ಸಾಲು ಸಾಲು ಆಲದಸಸಿಗಳನ್ನು ನೆಟ್ಟು ಬೆಳೆಸಿದರು
ಸಾವಿರ ಸಾಲುಗಳ ಗಿಡಗಳ ತಾಯಿ ಒಡತಿಯಿವರು
ಎಲೆಮರೆಯ ಕಾಯಂತೆ ಹೆಮ್ಮರವಾಗಿ ಬೆಳೆದವರು
ತಮ್ಮ ನಿಸ್ವಾರ್ಥ ಸೇವೆಯಿಂದ ಹೆಸರು ಗಳಿಸಿದವರು
ಪರಿಸರದ ಸಂರಕ್ಷಣೆಯೇ ಬದುಕಿನ ಧ್ಯೇಯವೆಂದವರು
ಶಿಕ್ಷಣ ವಂಚಿತೆಯಾದರೂ ಪ್ರತಿಭಾನ್ವಿತೆಯಿವರು
ಅನಕ್ಷರಸ್ಥೆಯಾದರೂ ಬಂಗಾರದ ಕಡಗವ ಕೈಗೆ ತೊಡಿಸಿಕೊಂಡವರು
ವೃಕ್ಷಗಳ ಪೋಷಕಿ ಸಮಾಜಕ್ಕೆ ಮಾದರಿಯಾದವರು
ಮಕ್ಕಳಿಲ್ಲವೆಂಬ ಕೊರಗು ಬಿಟ್ಟು ಸಸಿಗಳ ನೆಟ್ಟರು
ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಸಲಹಿದವರು
ಮೈದಡವಿ ನೀರುಣಿಸಿ ಸಸಿಗಳ ಪೋಷಿಸಿದರು
ಮುಂದಿನ ಪೀಳಿಗೆಯ ಒಳಿತಿಗಾಗಿ ಶ್ರಮಿಸಿದವರು
ಇಂದಿರಾ ಪ್ರಿಯದರ್ಶಿನಿ ವೃಕ್ಷಕ ಪ್ರಶಸ್ತಿ ಪುರಸ್ಕೃತರು
ನಾಡೋಜ, ಪದ್ಮಶ್ರೀ ,ಪ್ರಶಸ್ತಿಗೆ ಭಾಜನರಾದವರು
ಹುಟ್ಟಿದೂರಿಗೆ ಹೆಸರು ಖ್ಯಾತಿಯ ತಂದುಕೊಟ್ಟವರು
ಕಾಯಕವ ನಿಷ್ಠೆಯಿಂದ ಮಾಡಿದ ಕಾಯಕ ಯೋಗಿಣಿ ಯಿವರು
ಕರ್ನಾಟಕ ಸರ್ಕಾರದ ಪರಿಸರದ ರಾಯಭಾರಿಯಿವರು
ಶತಾಯುಷ್ಯವನ್ನು ದೇವರಿಂದ ವರಪಡೆದ ಮಹಾತಾಯಿಯಿವರು
ಪರಿಸರ ಪ್ರೇಮಿ ವೃಕ್ಷ ಮಾತೆಯೆಂದು ಪ್ರಖ್ಯಾತರಿವರು
ಮಹಾನ್ ಸಾಧಕಿ ಸಾಲು ಮರದ ತಿಮ್ಮಕ್ಕನವರು
ಪೂರ್ಣಿಮಾ ರಾಜೇಶ್