ದಸರಾ ಹಬ್ಬದ ಶುಭಾಶಯಗಳು. ಬನ್ನಿ ತಗೊಂಡು ಬಂಗಾರದ ಹಾಗೆ ಇರೋಣ. ಅಂಬಾರಿ ಇಲ್ಲದವರು ಮುಂದಿನ ವರ್ಷ ಅಂಬಾರಿ ಏರುವಂತೆ ಆಗಲಿ. ಶುಭ ಹಾರೈಕೆಗಳು.
ದಸರಾ ಹಬ್ಬ ಬಂತೆಂದರೆ ಸಾಕು, ನಮ್ಮ ನಾಡಿನ ಜನಕ್ಕೆಲ್ಲ ತಕ್ಷಣ ನೆನಪಾಗುವುದು ಮೈಸೂರಿನ ಜಂಬೂಸವಾರಿ. ಗಜರಾಜನ ಮೇಲೆ ಚಿನ್ನದ ಅಂಬಾರಿ, ಅಂಬಾರಿ ಒಳಗೆ ನಾಡದೇವತೆ ತಾಯಿ ಚಾಮುಂಡಿಯ ಮೆರವಣಿಗೆ. ವಿಜಯದಶಮಿಯಂದು ಜಂಬೂಸವಾರಿಯ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ದೊಡ್ಡ ಸಡಗರ. ಈ ಅಂಬಾರಿಯೋ ಅಪ್ಪಟ ಚಿನ್ನದ ಅಂಬಾರಿಯಾಗಿದ್ದು ಬಹಳಾನೇ ಬೆಲೆ ಬಾಳುವಂತದ್ದು. ಆ ತಾಯಿಯ ಕೃಪಾಕಟಾಕ್ಷವಿಲ್ಲದೆಯೇ ಒಂದು ಹುಲ್ಲು ಕಡ್ಡಿಯೂ ಸಹ ಜೀವಿಸುವುದಿಲ್ಲ. ನಾಡನು ಕಾಯುವ ದೇವಿಗೆ ಚಿನ್ನದ ಅಂಬಾರಿನೇ ಶ್ರೇಷ್ಠ. ಆದರೆ ಅದಕ್ಕಿಂತಲೂ ಹೆಚ್ಚು ಮೌಲ್ಯವನ್ನು ಪಡೆದುಕೊಂಡಿರುವ ನಮ್ಮ ನಿತ್ಯ ಬದುಕಿನ ಒಡನಾಡಿಗಳಾಗಿರುವ ನಮ್ಮೆಲ್ಲರ ಅಂಬಾರಿಗಳ ಬಗ್ಗೆ ಸ್ವಲ್ಪ ತಿಳಿಯೋಣ ಜೊತೆಗೆ ಹೆಮ್ಮೆ ಪಡೋಣ. ಪ್ರತಿ ವ್ಯಕ್ತಿಯ ಜೀವನದಲ್ಲಿಯೂ ಒಂದಲ್ಲ ಒಂದು ಅಂಬಾರಿ ಇದ್ದೇ ಇರುತ್ತದೆ. ಆರು ತಿಂಗಳಿನ ಮಗುವಿನಿಂದ ಹಿಡಿದು ವೃದ್ಧಾಪ್ಯದಲ್ಲಿ ಕಾಲ ಕಳೆಯುತ್ತಿರುವ ವ್ಯಕ್ತಿಗಳವರೆಗೆ ಹಲವಾರು ಅಂಬಾರಿಗಳು ಜೀವನದ ವಿವಿಧ ಕಾಲಘಟ್ಟಗಳಲ್ಲಿ ಬಂದು ಹೋಗುತ್ತವೆ. ಅಮೂಲ್ಯವಾದ ಅಂಬಾರಿಗಳ ಪಟ್ಟಿಯನ್ನು ನೋಡುವುದಾದರೆ, ವರ್ಷ ತುಂಬಿದ ಮಗುವಿಗೆ ಕಾಲುಬಂಡಿ, ಶಾಲೆಗೆ ಹೊಂಟ ಮಗುವಿಗೆ ಸೈಕಲ್, ದೊಡ್ಡವರಿಗೆ ಬೈಕ್, ಕಾರು, ಲಾರಿ, ಸ್ಕೂಟರ್, ಜೀಪು, ಟಾಂಗಾ, ತಳ್ಳುಗಾಡಿ, ಜೆಸಿಬಿ, ಟ್ರ್ಯಾಕ್ಟರ್, ಎತ್ತಿನಗಾಡಿ, ಬಸ್ಸು ಇತ್ಯಾದಿಗಳೆಲ್ಲ ಅಂಬಾರಿಗಳೇ. ಇವೆಲ್ಲ ಅಂಬಾರಿಗಳ ವಿಶೇಷತೆ ಏನೆಂದರೆ, ಇವು ವರ್ಷಕ್ಕೊಂದು ದಿನ ಹೊರಬಂದು ಸಡಗರ ಕಾಣುವಂತಹ ವಸ್ತುಗಳಲ್ಲ. ವರ್ಷಪೂರ್ತಿ ಮನುಷ್ಯನ ಜೊತೆಯೇ ಇದ್ದು ಅವನ ಏಳಿಗೆಯ ಪ್ರತಿ ಹಂತದಲ್ಲೂ ಪಾತ್ರವಹಿಸುವ ಮೌಲ್ಯಯುತ ಸಾಧನಗಳು. ಹೆಚ್ಚು ಹೆಚ್ಚು ದುಡಿಸಿದಷ್ಟು ಖುಷಿಪಡುತ್ತವೆ ಹಾಗೂ ಮಾಲಿಕನ ಮನಸಲ್ಲೂ ಖುಷಿ ಮೂಡಿಸುತ್ತವೆ. ಅವರವರ ಅಂಬಾರಿಗಳನ್ನು ಪೂಜ್ಯನೀಯ ಭಾವದಿಂದ ದಸರಾ ಹಬ್ಬದಲ್ಲಿ ಸಿಂಗರಿಸಿ ಕಣ್ತುಂಬಿಕೊಳ್ಳುವುದೇ ಒಂದು ದೊಡ್ಡ ಸಂಭ್ರಮ. ಅಂಬಾರಿ ಯಾವುದಾದರೇನು? ಅದು ಜೀವನದ ಅವಿಭಾಜ್ಯ ಅಂಗ ಎಂದು ತಿಳಿದಿರುವ ಮನಗಳೆಲ್ಲ ಆಯುಧ ಪೂಜೆಯ ದಿನದಂದು ತಮ್ಮ ತಮ್ಮ ಅಂಬಾರಿಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಚಿಕ್ಕ ಮಕ್ಕಳು ಆಟ ಆಡುವ ಪ್ಲಾಸ್ಟಿಕ್ ವಾಹನಗಳು ಕೂಡ ಇದಕ್ಕೆ ಹೊರತಾಗಿಲ್ಲ.
ನಮ್ಮೆಲ್ಲರ ಅಂಬಾರಿಗಳೆಲ್ಲ ಚಿನ್ನದಿಂದ ಮಾಡಿರುವ ಅಂಬಾರಿಗಳಲ್ಲ. ಆದರೆ ನಮ್ಮ ಬದುಕನ್ನು ಚಿನ್ನದಂತೆ ಮಾಡುವ ಸಾರ್ವಕಾಲಿಕ ದೇವರುಗಳು. ಅವುಗಳ ಬಗ್ಗೆ ಅದೇನೋ ಒಂದು ಧನ್ಯತಾ ಭಾವ ಮನಸಿನಲ್ಲಿ ಒಡಮೂಡಿರುತ್ತದೆ. ಕಾಲುಬಂಡಿ, ಸೈಕಲ್ ಗಳು ಮಕ್ಕಳಿಗೆ ಮನೋರಂಜನೆಯನ್ನು ಕೊಟ್ಟರೆ, ಬೈಕ್, ಸ್ಕೂಟರ್, ಕಾರ್ ಗಳು ದುಡಿಯುವ ವ್ಯಕ್ತಿಗೆ ಹೆಗಲು ಕೊಟ್ಟು ನಡೆಸುವ ಸಾರೋಟುಗಳಾಗುತ್ತವೆ. ಲಾರಿ, ಟಾಂಗಾ, ಬಸ್ಸುಗಳೆಲ್ಲ ಸಾರಿಗೆ ವಾಹನಗಳಾಗಿದ್ದುಕೊಂಡೇ ಎಷ್ಟೋ ಜನರ ಬದುಕಿಗೆ ಕೆಲಸ ಒದಗಿಸಿ ಅನ್ನ ನೀಡುವ ದೇವರುಗಳಾಗಿವೆ. ಇನ್ನು ನಾವು ನೀವೆಲ್ಲ ರೈತರನ್ನು ದೇವರೆಂದು ಪೂಜಿಸಿದರೆ ಆ ನಮ್ಮ ಹೆಮ್ಮೆಯ ರೈತ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್ ಗಳನ್ನು ದೇವರೆಂದು ನಂಬಿದ್ದಾನೆ. ತರಕಾರಿ ಮಾರುವ ವ್ಯಕ್ತಿಗೆ ತಳ್ಳುಗಾಡಿ ಹೊತ್ತು ಹೊತ್ತಿಗೂ ತುತ್ತಿನ ಚೀಲ ತುಂಬಿಸುವ ದೇವರು. ಇವೆಲ್ಲ ಅಂಬಾರಿಗಳು ಮಾನವನಿಗೆ ಶ್ರಮ ಮತ್ತು ಸಮಯವನ್ನು ಉಳಿಸಿಕೊಡುವಂತಹ ಅಮೂಲ್ಯ ರತ್ನಗಳು. ಇನ್ನು ಈ ಅಂಬಾರಿಗಳನ್ನು ಕೊಳ್ಳುವುದು ಅಷ್ಟು ಸುಲಭದ ಮಾತೇನಲ್ಲ. ಪ್ರತಿ ವ್ಯಕ್ತಿಯು ಜೀವನದಲ್ಲಿ ಪಡುವ ಶ್ರಮ, ಹರಿಸುವ ಪ್ರತಿ ಬೆವರ ಹನಿಗಳ ತೂಕವು ಇಲ್ಲಿ ಗಣನೆಗೆ ಬರುತ್ತದೆ. ಬಾಲ್ಯದಲ್ಲಿ ಅಪ್ಪನ ಕಾಡಿ ಬೇಡಿ ತರಿಸಿಕೊಳ್ಳುವ ಸೈಕಲ್, ಹರೆಯದ ಕಾಲದಲ್ಲಿ ಮಕ್ಕಳಿಗೆ ಅಪ್ಪ ಕೊಡಿಸುವ ಬೈಕ್… ಮುಂತಾದ ಸಂದರ್ಭಗಳಲ್ಲಿ ಸಿಗುವ ಖುಷಿ ನಿಜಕ್ಕೂ ಕಲರ್ ಫುಲ್. ಅಪ್ಪ ಕೊಡಿಸಿದ್ದು ಅಂತ ಊರೆಲ್ಲ ಅಂಬಾರಿ ಏರಿ ತಿರುಗಾಡಿ ಹೇಳಿಕೊಂಡು ಸ್ನೇಹಿತರಿಗೆಲ್ಲ ತೋರಿಸಿ ಬರುವ ಖುಷಿಯನ್ನು ಅದೇಗೆ ಪದಗಳಲ್ಲಿ ಹಿಡಿದಿಡುವುದು? ಸಾಧ್ಯನೇ ಇಲ್ಲ. ಮಕ್ಕಳು ಚೆನ್ನಾಗಿ ಓದು-ಬರಹ ಕಲಿತು ಒಂದು ಕೆಲಸ ಅಂತ ನೋಡಿಕೊಂಡು ಬರುವ ಸಂಬಳದಲ್ಲೇ ಅಲ್ಪ ಸ್ವಲ್ಪ ಉಳಿಸಿ ಮುಂದೊಂದು ದಿನ ತಮ್ಮ ತಂದೆ-ತಾಯಿಗಳಿಗೆ ವಯಸ್ಸಾದ ಕಾಲದಲ್ಲಿ ಒಂದು ಕಾರನ್ನು ಗಿಫ್ಟ್ ಕೊಟ್ಟರೆ ಹೇಗಿರಬೇಡ ಆ ಸಂದರ್ಭ? ಅಪ್ಪ-ಅಮ್ಮನ ಕಣ್ಣಂಚಲ್ಲಿ ಜಿನುಗುವ ನೀರೇ ಅದಕ್ಕೆ ಸಾಕ್ಷಿ. ಮಕ್ಕಳನ್ನು ಹೊತ್ತು ಹೆತ್ತು ಬೆಳೆಸಿದ್ದಕ್ಕೂ ಸಾರ್ಥಕ ಎನ್ನುವ ಭಾವನೆ ಮನದ ಮೂಲೆಯಲ್ಲಿ ಮೂಡದೇ ಇರಲಾರದು.
ಇನ್ನು ನಾವು ದುಡಿದ ಹಣದಿಂದ ನಾವೇ ಸ್ವಂತ ಅಂಬಾರಿಯನ್ನು ಕೊಂಡು ಬಿಟ್ರೆ ಸಾಕು, ಒಂದು ಕೂದಲೆಳೆಯಷ್ಟು ಕೂಡ ಅದಕ್ಕೆ ನೋವಾಗಲು ಬಿಡುವುದಿಲ್ಲ. ನಮಗಿಂತ ಹೆಚ್ಚಾಗಿ ಅದನ್ನು ಕಾಳಜಿ ಮಾಡುತ್ತೇವೆ. ಬೇರೆ ಅವರು ಕೊಡಿಸಿದ್ದಕ್ಕಿಂತ ತುಸು ಹೆಚ್ಚೇ ಪ್ರೀತಿ ಅಂತ ಹೇಳಬಹುದು. ಒಂದೇ ಒಂದು ಕ್ಷಣ ಅದು ನಮ್ಮ ಕಣ್ಣ ಮುಂದೆ ಕಾಣದಿದ್ದರೆ ಸಾಕು, ಸಿಗುವ ತನಕ ಬಿಡದೆ ಹುಡುಕುತ್ತೇವೆ. ಅಷ್ಟೊಂದು ಚಡಪಡಿಸುತ್ತೇವೆ. ಚಿನ್ನದ ಅಂಬಾರಿಯನ್ನು ನೋಡಲು ಕೋಟಿಗಟ್ಟಲೆ ಜನ ಸೇರಬಹುದು. ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಈ ಅಂಬಾರಿಗಳು ದಿನವೆಲ್ಲಾ ತಿರುಗಾಡಿ ಕೋಟಿ ಕೋಟಿ ಮನಸುಗಳನ್ನು ಬೆಸೆಯುತ್ತವೆ. ಅದೆಷ್ಟೋ ಜನರ ಬಾಳ ನೌಕೆಗಳನ್ನು ದಡ ಸೇರಿಸುತ್ತವೆ.
ಇಂದಿನ ಕಾಲದಲ್ಲಿ ಅಂಬಾರಿಗಳಿಲ್ಲದ ಜೀವನವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಹೊಟ್ಟೆಪಾಡಿಗೋ, ಶೋಕಿಗೋ, ಖುಷಿಗೋ, ಜೀವನಕ್ಕೋ… ಅದೇನೇ ಇರಲಿ ನಮಗೆಲ್ಲ ಒಂದು ಅಂಬಾರಿ ಬೇಕೇ ಬೇಕು. ಯಾವುದು ದೊಡ್ಡದಲ್ಲ ಯಾವುದು ಸಣ್ಣದಲ್ಲ. ಆಯಾ ಅಂಬಾರಿಗಳು ಏನನ್ನು ಹೊತ್ತು ಸಾಗಬೇಕು ಎನ್ನುವುದು ಪೂರ್ವ ನಿರ್ಧರಿತ. ನಮ್ಮ ಹತ್ತಿರ ಇರೋದನ್ನೇ ಗೌರವಿಸೋಣ. ಪೂಜಿಸೋಣ. ಬೇರೆ ಅವರ ಶ್ರೀಮಂತಿಕೆಯ ಅಂಬಾರಿ ನೋಡಿ ಕೊರಗದಿರೋಣ. ಸಣ್ಣದಿರುವುದರಲ್ಲಿ ಖುಷಿ ಜಾಸ್ತಿ. ತೃಪ್ತಿಯಿಂದ ಜೀವನ ನಡೆಸೋಣ. ಹೆಚ್ಚು ಹೆಚ್ಚು ಶ್ರಮಪಟ್ಟು ದೊಡ್ಡ ದೊಡ್ಡ ಅಂಬಾರಿಗಳನ್ನು ಏರಲು ಪ್ರಯತ್ನಪಡೋಣ.
ನಮ್ಮ ಮನೆಯ ಅಂಬಾರಿ
ಚಿನ್ನದ ಮನಸಿನ ಅಂಬಾರಿ
ಏರುವೆ ನಾನು ಸಾವಿರ ಬಾರಿ
ಸಂಭ್ರಮದ ನಗೆಯನು ಬೀರಿ
ಮಾಡುವೆನು ಖುಷಿಯ ಸವಾರಿ
ನನ್ನದು ನಿತ್ಯ ಜಂಬೂಸವಾರಿ
ಭುವನೇಶ್ವರಿ. ರು. ಅಂಗಡಿ
ನರಗುಂದ, ಗದಗ