ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇ ವಡ್ಡಟ್ಟಿ, ಒಂದು ಸಣ್ಣ ಗ್ರಾಮ, ಈ ಗ್ರಾಮದ ಕೊಟ್ರೇಶ ಜವಳಿ ಎನ್ನುವ ವ್ಯಕ್ತಿ, ಮೂಲತಃ ಕೃಷಿಕ ಕುಟುಂಬದಿಂದ ಬಂದವರಾಗಿದ್ದರೂ ಇವರಿಗೆ
ಸರಸ್ವತಿ ಒಲಿದು ಬಿಟ್ಟಿದ್ದಾಳೆ, ಈ ಮಾತುಗಳನ್ನು ಮುಖ ಸ್ತುತಿಗಾಗಿ ಹೇಳುತ್ತಿಲ್ಲ, ಎಂಬುದನ್ನು ಸಹೃದಯರು ಗಮನಿಸಬೇಕು.
ಜೀವನ ನಿರ್ವಹಣೆಗೆ ಕೃಷಿಯನ್ನು ಅವಲಂಬಿಸಿದ
ಕೊಟ್ರೇಶ ಮ. ಜವಳಿಯವರು ಪ್ರವೃತ್ತಿ ಯಿಂದ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯದಲ್ಲಿ ಒಲವನ್ನು ಹೊಂದಿ, ಅನೇಕ ಕವನ, ಶಾಯಿರಿ, ಟಂಕಾ, ಹಾಯ್ಕು, ಹನಿಗವನ ಗಳ ರಚನೆಯಲ್ಲಿ ತೊಡಗುವುದಷ್ಟೇ ಅಲ್ಲದೇ ಅವುಗಳನ್ನು ಇಂದಿನ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ್, ಗಳ ಮುಖಾಂತರ ಓದುಗರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿ ಇದೀಗ ಸ್ವರಚಿತ ಹನಿಗವನ ಸಂಕಲನವನ್ನು ಲೋಕಾರ್ಪಣೆ ಗೊಳಿಸಿ ಸಾಹಿತ್ಯ ಲೋಕದ ಅಧಿಕೃತ ಪ್ರತಿನಿಧಿಯಾಗಿ ಕಾವ್ಯ ಕೃಷಿಯಲ್ಲಿ ನಿರತರಾಗಿರುವುದು ನಮಗೆಲ್ಲರಿಗೂ ಮಾದರಿಯಾಗಿದೆ, ಎಂದು ಹೇಳಿದರೆ ಅತಿಶಯೋಕ್ತಿ ಯಾಗಲಾರದು. ಇಷ್ಟೆಲ್ಲಾ ಹೇಳಲು, ಅವರ “ರೈತನ ಬೆವರ ಹನಿಗಳು,” ಹನಿಗವನ ಸಂಕಲನವು ಕಾರಣವಾಗಿದೆ.
ಮೂಲತಃ ರೈತರೇ ಆಗಿರುವ ಕೊಟ್ರೇಶ ಜವಳಿ ಅವರ ಈ ಹನಿಗವನ ಸಂಕಲನದಲ್ಲಿ ಒಟ್ಟು ಒಂದು ನೂರಾ ಎಂಬತ್ತೊಂದು ಬೆವರ ಹನಿಗಳು ಮಿಳಿತಗೊಂಡಿವೆ.
ವಿಷಯ ವೈವಿಧ್ಯತೆಯಿಂದ ಕೂಡಿದ ಈ ಸಂಕಲನದಲ್ಲಿ ಹಲವಾರು ಹನಿಗವಿತೆಗಳು
ಸಹೃದಯರ ಮನ ಗೆಲ್ಲುವಲ್ಲಿ ಯಶಸ್ವಿ ಯಾಗಿವೆ, ಅಂತಹ ಕೆಲವು ಹನಿಗಳನ್ನು ನೋಡುವುದಾದರೆ…
‘ರೈತ ಪರ ‘ ಹನಿಯಲ್ಲಿ
ರಾಜಕಾರಣಿಗಳು ಕೇವಲ ಆಶ್ವಾಸನೆ ಕೊಡುವುದು ಬೇಡ, ಎಂದು ಸೂಕ್ಷ್ಮವಾಗಿಯೇ ತಿವಿದು, ರೖತರ ಹಿತ ಕಾಪಾಡುವ ಕಾರ್ಯಕ್ಕೆ ಮುಂದಾಗಿ ಎಂಬ ಸೂಕ್ತ ಸಲಹೆಯನ್ನು ನೀಡಿದ್ದಾರೆ.
‘ಮುಂಗಾರು ‘ ಮಳೆಯ ಸ್ವಾಗತ, ಇಳೆಯ ಬಯಕೆ
ಈಡೇರಿ ಭೂಮಿತಾಯಿ ಸಂತೃಪ್ತಳಾಗಿರುವುದನ್ನು
ಕೆಲವೇ ಸಾಲುಗಳಲ್ಲಿ ಹಿಡಿದಿಟ್ಟಿರುವುದು, ಎಲ್ಲ ಓದುಗರಿಗೂ ಇಷ್ಟ ವಾಗುತ್ತದೆ.
ಅನ್ನದಾತ, ಮುಸ್ಸಂಜೆ,ಹನಿಮುತ್ತು, ತರಂಗದುಂಗುರ,ಅಂಧಕಾರ, ಲಜ್ಜಾಮಣಿ, ವಸುಂಧರೆ,ಕನಸು,ಗೀಜಗ, ವಸಂತ, ಹೀಗೇ ಹೆಸರಿಸುತ್ತಾ
ಹೋಗಬಹುದು, ಇವರ ಸಾಹಿತ್ಯವು ಸಮಾಜ ಮುಖಿಯ ಚಿಂತನೆಗಳನ್ನು ಒಳಗೊಂಡಿದೆ, ಎನ್ನುವುದಕ್ಕೆ, ಇಲ್ಲಿ ಸಂಕಲಿತ ವಾಗಿರುವ ಹತ್ತಾರು ಹನಿಗಳು ಸಾಕ್ಷಿಯಾಗಿವೆ.
ಅಂತಹ ಕೆಲವು ಹನಿಗಳ ಸಾಲುಗಳನ್ನು ಆಸ್ವಾದಿಸೋಣ ಬನ್ನಿ.
‘ಸಹಾಯ ಹಸ್ತ,’ ಎಂಬ ಹನಿಗವನದಲ್ಲಿ,
‘ಅಮಾಯಕರ ಕೈ ಹಿಡಿಬೇಕು
ದಮನಿತರಿಗೆ ಸಹಾಯ ಮಾಡಬೇಕು,
ಸಂತ್ರಸ್ತರಿಗೆ ಸಾಂತ್ವಾನ ಹೇಳಬೇಕು,
ವಿಕಲಾಂಗರಿಗೆ ಜೀವನೋತ್ಸಾಹ ಕೊಡಬೇಕು,
ಹಿರಿಯರಿಗೆ ಗೌರವಿಸಬೇಕು
ಇದಕ್ಕೆಲ್ಲಾ ಔದಾರ್ಯತೆ ಬೇಕು’
ಎಂದು ಹೇಳಿರುವ ಈ ಮಾತಿನಿಂದ ಕೊಟ್ರೇಶ ಜವಳಿಯವರ ವ್ಯಕ್ತಿತ್ವದ
ಮುಖ ದರ್ಶನ ವಾಗುತ್ತದೆ,
‘ಪರೋಪಕಾರ ‘ ಎಂಬ ಹನಿಗವನ ದಲ್ಲೂ ಇಂತಹುದೇ
ಆಶಯ ವ್ಯಕ್ತವಾಗಿದೆ,
ಕಾಯಕವ ಮಾಡಿ ಅದರಲ್ಲೇ ಕೈಲಾಸ ಕಾಣಬೇಕು, ಎಂಬ ಆಶಯ ಹೊಂದಿರುವ ಜವಳಿಯವರು ಸೋಮಾರಿಗಳಿಗೆ ಛೀಮಾರಿ ಹಾಕುತ್ತಾರೆ, ಹಾರೖಕೆ, ಸೇವೆ, ಉದ್ಯೋಗ,ಬದುಕು ಓಟ ನಿಧಾನಿಸು, ಮುಂತಾದ ಹನಿಗವನಗಳಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.
ರಾಜಕಾರಣಿಗಳ ಅಧಿಕಾರ ದಾಹ, ಆಮಿಷ, ಸ್ವಾರ್ಥ, ಮುಂತಾದ ಅವರ ಸಣ್ಣತನದ
ಗುಣಗಳನ್ನು ತುಂಬಾ ಚೆನ್ನಾಗಿ ಯೇ ವಿಡಂಬಿಸಿದ್ದಾರೆ, ಉದಾಹರಣೆಗೆ
ಅವಕೊಡ,ಇವ ಬಿಡ,ತಗಾದೆ,ಊಹಾಪೋಹ,
ಮಾಲಿನ್ಯ ಸಾಹೇಬ,ಇತ್ಯಾದಿ ಹನಿಗವನಗಳನ್ನು ಕಾಣಬಹುದು.
ಕೃಷಿಕ ಕವಿಯ ಈ ಸಂಕಲನದಲ್ಲಿ ಅಲ್ಲೊಂದು, ಇಲ್ಲೊಂದು ಅಕ್ಷರ ದೋಷಗಳೂ ಉಳಿದು ಕೊಂಡಿವೆ, ಇದನ್ನು ಹೊರತುಪಡಿಸಿ ಹೇಳುವುದಾದರೆ, ಈ ಹನಿಗವನ ಸಂಕಲನದ ಬಹುತೇಕ ಹನಿಗವನಳು ಸಹೃದಯ ಓದುಗರ ಗಮನ ಸೆಳೆಯುವಲ್ಲಿ ಸಫಲವಾಗಿದೆ.
ಕೊಟ್ರೇಶ ಜವಳಿಯವರ ಲೇಖನಿಯಿಂದ ಸಮಾಜ ಸುಧಾರಣೆ ಆಗುವಂತಹ ಸಾಹಿತ್ಯ ಹೊರಹೊಮ್ಮಲಿ, ಇವರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕಲಿ ಎಂಬ ಸದಾಶಯದೊಂದಿಗೆ
ರೈತನ ಬೆವರ ಹನಿಗಳು, ಸಂಕಲನದ ಅವಲೋಕನಕ್ಕೆ ವಿರಾಮ ನೀಡುವೆ.
ಶಿವಪ್ರಸಾದ್ ಹಾದಿಮನಿ
ಕನ್ನಡ ಉಪನ್ಯಾಸಕರು
ಸ. ಪ್ರ. ದ. ಮಹಿಳಾ ಕಾಲೇಜು,
ಕೊಪ್ಪಳ.583231
ಮೊಬೈಲ್. 7996790189