ಒಂದು ದೇಶವೆಂದರೆ ಆ ದೇಶದ ಪ್ರಜೆ. ಆ ಪ್ರಜೆಗಳ ಸಂಪನ್ಮೂಲ ಬಂಡವಾಳ, ಒಂದು ದೇಶವೆಂದರೆ ಆ ದೇಶದ ಪ್ರಜೆಗಳ ಬೇಕು ಬೇಡಗಳು, ಒಂದು ದೇಶವೆಂದರೆ ಆ ದೇಶದ ಭೂತ ಭವಿಷ್ಯದೊಂದಿಗಿ ವರ್ತಮಾನದ ಸಂಬಂಧ. ಒಂದು ದೇಶವೆಂದರೆ ಆ ದೇಶದ ನಾಗರಿಕರು, ಔದ್ಯೋಗಿಕ, ನೌಕರಿ, ಆದಾಯ, ನೆಮ್ಮದಿ. ಒಂದು ದೇಶವೆಂದರೆ ಬಡವರು ತಮ್ಮ ಬಡತನದ ತಳವನ್ನು ಬಿಟ್ಟು ಮೇಲೆಬ್ಬಿಸುವ ರಾಜಕೀಯ ನೀತಿ. ಒಂದು ದೇಶವೆಂದರೆ ಸರ್ವಾಭಿವೃಧ್ದಿ, ಸರ್ವಸಮ್ಮವಾದ ರೀತಿ. ಒಂದು ದೇಶವೆಂದರೆ ಇತಿಹಾಸದ ಸಚ್ಚಾರಿತ್ರ್ಯ ನೆನಪಿಸಿ ಆರಾಧಿಸುವ ನೀತಿ. ಒಂದು ದೇಶವೆಂದರೆ ಇತಿಹಾಸಕಾರರನ್ನು ಅನುಯಾಯಿಸುವ ದಾರಿ. ಒಂದು ದೇಶವೆಂದರೆ ಇತಿಹಾಸಕಾರರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ಅವಶ್ಯಕವಾಗಿ ನಡೆಯಬೇಕಾದ ಅನಿವಾರ್ಯದ ಮಾರ್ಗ. ಒಂದು ದೇಶವೆಂದರೆ ಪ್ರಜೆಗಳ ಹರಿಕಾರತ್ವದಲ್ಲಿ ನಡೆಯುವ ಧೋರಣೆಗಳು. ಒಂದು ದೇಶವೆಂದರೆ ಸರ್ವಾನುಮತ, ಒಂದು ದೇಶವೆಂದರೆ ಸರ್ವರ ಅಭಿವೃದ್ಧಿಯ ಸದುದ್ದೇಶ ಅಭಿಪ್ರಾಯಗಳ ನೀತಿಯ ನಿಘಂಟು.
ಹೌದು, ಓದುಗ ಮಿತ್ರರೆ ನನ್ನ ಅನಾರೋಗ್ಯದ ವಿಶ್ರಾಂತಿ ದಿನಗಳಲ್ಲಿ ನನ್ನ ಮನ ಮೆದುಳಿಗೆ ಟಾನಿಕ್ ಔಷಧಿಯಾಗಿ ಸಿಕ್ಕಿದ್ದು ಶಿಕ್ಷಕ ಸಾಹಿತಿ ಶ್ರೀ ಸಂಜಯ ಕುರಣೆಯವರ ಇತ್ತೀಚೆಗೆ ಬಿಡುಗಡೆಯಾದ ಕೃತಿ “ಡಾ.ಬಿ.ಆರ್.ಅಂಬೇಡ್ಕರ” ಕುರಿತಾಗಿ ಬರೆದ ಎರಡು ನೂರಕ್ಕೂ ಹೆಚ್ಚು ಹನಿಗವನಗಳ “ಗ್ರಂಥ”. ಹೌದು, ನಾನೊಬ್ಬ ಸಾಹಿತ್ಯಾಭಿಮಾನಿಯಾಗಿ, ಓದುಗಾಭಿಮಾನಿಯಾಗಿ ಈ ಹನಿಗವನದ ಕೃತಿಯನ್ನು “ಗ್ರಂಥ” ಎಂದು ಸಂಬೋಧಿಸಿರುವೆ.
ಒಬ್ಬ ಮೇಧಾವಿ ಮಹಾಪುರುಷರ ಬಗ್ಗೆ ಆರಾಧನಾ ರೂಪದಲ್ಲಿ ರಚಿತವಾದ, ಅವರ ಜೀವನ ವೃತ್ತಾಂತವನ್ನು ಚುಟುಕು ರೂಪದಲ್ಲಿ ಹನಿ ಹನಿಯಾಗಿಸಿ ಬರೆದು ಪ್ರಕಟಿಸಿ ಇತಿಹಾಸದೊಂದಿಗೆ ಆಧುನಿಕತೆಗೆ ಪಾಠವಾಗಿಸುವದರೊಂದಿಗೆ ಸಂದೇಶ ಸಾರುವ ಪ್ರತಿ ಹನಿಗಳು ಪವಿತ್ರ ಶ್ಲೋಕಕ್ಕೆ ಸಮನಾಗಿವೆ.
ಬುದ್ಧ, ಬಸವ, ಬಾಬಾಸಾಹೇಬರನ್ನು ಒಮ್ಮೆ ಓದಿ ಅರಿತರೆ ಸಾಕು ಬದುಕು ಬುದ್ಧಮಯ, ಬಾಳು ಬಸವಮಯ, ಜೀವನಮಾರ್ಗ ಅಂಬೇಡ್ಕರರ ಹೆಜ್ಜೆ ಆಗುವದು. ಆಗ ನಾವುಗಳು ಅಭಿಮಾನಿಗಳಾಗಿ ಅನುಯಾಯಿಗಳಾಗುವದರಲ್ಲಿ ಎರಡು ಮಾತಿಲ್ಲ. ಮೊದಲು ಅರಿಯಬೇಕು, ಅರಿತರೆ ಶರಣರಾಗುವೆವು. ಅಂಬೇಡ್ಕರರರ ಕುರಿತಾಗಿ ಎರಡು ನೂರರಷ್ಟು ಹನಿಗವನಗಳ ಬರೆದ ಈ ಕೃತಿಯಲ್ಲಿ ಅಂಬೇಡ್ಕರರ ಜೀವನ ದೃಶ್ಯಗಳ ಕಾಣುವೆವು. ಅವರ ಜೀವನದ ಪ್ರತಿ ಪ್ರಸಂಗಗಳನ್ನು ಕಾಣುವೆವು. ಅವರ ಜೀವನದ ಪ್ರತಿ ಹೆಜ್ಜೆ ಗುರುತುಗಳು ನೋಡುವೆವು. ಅವರ ಜೀವನಾದರ್ಶ, ಚಿಂತನೆ, ಯೋಚನೆ, ಯೋಜನೆ , ದೇಶದ ಭವಿಷ್ಯದ ಕನಸುಗಳ ಕಾಣುವೆವು. ಅಂಬೇಡ್ಕರರ ಜೀವನದ ಪ್ರತಿ ಪ್ರಸಂಗಗಳೂ ಇಲ್ಲಿ ಒಂದೊಂದು ಹನಿಗಳಾಗಿ ಅರಳಿವೆ. ಹಾಗಾಗಿ ಸಾಹಿತಿ ಶ್ರೀ ಸಂಜಯ ಕುರಣೆ ಯವರು ಬುದ್ಧ ಬಾಬಾಸಾಹೇಬರನ್ನು ಎಷ್ಟೊಂದು ಅನುಯಾಯಾಸುತಿದ್ದಾರೆಂದು, ಎಷ್ಟೊಂದು ಆರಾಧಿಸುತ್ತಾರೆ ಎಂದು ಸಹಜವಾಗಿ ಓದುಗರಿಗೆ ತಿಳಿದು ಬರುತ್ತದೆ.
ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದ ಗೀಳು ಹಚ್ಚಿಕೊಂಡ ಇವರು ತಮ್ಮ ಜೀವನವನ್ನು ಬುದ್ಧಮಯವಾಗಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಜೀವನವೂ ಬುದ್ಧ, ಬಸವ, ಬಾಬಾಸಾಹೇಬರ ದಾರಿದೀಪದ ಬೆಳಕಲ್ಲಿ ಸಾಗುತ್ತಿದೆ ಅದರೊಂದಿಗೆ ಸಾಹಿತಿಗಳೂ ಕೂಡಾ.
ಅಸ್ಪೃಶ್ಯತೆ ಒಂದು ಪಿಡುಗಾಗಿ, ಜ್ಞಾನಸೂರ್ಯನ ವೈಜ್ಞಾನಿಕ ಚಿಂತನೆ, ಚೈತ್ಯಭೂಮಿಯ ಚೈತನ್ಯ ರೂಪಗಳನ್ನು, ಭಾರತದ ಸಾಮಾಜಿಕ ನಿಲುವುಗಳು, ಅಂಬೇಡ್ಕರರ ಜೀವನದ ಕಷ್ಟಗಳ ಸರಮಾಲೆಗಳು, ಬಹಿಸ್ಕೃತ ಭಾರತ, ಮೂಕನಾಯಕ ಕೊನೆಗೆ ಮಹಾನಾಯಕ. ವಿಶ್ವ ಜ್ಞಾನದ ದಿನದ ಬೆಳಕು, ನನ್ನತನ ನನ್ನವರ ಹಿತರಕ್ಷಣೆ, ಅನ್ಯಾಯದ ವಿರುದ್ಧ ಧ್ವನಿ, ಗುಲಾಮಗಿರಿಯ ಖಂಡನೆ, ಸಂವಿಧಾನದ ಚೌಕಟ್ಟು, ಭೂತ ಬರಹದಲ್ಲಿ ಸಂವಿಧಾನದ ಭವಿಷ್ಯದ ಬವಣೆ ದೂರಾಗಿಸುವ ಕಲ್ಪವೃಕ್ಷದ ನುಡಿಗಳು. ಶಿಕ್ಷಣ-ಸಂಘಟನೆ-ಹೋರಾಟದ ರೂಪರೇಷೆ, ದೀನ ದಲಿತರ ಸಮಸ್ಯೆಗಳು, ಬಡತನ, ಶಿಕ್ಷಣ, ಹಾಗೂ ದೇಶದ ಕುಂದುಕೊರತೆಗಳು ಮತ್ತು ಭವಣೆಗಳು ಈ ಎಲ್ಲ ಚಿತ್ರಣಗಳು ಶ್ರೀ ಸಂಜಯ ಕುರಣೆಯವರ ಹನಿಗವನಗಳಲ್ಲಿ ಕಂಬನಿ ಹನಿಗಳಾಗಿ ಕಾಣುತ್ತವೆ.
ಅಂಬೇಡ್ಕರರ ಮಹಾ ಮಾನವತಾವಾದ, ದೀನ ದಲಿತರ ಕುರಿತು ಅವರ ಕಾಳಜಿ ಮಮಕಾರ, ಕೆರೆ ನೀರಿನ ಹೋರಾಟದ ದೃಶ್ಯ, ಕಂದಾಚಾರದ ಹೋರಾಟ, ಕೃಷ್ಣಾಜಿ ಕೇಶವರವರ ಮಾರ್ಗದರ್ಶನ, ೧೯೦೬ ರ ರಮಾಬಾಯಿ ಯವರೊಂದಿಗಿನ ವಿವಾಹ ಸಂಪನ್ನ ದೃಶ್ಯಗಳು ಓದುಗರ ಕಣ್ಣಿಗೆ ಕಟ್ಟುವಂತೆ ನಾಲ್ಕೈದು ಸಾಲುಗಳ ಚುಟುಕು ಹನಿಗಳಲ್ಲಿ ಬಿತ್ತರಗೊಂಡಿವೆ.
ಒಟ್ಟಿನಲ್ಲಿ ಈ ಕೃತಿ ಅಂಬೇಡ್ಕರರ ಕನಸನ್ನು ಹಂಚಿಕೊಳ್ಳುವ, ಅಂಬೇಡ್ಕರರ ಜೀವನ ವೃತ್ತಾಂತ ವಿವರಿಸುವ , ಅವರ ಆಚಾರ ವಿಚಾರ ತಿಳಿಸುವ, ಅಂಬೇಡ್ಕರರು ಎಲ್ಲವನ್ನೂ ಮೆಟ್ಟಿ ಎದ್ದು ನಿಂತು ಸಾಧನೆಗೈದ ಜೀವನ ಕಥೆ ನಮಗೊಂದು ಮಹಾಮಾರ್ಗದರ್ಶನ. ಅಂಥಾ ಮೇಧಾವಿಗಳನ್ನು ಅರಿತು ನಾವು ಅಜ್ಞಾನದ ಅಂಧಕಾರದಿಂದ ಹೊರಬಂದು “ನಿನಗೆ ನೀನೆ ದಾರಿದೀಪ” ಎನ್ನುವಂತೆ ನಮ್ಮ ಬಾಳನ್ನು ನಾವೇ ಜ್ಞಾನದ ಬೆಳಕಕ್ಕೆ ಎತ್ತಿ ಸಾಗಬೇಕೆಂಬ ನುಡಿಗಳು ಲೇಖಕರಿಂದ ಇಲ್ಲಿನ ಹನಿಗಳಲ್ಲಿ ಎದ್ದು ಕಾಣುತ್ತದೆ.
ಒಬ್ಬ ಮಹಾನಾಯಕ, ಮಹಾಪುರುಷನ ಜೀವನ ಕಥೆಯನ್ನು ಹನಿಗವನ ರೂಪದ ಮುತ್ತುಗಳಲ್ಲಿ ಪೋಣಿಸಿ ಒಂದು ಕೃತಿ ಎಂಬ ಮಾಲೆ ಮಾಡಿ ಓದುಗರಿಗೆ ನೀಡಿದ ಪುಣ್ಯದ ಕೆಲಸಕ್ಕೆ ನಾವು ಧನ್ಯವಾದಗಳ ಹೇಳಲೆಬೇಕು. ಈ “ಡಾ.ಬಿ.ಆರ್.ಅಂಬೇಡ್ಕರ” ಹನಿಗವನಗಳ ಕೃತಿಗೆ ಬೀದರನ ಭಂತೆ ವರಜ್ಯೋತಿ ಅಣದೂರ ಗುರುಜಿಯವರು ಆಶೀರ್ವಚನ ನುಡಿ ಬರೆದು ಹರಸಿದ್ದಾರೆ. ಮತ್ತು ಪ್ರೋ.ವಿಷ್ಣು.ಎಂ.ಶಿಂಧೆ ಯವರು ಈ ಕೃತಿಗೆ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಹಾಗೂ ಶ್ರೀಮತಿ ಶಬಾನಾ ಅಣ್ಣಿಗೇರಿ ಯವರು ಈ ಕೃತಿಗೆ ಮುನ್ನುಡಿ ಬರೆದು ಕೃತಿ – ಕವಿಗೆ ಹರಸಿದ್ದಾರೆ. ಅಲ್ಲದೆ ಈ ಕೃತಿಯು ಕೃಷ್ಣ ಕಿತ್ತೂರಿನ ಕುರಣೆ ಪ್ರಕಾಶನದಿಂದ ಪ್ರಕಟವಾದ ಹೆಮ್ಮೆಯ ಕೃತಿಯಾಗಿದೆ.
ಈ ಕೃತಿಯ ಕವಿಗಳಾದ ಶ್ರೀ.ಸಂಜಯ ಕುರಣೆಯವರಿಗೆ ಬುದ್ಧ, ಬಸವ, ಬಾಬಾಸಾಹೇಬರ ವರಾಶಿರ್ವಾದ ಇರಲಿ. ಇವರ ಜೀವನ ಆ ಮೂವರ ಅನುಯಾಯಿತ್ವದಲ್ಲಿ ಸಾಗಲಿ ಹಾಗೂ ಶ್ರೀಯುತರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಾ ಯಶಸ್ಸು ಸಿಗಲೆಂದು ವರ ಹರಸೋಣ.
ಎಂ.ಕೆ.ಶೇಖ್.(ಮೌಕುಶೇ)
ಶಿಕ್ಷಕ, ಸಾಹಿತಿಗಳು,
ಕುಡಚಿ. ರಾಯಬಾಗ.
ಜಂ- ೮೭೨೨೮೭೩೪೧೩
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.