ಗೋಡೆಯನೇರುತ್ತಿತ್ತು ಇರುವೆ
ಬೀಳುವ ಪರಿವೆ ಇಲ್ಲದೆ,
ಏರುತಿತ್ತು..ಬೀಳುತಿತ್ತು
ಮರಳಿ….ಮರಳಿ
ಬಿದ್ದೆದ್ದು,
ತೆರೆದ ಮನದಿ
ಚುರುಕಾಗಿ,
ಹೆಜ್ಜೆ ಗುರುತಿಡಿದು,
ಏಕಾಂಗಿ ಸಮರ ಸಾರುತಿತ್ತು
ಸುತ್ತ ಮುತ್ತ
ಮೇಲೆ ಕೆಳಗೆ
ಎತ್ತ ನೋಡದೇ
ಚಿತ್ತವೇ ಅದರ-
ನಿರಾಳ ನಿಲುವಾಗಿತ್ತು
ಅಯ್ಯೋ……!
ಮತ್ತೇ..ಬಿತ್ತು
ಹಾಂ…..ಹಾಂ…
ಆಹಾ!
ಹುಮ್ಮಸ್ಸಿದೆ…ತೇಜಸ್ಸಿದೆ
ಮತ್ತೇ…ಏರುತಿದೆ
ಬದುಕಿಗೆ ಅಂಜದೆ
ಕತ್ತಲೆಗೆ ದೂರದೆ
ಬೆಳಕನು ನೆನಸದೆ ನಡೆಸಿದೆ
ಏಳುಬೀಳುಗಳ ಹುಡುಕಾಟ
ಆಹಾ…
ವಾರ್ರೆವಾಹ್…!
ಛಲದಂಕ ಮಲ್ಲ
ಸಾವಿರ ಬಾರಿ
ನೆಲ ಮುಗಿಲು ದಾಟಿ
ಒಡಲ ಕಡಲ
ಮೇರೆ ಮೀರಿ
ತಲುಪಿತು ಗುರಿ
ಸತ್ತಿತು ಕತ್ತಲ ಕೂಪ
ಅರಳಿತು ನಗೆಯ ರೂಪ
ಜೀಕಿತು ಬಾಳತೊಟ್ಟಿಲು
ಮೆಟ್ಟಿತು ಸೋಲು ಗೆಲುವು
ಇದಕ್ಕೇನಾಗಿದೆ ಧಾಡಿ
ಮನು-ಪ್ರಾಣಿಗೆ
ಗೆರೆ ಕೊರೆದು
ಕಾಲೆಳೆವ ಭರದಿ,
ಧುರಿತದಲಿ ಮುಳುಗಿ
ದಾರಿ ಕಾಯುತ
ಜಾಲವ ಬೀಸುತ
ನೆಲದ ತಳದಲಿ ತುಳಿದು
ಮಣ್ಣ ಸಮ ಮಾಡುವ ನರಿ ಬುದ್ಧಿ.
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಗಂಗಾವತಿ ,ಕೊಪ್ಪಳ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.