ಲೇಖಕರು-ರಾಯಸಾಬ.ದರ್ಗಾದವರ
ಪ್ರಕಾಶನ-ಅನಾಯ ಪ್ರಕಾಶನ
ಬೆಲೆ-೯೦₹
ಹೆಸರಿಲ್ಲದ ‘ಹೂ’ ಕೂಡಾ ಮತ್ತ ಬರಿಸುವ ಸುಗಂಧ ಸೂಸುವುದು:
‘ಗಾಂಧಿ ನೇಯ್ದಿಟ್ಟ ಬಟ್ಟೆ’ ಕವನ ಸಂಕಲನ ನಾಡು ನುಡಿಯ ಕುರಿತಾದ ಅವಿರತ ಕಾಳಜಿ ಹೊಂದಿರುವ ಕೃತಿಯಾಗಿದೆ. ವೃತ್ತಿ ಪ್ರವೃತ್ತಿ ಸಮದೂಗಿಸುವುದು ಕಷ್ಟದ ಕೆಲಸ ಅದರಲ್ಲೂ ಪೋಲಿಸ್ ಇಲಾಖೆಯಲ್ಲಿ ದೇಹ ಸವೆಸುವುದೆಂದರೆ ಬಹುದೊಡ್ಡ ಹೊಣೆಗಾರಿಕೆ, ಅಂತಹ ಕೆಲಸದ ನಡುವೆಯು ಇಂತಹ ಸತ್ವಯುತ ಸಂಕಲನ ಹೆಣೆದಿರುವ ರಾಯಸಾಬ ದರ್ಗಾದವರ ಅವರಿಗೆ ಅಭಿಮಾನದ ಅಭಿಂದನೆ. ಸರ್ಕಾರದ ಸಹಾಯ ಧನ ಪಡೆದು ಮುದ್ರಣವಾಗಿರುವುದು ಕೂಡಾ ಸ್ವಾಗತಾರ್ಹ.
ಹೊಗಳಿಕೆಗೆಂದರೆ ಸಾಲು ಸಾಲು ಪುರಾವೆಗಳಿವೆ ಎಲ್ಲವನ್ನು ವಿವರಿಸದೆ ಕೆಲ ಸಾಲು;ಹಲವು ಪದ್ಯ ಹೇಳುವ ಇರಾದೆ ಇದೆ. ನಾಡಿನ ಭರವಸೆಯ ಬಂಡಾಯ ಸಾಹಿತಿ ಡಾ.ಕೆ.ಷರೀಪಾ ಅವರು ಮುನ್ನುಡಿಯಲ್ಲಿ ಹೊಗಳಿದಷ್ಟು ಹೂರಣ ಇಡಿಯ ಸಂಕಲನದಲ್ಲಿ ಸಿಕ್ಕುವದಿಲ್ಲ.ಬಿಟ್ಟು ಹೋದವರ ಚಮರಗೀತೆ,ದುಡಿಮೆ ದಣಿವು ಸರಾಯಿ, ಕವಿತೆಯ ಬಸಿರು, ಸ್ಮಶಾನದಲ್ಲಿ ಹೇಳಿದ ನಗ್ನ ಸತ್ಯ, ಗೋಡಗಂಟಿದ ಮಾತುಗಳು, ಒಂದು ಕವಿತೆಯ ಬದಲಾಗಿ, ಬಡವರ ಸ್ವಾತಂತ್ರ್ಯ, ಸುಳ್ಳು ಸಾಕ್ಷಿ, ಗಾಂಧಿ ನೇಯ್ದಿಟ್ಟ ಬಟ್ಟೆ, ಈ ದೇಶಕ್ಕೆ ಏನಿದ್ದರೇನು? ಬೀದಿಗೆ ಬಿದ್ದವಳು, ಇಂತಹ ಕವಿತೆಗಳಲ್ಲಿ ಕೆಲ ಭರವಸೆಯ ಕುರುಹು ಹೊರತುಪಡಿಸಿ ಮತ್ತೆ ಹೊಸತೇನಿಲ್ಲ. ಇಡಿಯ ಕಾವ್ಯದ ಹೊರಳು ಹೊಸ ತಲೆಮಾರಿನ ನೆನೆಹುಗಳ ಮೇಲೆ ಬೆಳಕು ಚೆಲ್ಲಿದೆ. ಸಮಾಜದ ಆಗುಗಳನ್ನು ಕುರಿತು ಮಾತನಾಡುತ್ತಾ ಹೋಗುವ ಸಂಕಲನ ಸಮತೆ ಸಾರುವ ಸರ್ವ ಯತ್ನ ಮಾಡಿದೆ. “ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲ್ಲಿಲ್ಲ//ಹೂತ ಶವಗಳ ದಿಬ್ಬದಂತಿದ್ದವು” ಎನ್ನುವಲ್ಲಿ ಬಡವರ ನಾಡಿಬಡಿತದ ವಿವರ ಕೊಡುತ್ತದೆ. ಇಲಿ,ಹೆಗ್ಗಣಗಳು ಉಪವಾಸ ನರಳುತ್ತಿದ್ದವು; ಕೆರೋಸಿನ್ ದೀಪದ ಹೊರತು ಯಾವ ಬೆಳಕು ಸುಳಿಯುತ್ತಿರಲ್ಲಿಲ್ಲ. ಎನ್ನುವ ಈ ಕವಿತೆಯಲ್ಲಿ ಮಾನವೀಯ ನೆಲೆಯಲ್ಲಿ ಅಡಗಿಕೊಂಡಿರುವ ಸಾವಿರಾರು ಕನಸುಗಳನ್ನು ಹೊತ್ತಿರುವ ಬಡ ಜನರ ಜೀವನದ ಹೋಲಿಕೆ ತಿಳಿಸುವುದರೊಂದಿಗೆ ಮಾನವನ ವಿಕಸಿತ ಸಮಾಜದಲ್ಲಿ ಇಂತಹ ಸಾವಿರಾರು ಕುಟುಂಬಗಳು ಕತ್ತಲೆಯಲ್ಲಿ ಅಡಗಿಕೊಂಡಿವೆ. ಶ್ರೀಮಂತರ ಅಸಮಾನತೆ ಇದಕ್ಕೆ ಪೂರಕವಾಗಿರದೆ ಮಾರಕವಾಗಿ ಕಾಣಿಸಿಕೊಂಡಿದೆ. ಬಂಡವಾಳ ಶಾಹಿಯ ಕರಾಳ ಮುಖವನ್ನು ಕತ್ತಲೆಯ ಹಿಂದಿನ ಕರೋಶಿನ್ ಎಣ್ಣೆಯ ರೂಪಕದಲ್ಲಿ ಕವಿ ಬಹು ದೊಡ್ಡದಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇದನ್ನ ಹೋಗಲಾಡಿಸಬೇಕಾದ ವಿದ್ಯಾವಂತ ಜನ, ಬೆಳಕು ಚೆಲ್ಲಬೇಕಾದ ಬುದ್ಧಿವಂತರೆ ಅದರ ಹಿಂದೆ ಮುಂದೆ ಚಲಿಸುವುದಿಲ್ಲ.ಆದರೆ ಮಾತನಾಡುವುದನ್ನ ಮಾತ್ರ ಮುಂದುವರೆಸಿಕೊಂಡು ಹಾಗೆ ನಡೆಯುತ್ತಿದ್ದಾರೆ ಕವಿ. ಬಡತನ ನಿರುದ್ಯೋಗ ಈ ದೇಶದ ಸಾಮಾನ್ಯ ರೋಗ ಎಂದು ನಾವು ಎಂದೂ ಭಾವಿಸಿಕೊಂಡಾಗಿದೆ ಅದನ್ನೇ ವ್ಯವಸ್ಥಿತವಾದ ಚೌಕಟ್ಟಿನಲ್ಲಿ ವಿವರಿಸುವ ಪ್ರಯತ್ನ ಕವಿಯದ್ದಾಗಿದ್ದು “ಕಾರ್ಯಸ್ಥಗಿತವಾದಾಗಲೊಮ್ಮೆ ರಿಪೇರಿಗೆ ಒಳಗಾಗುವರು” ಎಂದು ಹೇಳುವ ಮೂಲಕ ಮನುಷ್ಯನ ಸಾಮಾನ್ಯ ಗುಣಗಳಲ್ಲಿ ಮತ್ತೆ ಮತ್ತೆ ರಿಪೇರಿ ಯಾಗುವುದು.ಹೊಸದ ಸೃಷ್ಟಿ ಮಾಡುವುದಲ್ಲ ಎನ್ನುವಂತೆ, ಬಹಳ ಖಾರವಾಗಿ ಸಮಾಜದ ಹುಳುಕುಗಳ ಮೇಲೆ ಕಣ್ಣಾಡಿಸಿ ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅದೇ ಕವಿತೆಯ ಕೊನೆಯ ಭಾಗದಲ್ಲಿ ಕವಿ “ಇನ್ನೂ ಕೆಲವು ಕಡೆ ಹೀಗೆ ಹೆಣದಂತಿದ್ದರು ಉಸಿರಾಡುತ್ತಿದ್ದಾರೆ” ಎಂದು ಹೇಳುವ ಮೂಲಕ ಸಮಾಜವನ್ನು ಮತ್ತು ಶ್ರೀಮಂತರ ನಡೆಗಳನ್ನು ಕೆದಕಿ ಅವರ ಇನ್ನೊಂದು ಮುಖದ ಪರಿಚಯ ಮಾಡಿಸುತ್ತಿದ್ದಾರೆ. ಬಡವರ ರಕ್ತ ಹೀರುವುದೇ ಈ ಶ್ರೀಮಂತ ಪಿಶಾಚಿ ಮುಖ್ಯ ಉದ್ದೇಶವಾಗಿರಬೇಕು. ಅದಕ್ಕಾಗಿ ಬಡವರನ್ನ ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಜಮಾನ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎನ್ನುವ ಸೂಕ್ಷ್ಮ ಸಂವೇದನೆಯ ಪ್ರಜ್ಞೆ ಮೂಡಿಸುತ್ತಿದ್ದಾರೆ. ದುಡಿದು ದಣಿದ ದೇಹವೀಗ ಬಿಸಿಲು ಬೆನ್ನುಮೇಲೆ ಹೊತ್ತು ಊರಾಚೆ ಗುಡ್ಡದಲ್ಲಿ ಮುಳುಗಿಸಿ ಮನೆ ಕಡೆ ಮುಖವ ಮಾಡಿದೊಡೆ ಪಕ್ಕದಲ್ಲಿದ್ದ ಮದ್ಯದಂಗಡಿ ಕಾಲು ಕರೆದು ಜಗಳ ತೆಗೆದು ತನ್ನ ಬಳಿ ಕೆಡವಿದೆ ತಾನು ಸೋತ, ನನ್ನ ಗೆಲ್ಲಿಸಿ ತೇಲುವಂತೆ ಮಾಡಿದೆ. ಅಫೀಮು ಮತ್ತು ಸೋಮರಸವೆನ್ನುವುದು ಮಾನವನ ಮನುಷ್ಯತ್ವದ ನೆಲೆಗಳನ್ನು ತೆಗೆದುಹಾಕಿ ಮೈಮನಗಳ ದಣಿವು ಶಮನ ಮಾಡುವ ಬಹುದೊಡ್ಡ ಮಾದಕ ಎನ್ನುವ ಸಲುವಾಗಿ ‘ದುಡಿಮೆ ದಣಿವು ಸರಾಯಿ’ ಎನ್ನುವ ಕವನ ಮಾತನಾಡುವುದರ ಜೊತೆಗೆ ಸಂಜೆ ಮುಂಜಾನೆ ಹೀಗೆ ಸಮಯವೇ ಹೇಳಿದ ಕೇಳದಂತೆ ಯಾವಾಗಲೂ ಕುಳಿತು ಅದೇ ಅಮಲಿನಲ್ಲಿ ಕಾಲ ಕಳೆದು,ತಮ್ಮ ದೈಹಿಕ,ಮಾನಸಿಕ ಶಕ್ತಿಯನ್ನು ಕಳೆದುಕೊಂಡು ಸಾವು ಕಂಡುಕೊಳ್ಳುವ ಬಡವರ ದಾರುಣ ಸ್ಥಿತಿಯ ಬಗ್ಗೆ ಈ ಕವಿತೆ ಮಾತನಾಡುತ್ತದೆ.
ಒಟ್ಟಿನಲ್ಲಿ ದಮನಿತರ ಬಗ್ಗೆ ಮಾತನಾಡುವ ಕವಿತೆಯ ಬಸಿರು ಎನ್ನುವ ಕವಿತೆ , ಬಡವ ಶ್ರೀಮಂತ ದಲಿತ ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶುದ್ರ ಎನ್ನುವ ಯಾರೂ ಕೂಡ ಬೇರೆಡೆಗೆ ಹೋಗುವುದಿಲ್ಲ. ಸತ್ತಾಗ ಸ್ಮಶಾನದಲ್ಲಿ ಇರಬೇಕು ಎನ್ನುವಂತಹ ಸಮಾನತೆಯ ತತ್ವವನ್ನು ಕುರಿತು ಮಾತನಾಡುವ “ಸ್ಮಶಾನದಲ್ಲಿ ಹೇಳಿದ ನಗ್ನ ಸತ್ಯ” ಎನ್ನುವ ಕವಿತೆ, ಸತ್ಯ ಅಸತ್ಯ ಪ್ರೀತಿ ದ್ರೋಹ ನೈಜತೆ ಮತ್ತು ಸುಳ್ಳು ಬದುಕುತನ ಗಳ ಬಗ್ಗೆ ಮಾತನಾಡುವಾಗ ಸತ್ಯಕ್ಕೆ ಹೆಚ್ಚಿನ ಬಾಳಿಕೆ ಬರುತ್ತದೆ ಎನ್ನುವ ಸತ್ಯವನ್ನ ಸಾರುವ ಮುಖವಾಡವಿಲ್ಲದ ಆ ದಿನ ಎನ್ನುವ ಕವಿತೆ ಕೊನೆಯಲ್ಲಿ ಮೊದಲೇ ಇನ್ನೊಂದೆರಡು ಹೊಂದಿಸಿಕೊಂಡು ಜೈಲಿನಲ್ಲಿರುವಂತೆ ಕೋಣೆಯಲ್ಲಿ ಮಾಂಸದಂಗಡಿಯ ಮಟನ್ ನಂತೆ ನೇತು ಬಿಟ್ಟಿರಬೇಕು ಹತ್ತಿಗೊಂದು ಕೈಗೆ ಸಿಕ್ಕು ಧರಿಸುತ್ತಿರಬಹುದಿತ್ತು ಎನ್ನುವಲ್ಲಿ ಅಂತ್ಯವಾಗುತ್ತದೆ. ಬಡವನ ಬಾಳಿನ ಬಗ್ಗೆ ಮಾತನಾಡುವ ತುಟ್ಟಿ ವೆಚ್ಚದ ಪ್ರಯಾಣಿಕರು ಎನ್ನುವ ಕವಿತೆ ಬಡವನ ಹೊಸ್ತಿಲಲ್ಲಿ ನಿಂತು ಮಾನವೀಯತೆಯ ಬಗ್ಗೆ ಮಾತನಾಡುವ ಮನುಷ್ಯತ್ವದ ವಿವಿಧ ರೂಪಗಳನ್ನು ತೋರ್ಪಡಿಸುವ ಮಾನವೀಯತೆ ಹೋರಾಟ ಎನ್ನುವ ಕವಿತೆ, ಕತ್ತಲೆಯಲ್ಲಿ ಕೂತು ಹೋಗಿರುವ ಸಾಕಷ್ಟು ಕುಟುಂಬ ಜೀವಗಳ ಬಗ್ಗೆ ಮಾತನಾಡುವ ದೀಪವಿಲ್ಲದ ಕೋಣೆಯೊಳಗೆ ಎನ್ನುವ ಕವಿತೆ, ನಗುವಿನ ರೂಪಕವಾಗಿ ಬಳಸಿಕೊಂಡು ಸಮಾಜದಲ್ಲಿ ಮೇಲು ಕೀಳು ಶ್ರೀಮಂತಿಕೆ ಬಡತನ ಗಂಡು ಹೆಣ್ಣು ಬಡವ ಬಲ್ಲಿದ ಎನ್ನುವ ಸಾಕಷ್ಟು ವಿಚಾರಗಳನ್ನ ತಿಳಿಸುವ ಅಕೀಕತ್ತು ಎನ್ನುವ ಕವಿತೆ. ತನ್ನತನವನ್ನು ಮರೆತು ಸಮಾಜ ಉದ್ದರಿಸಲು ಬರುವ ಸಮಾಜಸೇವಕರನ್ನು ಕುರಿತು ಮಾತನಾಡುವ ಬೆಳಕು ಕೊಲೆಯಾದ ರಾತ್ರಿ ಎನ್ನುವ ಕವಿತೆ, ವಿಧವೆ ಅನಾರೋಗ್ಯದಿಂದ ಬಳಲುವ ಹೇಳುತ್ತಾ ಹೊರಡಿರುವ ಗೋಡೆಗಂಟಿದ ಮಾತುಗಳು ಎನ್ನುವ ಕವಿತೆ, ಸಮಾಜವನ್ನು ವ್ಯವಸ್ಥಿತ ರೀತಿಯಲ್ಲಿ ತಿದ್ದುಪಡಿ ಮಾಡಲು ಹೊರಟು,ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿತ್ವವನ್ನ ಮಾತನಾಡಲು ಹೊರಟಿರುವ ಈ ಸಂಕಲನ ಮಾನವೀಯತೆ ಮರಳಿ ಕಟ್ಟುವ ಪ್ರಯತ್ನದಲ್ಲಿದೆ ಎಂದು ಹೇಳಬಹುದು.
ಮೈಬೂಬಸಾಹೇಬ. ವೈ.ಜೆ.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ