You are currently viewing ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅನ್ನದ ಭಾಷೆಯಾಗಲಿ ಕನ್ನಡ

ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅನ್ನದ ಭಾಷೆಯಾಗಲಿ ಕನ್ನಡ

ಪ್ರತಿಯೊಬ್ಬ ಕನ್ನಡಿಗನ ಹೃದಯ ಡಮರುಗ ಕನ್ನಡದ ಡಿಂಡಿಮದ ನಾದವನ್ನು ಝೇಂಕರಿಸಿತು. ಕನ್ನಡ ತಾಯ ದೇಗುಲಕ್ಕೆ ಲಕ್ಷ ಲಕ್ಷ ಜ್ಯೋತಿಗಳ ಬೆಳಗಿ ಆ ಹೃದಯಂಗಮ ಬೆಳಕಿನಲ್ಲಿ ನಲಿದಾಡುವ ಸಂಬ್ರಮ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ವಿಶೇಷ ಮೆರಗು ಬಂದಿದೆ.
ರಾಜಧಾನಿ ಎ೦ದು ಕರೆಸಿಕೊಳ್ಳಲು ಅರ್ಹವಾಗಿರುವ ಬೆ೦ಗಳೂರಿನಲ್ಲಿ ಕನ್ನಡ ಮಾತನಾಡುವ ಜನರೇ ಬಹಳ ಕಡಿಮೆ. ಇದಕ್ಕೆ ಕಾರಣ ಈ ಮೂರು ರಾಜ್ಯಗಳಿಗೆ ಬೆ೦ಗಳೂರು ಹತ್ತಿರ. ವ್ಯಾಪಾರಕ್ಕೆ೦ದೊ, ಉದ್ಯೋಗಕ್ಕೆ೦ದೊ ಬರುವ ಇವರು ಇಲ್ಲಿಯೇ ನೆಲೆಯೂರಿ ಕನ್ನಡಿಗರಿಗೇ ನೆಲೆ ಇಲ್ಲದ೦ತೆ ಮಾಡಿದ್ದಾರೆ.

ಕನ್ನಡ ಭಾಷೆ ಏಕೆ ಉಳಿಯಬೇಕು?

ಈ ಹೊತ್ತು ಜಗತ್ತಿನಲ್ಲಿ ಬಳಕೆಯಲ್ಲಿರುವ ಭಾಷೆಗಳ ಸಂಖ್ಯೆ ಸುಮಾರು ೮.೦೦೦ ಕ್ಕಿಂತ ಹೆಚ್ಚು ಎಂದು ವಿದ್ವಾಂಸರ ಅಭಿಪ್ರಾಯ. ಅದರಲ್ಲಿ ದಕ್ಷಿಣ ಭಾರತದಲ್ಲಿ ಬಳಕೆಯಲ್ಲಿರುವ ಮಹತ್ವದ ಭಾಷಾಗುಂಪು ದ್ರಾವಿಡ ಭಾಷಾ ಕುಟುಂಬ. ಅತಿಪ್ರಾಚೀನ ಕಾಲದಿಂದ ಸಾಹಿತ್ಯವನ್ನು ಹೊಂದಿದ ನಾಲ್ಕು ಲಿಖಿತ ಭಾಷೆಗಳು ಇದರಲ್ಲಿವೆ. ತಮಿಳು, ಕನ್ನಡ, ತೆಲುಗು ಮತ್ತು ಮಲೆಯಾಳಿ ಭಾಷೆಗಳನ್ನೊಳಗೊಂಡಿವೆ. ಆರ್ಯ ಸಂಸ್ಕೃತಿಗಿಂತ ಮೊದಲು ಉಚ್ಛ್ರಾಯ ಸ್ಥಿತಿಯಲಿದ್ದ ಸಿಂಧೂನದೀ ಸಂಸ್ಕೃತಿಯ ಭಾಷೆ ದ್ರಾವಿಡವೆಂದು ಫಾದರ್ ಹೆರಾಸ್‌ರಂಥ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಹೀಗಾಗಿ ಕನ್ನಡ ಭಾಷೆಯೂ ಒಂದು ಪ್ರಮುಖ ಭಾಷೆಯಾಗಿ ಶತಶತಮಾನಗಳಿಂದಲೂ ಬಳಕೆಯಲ್ಲಿದೆ. ಆದರೆ ಮುಂದಿನ ನೂರು ವರ್ಷಗಳಲ್ಲಿ ಪ್ರಪಂಚದ ಸುಮಾರು ಮೂರು ಸಾವಿರ ಭಾಷೆಗಳು ನಾಮಾವಶೇಷ ಆಗುತ್ತವೆಂಬ ಆತಂಕ ವಿದ್ವಾಂಸರದ್ದು. ಜೀವಿ ವೈವಿದ್ಯಕ್ಕೂ ಭಾಷಾ ವೈವಿದ್ಯಕ್ಕೂ ಸಾಮ್ಯತೆ ಇರುವುದನ್ನು ಕಂಡ ತಜ್ಞರು ಈಗ ಜೀವಿ ರಕ್ಷಣೆಯ ಉಪಾಯಗಳಗಳನ್ನೆ ಭಾಷಾ ರಕ್ಷಣೆಗೂ ಅನ್ವಯ ಮಾಡುತ್ತಾರೆ. ಒಂದು ಅಂದಾಜಿನ ಪ್ರಕಾರ ಸರಾಸರಿ ಪ್ರತಿ ಇಪ್ಪತ್ತು ದಿನಗಳಗೆ ಒಂದೊಂದು

ಭಾಷೆ ಸಾಯುತ್ತಿದೆ. ಜಗತ್ತಿನ ಅರ್ಧಕ್ಕರ್ಧ, ಅಂದರೆ ಸುಮಾರು ಮೂರುವರೆ ಸಾವಿರ ಭಾಷೆಗಳು ಕಣ್ಮರೆ ಆಗಲಿವೆ. ಭಾಷೆಯ ಜತೆಜತೆಗೆ ಅಲ್ಲಿನವರ ಹಾಡು-ಹಸೆ, ದೇಸಿ ಔಷಧ ಪದ್ದತಿ, ಬೇಟೆಯ ಕೌಶಲ್ಯಗಳು ಕೂಡ ಮಾಯವಾಗಲಿವೆ. ಅತೀ ಶೀಘ್ರಗತಿಯಲ್ಲಿ ವಿನಾಶದ ಅಂಚಿಗೆ ಹೊರಳುತ್ತಿರುವ ಭಾಷೆಗಳ ಬಿಸಿನಕ್ಷೆಯನ್ನು ಒರೆಗಾನ್‌ನಲ್ಲಿರುವ ‘ಲಿವಿಂಗ್ ಟಂಗ್’ ಸಂಸ್ಥೆ ರೂಪಿಸಿದ್ದಾರೆ. ಕನ್ನಡ ಭಾಷೆಯು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಲು ಕೆಲವು ಕರ್ತವ್ಯಗಳನ್ನು ಕನ್ನಡ ಭಾಷೆಯನ್ನಾಡುವ ಕನ್ನಡಿಗರು ಪಾಲಿಸಬೇಕಾಗುತ್ತದೆ. ಕನ್ನಡದ ಉಳಿವಿಗಾಗಿ ಏಳಿಗೆಗಾಗಿ ಪ್ರತಿಯೊಬ್ಬ ಕನ್ನಡಿಗನ ಹೃದಯಾಂತರಾಳದಿಂದ ಪ್ರತಿಜ್ಞೆ ಮಾಡಬೇಕು.

ಶ್ರದ್ದಾಪೂರ್ವಕ ತ್ರೀವಿಧ ಸಂಕಲ್ಪಗಳು
ಮೊದಲನೆಯದಾಗಿ ಕನ್ನಡ ಭಾಷೆಗೆ ನಮ್ಮ ನಿಷ್ಟೆ.

ಕನ್ನಡ ಭಾಷೆಗೆ ನಾವು ನಿಷ್ಟರಾಗಿ ಅದನ್ನು ಬಳಸದೇ ಹೋದರೆ, ಅದರ ಪ್ರಯೋಜನವೇ ಇಲ್ಲವಾಗುತ್ತದೆ. ಮತ್ತು ಅತ್ಯಂತ ಕಹಿ ಸತ್ಯ ಎನೇಂದರೆ ಕನ್ನಡವೂ ನಮ್ಮಿಂದ ದೂರವಾಗಬಹುದು. ಕಾರಣ ಪ್ರಾದೇಶಿಕ ಭಿನ್ನತೆಗಳ ಮಧ್ಯದಲ್ಲಿ ಸಂಪರ್ಕ ಮಾಧ್ಯಮವಾಗಿ ಕಾರ್ಯಮಾಡುವ ಈ ಭಾಷೆಗೆ ನಾವು ನಿಷ್ಟರಾಗದೇ, ನಮ್ಮ ನಮ್ಮ ಪ್ರಾದೇಶಿಕ ವೈವಿಧ್ಯಗಳನ್ನೇ ಮರೆಯುತ್ತಾ ಹೋದರೆ ಸಂಪರ್ಕಕ್ಕೆ ಬಾಧೆ ಬರುತ್ತದೆ. ಈ ಕಾರಣಕ್ಕಾಗಿ ಕನ್ನಡದ ಉಳಿವಿಗಾಗಿ ನಮ್ಮ ಮನ ಮನೆಯಲ್ಲೂ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು.

ಎರಡನೆಯದಾಗಿ ಕನ್ನಡ ಭಾಷಾ ಅಭಿಮಾನ

ಕನ್ನಡ ಭಾಷೆಯ ಮೇಲೆ ಅಭಿಮಾನ ಹೊಂದಿದವರಾಗಿರಬೇಕು ಅಭಿಮಾನವಿರದೇ ಹೋದರೆ, ನಾವು ಅದನ್ನು ಸರಿಯಾಗಿ ಬಳಸಲಾರೆವು. ಸರಿಯಾಗಿ ಬಳಸದೇ ಹೋದರೆ, ಅದು ಉಳಿಯಲಾರದು. ಅದುದರಿಂದ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ನಾವು ಅದರ ಬಗೆಗೆ ಅಭಿಮಾನ ಹೊಂದಿರಬೇಕು.



ಮೂರನೆಯದಾಗಿ ಕನ್ನಡ ಭಾಷೆಯ ಮೇಲಿನ ಪ್ರಜ್ಞೆ

ಕನ್ನಡ ಭಾಷೆಯ ಬಗ್ಗೆ ಅಪರಿಮಿತವಾದ ಪ್ರಜ್ಞೆಯನ್ನು ಪ್ರತಿಯೊಬ್ಬ ಕನ್ನಡಿಗನಲ್ಲಿ ಜಾಗೃತವಾಗಿರಬೇಕು. ಅದಕ್ಕಾಗಿ ಕನ್ನಡದ ಉಳಿವಿನ ಪ್ರಶ್ನೆ ಬಂದಾಗ ಸ್ವಾರ್ಥದ ಮನೋಭಾವನೆಯನ್ನು ಬದಿಗಿರಿಸಿ “ಎಲ್ಲೇ ಇರಲಿ, ಹೇಗೆ ಇರಲಿ ಕನ್ನಡದ ಉಸಿರು ನಮ್ಮದಾಗಿರಲಿ ಎಂಬ ಪ್ರಜ್ಞೆ ನಮ್ಮಲ್ಲಿ ಬೇಕು. ಈ ಪ್ರಜ್ಞೆಯೇ ಕನ್ನಡದ ಏಳಿಗೆಗೆ ಮತ್ತು ನಮ್ಮ ಏಳಿಗೆಗೆ ಅಧಾರ ಸ್ಥಂಭವಾಗುತ್ತದೆ.

ಹಿನ್ನೆಲೆ
ಕರ್ನಾಟಕ ವಿಸ್ತಾರವಾದ ಸಕಲ ಸಂಪದ್ಬರಿತ ನಿಸರ್ಗರಮಣೀಯವಾದ ಸುಂದರನಾಡು. ಇಲ್ಲಿ ಯಥೇಚ್ಚವಾದ ಜನಬಲವಿದೆ, ಬುದ್ದಿಬಲವಿದೆ. ಇವುಗಳಿಗಿಂತಲೂ ಮುಖ್ಯವಾಗಿ ಕನ್ನಡ ನಾಡಿನ ಸಾಹಿತ್ಯ ಸಂಪತ್ತು ಅನನ್ಯವಾಗಿದೆ. ಆದಿಕವಿ ಪಂಪನಿಂದ ಮೊದಲುಗೊಂಡು ಇವರೆಗಿನ ಎಲ್ಲಾ ಕವಿಗಳು, ಸಾಹಿತಿಗಳು ಕನ್ನಡ ಭಾಷೆಯ ಅಭಿವೃದ್ದಿಗಾಗಿ ಅವಿರತ ದುಡಿದಿದ್ದಾರೆ ಹಾಗೂ ದುಡಿಯುತ್ತಿದ್ದಾರೆ. ಪಂಪನಿಗಿಂತ ಹಿಂದೆ ರಚಿತವಾಗಿದ್ದ ಸಾಹಿತ್ಯವನ್ನು ಪಂಪ
ಪೂರ್ವಯುಗದ ಸಾಹಿತ್ಯ ಎನ್ನುತ್ತೇವೆ. ಪಂಪ ತನ್ನ ಎರಡು ಗ್ರಂಥಗಳ ಕುರಿತು ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ “ಮುನ್ನಿನ ಕಬ್ಬಮನ್ನೆಲ್ಲಮ ಇಕ್ಕಿ ಮೆಟ್ಟಿದವು ಸಮಸ್ತ ಭಾರತಮಂ ಮುಂ ಪೇಳ್ದ ಕವೀಶ್ವರರಿಲ್ಲ” ಎಂದಿರುವುದು ಅವನಿಗಿಂತ ಹಿಂದೆ ಕನ್ನಡದಲ್ಲಿ ಕಾವ್ಯ ರಚಿತವಾಗಿತ್ತು ಎಂಬುವುದು ಗೊತ್ತಾಗುತ್ತದೆ. ಇದರಿಂದ ಕನ್ನಡ ಜಗತ್ತಿನ ಅತೀ ಪುರಾತನ ಭಾಷೆಗಳಲ್ಲಿ ಒಂದಾಗಿದೆ. ಸಂಸ್ಕೃತ ಮತ್ತು ತಮಿಳು ಬಿಟ್ಟರೆ ಮೂರನೇಯ ಸ್ಥಾನದಲ್ಲಿ ಕನ್ನಡ ವಿಜೃಂಬಿಸುತ್ತಿದೆ. “ಕವಿರಾಜ ಮಾರ್ಗ ಬರೆದಾಗ ಆಂಗ್ಲ ಭಾಷೆಗೆ ಲಿಪಿ

ಇರಲಿಲ್ಲ ಎಂಬುವುದು ವಿದ್ವಾಂಸರ ಅಭಿಪ್ರಾಯ. ಒಂದು ಕಾಲಕ್ಕೆ ಲ್ಯಾಟಿನ್ ನಾಟಕಗಳಲ್ಲಿ ಕನ್ನಡ ಶಬ್ದಗಳನ್ನು ಬಳಸಲಾಗುತ್ತಿತ್ತು! ೫ ಕೋಟಿ ಕನ್ನಡಿಗರ ಭಾಷೆ ಕನ್ನಡವನ್ನು ನಿರ್ಲಕ್ಷಿಸಿದ್ದು ಮಾತ್ರ ಸತ್ಯ. ಸರಳ ಸುಂದರ ಕನ್ನಡಕ್ಕೆ ಅದರದೇ ಆದ ಮಾನ್ಯತೆ ಹಾಗೂ ಮಹತ್ವವಿ ಎಂಬುದನ್ನು ಪ್ರತಿಯೋಬ್ಬರು ಅರಿಯಬೇಕು. ಸಮೃದ್ದಿಯಲ್ಲಿ ಕನ್ನಡವೇ ಮಿಗಿಲು, ಕನ್ನಡದ ಸಾಹಿತ್ಯ ಶಿಲ್ಪ, ವಚನಸಾಹಿತ್ಯ ದಾಸಸಾಹಿತ್ಯಗಳಿಗೆ ಸಮನಾದ ಸಾಹಿತ್ಯ ಜಗತ್ತಿನಲ್ಲಿಯೇ ಇಲ್ಲ. ಜಗತ್ತಿನ ಸಾಹಿತ್ಯದ ಇತಿಹಾಸದಲ್ಲಿ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯವೊಂದು ಸುವರ್ಣಯುಗವೆಂದೇ ಹೇಳಬಹುದು.

ಕೊನೆ ಮಾತು

ಇನ್ನು ಮು೦ದಾದರೂ ಪ್ರಾದೇಶಿಕ ಅಸಮತೋಲನತೆಯನ್ನು ಹೋಗಲಾಡಿಸಿ ಅಖ೦ಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲು ಸರ್ಕಾರ ಪಣತೊಡಬೇಕು. ಆ ಮೂಲಕ ಇಡೀ ದೇಶಕ್ಕೆ ಅಷ್ಟೇ ಏಕೆ ವಿಶ್ವದಲ್ಲಿಯೇ ಕರ್ನಾಟಕದ ಅಭಿವೃದ್ಧಿ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ೦ತಾಗಬೇಕು. ಕರ್ನಾಟಕ ಧರೆಯ ಮೇಲಿನ ಸ್ವರ್ಗವಾಗಬೇಕು. ಇದಕ್ಕೆಲ್ಲ ಕನ್ನಡಿಗರೆಲ್ಲಾ ಒಗ್ಗೂಡಿ ಕನ್ನಡ ನಾಡನ್ನು ಅಭಿವೃದ್ಧಿ ಪಥದತ್ತ ಕೊ೦ಡೊಯ್ಯಲು ಶ್ರಮಿಸಬೇಕು. ಕನ್ನಡ ವಿರೋಧಿಗಳನ್ನು ಗಡಿಪಾರು ಮಾಡಬೇಕು. ಸಿರಿಗನ್ನಡ೦ ಗೆಲ್ಗೆ, ಸಿರಿಗನ್ನಡ೦ ಬಾಳ್ಗೆ ಇದೇ ನಮ್ಮ ಬಾಳಿನ ಮ೦ತ್ರವಾಗಬೇಕು.
ಈ ಮೇಲೆನ ಎಲ್ಲಾ ಸೌಲಬ್ಯಗಳನ್ನು ಸಮೃದ್ದವಾಗಿ ಬಳಸಿಕೊಂಡು ಪ್ರತಿಭಾಪಲಾಯನಗೈಯದೇ ನಾಡಿಗಾಗಿ ದುಡಿದ ಕನ್ನಡದ ಏಳಿಗೆಗಾಗಿ ಹಗಲು ರಾತ್ರಿಯೆನ್ನದೇ ತಮ್ಮ ವಯೋಧರ್ಮವನ್ನೂ ಲೆಕ್ಕಿಸದೇ ಅವಿರತವಾಗಿ ಹೋರಾಡಿರುವ ಸಾಹಿತಿ ದಿಗ್ಗಜರನ್ನು ನೆನಪಿಸಿಕೊಂಡು ಅವರ ಶ್ರಮ ಸಾರ್ಥಕವಾಗಬೇಕಾದರೆ ಕನ್ನಡಕ್ಕೆ ಅಂಧರಾಗದೇ ಕನ್ನಡದ ಕಂದಮ್ಮಗಳಾಗಿ

ಬಾಳೋಣ, ಕನ್ನಡವನ್ನು ಉಳಿಸೋಣ ಬೆಳಿಸೋಣ ಎಂಬುವುದೇ ನನ್ನ ಭಾಷಣದ ಆಶಯ.

ಡಿ.ಪ್ರಾನ್ಸಿಸ್ ಕ್ಸೇವಿಯರ್
ಲೇಖಕರು,
9731395908


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.