You are currently viewing ಸಡಗರದ ಬೆಳಕಿನ ಹಬ್ಬ

ಸಡಗರದ ಬೆಳಕಿನ ಹಬ್ಬ

ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ಧನ:
ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೇ.

ಭಾರತ ದೇಶವು ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಮೆರೆದಂತಹ ದೇಶ. ತನ್ನ ಧರ್ಮದ ಆಚರಣೆಯೊಂದಿಗೆ ಅನ್ಯ ಧರ್ಮವನ್ನು ಗೌರವಿಸುವ ಜನರಿಂದ ತುಂಬಿ ತುಳುಕುತ್ತಿರುವ ಹೆಮ್ಮೆಯ ನಾಡು ನಮ್ಮದು. ಹಲವು ಋತುಗಳಲ್ಲಿ ಹಲವು ಮಾಸಗಳಲ್ಲಿ ಬರುವ ಹಬ್ಬಗಳನ್ನು ಪೂರ್ವಿಕರ ಬಳುವಳಿಯಂತೆ ಆಚರಿಸಿಕೊಂಡು ಬಂದ ವಿಶಿಷ್ಟ ಅವನಿ ನಮ್ಮದು. ಹಬ್ಬಗಳ ಆಚರಣೆಯೊಂದಿಗೆ ನಾವು ಪ್ರಕೃತಿಮಾತೆಯೊಂದಿಗೆ ಮಗುವಾಗಿ ವಿಶೇಷ ಸಂಬಂಧ ಹೊಂದಿದ್ದೇವೆ. ಹೆಚ್ಚು ಖುಷಿ ಪಡುವ, ಮೂರು ದಿನಗಳ ಕಾಲ ಬಹಳ ಅರ್ಥಗರ್ಭಿತವಾಗಿ ಆಚರಿಸಲ್ಪಡುವ ಹಬ್ಬಗಳ ಸರದಾರ ಈ ದೀಪಾವಳಿ.
ಸಾಲು ಸಾಲು ಹಣತೆಯ ದೀಪ ಪ್ರಜ್ವಲನೆಯಿಂದ ಮನೆ ಮನಸ್ಸುಗಳು ಪುಳಕಿತಗೊಳ್ಳುತ್ತವೆ. ದೇಹವು ಉಲ್ಲಸಿತಗೊಳ್ಳುವುದು.ಆ ಪ್ರಖರತೆಯನ್ನು ಕಾಣಲು ಕಣ್ಣುಗಳೆರಡು ಸಾಲದು. ಆಶ್ವಯುಜ ಮತ್ತು ಕಾರ್ತಿಕ ಮಾಸಗಳ ಸಮ್ಮಿಲನದ ಶುಭ ಸಂದರ್ಭದಲ್ಲಿ ಧನ, ಧಾನ್ಯ, ಸುಖ, ಸಮೃದ್ಧಿಯನ್ನು ನೀಡೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುವ ದೀಪಗಳ ಹಬ್ಬವೇ ದೀಪಾವಳಿ ಅರ್ಥಾತ್ ಬೆಳಕಿನ ಹಬ್ಬ. ಹಿಂದೂ ಸಂಸ್ಕೃತಿಯಲ್ಲಿ ಬೆಳಕಿಗೆ ವಿಶೇಷವಾದ ಅರ್ಥವಿದೆ, ಸ್ಥಾನವಿದೆ. ನಮ್ಮಲ್ಲಿರುವ ತಮವನ್ನು ಕಳೆದು ಜ್ಯೋತಿ ಮನವನ್ನು ಆವರಿಸಲಿ ಎಂದು ಮನೆಯಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸುತ್ತೇವೆ. ಯಾವುದೇ ಕಾರ್ಯದ ಶುಭಾರಂಭವು ಬೆಳಕಿನ ಪ್ರಕಾಶದಿಂದಲೇ ಮುಂದಡಿ ಇಡುವುದು . ತನ್ಮೂಲಕ ಈ ಹಬ್ಬವು ಮಿಕ್ಕೆಲ್ಲಾ ಹಬ್ಬಗಳಿಗಿಂತ ಸ್ವಲ್ಪ ಭಿನ್ನವೇ ಸರಿ. ಅವಳಿ ಎಂದರೆ ಸಾಲು ಅಥವಾ ಗೊಂಚಲು ಎಂದರ್ಥ. ದೀಪಗಳನ್ನು ಸಾಲು ಸಾಲುಗಳಲ್ಲಿ ಬೆಳಗಿಸಿ ಕಣ್ತುಂಬಿಕೊಳ್ಳುವ ಹಬ್ಬವೇ ದೀಪಾವಳಿ.

ದೀಪಗಳ ಹಬ್ಬ ಪ್ರಾರಂಭವಾಗುವುದು ನರಕ ಚತುರ್ದಶಿಯಿಂದ. ಹಿರಣ್ಯಾಕ್ಷ ಎಂಬ ರಾಕ್ಷಸನನ್ನು ವಧಿಸಲು ಮಹಾವಿಷ್ಣು ದಶಾವತಾರದ ಮೂರನೇ ಅವತಾರವಾಗಿ ವರಾಹ ರೂಪಿಯಾಗಿ ಬರುತ್ತಾನೆ. ಆಗ ಮಹಾವಿಷ್ಣುವಿನ ಬೆವರ ತೊಟ್ಟಿನಿಂದ ನರಕಾಸುರನ ಜನನವಾಯಿತು. ಮುಂದೆ ನರಕಾಸುರ ಲೋಕ ಕಂಟಕನಾಗಿ ಪರಿವರ್ತಿತನಾಗುತ್ತಾನೆ. ಈತನನ್ನು ಸಂಹರಿಸಲು ಮಹಾವಿಷ್ಣು ಶ್ರೀ ಕೃಷ್ಣನ ಅವತಾರವೆತ್ತುತ್ತಾನೆ. ನರಕಾಸುರನು ಹದಿನಾರು ಸಾವಿರ ಹೆಂಗಸರನ್ನು ಬಂಧಿಸಿ ಹೀನ ಕೃತ್ಯವೆಸಗಿದ್ದ. ಇಂತಹ ದುಷ್ಟ ರಾಕ್ಷಸನನ್ನು ಶ್ರೀಕೃಷ್ಣ ಮತ್ತು ಸತ್ಯಭಾಮೆ ಒಡಗೂಡಿ ವಧಿಸಿ, ಹೆಂಗಳೆಯರನ್ನು ಬಂಧಮುಕ್ತ ಮಾಡಿದ ಶುಭದಿನವೇ ನರಕ ಚತುರ್ದಶಿ. ತನ್ನ ಮಗನ ತಪ್ಪಿಗೆ ಶಿಕ್ಷೆಯಾಯಿತೆಂದು ತಾಯಿ ಸಮಾಧಾನಿಸಿದರೂ ಹೆಂಗರುಳಲ್ಲವೇ? ತನ್ನ ಮಗನ ನೆನಪು ಶಾಶ್ವತವಾಗುವಂತೆ ಶ್ರೀಕೃಷ್ಣನಲ್ಲಿ ಬೇಡಿಕೊಳ್ಳುತ್ತಾಳೆ. ನರಕಾಸುರನ ತಾಯಿಯ ಇಚ್ಛೆಯಂತೆ ಕೃಷ್ಣ ಪರಮಾತ್ಮನು ದೀಪಾವಳಿ ಹಬ್ಬವನ್ನು ನರಕ ಚತುರ್ದಶಿಯಿಂದ ಪ್ರಾರಂಭಿಸಿದನು ಎನ್ನುವ ಸನಾತನ ನಂಬಿಕೆಯಿದೆ. ಹಿಂದಿನ ದಿನ ಗಂಟೆ, ಜಾಗಟೆಯ ನಾದದೊಂದಿಗೆ ಹಂಡೆಗೆ ನೀರು ತುಂಬಿಸುವುದು ಹಾಗೂ ಮರುದಿನ ಅಂದರೆ ಚತುರ್ದಶಿಯ ಪ್ರಾತಃಕಾಲದಲ್ಲಿ ಮನೆಯ ಯಜಮಾನಿ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಎಲ್ಲರ ಮೈಗೆ ತೈಲ ಹಚ್ಚಿದ ನಂತರ ಅಭ್ಯಂಜನ ಮಾಡುತ್ತಾರೆ. ಹೊಸ ಬಟ್ಟೆ ಧರಿಸಿ ದೇವರಿಗೆ ನಮಸ್ಕರಿಸಿದ ನಂತರ ಬೂದು ನೀರು ದೋಸೆ ತಿನ್ನುವುದು ವಾಡಿಕೆ.



ಚತುರ್ದಶಿಯ ನಂತರ ಬರುವ ಅಮಾವಾಸ್ಯೆ ದಿನ ವಿಶೇಷವಾಗಿದೆ. ಈ ದಿನ, ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಅಂಧಕಾರವನ್ನು ತೊಲಗಿಸಿ ಪ್ರಕಾಶಮಾನವಾದ ಹೊಂಗಿರಣಗಳು ಎಲ್ಲೆಲ್ಲೂ ಪಸರಿಸಲಿ ಎಂಬ ಉದ್ದೇಶದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ. ನವ ಉಡುಪುಗಳನ್ನು ಧರಿಸಿ, ಗೃಹ ಸಿಂಗರಿಸಿ,ಮನೆಯವರೆಲ್ಲ ಒಟ್ಟಿಗೆ ಸೇರಿಕೊಂಡು ಸಿಹಿ ಅಡುಗೆ ಸವಿಯುವ ಸಮಯ ಇದಾಗಿದೆ. ಕತ್ತಲಾದಂತೆ ಪ್ರತಿ ಮನೆಯಲ್ಲೂ ಪ್ರಣತಿಗಳ ಸಾಲನ್ನು ನೋಡುವುದೇ ಕಣ್ಣಿಗೆ ಹಬ್ಬ.
ಈ ದಿನ ಸಂಜೆ ಗದ್ದೆಗೆ ದೀಪವನ್ನು ಇಟ್ಟು ‘ ಹೊಲಿ ಕೊಟ್ರು, ಬಲಿ ತಕೊಂಡ್ರು, ಬಲೀಂದ್ರ ದೇವ್ರು ತಮ್ಮ ಸಾಮ್ರಾಜ್ಯಕ್ಕೆ ತಾವೇ ಬಂದ್ರು, ಹೊಲಿಯೇ ಬಾ…. ಕೂ.. ಕೂ.. ಕೂ ‘ ಎಂದು ಬಲೀಂದ್ರನನ್ನು ಭೂಮಿಗೆ ಕರೆಯುವ ವಾಡಿಕೆ ಇದೆ. ಹಾಗೂ ಆಕಾಶದೀಪವನ್ನು ಇದೇ ದಿನ ಏರಿಸುವುದು ವಿಶೇಷ. ಈ ದಿನ ರೈತರು ಬೆಳೆದ ಧಾನ್ಯಲಕ್ಷ್ಮೀ ಯನ್ನು ಪೂಜಿಸುವ ಪುಣ್ಯಕಾಲ.ಲಕ್ಷ್ಮಿದೇವಿಯನ್ನು ನಮ್ಮಲ್ಲಿ ಪ್ರತಿಷ್ಠಾಪಿಸಿಕೊಂಡು ಸುಖ ಸಮೃದ್ಧಿಯನ್ನು ನೀಡೆಂದು ಪ್ರಾರ್ಥಿಸುವ ಸುದಿನ. ಜೊತೆಗೆ ವರ್ಷಪೂರ್ತಿ ಕೃಷಿ ಕೆಲಸಗಳಿಗೆ ಸಹಕರಿಸಿದ ಗುದ್ದಲಿ, ಕೊಡಲಿ, ಕತ್ತಿ ಇವೆಲ್ಲವನ್ನು ತೊಳೆದು ಸಿಂಗರಿಸಿ ಆರತಿ ಎತ್ತಿ ಪೂಜಿಸುವುದು ಸಂಪ್ರದಾಯ.

ಮೂರನೇ ದಿನ ಬಲಿ ಪಾಡ್ಯಮಿ. ಬಹಳ ವಿಶಿಷ್ಟವಾದ ದಿನ. ವಿಷ್ಣುವು ವಾಮನ ಅವತಾರದಲ್ಲಿ ಬಂದು ಬಲಿಚಕ್ರವರ್ತಿಯಲ್ಲಿ ತನಗೆ 3 ಅಡಿ ಜಾಗ ಬೇಕೆಂದು ಕೇಳುವನು. ಆಗ ದಾನಶೂರನಾದ ಬಲಿ ಚಕ್ರವರ್ತಿ ಸ್ವಲ್ಪ ಅಹಂಕಾರದಲ್ಲಿ ಇದೇನು ಮಹಾ? ಎಂದುಕೊಂಡು ಸಮ್ಮತಿ ಸೂಚಿಸುತ್ತಾನೆ.
ಆಗ ವಾಮನನು ಒಂದು ಹೆಜ್ಜೆಯನ್ನು ಭೂಮಿಯಲ್ಲಿ, ಇನ್ನೊಂದು ಹೆಜ್ಜೆಯನ್ನು ಆಕಾಶದಲ್ಲಿ ಇಡುವನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಬಲಿ ರಾಜನಲ್ಲಿ ಕೇಳಿದಾಗ ಬಲಿ ಚಕ್ರವರ್ತಿಗೆ ತನ್ನ ಅಹಂಕಾರದ ಅರಿವಾಗುತ್ತದೆ. ಬಲಿಯು ಮೂರನೇ ಹೆಜ್ಜೆಯನ್ನು ತನ್ನ ತಲೆ ಮೇಲೆ ಇಡು ಎಂದು ವಾಮನನಲ್ಲಿ ಬೇಡಿಕೊಂಡನು. ಮೂರನೇ ಹೆಜ್ಜೆಗೆ ಈತನು ಪಾತಾಳಕ್ಕೆ ತುಳಿಯಲ್ಪಡುತ್ತಾನೆ. ಇವನ ಮಹಾನ್ ವ್ಯಕ್ತಿತ್ವಕ್ಕೆ ಮೆಚ್ಚಿ ಮಹಾವಿಷ್ಣು ದೀಪಾವಳಿಯ ಬಲಿ ಪಾಡ್ಯಮಿಯಂದು ಬಲಿ ಚಕ್ರವರ್ತಿಗೆ ತನ್ನ ಕರ್ಮ ಭೂಮಿಗೆ ಬರುವ ವರವನ್ನು ಕರುಣಿಸುತ್ತಾನೆ. ಗೋಪೂಜೆ ಈ ದಿನದ ವಿಶೇಷ. ಗೋವುಗಳನ್ನು ದೇವರೆಂದು ನಂಬಿರುವ ಸಂಸ್ಕೃತಿ ನಮ್ಮದು. ಗೋಪೂಜೆ ದಿನ ಗೋವುಗಳಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಅರಿಶಿನ ಕುಂಕುಮ ಹಚ್ಚಿ ಕೊರಳಿಗೆ ಪುಷ್ಪಹಾರವನ್ನು ಹಾಕಿ ಸಿಂಗರಿಸುವುದನ್ನು ನೋಡಲು ಕಣ್ಣುಗಳೆರಡು ಸಾಲದು. ಅವುಗಳಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತೇವೆ ಹಾಗೂ ಗೋಗ್ರಾಸವನ್ನು ನೀಡುತ್ತೇವೆ.

ಪಾಡ್ಯದ ದಿನದಂದು ಹಬ್ಬವು ಬಹಳ ಗೌಜಿ ಗಮ್ಮತ್ತಿನಲ್ಲಿ ನಡೆಯುತ್ತದೆ. ಹೊಸ ಅಕ್ಕಿಯ ಊಟ, ಹಾಲು ಪಾಯಸ ಇತ್ಯಾದಿ ಹಬ್ಬದ ವಿಶೇಷವಾಗಿರುತ್ತದೆ. ಒಟ್ಟಾರೆಯಾಗಿ ಮನೆಯಲ್ಲಿನ ಹಿರಿಯರು ಕಿರಿಯರು ಸೇರಿಕೊಂಡು ಯಾವುದೇ ಜಂಜಾಟವಿಲ್ಲದೆ ನಗುನಗುತ್ತಾ ಹಬ್ಬದ ದಿನವನ್ನು ಕಳೆಯುತ್ತಾರೆ. ಎಲ್ಲರೂ ಸೇರಿ ಜೀವನದ ಹಿಂದಿನ ಬೆಳಕಿನ ಹಬ್ಬದ ಸವಿ ನೆನಪುಗಳನ್ನು ಮೆಲ್ಲುವುದೇ ಸೊಗಸು. ಜೊತೆಜೊತೆಗೆ ಮೂರೂ ದಿನವೂ ಹಣತೆ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಪಟಾಕಿಯನ್ನು ಸಿಡಿಸುವಾಗ ಬಹಳ ಜಾಗ್ರತೆ ವಹಿಸಬೇಕು.ಮಕ್ಕಳ ಬಗ್ಗೆ ಎಚ್ಚರವಹಿಸಬೇಕು. ಮಾಲಿನ್ಯ ರಹಿತ ಹಸಿರು ಪಟಾಕಿಗಳನ್ನೇ ಹೆಚ್ಚು ಹೆಚ್ಚು ಬಳಸಬೇಕು.

ದೀಪಾವಳಿ ದೀಪಾವಳಿ ಎಲ್ಲೆಲ್ಲೂ ದೀಪಾವಳಿ ಎನ್ನುವಂತೆ ಜಗತ್ತಿನ ಮೂಲೆ ಮೂಲೆಯಲ್ಲೂ ಬೆಳಕಿನ ಕಿರಣಗಳು ಸೂಸಲಿ. ಪ್ರತಿಯೊಂದಕ್ಕೂ ಮೂಲ ಬೆಳಕು. ಜ್ಞಾನಕ್ಕೆ ಮೂಲವು ಕೂಡ ಬೆಳಕು. ತಮಸೋಮ ಜ್ಯೋತಿರ್ಗಮಯ ಎನ್ನುವಂತೆ ಎಲ್ಲೆಲ್ಲೂ ಆವರಿಸಿದ ಕತ್ತಲು ಹಿಮದಂತೆ ಕರಗಿ ಬೆಳಕಿನ ಕಾರಂಜಿ ಚಿಮ್ಮಲಿ . ಈ ದೀಪಾವಳಿ ಹಬ್ಬದಲ್ಲಿ ದೀಪಗಳ ಮೆರುಗು ಹೆಚ್ಚಾಗಿ ಅಜ್ಞಾನ ತೊಲಗಿ ಜ್ಞಾನ ಎಲ್ಲರಲ್ಲೂ ಮನೆ ಮಾಡಲಿ.ಆಶಾವಾದಿಗಳಾಗಿ ದೀಪದಿಂದ ದೀಪ ಹಚ್ಚೋಣ. ದೀಪದಿಂದ ದೀಪ ಹಚ್ಚಿದಂತೆ ಜ್ಞಾನದ ಬೆಳಕು ಒಬ್ಬರಿಂದ ಒಬ್ಬರಿಗೆ ಪಸರಿಸಲಿ ಎನ್ನುವ ಮಹದಾಸೆಯನ್ನು ಹೊತ್ತು ದೀಪಗಳ ಹಬ್ಬಕ್ಕೆ ಸಾಕ್ಷಿಯಾಗೋಣ. ಅನುರಾಗ ಅರಳಿ ಸದಾ ಸರ್ವರೂ ನೆಮ್ಮದಿಯುತ ಬದುಕನ್ನು ಕಾಣುವಂತಾಗಲಿ ಎನ್ನುವ ಶುಭ ಹಾರೈಕೆಗಳೊಂದಿಗೆ,

ದೀಪವೇ ನಿನ್ನೀ ಪ್ರೀತಿಯ ಒಲುಮೆ
ಮೊಳಗಲಿ ಸವಿಯಾದ ಚಿಲುಮೆ
ಬೇರೂರಲಿ ಪ್ರೇಮದ ಹರಿವು
ತೊಲಗಲಿ ದ್ವೇಷ ಸ್ವಾರ್ಥದ ಕಗ್ಗತ್ತಲು

ಗಾಯತ್ರಿ ನಾರಾಯಣ ಅಡಿಗ
ಶಿಕ್ಷಕರು, ಸ. ಹಿ. ಪ್ರಾ ಶಾಲೆ ಕರ್ಕುಂಜೆ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.