವಾಗಿದ್ದು…! ಬಿಸಿ ಬಿಸಿ ನೀರು, ಇದ್ದಿಲು-ಸಗಣಿ ಬೆರಣಿಗಳ ಬೆಂಕಿ,ಬಿಸಿ ಬಿಸಿ ಊಟ….ಸಾಕಿಷ್ಟೆ…ಮತ್ತೆ ದೃಷ್ಠಿಯಾದೀತು…! ಆಹಾ ಹೆರಿಗೆ ನೋವನ್ನೆಲ್ಲ ಮರೆಸಿ , ಎಷ್ಟು ಬೇಕಾದರೂ ಮಕ್ಕಳನ್ನು ಹೆತ್ತು ಮನುಕುಲವನ್ನು ಉದ್ದಾರ ಮಾಡಬಹುದು …ಎಂಬ ಆತ್ಮ ವಿಶ್ವಾಸ ಹುಟ್ಟಿಸುತ್ತದೆ. ಆದರೆ ಚಳಿಗಾಲದಲ್ಲೇ ಹೆರಿಗೆ ಆಗುವಂತೆ ಮುಂಜಾಗ್ರತೆ, ದೂರದೃಷ್ಠಿ ವಹಿಸಬೇಕಷ್ಟೆ…! ಬೇಸಿಗೆಯಲ್ಲಾದರೆ ಬಿಸಿಲಿನ ಹಿಂಸೆ. ಆಗ ಬಿಸಿ ನೀರು, ಬೆಂಕಿ … ಏನೆ ಬಿಸಿ ಇದ್ದರೂ ನರಕ. ಇನ್ನು ಮಳೆಗಾಲದಲ್ಲೊ ಧೋ ಎಂದು ಸುರಿವ ಮಳೆಯಲ್ಲಿ , ಸೂರ್ಯನ ದರ್ಶನ ಭಾಗ್ಯವೇ ಅಪರೂಪ. ಆಗ ತೊಟ್ಟಲಿನ ಮಗುವಿನ ಒಂದು, ಎರಡು, ಮೂರು ಎಣಿಸುತ್ತ … ಹಸಿ ಬಟ್ಟೆಗಳ ಸುವಾಸನೆ….! ಒಣ ಬಟ್ಟೆಗಳನ್ನು ಹುಡುಕುವ ಸಾಹಸ …! ಮಳೆಗಾಲದಲ್ಲಿ ಹೆರಿಗೆಯಾದ ಮನೆಗೆ ಯಾರಾದರೂ ಹೋದರೆ ಹೆಚ್ಚು ಹೊತ್ತು ಕೂಡುವ ಸಾಹಸ ಮೂಗಿದ್ದವರು ಯಾರೂ ಮಾಡುವುದಿಲ್ಲ.
ಚಳಿಗಾಲದ ಮೋಡಿ ಪ್ರಕೃತಿಯನ್ನು ಬಿಡುವುದಿಲ್ಲ. ಹಳೆ ನೀರು ಹೋದಾಗಲೆ ಹೊಸ ನೀರು ಬರುವುದು. ಹಾವು ತನ್ನ ಪೊರೆ ಕಳಚಿದಾಗಲೆ ಹೊಸ ಚರ್ಮ ಬರುವುದು. ಹಾಗೇ ಪ್ರಕೃತಿಯು ತನ್ನ ಹಳೆಯ ಹಸುರುಡುಗಿ ಕಳಚಿ ಕೃಷವಾಗಿ ಮುಗಿಲತ್ತ ಮುಖಮಾಡಿರುತ್ತದೆ. ಈ ನಿರಾಭರಣ ಸುಂದರಿ ಹೇಗಿದ್ದರೂ ಚನ್ನವೇ… ಚಳಿಗಾಲದ ನಸುಕಿನಲಿ ಆಗಾಗ ಬೀಳುವ ಮಂಜು ಸೂರ್ಯನಿಗೂ ರಗ್ಗು ಹೊದಿಸಿ ಮಲಗಿಸುವ ಪ್ರಯತ್ನ ಮಾಡುತ್ತವೆ. ಸೂರ್ಯನಿಗೂ ಪ್ರಕೃತಿಗೂ ಮುಗಿಯದ ಅನುಬಂಧ. ಸೂರ್ಯ ನೇರವಾಗಿ ನೋಡಿದರೆ ತಾಪ ಹೆಚ್ಚಿ , ಗುಡುಗು ಸಿಡಿಲುಗಳು ಆರ್ಭಟಿಸಿ ಮಲಗಿದ್ದ ಹಸಿರನೆಲ್ಲ ಬಡಿದೆಬ್ಬಿಸುತ್ತವೆ. ಆದರೆ ಸೂರ್ಯನ ಓರೆಗಣ್ಣಿನ ನೋಟಕೆ ತಂಗಾಳಿಯಲಿ ನಿಸರ್ಗವೂ ನಾಚಿ ಎಲೆ ಉದುರಿಸಿ ಬಿಡುತ್ತದೆ…
ಕವಿಗಳಿಗೆ, ರಸಿಕರಿಗೆ ಚಳಿಗಾಲ ತುಂಬಾ ಪ್ರಿಯವಾದದ್ದು. “ಚಳಿ, ಚಳಿ ತಾಳೆನು ಈ ಚಳಿಯಾ….” ಎಂದು ಹಾಡುತ್ತ ಬಂಧನ ಗಟ್ಟಿ ಗೊಳಿಸುತ್ತಾರೆ. ಮದುವೆಯ ಹೊಸ್ತಿಲಲ್ಲಿರುವ ಹೃದಯಗಳು ಚಳಿಗಾಲದೊಳಗೆ ಮದುವೆಯಾಗದಿದ್ದರೆ ,”ಅಯ್ಯೋ ಮತ್ತೊಂದು ಚಳಿಗಾಲ ವ್ಯರ್ಥ ವಾಯಿತಲ್ಲ ನೀ ಇಲ್ಲದೇ ಎಂದು ಪೇಚಾಡುತ್ತಾರೆ….” ಪ್ರೇಯಸಿಯ ಬಾಹು ಬಂಧನಕ್ಕಿಂತ ಉತ್ತಮವಾದ ಸ್ವೇಟರ್ ಮತ್ತೊಂದಿದೆಯೇ….! ಎಂದು ಉದ್ಘರಿಸುತ್ತಾರೆ. ಚಳಿಗಾಲದಲ್ಲಿ ಬರುವ “ಸುನೆ” ಹುಡುಗಿ ಹುಡುಕುವವರಿಗೆ ಅಡ್ಡಿಯಾಗುತ್ತದೆ. ಬಿರಿತ ಕೆನ್ನೆಗಳಿಗೆ, ಕೈ ಕಾಲುಗಳಿಗೆ, ಅಧರಗಳಿಗೆ ಹಿಂದೆ ಎಲ್ಲಿ ಬರಬೇಕು ಈಗಿನಷ್ಟು ಕ್ರೀಮು. ಬರಗಾಲದ ರೈತನ ಹೊಲಕ್ಕೆ ಅದೇನು ಕಳೆ. ಚರ್ಮ ಮಾತ್ರ ಎಣ್ಣೆ ಅಂಶಕ್ಕಾಗಿ ಹಂಬಲಿಸುತ್ತ “ಚುಟು ಚುಟು” ಅನ್ನುತ್ತಿರುತ್ತದೆ. ಅದಕ್ಕಾಗೇ ಹಿರಿಯರು ಮಾಡಿದ ಪದ್ದತಿ ವೈಜ್ನಾನಿಕವಾದದ್ದೆ…! ಒಣ ಚರ್ಮ ದವರಿಗಂತೂ ಮಲಗಿದಾಗ ಹಾಸಿಗೆಯಲ್ಲಿ ಸೊಳ್ಳೆ, ಚಿಕ್ಕಾಡ, ತಿಗಣಿಗಳೆಲ್ಲ ಏಕ ಕಾಲಕ್ಕೆ ಕಡಿಯುವ ಅನುಭವ ವಾಗುತ್ತದೆ. ಒಟ್ಟಿನಲ್ಲಿ ಚಳಿಗಾಲವೆಂಬುದು ವೈವಿದ್ಯಮಯ ಅನುಭವಗಳನ್ನು ನೀಡುವ ರಸಿಕರ ರಾಜ, ಜನಪ್ರಿಯ ಕಾಲವಾಗಿದೆ.
ಸಂಕ್ರಾಂತಿ ಕಳೆಯುತ್ತಿದ್ದಂತೆ ಸೂರ್ಯ ತನ್ನ ಮೊದಲ ಹೆಂಡತಿಯಂತಿರುವ ಉತ್ತರ ದೃವದೆಡೆಗೆ ಮುಖಮಾಡುತ್ತಾನೆ.! ಅನಿವಾರ್ಯವಾಗಿ ನಾವು ಚಳಿಗಾಲಕ್ಕೆ ವಿದಾಯ ಹೇಳಲೇಬೇಕಾಗುತ್ತದೆ. ಬರುವ ಹೊಸ ಕಾಲವನ್ನು ಬಣ್ಣದೋಕುಳಿಯಾಡಿ ಸ್ವಾಗತಿಸಬೇಕಾಗುತ್ತದೆ.
ಶೀಲಾ ಶಿವಾನಂದ ಗೌಡರ
ಬದಾಮಿ
9481571274
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ