ತಂದು ನಿಲ್ಲಿಸಿದೆವು ನಿಮ್ಮನ್ನು
ನಮ್ಮೂರಿನ ಸರ್ಕಲ್ಲಿನ ಮಧ್ಯಕ್ಕೆ,
ನಸು ನಗುತ್ತಿರುವ ನಿಮಗೆ ಸಧ್ಯಕ್ಕೆ
ವಾಹನಗಳಿಂದೇಳು ಧೂಳೆ ಗತಿ..
ಸಾರಿದಿರಿ ನೀವು ಮದ್ಯಪಾನ ಕೆಡುಕೆಂದು
ತಂದು ಕುಡಿಯುತ್ತಿದ್ದೇವೆ ನಿಮ್ಮಡಿಗೆ ಕುಂತು
ಉರಿಯುವ ಬಿಸಿಲಿಗೆ ಸುಡುತ್ತಿದೆ ಮೈ-ಮುಖ
ಆದರೂ ಹೂವಿನಂತರಳಿದೆ ನಿಮ್ಮ ಮುಖ..
ಜಾತಿ ಮತ ಪಂಥ ಬೇಧವಿಲ್ಲದೆ ಬದುಕಿದಿರಿ ನೀವು
ನಿಮ್ಮೆದುರಿನಲೆ ಮಾಡುತ್ತಿದ್ದೇವೆ ಜಾತಿಯ ಜಗಳ
ನಮ್ಮ ಬಿಡುಗಡೆಗೆ ಹೋರಾಡಿದಿರಿ ಜೀವ ತೊರೆದು
ಸ್ವಾತಂತ್ರ್ಯ ದಿವಾಳಿ ಮಾಡಿದ್ದೇವೆ ನಮ್ಮ ಸ್ವಾರ್ಥಕ್ಕಿಂದು..
ರಕ್ತ ಕ್ರಾಂತಿಯ ತೊರೆದು ಶಾಂತಿಯ ಸಾರಿದಿರಿ
ರಕ್ತ ಸುರಿಸಿದೆವು ನಾವು ನಿಮ್ಮನ್ನೇ ಕೊಂದು
ಊರು-ಕೇರಿಯ ಕಸ ಹೊಡೆದು ಸ್ವಚ್ಛಗೊಳಿಸಿದಿರಿ
ಊರಿನ ಕಸ ತಂದು ನಿಮ್ಮೆದುರೆ ಸುರಿದೆವಿಂದು..
ಕ್ಷಮಿಸಿ ಬಿಡು ಗಾಂಧಿ ನಮ್ಮ ತಪ್ಪನ್ನು
ಮತ್ತೊಮ್ಮೆ ಬಂದು ಉದ್ಧರಿಸು ನಮ್ಮೆಲ್ಲರನ್ನು..
ಎಮ್. ಎಚ್. ಹಾಲ್ಯಾಳ
ಕೋಳೂರು
ಮುದ್ದೇಬಿಹಾಳ
ವಿಜಯಪುರ