You are currently viewing ಕುವೆಂಪು ಕನ್ನಡಿಯಲ್ಲಿ ವರ್ತಮಾನದ ನೋಟ

ಕುವೆಂಪು ಕನ್ನಡಿಯಲ್ಲಿ ವರ್ತಮಾನದ ನೋಟ

ಕನ್ನಡದ ತಿಳಿವನ್ನು ಜಗದಗಲ ಮುಗಿಲಗಲ ಹರಡುವ ಮೂಲಕ ಜಗತ್ತಿನ ತಿಳಿವಿನೊಂದಿಗೆ ಅನುಸಂಧಾನಿಸಿದ ವಿರಳ ಕವಿಗಳಲ್ಲಿ ದಾರ್ಶನಿಕ ಕವಿ ಕುವೆಂಪು ಅವರು ಅಗ್ರಗಣ್ಯರು. ಕವಿ, ಲೇಖಕ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವಿಮರ್ಶಕ, ಸಮಾಜಚಿಂತಕ, ಶಿಕ್ಷಣತಜ್ಞ, ತತ್ವಜ್ಞಾನಿ ಹೀಗೆ ಕುವೆಂಪು ಅವರ ವ್ಯಕ್ತಿತ್ವಕ್ಕೆ ಹಲವು ಮುಖಗಳಿವೆ. ಕುವೆಂಪು ಕನ್ನಡಿ ಇದ್ದಂತೆ. ಕುವೆಂಪುಕನ್ನಡಿಯ ಮೂಲಕ ಬದುಕಿನ ವೈವಿಧ್ಯಮಯವಾದ ಮುಖಗಳನ್ನು ನೋಡಿಕೊಳ್ಳಲು, ಪರಿಚಯಿಸಿಕೊಳ್ಳಲು, ಒಂದು ಕಾಲಘಟ್ಟದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕøತಿಕ ಪಲ್ಲಟಗಳನ್ನು ಅರಿಯಲು ಹಾಗೂ ವರ್ತಮಾನದ ಸಂಗತಿಗಳಿಗೆ ಮುಖಾಮುಖಿಯಾಗಲು ಸಾಧ್ಯವಾಗುತ್ತದೆ ಎಂಬುದು ಸ್ಪಷ್ಟ.
ಕನ್ನಡದ ಮೂಲಕ ಜಗತ್ತನ್ನು ನೋಡುವ ಕನ್ನಡಿ ಎಂದರೆ ಕುವೆಂಪು. ಕುವೆಂಪುಕನ್ನಡಿಯಲ್ಲಿ ವರ್ತಮಾನದ ನೋಟವನ್ನು ರೂಪಿಸಿಕೊಳ್ಳುವ ಜರೂರು ಇದೆ. ಈ ಬಗೆಯ ನೋಟವನ್ನು ಕಟ್ಟಿಕೊಳ್ಳುವ ಅವಶ್ಯಕತೆ ಏಕೆ ಇದೆ ? ಎಂಬ ಪ್ರಶೆ ಬಹಳ ಮುಖ್ಯವಾದುದು. ಕುವೆಂಪು ಅವರದು ಬಹುಶ್ರುತ ಪಾಂಡಿತ್ಯ ಪ್ರತಿಭೆ. ಅವರ ಸೃಜನಶೀಲ ಸಾಹಿತ್ಯಿಕ ಕೊಡುಗೆ ಅತ್ಯುಪಯುಕ್ತವಾದುದು. ತನ್ನ ಕಾಲದ ವಿದ್ಯಮಾನಗಳಿಗೆ ಎದುರುಗೊಂಡ ಕುವೆಂಪು ಅವರು ಯಾವ ಕಾಲಕ್ಕೂ ಅನ್ವಯವಾಗುವ ಮೌಲ್ಯಗಳನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿರುವ ಕಾರಣಕ್ಕೆ ಅನನ್ಯವೆನಿಸುತ್ತಾರೆ ಹಾಗೂ ಅನುಸಂಧಾನಾರ್ಹವೆನಿಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಮತ್ತೆಮತ್ತೆ ನೋಡಿಕೊಳ್ಳಬೇಕಾದ, ಅರ್ಥಮಾಡಿಕೊಳ್ಳಬೇಕಾದ ಕನ್ನಡಿ ಕುವೆಂಪು ಎನಿಸುತ್ತದೆ. ಕುವೆಂಪು ಎಂಬ ಕನ್ನಡಿಯನ್ನು ಇಣುಕಿನೋಡುವ ಮುನ್ನ ವರ್ತಮಾನ ಎಂದರೆ ಏನು ಎಂಬುದನ್ನು ಮೊದಲು ನಿರ್ವಚಿಸಿಕೊಳ್ಳುವುದು ಅವಶ್ಯವಿದೆ.

ವರ್ತಮಾನ ಎಂದರೆ ವಾರ್ತೆ, ಸುದ್ದಿ, ಇರುವಿಕೆ, ಈಗಿನ, ಸದ್ಯದ ಕಾಲಕ್ಕೆ ಸಂಬಂಧಿಸಿದುದು ಎಂಬರ್ಥಗಳಿವೆ. ವರ್ತಮಾನ ಎಂಬುದು ಸಧ್ಯದ ಸ್ಥಿತಿಯಾಗಿರುತ್ತದೆ. ಸಮಯ, ಕಾಲವನ್ನು ಆಧರಿಸಿ ನೋಡುವುದಾದರೆ ವರ್ತಮಾನ ಸದಾ ಚಲನಶೀಲವಾಗಿರುವ ಪ್ರಾಕೃತಿಕ ಪ್ರಕ್ರಿಯೆ. ಕಾಲದ ಮೌಲ್ಯಗಳನ್ನು ಆಧರಿಸಿ ಗಮನಿಸುವುದಾದರೆ ಅದು ಎಂದಿಗೂ ಶಾಶ್ವತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಚರ್ಚಿಸುವುದಾದರೆ ಒಂದು ಕಾಲದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕøತಿಕ ಸಮಸ್ಯೆಗಳು ಮತ್ತು ಮೌಲ್ಯಗಳು ಜೀವಂತವಾಗಿರುತ್ತವೆ. ಆಯಾಯ ಕಾಲದ ಸಮಸ್ಯೆ ಮತ್ತು ಮೌಲ್ಯಗಳು ಕವಿ, ಕಲಾವಿದರ ಸೃಜನಪ್ರತಿಭೆಗೆ ವಸ್ತುವಾಗುತ್ತ, ರೂಪಾಂತರ ಹೊಂದುತ್ತಿರುತ್ತವೆ. ಹೀಗಾಗಿ ಅಂದಿನ ‘ವರ್ತಮಾನ’ ಎಂದೆಂದಿಗೂ ಇರುವ ‘ವರ್ತಮಾನ’ವಾಗುವುದು ಗಮನಾರ್ಹ ಸಂಗತಿ. ಕುವೆಂಪು ತಮ್ಮ ಸಾಹಿತ್ಯ ಕೃತಿಗಳಲ್ಲಿ ಆ ಕಾಲದ ಎಲ್ಲ ಸಮಸ್ಯೆ ಮತ್ತು ಸವಾಲುಗಳನ್ನು ತಮ್ಮ ವಿಶಿಷ್ಟ ಪ್ರತಿಭಾಮೂಸೆಯಲ್ಲಿ ಎರಕ ಹೊಯ್ದಿರುವುದನ್ನು ಗುರುತಿಸಬಹುದಾಗಿದೆ. ಹೀಗಾಗಿ ವರ್ತಮಾನವನ್ನು ಕಾಣಲು ಕುವೆಂಪು ಕನ್ನಡಿಯಾಗಿ ಕಾಣಿಸುವುದು ಈ ಅರ್ಥದಲ್ಲಿ.



ಇಂದು ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಕಾಲಘಟ್ಟ ಇದು. ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ಕಾಲದ ಎಲ್ಲ ವಿಪ್ಲವಗಳಿಗೆ ಕುವೆಂಪು ಅವರ ಕಾವ್ಯದಲ್ಲಿ ಉತ್ತರಗಳಿವೆ. ಪ್ರೀತಿ, ಪ್ರೇಮ, ಪ್ರಣಯ, ದಾಂಪತ್ಯ, ಪ್ರಕೃತಿಪ್ರೇಮ, ಆದರ್ಶ, ಆಧ್ಯಾತ್ಮ, ರಾಷ್ಟ್ರೀಯತೆ, ಧರ್ಮ, ಶಿಕ್ಷಣ ಇತ್ಯಾದಿ ಸಂಗತಿಗಳನ್ನು ಬರೆಹದಲ್ಲಿ ಒಡಮೂಡಿಸಿದ ಕುವೆಂಪು ಅವರ ಒಟ್ಟು ಸಾಹಿತ್ಯದ ಸ್ಥಾಯಿಗುಣ ಸಾಮಾಜಿಕ ಮತ್ತು ವೈಚಾರಿಕ ಪ್ರಜ್ಞೆ. ನವೋದಯ ಕಾಲದ ಬಹುತೇಕ ಕವಿಗಳಿಗಿಂತ ಭಿನ್ನರಾಗಿರುವ ಕುವೆಂಪು ಅವರು ತಮ್ಮ ಕಥೆ, ಕವಿತೆ, ಪ್ರಬಂಧ, ಕಾದಂಬರಿ, ನಾಟಕ, ಮಹಾಕಾವ್ಯ ಇತ್ಯಾದಿ ಪ್ರಕಾರಗಳಲ್ಲಿ ಬದುಕಿನ ಸಮಗ್ರತೆಯನ್ನು ಶೋಧಿಸಿ, ಕಟ್ಟಿಕೊಟ್ಟಿದ್ದಾರೆ. ಶೂದ್ರ ಸಮುದಾಯದಿಂದ ಬಂದ ಕುವೆಂಪು ಅವರು ಶ್ರೇಣೀಕೃತ ಸಮಾಜದಲ್ಲಿನ ಅಸಮಾನತೆಗಳನ್ನು, ಅನ್ಯಾಯಗಳನ್ನು ಹೋಗಲಾಡಿಸಲು ಕಾವ್ಯವನ್ನು ಪ್ರತಿಭಟನೆಯ ಅಸ್ತ್ರವನ್ನಾಗಿ ಉಪಯೋಗಿಸಿಕೊಂಡರು. ದೇವರು ಧರ್ಮ ಜಾತಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯ ವಿರುದ್ಧ ಸಿಡಿದೇಳುವ ಕವಿ ಕುವೆಂಪು ಸಮಾಜವನ್ನು ತಿದ್ದುವ ಮಾನವತಾವಾದಿಯಾಗಿಯೂ ಕಾಣಿಸುತ್ತಾರೆ. ಮನುಷ್ಯ ಮನುಷ್ಯರ ನಡುವೆ ಉಂಟಾದ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಅಗತ್ಯವನ್ನ ಕುರಿತು “ಎದೆಯೊಲುಮೆ ಕಣ್ಮುಚ್ಚಲು ಜೀವಕೆ ಬೆಳಕಿಲ್ಲ” ಎಂದು ಹೇಳುವ ಮೂಲಕ ಹೃದಯವೈಶ್ಯಾಲತೆಯ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.
ಉತ್ಕಟವಾದ ಕನ್ನಡಪ್ರೇಮವನ್ನು ಪ್ರಕಟಿಸಿದ ಕುವೆಂಪು ಕನ್ನಡಾಂಬೆಯನ್ನು ‘ಭಾರತ ಜನನಿಯ ತನುಜಾತೆ’ ಎಂದಿದ್ದಾರೆ. ಕನ್ನಡ ನಾಡು ನುಡಿ, ನಾಡವರ ಏಳಿಗೆ ಅವರ ಅಂತರಾಳದ ಅಭಿಪ್ಷೆಯಾಗಿತ್ತು. ಅಖಂಡ ಕರ್ನಾಟಕದ ಪರಿಕಲ್ಪನೆಯನ್ನು ಮಂಡಿಸಿದ ಅವರು ;

‘ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ,
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವವರ ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ತಣ್ಣೀರು ಸುರಿಸು

ಒಟ್ಟಿಗೆ ಬಾಳುವ ತೆರದಲಿ ಹರಸು” ಎಂದು ಕನ್ನಡಿಗರ ಒಗ್ಗೂಡುವಿಕೆಯ ಅಗತ್ಯವನ್ನು ಮನಗಾಣಿಸಿದ್ದಾರೆ. ‘ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂಬುದಾಗಿ ಅಭಯವನ್ನೂ ನೀಡುತ್ತಾರೆ. ಕರ್ನಾಟಕ- ಕನ್ನಡ- ಕನ್ನಡಿಗ ಕುರಿತು ಅವರ ಚಿಂತನೆಗಳು ಮೌಲಿಕವಾಗಿವೆ.
ಜಾತಿ, ಮತ, ಪಂಥ, ಧರ್ಮಗಳು ನಮ್ಮ ಭಾರತೀಯ ಸಮಾಜವನ್ನು ಅಂಧಕಾರದಲ್ಲಿ ಮುಳುಗಿಸುತ್ತಿವೆ. ತರತಮಗಳು ಎಲ್ಲೆಲ್ಲೂ ತಾಂಡವವಾಡುತ್ತಿವೆ. ವರ್ಗ, ವರ್ಣಗಳು ಮನುಷ್ಯ ಮನುಷ್ಯರ ನಡುವೆ ಬಿರುಕು ಮೂಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ;

“ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮುಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈ ತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ಓ ಬನ್ನಿ, ಸೋದರರೆ, ಬೇಗ ಬನ್ನಿ” ಎಂದು ಎಚ್ಚರಿಸುವ ಕುವೆಂಪು ಧರ್ಮಾಂಧತೆ, ಬಡತನ, ಮೌಢ್ಯತೆಯನ್ನು ಹೋಗಲಾಡಿಸುವ ಅಗತ್ಯವನ್ನು ಪ್ರತಿಪಾದಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪ್ರಚೋದಿಸಿದರು. ತಾನೇ ಸೃಷ್ಟಿಸಿಕೊಂಡು ಸಂಕುಚಿತ ಮತದ ಕೂಪದೊಳಗೆ ನರಳುವ ಮನುಷ್ಯನನ್ನು ವಿಶ್ವಪಥಲ್ಲಿ ನಡೆಯುವಂತೆ ಪ್ರೇರೇಪಿಸುವ ಕುವೆಂಪು :

“ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕ್ಕೆ

ಓ ಬನ್ನಿ ಸೋದರರೆ, ವಿಶ್ವಪಥಕೆ” ಎಂದು ಕರೆ ನೀಡುತ್ತಾರೆ. ಪುರೋಹಿತಶಾಹಿಯು ಇನ್ನೂ ನಮ್ಮ ದೇಶದಲ್ಲಿ ಪ್ರಬಲವಾಗಿದೆ, ಜೀವಂತವಾಗಿದೆ. ಹೀಗಾಗಿ,

“ಕಟ್ಟಕಡೆಯಲಿ
ದೇವರ ಗುಡಿಯಲಿ
ಪೂಜಾರಿಯೇ ದಿಟದ ನಿವಾಸಿ
ದೇವರೆ ಪರದೇಶಿ !” ದೇವರ ದರುಶನಕೆ ದಲ್ಲಾಳಿಯ ದಯವೇಕೆ ? ಎಂಬ ಪ್ರಶ್ನೆಯನ್ನು ಮುಂದಿಟ್ಟ ಕುವೆಂಪು,
“ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಭಾರ
ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು
ಪಾವ್ಗಳಿಗೆ ಪಾಲೆರೆದು ಪೋಷಿಸಾಯ್ತು
ಬಿಸಿಲು ಮಳೆಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು

ದಾಸರನು ಪೂಜಿಸಿಯೇ ದಾಸ್ಯವಾಯ್ತು ! ದಾಸ್ಯದ ಸಂಕೋಲೆಯಲ್ಲಿ ಸಿಲುಕಿ ಸಂಕಷ್ಟಕ್ಕಿಡಾಗುವ ಮನುಷ್ಯನ ದೌರ್ಬಲ್ಯವನ್ನು ಅಣಕಿಸುವ ಕುವೆಂಪು ಅವರು ಸಂಪ್ರದಾಯದ ಸಿಕ್ಕುಗಳಿಂದ ಬಿಡಿಸಿಕೊಂಡು ಪರಂಪರೆಯ ಪ್ರಜ್ಞೆಯಿಂದ ಬಾಳನ್ನು ನಡೆಸಬೇಕು ಎಂಬ ವಿವೇಕವನ್ನು ಮಾನವನೆದೆಯಲ್ಲಿ ಬಿತ್ತಿದರು.

ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆ ಜಾಗೃತವಾಗದ ಹೊರತು ಮಾನವ ಜನಾಂಗಕ್ಕೆ ಮತ್ತು ದೇಶದ ಭವಿಷ್ಯಕ್ಕೆ ಉಳಿಗಾಲವಿಲ್ಲ ಎಂದು ನಂಬಿದ್ದ ಕುವೆಂಪು,

“ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ, ಬರಲಿ ವಿಜ್ಞಾನ ಬುದ್ಧಿ
ವೇದ ಪ್ರಮಾಣತೆಯ ಮರುಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯಸಿದ್ಧಿ” ಎಂದು ಹೇಳಿದ್ದಾರೆ.
‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು

ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !” ಎನ್ನುವ ಮೂಲಕ ‘ಎದೆಯ ದನಿ ಧರ್ಮನಿಧಿ ಎಂದು ಪ್ರತಿಪಾದಿಸಿದರು. ಇಡೀ ಮನುಷ್ಯ ಒಂದು ಮತಕ್ಕೆ ಸೇರುವ ಬಹುದೊಡ್ಡ ಉದ್ದೇಶ ಸಾಧನೆಗೆ ಮಾನವರನ್ನು ಅಣಿಗೊಳಿಸುವ ಕುವೆಂಪು ಸಾಮಾಜಿಕ ಪ್ರಜ್ಞೆಯಿಂದಲೇ ಸಾಹಿತ್ಯಕೃಷಿ ಗೈದವರು.

ವಿಶ್ವಮಾನವ ಸಂದೇಶದ ಹಿನ್ನೆಲೆ : ವಿಶ್ವದ ತುಂಬೆಲ್ಲಾ ಇರುವ ಎಲ್ಲ ಮನುಷ್ಯರೂ ಒಂದೇ ಎಂಬ ಸೂತ್ರವೇ ವಿಶ್ವಮಾನವ ಸಂದೇಶ. ಪ್ರಪಂಚದ ತುಂಬ ಎಷ್ಟೊಂದು ಧರ್ಮ, ಜಾತಿ, ಪಂಗಡಗಳಿವೆ. ಅದರಲ್ಲೂ ಭಾರತ ಬಹು ಧರ್ಮ, ಜಾತಿ, ಮತ, ಪಂಗಡಗಳನ್ನು ಒಳಗೊಂಡಿರುವ ದೇಶ. ತಂತಮ್ಮ ಜಾತಿ, ಧರ್ಮಗಳೇ ಶ್ರೇಷ್ಠ ಎಂಬ ಭ್ರಮೆಯಲ್ಲಿ ಮನುಷ್ಯ ಅಲ್ಪ ಮಾನವನಾಗುತ್ತ ನಡೆದ ವಾಸ್ತವವನ್ನು ಅರ್ಥಮಾಡಿಕೊಂಡ ಕುವೆಂಪು ವಿಶ್ವಮಾನವ ಸಂದೇಶವನ್ನು ನೀಡುವ ಮೂಲಕ ‘ಮನುಷ್ಯಜಾತಿ ತಾನೊಂದೇ ವಲಂ’ ಎಂಬುದನ್ನು ಅರುಹಿದರು. ಎಲ್ಲ ಮತ-ಧರ್ಮಗಳು ಮನುಷ್ಯನನ್ನು ಬೆಸೆಯಲು ಸೋತವು. ಹೀಗಾಗಿ ಕುವೆಂಪು ಅವರ ವಿಶ್ವಮಾನವ ಸಂದೇಶವು ವಿಶ್ವಮಾನ್ಯವಾಯಿತು. ಇದರ ಸಾಕಾರಕ್ಕೆ ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರಗಳು ಹಾಗೂ ಮನುಷ್ಯ ಜಾತಿ ತಾನೊಂದೇ ವಲಂ ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು, ವರ್ಣಾಶ್ರಮ ವ್ಯವಸ್ಥೆಯ ಮೂಲೋತ್ಫಾಟನೆ ಮಾಡಬೇಕು, ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ವಿನಾಶಗೊಳಿಸಬೇಕು, ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕವಾಗಿ ಮಾನ್ಯತೆ ಪಡೆಯಬೇಕು, ಮತ ಮನುಜಮತವಾಗಬೇಕು, ಪಥ ವಿಶ್ವಪಥವಾಗಬೇಕು, ಮನುಷ್ಯ ವಿಶ್ವಮಾನವನಾಗಬೇಕು, ಯಾರೂ ಯಾವ ಒಂದು ನಿರ್ಧಿಷ್ಟ ಮತಕ್ಕೆ ಸೇರಿಕೊಂಡ ಪರಸ್ಪರ ವಿಭಜನೆಯಾಗದೇ ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ ತನ್ನ ಮತಕ್ಕೆ ಸೇರಿಕೊಳ್ಳಬೇಕು, ಯಾವ ಒಂದು ಗ್ರಂಥವೂ ಏಕೈಕ ಪರಮ ಪೂಜ್ಯ ಗ್ರಂಥ ಇರಬಾರದು ಮತ್ತು ತನ್ನ ದರ್ಶನವನ್ನು ತಾನೇ ರೂಪಿಸಿಕೊಳ್ಳಬೇಕು ಹೀಗೆ ಸಪ್ತಸೂತ್ರಗಳು ವಿಶ್ವಮನ್ನಣೆ ಪಡೆದವು. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂಬುದನ್ನು ತಿಳಿಸಿದ ಕುವೆಂಪು ಯುವಜನಾಂಗವನ್ನು ಜಾಗೃತಗೊಳಿಸಿ, ವಿಚಾರ ಕ್ರಾಂತಿಗೆ ಕರೆಕೊಟ್ಟರು.
“ವಿಜ್ಞಾನ ಸಂಪನ್ನವಾದ ಪಾಶ್ಚಾತ್ಯ ನಾಗರಿಕತೆ ನಮ್ಮನ್ನು ಇನ್ನೂರು ವರ್ಷಗಳ ಕಾಲ ಆಳಿದರೂ ಅದರ ವಿಜ್ಞಾನ ಸೃಷ್ಟಿಸಿದ ಯಂತ್ರನಾಗರಿಕತೆಯನ್ನು ಅನುಕರಿಸಿದ್ದೇವೆ ಹೊರತು ಅದರ ವೈಜ್ಞಾನಿಕ ದೃಷ್ಟಿ ನಮ್ಮದಾಗಲಿಲ್ಲ; ಮತ್ತು ಆ ವೈಜ್ಞಾನಿಕ ದೃಷ್ಟಿಗೂ ತಾಯಿಬೇರಾದ ವೈಚಾರಿಕತೆಯನ್ನೂ ನಾವು ಮೈಗೂಡಿಸಿಕೊಳ್ಳಲಿಲ್ಲ. ಇನ್ನು ಮುಂದಾದರೂ ನಾವು ವೈಜ್ಞಾನಿಕ ದೃಷ್ಟಿಯ ಮತ್ತು ವೈಚಾರಿಕ ಬುದ್ಧಿಯ ನೆರವಿನಿಂದ ನಮ್ಮ ರಾಜಕೀಯ, ಸಾಮಾಜಿಕ ಮತ್ತು ಮತ ಧಾರ್ಮಿಕ ರಂಗಗಳನ್ನು ಪರಿಶೋಧಿಸದಿದ್ದರೆ ನಮಗೆ ಕೇಡು ತಪ್ಪಿದ್ದಲ್ಲ” (ವಿಚಾರ ಕ್ರಾಂತಿಗೆ ಆಹ್ವಾನ : ಪು-44) ಕುವೆಂಪು ಅವರ ಈ ಮಾತು ದೇಶದ ಭವಿಷ್ಯಸೂಚಕವಾಗಿದ್ದು, ಪ್ರಸ್ತುತವಾಗಿದೆ.

ಅರಾಜಕತೆ, ಕೋಮುದ್ವೇಷ, ಭಯೋತ್ಪಾದನೆ, ಭ್ರಷ್ಟಾಚಾರ, ಅನಕ್ಷರತೆ, ಅಜ್ಞಾನ, ಮೌಢ್ಯ, ಬಡತನ, ವರ್ಗ-ವರ್ಣ ಸಂಘರ್ಷ ಮುಂತಾದ ಸಮಸ್ಯೆಗಳಿಂದ ನಮ್ಮ ದೇಶ ಬಳಲುತ್ತಿದೆ. ಹುಸಿ ರಾಷ್ಟ್ರೀಯತೆ, ಏಕ ಧರ್ಮ, ಭಾಷೆ, ಸಂಸ್ಕøತಿಗಳ ಹೇರಿಕೆ, ಬಹುತ್ವದ ನಾಶ, ಜಾಗತೀಕರಣದ ವ್ಯತಿರಿಕ್ತ ಪರಿಣಾಮ ಇತ್ಯಾದಿ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ ಸ್ಥಳೀಯತೆ-ಪ್ರಾದೇಶಿಕತೆ-ರಾಷ್ಟ್ರೀಯತೆ-ವಿಶ್ವಾತ್ಮಕತೆ, ಸಂಪ್ರದಾಯ-ಪರಂಪರೆ, ರಾಜಕಾರಣ-ಧರ್ಮ, ವಿಜ್ಞಾನ-ಅಧ್ಯಾತ್ಮ, ಶಿಕ್ಷಣ, ಸಾಹಿತ್ಯಿಕ ಸಾಂಸ್ಕøತಿಕ ಸಂಗತಿಗಳ ಕುರಿತು ಕುವೆಂಪು ಅವರ ಚಿಂತನೆಗಳು ಮೌಲಿಕವೂ ಗಣನೀಯವೂ ಹಾಗೂ ಮನನೀಯವೂ ಆಗಿವೆ. ಇಂದು ಮಾನವಕುಲ ಎದುರಿಸುವ ಅನೇಕ ಬಿಕ್ಕುಟ್ಟುಗಳಿಗೆ ಕುವೆಂಪು ಅವರು ನೀಡಿರುವ ವಿಶ್ವಮಾನವ ಸಂದೇಶವೇ ಪರಿಹಾರವಾಗಿದೆ. ಈ ಹಿನ್ನೆಲೆಯಲ್ಲಿ ಕುವೆಂಪುದರ್ಪಣದಲ್ಲಿ ನಮ್ಮನ್ನು ನಾವು ಮತ್ತೆಮತ್ತೆ ನೋಡಿಕೊಳ್ಳುತ್ತ ಬಾಳನ್ನು ಒಪ್ಪ ಓರಣಗೊಳಿಸುತ್ತ ಮುನ್ನಡೆಯುವ ಅಗತ್ಯವಿದೆ. ಮಾನವ ಕುಲದ ಸಮಗ್ರ ಏಳಿಗೆಗೆ, ವಿಶ್ವದ ಉನ್ನತಿಗೆ ತಮ್ಮದೆಯಾದ ಚಿಂತನೆಗಳನ್ನು ನೀಡುವ ಮೂಲಕ ಕುವೆಂಪು ಅವರು ‘ಜಗದ ಕವಿ, ಯುಗದ ಕವಿಯಾಗಿ ಚಿರಸ್ಥಾಯಿಯಾಗಿದ್ದಾರೆ.



ಡಾ. ಸಂಗಮೇಶ ಎಸ್. ಗಣಿ
ಮುಖ್ಯಸ್ಥರು, ಕನ್ನಡ ವಿಭಾಗ,
ಟಿಎಂಎಇಎಸ್ ಅಕಾಡೆಮಿ ಕಾಲೇಜು,
ಹೊಸಪೇಟೆ
9743171324


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.