You are currently viewing ಪುಣ್ಯನೆಲ

ಪುಣ್ಯನೆಲ

ಕನ್ನಡವೆಂದರೆ ಮೂಜಗವೆಲ್ಲಡೆ ಹರ್ಷವ ತುಂಬುವ ಭಾಷೆಯಿದೂ
ರನ್ನನ ಕಾವ್ಯದ ಕಾಂತಿಯು ಹಬ್ಬಿಸಿ ಸಂಚಯಗೊಂಡಿಹ ತಾಯ್ನುಡಿಯೂ
ಜನ್ನನ ಪದ್ಯವು ಬಿತ್ತರಗೊಳ್ಳುತ ಪಾವನವಾಗಿದೆ ತಾಯ್ನೆಲವೂ
ಪೊನ್ನನು ಹಚ್ಚಿದ ಕಾವ್ಯದ ದೀಪವು ಮಾನ್ಯತೆಗೈದಿದೆ ಸರ್ವರಲೀ

ಅಂದವ ತುಂಬಿದ ಸುಂದರ ಭಾಷೆಯ ತೋರಣ ಕಟ್ಟಿದ ನಾಡಿದುವೇ
ಬಂಧುರಗೊಂಡಿಹ ಸಗ್ಗದ ನಾಡನು ಕಾಯುವ ಭಕ್ತಿಯು ತೋರುತಲೀ
ವಂದಿಸಿ ತಾಯಿಯ ಕೀರ್ತಿಯ ಹೆಚ್ಚಿಸಿ ಕನ್ನಡ ಗಾನವ ಸಾರುತಲೀ
ಗಂಧದ ಸೌರಭ ಸೂಸುವ ನಾಡಿಗೆ ಭಕ್ತಿಯ ಗೀತೆಯನೋದುತಲೀ

ನಮ್ಮಯ ನಾಡಿದು ಚಿನ್ನದ ಬೀಡಿದು ಶೃಂಗದ ಭೃಂಗದ ಕೋಮಲೆಯೂ
ಗಮ್ಮನೆ ಬೀರುವ ಮಲ್ಲಿಗೆ ಹೂವಿನ ಕಂಪಲಿ ಮೀಯುವ ನಾಕವಿದೂ
ಹೊಮ್ಮುವ ನಾದದ ಮಂಗಳ ವಾದ್ಯದಿ ತೊಂತನ ಮೂಡಿಪ ತಾಯ್ನೆಲವೂ
ಬಿಮ್ಮನೆ ವೃಂದಕೆ ದಿಬ್ಬಣ
ಸೇರಿಸಿ ಪೆಂಪನ ಭಿನ್ನಣ ತೌರಿದುವೇ

ತೇಗದ ಬೀಟೆಯ ಸಸ್ಯದ ಕಾಶಿಯ ಸಂಪದ ಕೀರ್ತಿಯ ನಾಡಿದುವೇ
ನಾಗರ ಕಲ್ಲಿನ ಮಂಟಪ ಕೆತ್ತಿಹ ದೈವಿಕ ಶಕ್ತಿಯ ಸೂರಿದುವೇ
ಯೋಗಿಯ ಭೋಗಿಯ ಸಂತರ ನಂಟಿನ ಸತ್ಯದ ಶೋಧಕ ನಾಡಿದುವೇ
ತ್ಯಾಗದ ಮಣ್ಣಿನ ನೆತ್ತರ ಕೋಡಿಯು ತುಂಬಿದ ಶೌರ್ಯದ ನಾಡಿದುವೇ

ಅಕ್ಕರೆ ತೋರಿದ ಸಖ್ಯದ ಮಾತಿನ ಬಲ್ಮೆಯ ಹೆಚ್ಚಿದ ಕನ್ನಡವೂ
ನಕ್ಕರೆ ಸಾಕಿದು ಹಾಲಿನ ಮೇಖಲೆ ಲಾಸ್ಯದ ನೃತ್ಯವನಾಡುತಲೀ
ಸಕ್ಕರೆ ನಾಡಿದು ಭವ್ಯದ ಮಂದಿರ ದಿವ್ಯತೆ ತೋರಿದ ಪುಣ್ಯನೆಲಾ
ಮಕ್ಕಳ ಪೋಷಿಸಿ ದೈನ್ಯತೆ ತುಂಬಿದ ತೂಗುವ ತೊಟ್ಟಿಲ ಶಾಂತಿನೆಲಾ

ಪೂನಂ ಧಾರವಾಡಕರ
ಶಿವ ಸಾನ್ನಿಧ್ಯ ನಿಲಯ
ದೇಸಾಯಿ ಲೇ ಔಟ್ ಗುತ್ತಿಗೇರಿಗಲ್ಲಿ ಹಳಿಯಾಳ -581329
7204487202