You are currently viewing ಶ್ರೀಮತಿ ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ

ಶ್ರೀಮತಿ ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ

ಕವಿತೆ ಮನದ ಮಾತು .ಅವರವರ ಭಾವಕ್ಕೆ , ಅಳವಿಗೆ ಸಿಕ್ಕಂತೆ ಕವಿತೆ ಹೊರಡುತ್ತದೆ. ಇದು ಹೀಗೆ ಇರಬೇಕು ಇಷ್ಟೇ ಇರಬೇಕು ಎಂದು ಯಾರೂ ಹೇಳಲಾರರು. ಹೇಳಬಾರದು ಕೂಡ . ಅವರ ಬದುಕು ಅವರಿಗೆ ಕಲಿಸಿ ಕೊಟ್ಟ ಅನುಭವಗಳು ,ಅವರ ಕಾರಯಿತ್ರಿ ಪ್ರತಿಭೆಯ ಮೂಷೆಯಲಿ ಹೊರಬಂದು ಕವಿತೆಯಾಗಿ ಹೊರಬರುತ್ತವೆ. ಇಂದು ಕನ್ನಡ ಕಾವ್ಯ ಹರಿಯುತ್ತಿರುವ ರೀತಿ ಅಗಾಧವಾದುದು . ಹಿಂದೆಂದಿಗಿಂತಲೂಹೆಚ್ಚಿಗೆ ಯುವ ಮನಸ್ಸುಗಳು ಕವಿತೆಗೆ ತೆರೆದುಕೊಂಡಿವೆ. ತಮ್ಮ ಮನದ ಭಾವಗಳನ್ನು ಮುಕ್ತ ವಾಗಿ ಹಂಚಿಕೊಳ್ಳುತ್ತಿವೆ.
ಬದುಕು ಎಂದಿಗೂ ನೇರ ದಾರಿಯಲ್ಲ. ಅಲ್ಲಿ ಅನೇಕ ಹಳ್ಳ ಕೊರಕಲುಗಳು ಕಲ್ಲು ಗುಂಡಿಗಳು ಇರುತ್ತವೆ .ಅವನ್ನು ದಾಟುತ್ತಲೆ ತನ್ನ ಬದುಕನ್ನೂ ನೇರ ಮಾಡಿಕೊಳ್ಳುವ ಕವಿ ಲೋಕದೃಷ್ಟಾರನೂ ಆಗುತ್ತಾನೆ .ತನ್ನ ಸಂಕಟಗಳನ್ನೆ ಕವಿತೆಯಾಗಿಸಿ ಅವಕ್ಕೆ ಪರಿಹಾರ ಕಂಡುಕೊಳ್ಳುವ ಕವಿ ಅವಕ್ಕೆ ಕಂಡು ಕೊಂಡ ಪರಿಹಾರವನ್ನು ಜಗತ್ತಿಗೆ ಪಾಠವಾಗಿ ಒದಗಿಸುತ್ತಾನೆ. ಅವನೆಂದು ತನ್ನ ಸಂಕಟದಲ್ಲಿ ಪಾಲುದಾರರಾಗಿರಿ ಎಂದು ಜನರನ್ನು ಕೇಳುವದಿಲ್ಲ. ಕವಿ ಬೇಂದ್ರೆಯವರು “ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ” ಎದಿರುವದನ್ನು ನೆನಪಿಸುವದು ಸೂಕ್ತ. ನನ್ನ ಸಂಕಟಗಳನ್ನು ನಾನು ಹೀಗೆ ದಾಟಿದ್ದೇನೆ ,ನಿಮಗೂ ಇಷ್ಟ ಇದ್ದರೆ ದಾಟಿ ಎಂದು ಸೂಚಿಸುತ್ತಾನಷ್ಟೇ. ಕವಿ ಎಂದೂ ಹೇಳುವದಿಲ್ಲ ಸೂಚಿಸುತ್ತಾನೆ.
ಕಾವ್ಯ ಅವರವರ ಬೊಗಸೆಗೆ ಸಿಕ್ಕ ನೀರು . ಯಾರ ಪಾತ್ರೆ ದೊಡ್ಡದೋ ಅವರು ತಮಗೆ ಸಿಕ್ಕಷ್ಟು ತುಂಬಿಕೊಳ್ಳುತ್ತಾರೆ . ಸಾಗರ ನಿನ್ನ ಕಡಲು ನನ್ನಬೊಗಸೆ ಚಿಕ್ಕದು ನನಗೆ ಎಷ್ಟು ಸಾಧ್ಯವೋ ಅಷ್ಟು ತುಂಬಿಕೊಂಡಿದ್ದೇನೆ ಎನ್ನುವ ಕವಿ ಅದನ್ನೆ ಹನಿಹನಿಯಾಗಿಸಿ ಲೋಕಕ್ಕೆ ನೀಡುತ್ತಾನೆ. ಅವನೊಬ್ಬ ತನಗೇನೂ ಇಟ್ಟುಕೊಳ್ಳದ ನಿಸ್ವಾರ್ಥ ಭಾವಜೀವಿ .ತನ್ನೊಳಗಿನ ನೋವೋ ನಲಿವೋ ಎಲ್ಲವನ್ನು ಜಗಕ್ಕೆ ಅರ್ಪಿಸಿ ಮುಕ್ತನಾಗುತ್ತಾನೆ. ಇದು ಕವಿಯ , ಕವಿತೆಯ ವೈಶಿಷ್ಟ್ಯ.
ಗಂಗಾವತಿಯ ಶ್ರೀಮತಿ ಸವಿತಾ ಮುದ್ಗಲ್ ಅವರ ಮೊದಲ ಕವನ ಸಂಕಲನ ಕೈಲಿ ಹಿಡಿದಾಗ ನನ್ನ ಮನಸ್ಸಲ್ಲಿ ಮೂಡಿದ ಭಾವನೆಗಳು ಇವು. ಮೂಲತ: ಮುದ್ಗಲ್ ನವರಾದ ಅವರು ಎಂ.ಬಿ.ಏ ಪದವಿ ಪಡೆದು ಬ್ಯಾಂಕ್ ಉದ್ಯೋಗ ಮಾಡಿದವರು , ಜೊತೆಗೆ ಮದುವೆಯಾಗಿ ಸುಂದರ ಕುಟುಂಬಕ್ಕೆ ಒಡತಿಯಾದವರು . ಇಂದು ಹೊಸಕಾಲದ ಬರಹಗಾರರಿಗೆ ಬರೆಯಲು ಮುಕ್ತ ಪ್ರೇರಣೆ ಒದಗಿಸುವ ಸಾಮಜಿಕ ಅಂತರ್ಜಾಲ ಬ್ಲಾಗ್ ಮತ್ತು ಪತ್ರಿಕೆಗಳನ್ನೂ ಬಳಸಿಕೊಂಡು ಹಲವಾರು ರೀತಿಯ ಬರಹವನ್ನು ಅವರು ಬರೆಯುತ್ತ ಬಂದವರು. ಅನೇಕ ಪತ್ರಿಕೆಗಳಿಗೆ ಅವರು ನಿರಂತರ ಕಿರುಲೇಖನಗನ್ನು ಬರೆದಿದ್ದಾರೆ. ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದರು. ಅವು ಇಂಥ ಪ್ರತಿಭಾವಂತೆಯಾದ ಕವಿತೆಗೆ ಒಲಿದುದು ಅಚ್ಚರಿಯೇನಲ್ಲ. ಅಲ್ಲಿ ಇಲ್ಲಿ ಬರೆಯುತ್ತ ಕವಿಗೋಷ್ಟಿಗಳಲ್ಲಿ ಓದುತ್ತ ಬಂದ ಕವಿತೆಗಳನ್ನು ಸಂಗ್ರಹವಾಗಿಸಿ ‘ನೆರಳಿಗಂಟಿದ ಭಾವ’ ಎಂಬ ಹೆಸರಿನಿಂದ ಸಂಕಲನವಾಗಿಸಿದ್ದಾರೆ.
ಸಂಕಲನದ ಹೆಸರು ತುಂಬ ವಿಶಿಷ್ಟ ಎನ್ನುವಂತಿದೆ . ಕೆಲವು ಭಾವಗಳು ನಮಗಂಟಿರುವದಿಲ್ಲ. ಅವನ್ನು ನಮಗೆ ಅಂಟಿಸಿಕೊಳ್ಳುವದು ಕೆಲವೊಮ್ಮೆ ಅಗತ್ಯವಿಲ್ಲ. ಅವು ನಮ್ಮ ನೆರಳಿಗೆ ಬಿಡದ ಅಂಟಿ ಕೊಂಡಿರುತ್ತವೆ. ಅವನ್ನು ಮನದೊಳಗೆ ಬಿಟ್ಟುಕೊಳ್ಳುವದೂ ಅಪಾಯವೇ. ಅದರೆ ಅವು ನಮ್ಮನೆರಳಾದ್ದರಿಂದ ನಮ್ಮನ್ನು ಬಿಟ್ಟಿರಲಾರವು. ಅಂತೆಯೇ ಕವಿಯತ್ರಿ ನೆರಳು ಎಂಬ ಕವಿತೆಯಲ್ಲಿ
ನಮ್ಮಯ ನೆರಳೊಂದೆ ಸದಾ ಜೊತೆಗಿಹುದು
ಕತ್ತಲಾದರೆ ಕಾಣದಾಗ ಕಪ್ಪನೆಯ ನೆರಳದು
ಎನ್ನುವ ಕವಿತೆ ಬರಿ ನೆರಳಿನ ಬಗ್ಗೆ ಮಾತನಾಡುವದಿಲ್ಲ. ನೆರಳಿನಲ್ಲಿ ಅಂತರವೇನಿದೆ? ಎಂದು ಪ್ರಶ್ನಿಸುತ್ತದೆ.

ಹೆಣ್ಣು ಗಂಡಾದರೇನು? ಬಾಳಿನಲ್ಲಿ ಸಮವಲ್ಲವೇನು?
ಪ್ರಕೃತಿಯ ಸೊಬಗಿನ ಮುಂದೆ ಎಲ್ಲ ಗೌಣವಲ್ಲವೇನು?

ಹೆಣ್ಣು ಗಂಡಿನ ನಡುವೆ ಅಂತರವಿಲ್ಲ ಎಂದು ಸಾರುವುದೆ ಇಲ್ಲಿನ ಭಾವ ಅದೇ ನೆರಳಿಗಂಟಿದ ಭಾವ,.. ನಾವು ಎಷ್ಟೇ ಮುಂದುವರೆದಿದ್ದರೂ ಇಥ ಅಂತರಗಳು ಸಮಾಜದಲ್ಲಿ ಇನ್ನು ನೆರಳಿಗಂಟಿದ ಭಾವ ದಂತೆ ಉಳಿದೇ ಬಿಟ್ಟಿವೆ ಎನ್ನುವದು ಕವಿತೆ ಸೂಚಿಸುವ ಧ್ವನ್ಯಾರ್ಥವಾಗಿದೆ.

೮೪ ಕವಿತೆಗಳ ಈ ಸಂಕಲನ ತನ್ನ ಸರಳ ನಿರೂಪಣೆಯಿಂದಾಗಿ ಮನಸೆಳೆಯುತ್ತದೆ. ಕವಿಯತ್ರಿ ತನಗನಿಸಿದ ಭಾವಗಳನ್ನು ಅತ್ಯಂತ ಮುಕ್ತವಾಗಿ ನವಿರಾಗಿ ಇಲ್ಲಿ ನಿರೂಪಿಸಿದ್ದಾರೆ. ಬದುಕಿನಲ್ಲಿ ಅವರಿಗೆ ಕಂಡು ಬಂದ ಎಲ್ಲ ಭಾವಗಳೂ ಕವಿತೆಯಾಗಿವೆ. ಕುರುಡ ಕಾಂಚಾಣದ ಕುಣಿತವನ್ನು ಕವಿಯತ್ರಿ ಕಮಡ ರೀತಿ ಭಿನ್ನವಾಗಿದೆ. ರೈತರ ದುಡಿಮೆಗೆ ಪರಿಶ್ರಮಕ್ಕೆ ಸಿಗದ ಮಹತ್ವ ಕವಿತೆಗೆ ಪ್ರೇರಣೆಯಾಗಿದೆ. ಭಾಷೆ ಯನ್ನು ಕುರಿತು ಚರ್ಚಿಸುವ ಕವಿಯತ್ರಿ ಒಮ್ಮೊಮ್ಮೆ ಆಗದ ಮಾತು , ಮನ ಮುರಿಯುವ ಭಾಷೆ ಬಂಧಗಳನ್ನೂ ಮುರಿಯುತ್ತದೆ ಎನ್ನುತ್ತಾರೆ. ಮಾತು ಇನ್ನೊಬ್ಬರನ್ನು ಗೌರವಿಸಿ ಬರಬೇಕೆ ಹೊರತು ಅಗೌರವಿಸಿ ಅಲ್ಲ ಎನ್ನುವ ಅವರ ಕವಿತೆ

ಮೌನದ ಭಾಷೆಗೆ ನೂರಾರು ಕಲ್ಪನೆಗಳು
ಮೌನ ಮುರಿದರೆ ಮತ್ತದೇ ಮಾತುಗಳು

ಹೀಗೆ ಇಡಿ ಬದುಕೇ ಮೌನ –ಮಾತಿನ ಜುಗಲ್ಬಂದಿಯಾಗಿರುವದುನ್ನು ಅವರ ಕವಿತೆ ಚಿತ್ರಿಸಿದೆ. ಮತ್ತೆ ಮತ್ತೆ ಸಮಾಜದಲ್ಲಿ ಹೆಣ್ಣು ಅನುಭವಿಸಿದ ಶೋಷಣೆಯನ್ನು ಕವಿಯತ್ರಿ ವಿರೋಧಿಸುತ್ತಾರೆ. ಗಂಡ ಹೆಂಡಿರ ಬಾಳು ಸಮನಾದ ಜೋಡೆತ್ತಿನ ಬಂಡಿಯಂತೆ ಇರಬೇಕೆ ಹೊರತು ಇಜ್ಜೋಡು ಆಗಬಾರದು ಎನ್ನುವ ರೂಪಕವನ್ನು ಸಶಕ್ತವಾಗಿ ಬಳಸಿಕೊಂಡಿದ್ದಾರೆ.

ಜೋಡೆತ್ತು ಇದ್ದರೆ ಮುಂದೋಗುವದು ಬಂಡಿಯು
ಜೋಡಿಮನಗಳು ಒಂದಾಗಿದ್ರೆ ಆರ್ಶವಾದಿಯು



ಜೋಡಿಮನಗಳು ಪೊಂದಾಗುವದು ಆದರ್ಶವಾದವೆನ್ನುವದು ಕವಿಯತ್ರಿಗೆ ಗೊತ್ತಿದೆ. ಅದು ಆದರ್ಶವಷ್ಟೇ ಆದರ್ಶ ಬದುಕಲ್ಲಿ ನಿಜವಾದರೆ ಅಂಥ ಸೌಭಾಗ್ಯ ಯಾರಿಗಿದೆ. ಕವಿಯ ಕನಸು ಇದು. ತಮಗೆ ಏನು ಅನಿಸುತ್ತದೆಯೋ ಅದನ್ನು ಕವಿತೆಯಾಗಿಸುವ ಕೌಶಲ ಸವಿತಾ ಅವರದು. ಅವರು ಕವಿತೆ ರಚನೆಗಾಗಿ ತಡಕಾಡಿಯೇ ಇಲ್ಲ ಹಾಗಾಗಿ ‘ಪರಮಾತ್ಮ’ ದಂತಹ ಪದ್ಯಗಳು ಬರುವದು ಸಾಧ್ಯವಾಗಿದೆ. ಆದರೆ ‘ತಿರುವು’ ದಂತಹ ಕವಿತೆಗಳು ಕವಿಯತ್ರಿಯ ಆಶಾದಾಯಕತಗೆ ಸಾಕ್ಷಿಯಾಗಿವೆ. ಸೋಲುಗಳಿಗೆ ಹೆದರದ ಕವಿಯತ್ರಿ ಇಂದಲ್ಲ ನಾಳೆ ಗೆಲ್ಲುವೆನೆನ್ನುವ ಒಂದು ಭರವಸೆ ಇರಲಿ ಬಳಿಗೆ ಎನ್ನುತ್ತಾರೆ.

ತಿರುವುಗಳೆ ಜೀವನವು ಆಗುವ ಪಾಠಗಳಿಗೆ
ತಿರುಗಿ ನೋಡದಿರಿ ಕಳೆದೋದ ಆಘಾತಗಳಿಗೆ

ಎನ್ನುವಲ್ಲಿ ಯಾವು ತಿರುವುಗಳಿಗೆ ನಾವು ಸ್ಪಂದಿಸಬೇಕು ? ಯಾವುದಕ್ಕೆ ಸ್ಪಂದಿಸಬಾರದು ? ಎಂಬುದರ ಸ್ಪಷ್ಟತೆಯಿದೆ. ಈಚೆಗೆ ಸಮಾಜಿಕ ಜಾಲತಾಣಗಳು ಒಂದೊಂದು ಟಾಸ್ಕ ಕೊಟ್ಟು ಕವಿತೆ ಬರೆಯ ಹಚ್ಚುತ್ತಿವೆ. ಇವೆಲ್ಲ ತತ್ಕಾಲಕ್ಕೆ ಹುಟ್ಟುವ ಇನಸ್ಟಂಟ್ ರಚನೆಗಳು. ಇವುಗಳನ್ನು ಹೇಗೆ ಪರಿಭಾವಿಸಬೇಕೋ ತುಂಬ ಕಷ್ಟದ ಸಂಗತಿ. ಇಂದು ಸಾಮಾಜಿಕ ಜಾಲತಾಣದ ತುಂಬ ಇಂಥಹ ಪ್ರಯೋಗಗಳನ್ನು ಗಮನಿಸುತ್ತೇವೆ .ಈ ಬಗೆಯ ಕವಿತೆಗಳಿಗೆ ‘ಮ ಅಕ್ಷರದ ಕಾಗುಣಿತ’ ಕವನ, ‘ಗಾದೆಗೊಂದು ಕವನ’ ಇವುಗಳನ್ನು ಹೆಸರಿಸಬಹುದು. ಪುನರ್ಜನ್ಮ ಕವಿತೆಯಲ್ಲಿ ಕನ್ನಡನಾಡಲ್ಲಿ ಮತ್ತೆ ತಾನು ಜನಿಸುವ ಭಾಗ್ಯ ಸಿಗಲಿ ಎಂದು Pಕೇಳದೆಯೇ ಕವಿಯಿತ್ರಿ ಕನ್ನಡದ ಭಾಗ್ಯಕ್ಕೃ ಪುನರ್ಜನ್ಮ ಬರಲಿದೆ ಎನ್ನುತ್ತಾರೆ. ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡಮ್ಮ ಮೊದಲಾದ ಕವಿತೆಗಳಲ್ಲಿ ಕನ್ನಡ ನಾಡಿನ ನೆಲ ಜಲ ಸಂಸ್ಕೃತಿ ವರ್ಣನೆ ಇದೆ. ‘ಲಿಪಿಗಳರಾಣಿ ಕನ್ನಡ’ಎಂದು ಕನ್ನಡ ಲಿಪಿಯನ್ನು ವರ್ಣಿಸಿದ್ದಾರೆ. ದೇಶವನ್ನು ಬಣ್ಣಿಸುವ ಅವಕಾಶದಿಂದ ಕವಿಯತ್ರಿ ತಪ್ಪಿಸಿಕೊಳ್ಳುವದಿಲ್ಲ. ದೇಶದ ಸ್ವಾತಂತ್ರ್ಯ ಮಹೋತ್ಸವಕ್ಕೆ ಅಮೃತವರ್ಷ ಬಂದಿರುವ ಹಿನ್ನೆಲೆಯಲ್ಲಿ
ಬಂದಿದೆ ಸುಂದರ ಘಳಿಗೆ
ತಂದಿದೆ ಹರುಷ ಮನಗಳಿಗೆ
೭೫ ರ ಸ್ವಾತಂತ್ರ್ಯ ಆಚರಣೆಗೆ
ಸಿದ್ಧರು ಅಮೃತದ ಮಹೋತ್ಸವಕೆ
ಎಂದು ಮನದುಂಬಿ ಹಾಡುತ್ತಾರೆ,
‘ಕಾರ್ಗತ್ತಲಲ್ಲಿ ಮಿಂಚು ಮನದಲ್ಲೇನೋ ಸಂಚು’ ಮೊದಲಾದ ಕವಿತೆಗಳಲ್ಲಿ ಮತ್ತೊಬ್ಬರಿಗೆ ತೊಂದರೆ ಕೊಡದಿರಿ ಎಂದು ತಮಗೆ ಅನ್ಯಾಯ ಮಡಿದವರನ್ನು ಕೇಳುವಂತಿದೆ. ಕವಿ ಎಷ್ಟೇ ಕೇಳಲಿ ಜಗತ್ತಲ್ಲಿ ದ್ರೋಹ , ಅನ್ಯಯಗಳು ಇರುವವೇ.ಆದರೆ ಸೂಕ್ಷ್ಮ ಮನಸ್ಸಿನ ಕವಿಗೆ ಇದು ಭಾಧಿಸುತ್ತದೆ. ಅಷ್ಟೇ. ಇಂಥದೇ ಭಾವ ‘ಅಂತರಂಗದ ಕವಿತೆ’ ಯದೂ ಕೂಡ.ಮನದ ಮಾಲಿನ್ಯ ಕಡಿಮೆಯಾಗಲಿ ಎಂಬ ಸೂಚನೆಯನ್ನು ಈ ಕವಿತೆಯಲ್ಲಿ ಕವಿಯತ್ರಿ ನೀಡುತ್ತಾರೆ.

‘ಕಣ್ಣೀರ’ನ್ನು ತನ್ನ ಆತ್ಮೀಯ ಬಂಧು ಎನ್ನುವ ಕವಿತೆಯೂ ಕುತೂಹಲ ಹುಟ್ಟಿಸುತ್ತದೆ. ಮನುಷ್ಯನ ಎಲ್ಲ ನೋವುಗಳಿಗೆ ಬಂದು ಜೊತೆಯಾಗುವ ಕಣ್ಣಿರು ನಿಜವಾದ ಅತ್ಮಬಂಧುವೇ ಅಗಿರುವದರಿಂ ದ ಅವರು ಕಣ್ಣೀರನ್ನು

ದುಮ್ಮಾನ ಅಳಿಸಲು
ದು:ಖಕ ಎಜೊತೆಯಾಗಿರುವೆ
ಕಣ್ಣೀರ ಅತ್ಮೀಯತೆ ನೀನು

ಎನ್ನುವದೇ ಅಲ್ಲದೇ ‘ನನ್ನ ಕಂಗಳ ಗೆಳತಿ ನೀನು’ ಎಂದು ಕರೆಯುತ್ತಾರೆ. ಹೀಗೆ ಸ್ತ್ರೀಯ ಮನದ ಭಾವಗಳನ್ನು ಅವರು ತುಂಬ ಸರಳವಾಗಿ ಮತ್ತು ಮುಕ್ತವಾಗಿ ವ್ಯಕ್ತ ಮಾಡುವದರಿಂದಲೇ ಅವರ ಕವಿತೆಗಳು ಇಷ್ಟವಾಗುತ್ತವೆ.

ಪ್ರೀತಿಯಲ್ಲದ ಕವಿತೆ ಇರಲುಂಟೇ? ಮನದಿ ಮಿಡಿದಿದೆ ಮೋಹನ ರಾಗ ಎನ್ನುವ ಕವಿತೆಗಳು
ಕೆಲವು ತುಂಬ ಅನುಭವ ಪೂರ್ಣ ಕವಿತೆಗಳನ್ನು ಶ್ರೀಮತಿ ಸವಿತಾ ಅವರು ಬರೆದಿದ್ದಾರೆ. ಅವರ ‘ಬದುಕೊಂದು ಭಾಂಡಾರ’ ಕವಿತೆಯನ್ನು ಓದಿದರೆ ಮನಸ್ಸು ಪ್ರಫುಲ್ಲಿತವಾಗದಿರದು.

ಭುವಿಯೊಳು ಬಾಳೊಂದು
ಸುಂದರ ಭಾಂಢಾರ
ಅರಿತು ನಡದರೆ ಆನಂದ
ತುಂಬಿದ ಸಾಗರ

ಈ ಸಾಲುಗಳಿಗೆ ಪ್ರತಿ ಯಾರು ಅಡಿಯಾರು? ಕನ್ನಡದಲ್ಲಿಯೇ ಅಗಲಿ, ಇತರ ಭಾಷೆಗಳಲ್ಲಿಯೇ ಹೀಗೆ ಬದುಕಿಗೆ ಮಾರ್ಗದರ್ಶನ ಮಡುವ ಕವಿತೆಗಳಿಗೆ ಕೊರೆಯೇನಿಲ್ಲ . ದಾಸರೇ “ ಮಾನವ ಜನ್ಮ ದೊಡ್ಡದು ಇದ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ “ ಎಂದು ತಳಿ ಹೇಳಿಲ್ಲವೇ ? ಇದೇ ಬಗೆಯ ಸಾಲುಗಳು ಈ ಕವಿತೆಯಲ್ಲಿವೆ. ಅವರು ಗಂಡು ಹೆಣ್ಣಿನ ‘ಬೆಸುಗೆ ಮದುವೆಯಿಂದಲೇ’ ಎನ್ನುವ ಕವಿಯತ್ರಿ ದಂಪತಿಗಳ ನಡುವೆ ಸಾಮರಸ್ಯ ಇದ್ದರೆ ಆ ಪ್ರೀತಿ ಹಡೆದವ್ವನ ಪ್ರೀತಿ ನೆನಸುತ್ತದೆ ಎನ್ನುವದು ವಿನೂತನವಾಗಿದೆ. ಹೆಣ್ಣಿನ ಮನಸ್ಸನ್ನು ಅರಿತು ನಡೆಯುವ ಪತಿಯಿದ್ದರೆ ಅಂಥ ಸಂಸಾರ ‘ನಂದಾದೀಪ’ ಎನ್ನುತ್ತಾರೆ. ಆದ್ದರಿಂದಲೇ ಅವರ ಅಂತಿಮ ಮಾತು “ ಬದುಕೆಂಬ ಭಾವಗೀತೆಗೆ ಒಲವೆ ರಾಗ” ಎನ್ನುವದಾಗಿದೆ. ನಿಜ, ಅಂತಹ ಪ್ರೀತಿ ಸಿಕ್ಕರೆ ಬಾಳೇ ಬಂಗಾರ ಎನನುವ ಕವಿತೆಗೆ ನಾವೂ ದನಿಗೂಡಲೇಬೇಕು. ಆದರೆ ಸಿಗುವದೂ ಕಷ್ಟವೇ,.

ಪುರಾಣ ಕಾವ್ಯದ ನಾಯಕರಲ್ಲಿ ನಮಗೆ ಪ್ರಿಯರಾದವರು ಭೀಮ, ಅರ್ಜುನ , ಕೃಷ್ಣ, ಕರ್ಣನಂಥವರು. ಅದರೆ ಶಕುನಿಯನ್ನು ಕುರಿತು ಕವಿಯತ್ರಿ ಒಂದು ಕವಿತೆ ಬರೆದಿದ್ದಾರೆ. “ಮಹಾಭಾರತದಲ್ಲಿ ಎಂದೂ ಮರೆಯದ ವ್ಯಕ್ತಿಯಿವನು” ಎಂದು ಬಣ್ಣಿಸುತ್ತಾರೆ. ಹಾಗೆಯೇ ದೃತರಾಷ್ಟ್ರನ ಅಂಧ ಪ್ರೇಮವನ್ನು ಕವಿಯತ್ರಿ ಗುರುತಿಸುತ್ತಾರೆ. ಅವನ ಅಂಧಪ್ರೇಮವೇ ಅವನ ಮಕ್ಕಳ ಬಾಳಿಗೆ ಮುಳುವಾದುದನ್ನು ಗುರುತಿಸುವ ಕವಿತೆ
ಧೃತರಾಷ್ಟ್ರನ ಅಂಧಪ್ರೇಮ
ಕೌರವರ ಪಾಲಿಗೆ ಅಂತ್ಯವಾಯಿತು
ಪಿತೃವಾತ್ಸಲ್ಯ ಮೋಹದಿ ತನ್ನ
ನೂರೊಂದು ಮಕ್ಕಳ ಅವನತಿಯಾಯಿತು
ನಾಲ್ಕೇಸಾಲಿನಲ್ಲಿ ಮಹಾಭಾರತದ ಸಾರವನ್ನು ಹಿಡಿದಿರುವ ರೀತಿಯೂ ಕುತೂಹಲಕರವೇ.
ಶ್ರೀಮತಿ ಸವಿತಾ ಅವರು ಕವಿತೆಗೆ ಆಯ್ದುಕೊಳ್ಳುವ ವಸ್ತು ತುಂಬ ಆಕರ್ಷಕವಾದವು. ಉತ್ತರ ಕರ್ನಾಟಕದ ನೆಲದವರಾದ ಈ ಕವಿಯತ್ರಿ ಜೋಳದ ರೊಟ್ಟಿಯನ್ನು ಕುರಿತೂ ಕವಿತೆ ಬರೆದಿದ್ದಾರೆ. ಅವ್ವನ ಕೈಯ ರೊಟ್ಟಿಯನ್ನು ತಾವು ಬಲ್ಯದಲ್ಲಿ ಪಡೆದ ಸವಿಯನ್ನೂ ಕವಿತೆಯಾಗಿದ್ದಾರೆ. ದೇಶ ಕಾಯುವ ಧೀಮಂತ ಸೈನಿಕನ ನ್ನು ಕವಿತೆಯ ಮೂಲಕ ಗೌರವಿಸಿದ್ದಾರೆ. ರಾಧೆಯನ್ನು “ಕೃಷ್ಣನ ಮನಗೆದ್ದ ರಾಧೆ’ ಎಂದು ಕರೆದು
ಕೃಷ್ಣನ ಮನದ ರಾಧೆ ನೀನು
ಜಗಕೆ ಪ್ರೀತಿಯ ಮಾದರಿ ರಾಧೆ ನೀನು

ಹೀಗೆ ಸುಂದರವಾಗಿ ಅವಳನ್ನು ಬಣ್ಣಿಸಿದ್ದಾರೆ. ಹಾಗೆಯೇ ಕೃಷ್ಣನನ್ನು ಕುರಿತೂ ಒಂದು ಪದ್ಯವನ್ನು ಬರೆದಿದ್ದಾರೆ.
ಶ್ರೀಮತಿ ಸವಿತ ಅವರ ಕವಿತೆಗಳಲ್ಲಿ ಆಕ್ರೋಶ ಕಡಿಮೆ.ಮಹಿಳೇಯ ಮೇಲಿನ ದೌರ್ಜನ್ಯವನ್ನು ಕಂಡಾ ಗ ಅವರ ಮನಸ್ಸು ಸಿಡಿದೇಳುತ್ತದೆ. ಉಳಿದಂತೆ ಅವರಲ್ಲಿ ಆ ಭಾವನೆ ಕಡಿಮೆ . ಆದರೂ ‘ದೇವರಿಲ್ಲ ಬಿಡಿ , ದೇವರಿಗೆ ಕಣ್ಣಿಲ್ಲ ಬಿಡಿ’ ಎನ್ನುವಂತಹ ಕವಿತೆಗಳಲ್ಲಿ ಈ ಆಕ್ರೋಶ ಕುದಿಗೊಂಡು

ಮುಕ್ಕೋಟಿ ದೇವರು ಇರುವರು
ಇದ್ದೋರಿಗೆ ದಯೆ ತೋರುವರು

ಎಂದು ದೇವರೂ ಕೂಡಾ ಉಳ್ಳವರ ಪರ ಇರುವದನ್ನು ಟೀಕಿಸುತ್ತಾರೆ. ಇಡೀ ಸಂಕಲನದ ತುಂಬ ಹೆಣ್ಣು ಅವಳ ಭಾವನೆಗಳಿಗೆ ಸಾಕಷ್ಟು ಆಸ್ಪದ ಸಿಕ್ಕಿದೆ. ತಾಯಿಯನ್ನು ಬಣ್ಣಿಸುವ ಕವಿಯತ್ರಿ ‘ಅಮ್ಮನ ಒಡಲು ಕರುಣೆಯ ಕಡಲು ‘ ಎನ್ನುವದು ಅವರ ಕಾವ್ಯದ ಪ್ರಧಾನ ಭಾವವಾಗಿದೆ.

ಕವಿಯತ್ರಿ ಕುವೆಂಪು ಅವರನ್ನು ರಸ ಋಷಿ ಎಂದು ಕರೆದಿರುವದು ಉಚಿತವಾಗಿದೆ. ತಾಯಿಯನ್ನು ಕುರಿತ ಅವ ಕವಿತೆಗಳು ಅವವನ ತ್ಯಾಗವನ್ನು ಬಣ್ಣಿಸುತ್ತವೆ. ‘ತಾಯಿ ಗರ್ಭ ಗುಲಾಬಿ ತೋಟ;’ ಎಂದು ಕವಿತೆ ಬರೆಯುತ್ತಾರೆ. ಅವ್ವನನ್ನು ಕುರಿತು ‘ತಾಯಿ ಇವಳು ‘ ಎನ್ನುವ ಕವಿತೆಯಲ್ಲಿ

ಹೆಣ್ಣಾಗಿ ಹುಟ್ಟಿದ ಮೆಲ ತಂದೆಯ ಮಗಳಾಗಿ
ಗಂಡಿನಿಗೆ ಮಡದಿಯಾಗಿ, ಮಕ್ಕಳ ಮಮತೆಯ ತಾಯಿಯಾಗಿ
ಹೊತ್ತು ಜವಾಬ್ದಾರಿ ಬದುಕ ಕಟ್ಟಿ
ಹೆಸರು ಉಳಿಸಲು ಹೆಣಗಾಡುವ ಹೆಣ್ಣು ಅವಳು
ಎಷ್ಟಾದರೂ ಅವಳು ತಾಯಿಯಲ್ಲವೇ?

ಎಂದು ಬರೆಯುತ್ತಾರಾದರೂ ತಾಯಿಯ ಕುರಿತ ವರ್ಣನೆಯೇನೂ ಚೆನ್ನಾಗಿದೆ. ಆದರೆ ಕವಿತೆ ಯಾಗಿದೆಯೇ? ಗದ್ಯದ ಸಾಲುಗಳಂತೆ ಬರೆಯುತ್ತ ಹೋಗುವ ಇಂಥ ರಚನೆಗಳು ಕವಿತೆಯಾಗುವಲ್ಲಿ ಪಳಗಬೇಕಿದೆ. ಇದನ್ನೇ ಮುನ್ನುಡಿ ಬರೆದಿರುವ ಡಾ. ಮುಮ್ತಾಜ್ ಬೇಗಂ ರವರು “ಸವಿತಾರ ಮೊದಲ ಸಂಕಲನವಾದ್ದರಿಂದ ಸಹಜವಾಗಿಯೇ ವಾಚ್ಯಾರ್ಥಗಳ ಸ್ವರೂಪ ಹೇರಳವಾಗಿ ಹೊಂದಿದ್ದರೂ ಆಶಯದ ದೃಷ್ಟಿಯಿಂದ ಕವಿತೆಗಳು ಸಹೃದಯರಿಂದ ಓದಿಸಿಕೊಳ್ಳುತ್ತವೆ” ಎಂಬ ಸಾಲಿನಲ್ಲಿ ಸೂಕ್ಷ್ಮವಾಗಿ ಸೂಚಿಸಿದ್ದಾರೆ.
ಕವಿತೆ ಸರಳವಾದಷ್ಟೂ ಜಾಳಾಗುತ್ತದೆ. ವಿವರಣಾತ್ಮಕ ಹೇಳಿಕೆಗಳು ಕವಿತೆಯಾಗಲಾರವು ಇದು ಅವರ ಮೊದಲ ಕವಿತಾ ಸಂಕಲನವಾಗಿರುವದರಿಂದ ಇಂತಹ ರಚನೆಗಳು ಇರುವವೇ. ಮುಂದಿನ ಸಂಕಲನಗಳಲ್ಲಿ ಕವಿತೆಯ ಅಂತರಂಗವನ್ನು ಸವಿತಾ ಅವರು ಕಂಡುಕೊಳ್ಳುತ್ತಾರೆ ಎಂಬ ಭರವಸೆ ಎಲ್ಲರದೂ ಕೂಡಾ.

ಯಲ್ಲಪ್ಪ ಯಾಕೊಳ್ಳಿ
ಪ್ರಾಧ್ಯಪಕರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.