You are currently viewing ನುಡಿಮುತ್ತುಗಳ ತೋರಣ ಕಟ್ಟಿದ ಮುತ್ತಿನ ಹಾರ

ನುಡಿಮುತ್ತುಗಳ ತೋರಣ ಕಟ್ಟಿದ ಮುತ್ತಿನ ಹಾರ

ಕೃತಿ – ಮುತ್ತಿನ ಹಾರ (ಚುಟುಕು ಸಂಕಲನ)
ಲೇಖಕರು – ಬೀರಣ್ಣ ಎಂ ನಾಯಕ,ಹಿರೇಗುತ್ತಿ
ಪುಟಗಳು -76
ಬೆಲೆ -70 ರೂ

ಸಮೃದ್ಧ ಸಾಹಿತ್ಯದ ತವರೂರಾದ ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಸಾಹಿತಿಗಳು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿಯವರ ಚುಟುಕುಗಳು ಜಿಲ್ಲೆಯಷ್ಟೇ ಅಲ್ಲ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು ಪ್ರತಿಯೊಬ್ಬರ ಮನದಲ್ಲಿ ಸ್ಥಿರವಾಗಿ ನಿಂತವು. ಇವರ ಬರಹದ ಪ್ರಭಾವದಿಂದ ಹಲವರು ಚುಟುಕು ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ. ಅಂಥವರಲ್ಲಿ ಒಬ್ಬರಾದ ಬೀರಣ್ಣ ಎಂ ನಾಯಕರವರು ನಾಲ್ಕು ಚುಟುಕು ಸಂಕಲನವನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಿ ಕನ್ನಡಾಂಬೆಗೆ ನುಡಿಮುತ್ತುಗಳ ತೋರಣ ಕಟ್ಟಿದ್ದಾರೆ. ಇವರ ‘ಮುತ್ತಿನ ಹಾರ’ ಚುಟುಕು ಸಂಕಲನವು ಒಟ್ಟು 337 ಚುಟುಕುಗಳನ್ನೊಳಗೊಂಡ ಅದ್ಭುತ ಪದಪುಂಜ ಎನ್ನಬಹುದು. ಅಂಕೋಲಾದ ಹಿರಿಯ ಸಾಹಿತಿಗಳಾದ ವಿಷ್ಣು ನಾಯ್ಕರವರು ‘ಕವಿಗೆ ಶಬ್ದಗಳನ್ನು ಕುಣಿಸುವಲ್ಲಿ ಒಂದು ಬಗೆಯ ಹದ ಸಿಕ್ಕಿದೆ’ ಎಂದು ಹೇಳುತ್ತ ಬರೆದ ಚಿಂತನಾತ್ಮಕ ಮುನ್ನುಡಿ ಚುಟುಕೆಂಬ ‘ಮಲ್ಲಿಗೆಯ ಸುವಾಸನೆ ಎಲ್ಲೆಡೆ ಪಸರಿಸಲಿ’ ಎಂದು ಬರವಣಿಗೆಯ ದಾರಿಗೆ ಶುಭ ಕೋರುತ ಬರೆದ ಬೆನ್ನುಡಿ ಹಾಗೂ ಚಂದದ ಮುಖಪುಟ ವಿನ್ಯಾಸದಲ್ಲಿ ಮೂಡಿ ಬಂದ ಕವಿಯ ಆಶಯದ ಮಣಿ ಪೋಣಿಸಿದಂತಿರುವ ಈ ‘ಮುತ್ತಿನ ಹಾರ’ ಚುಟುಕು ಸಂಕಲನ ನನ್ನ ಕೈ ಸೇರಿದ್ದು ಕಳೆದ ವರ್ಷ ಹೊನ್ನಾವರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ. ಸಮ್ಮೇಳನದ ಎರಡನೇ ದಿನ ಬೆಳಿಗ್ಗೆ ಮುಕ್ತಕ ,ಗಮಕ,ಚುಟುಕು ಗೋಷ್ಠಿಯಲ್ಲಿ ನಾನು ಮುಕ್ತಕ ವಾಚಿಸಿದರೆ ಶ್ರೀಯುತರು ಚುಟುಕು ವಾಚಿಸಿದರು ಹಾಗೂ ವೇದಿಕೆಯಲ್ಲಿದ್ದ ಎಲ್ಲರಿಗೂ ತಮ್ಮ ಈ ಕೃತಿಯನ್ನು ಹರ್ಷದಿಂದ ನೀಡಿದರು. ಮುಖತಃ ಪರಿಚಯವಿಲ್ಲದಿದ್ದರೂ ಈ ಮೊದಲು ಅವರ ಬರಹಗಳನ್ನು ಓದಿ ಅವರ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದ ನನಗೆ ಒಂದೇ ವೇದಿಕೆಯಲ್ಲಿ ಗೋಷ್ಠಿಯಲ್ಲಿ ಭಾಗವಹಿಸಿದ ನೆನಪು ಸದಾ ಹಸಿರಾಗಿಸುವ ಈ ಕೃತಿಯನ್ನು ಓದಲು ಕೈಗೆತ್ತಿಕೊಂಡೆ. ಇದರಲ್ಲಿರುವ ಪ್ರತಿಯೊಂದು ಚುಟುಕುಗಳು ಒಂದೊಂದು ವಿಚಾರದ ಬಗ್ಗೆ ಬೆಳಕು ಚೆಲ್ಲುವಂತೆ ತುಂಬಾ ಸಲೀಸಾಗಿ ಓದಿಸಿಕೊಂಡು ಹೋಗುವಂತಿವೆ. 80 ರ ಇಳಿವಯಸ್ಸಿನಲ್ಲೂ ಇವರ ಬರವಣಿಗೆಯ ಹವಣಿಕೆ ಕಂಡು ನಾನು ಅತ್ಯಂತ ಪುಳಕಿತಳಾಗಿ ಈ ಕೃತಿಯನ್ನು ನನ್ನ ಅವಲೋಕನ ಶಕ್ತಿಗೆ ನಿಲುಕಿದಷ್ಟನ್ನು ಇಲ್ಲಿ ದಾಖಲಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ.



ಪ್ರಕೃತಿ ಪರಿಸರದುಳಿವು ಜೀವಿಗಳ ಉಳಿವು
ನವಚೇತನದ ಬದುಕಿನಲಿ ಒಲವು ನಲಿವು
ಫಲ ಪುಷ್ಪದಿಂದ ಸುಗಂಧ ಮಕರಂದ
ಹಸಿರು ಪರಿಸರ ಚೆಂದ ಮನಸಿಗಾನಂದ
ಈ ಚುಟುಕಿನಲ್ಲಿ ಕವಿಯ ಪರಿಸರ ಕಾಳಜಿ ಎದ್ದು ಕಾಣುತ್ತಿದೆ.
ಇವರ ಚುಟುಕುಗಳು ದೇಶ, ಭಾಷೆ, ಹಣ, ಅಧಿಕಾರ ರಾಜಕೀಯ, ಚುನಾವಣೆ, ಬಜೆಟ್ಟು ಜೀವನ ಸಾರ ಬಯಕೆ, ಹಬ್ಬ ಹರಿದಿನಗಳು, ಪಂಚಭೂತ, ಸ್ನೇಹಕೂಟ, ಬೆಲೆಯೇರಿಕೆ, ಸಂಸಾರ ಜೀತ,ಧರ್ಮ, ನಿತ್ಯ ಸತ್ಯ ದುಂದು ವೆಚ್ಚ, ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಹಾಗೂ ಹಲವು ಗಣ್ಯರ ಕುರಿತು ಇವೆ. ಅವುಗಳಲ್ಲಿ ಕೆಲವು ನನಗಿಷ್ಟವಾದ ಚುಟುಕುಗಳನ್ನು ಇಲ್ಲಿ ಬಿತ್ತರಿಸಿದ್ದೇನೆ.

ಎತ್ತರೇತ್ತರಕೇರಿಸುವುದು ಈ ಏಣಿ
ಬಿತ್ತರದ ಜಲಧಿಯನ್ನುತ್ತರಿಸೆ ದೋಣಿ
ಏಣಿ ದೋಣಿಗಳಂತೆ ಮುನ್ನಡೆಸುವವರು
ಮರೆಯಲಾಗದ ವಂದನೀಯ ಸಜ್ಜನರು
ಎಂದು ತಮ್ಮ ಹಿತ ಚಿಂತಕರ ಕುರಿತು ಬರೆದರೆ ಸಮಯ ಸಾಧಕರ ಬಗ್ಗೆ ಬರೆದ
ವಂಚಿಸುವ ಸಮಯ ಸಾಧಕರ ಒಡನಾಟ,
ಅಡಿಗಡಿಗೆ ಕಲಿಸುವುದು ಜೀವನದಿ ಪಾಠ ‘ ಎಂಬ ಈ ಸಾಲು ಜೀವನದ ಅನುಭವ ಬಿಚ್ಚಿಡುವಂತಿದೆ.

ತಿಳಿದವರು ತಿಳಿಯದವರಿಗೆ ತಿಳಿಯದಂತೆ
ಉಪದೇಶಿಸುವುದು ಆಶೀರ್ವಾದವಂತೆ
ಅಂಥಹ ಉಪದೇಶವನು ನಂಬಿ ಜನರು
ಮೋಸ ಹೋದಾಗ ಹಣೆ ಜಪ್ಪಿಕೊಳ್ಳುವರು
ಈ ಚುಟುಕಿನ ಮೂಲಕ ಪುಕ್ಕಟೆ ಉಪದೇಶ ನೀಡುವವರನ್ನು ನಂಬಿ ಮೋಸ ಹೋಗುವ ಜನರಿಗೆ ಕಿವಿ ಮಾತು ಹೇಳಿದ್ದಾರೆ.

ಸಾಹಿತ್ಯ ವಲಯದಲಿ ಹುಲು ರಾಜಕೀಯ
ಎಡಪಂಥ ಬಲಪಂಥ ದಲಿತ ಬಂಡಾಯ
ಗುಂಪುಗಾರಿಕೆ ಸ್ವಪ್ರತಿಷ್ಠೆ ವೈಷಮ್ಯ
ಅಳಿಸಿ ಬೆಳೆಸೋಣ ಸಾಹಿತ್ಯ ಪಾರಮ್ಯ
ಎಂದು ಕೇವಲ ನಾಲ್ಕು ಸಾಲಿನಲ್ಲಿ
ಹಿರಿದಾದ ಸಂದೇಶ ಸಾರುವ ಮೂಲಕ ಎಲ್ಲರೂ ಸೇರಿ ಸಾಹಿತ್ಯ ಬೆಳೆಸೋಣ ಎನ್ನುತ್ತ ತಮ್ಮ ಸಾಹಿತ್ಯ ಪ್ರೀತಿಯನ್ನು ಬಹು ಸೊಗಸಾಗಿ ವ್ಯಕ್ತಪಡಿಸಿದ್ದಾರೆ. ಇಂಥಹ ಒಂದು ಉತ್ತಮ ಚುಟುಕು ಸಂಕಲನ ಓದುವ ಅವಕಾಶ ಸಿಕ್ಕ ಕಾರಣ ಅತ್ಯಂತ ಸಂತೋಷದಿಂದಲೇ ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ. ತಮ್ಮ ನಿವೃತ್ತಿ ಜೀವನದ ಪ್ರತಿ ಘಳಿಗೆಯನ್ನು ಸದುಪಯೋಗಪಡಿಸಿಕೊಂಡ ಬೀರಣ್ಣ ಎಂ ನಾಯಕರ ಜೀವನೋತ್ಸಾಹ ನಮ್ಮಂತಹ ಉದಯೋನ್ಮುಖ ಬರಹಗಾರರಿಗೆ ಪ್ರೇರಣೆಯಾಗಿದೆ ಎಂದು ಹೇಳುತ್ತ ಇವರಿಂದ ಇನ್ನೂ ಹೆಚ್ಚಿನ ಕೃತಿಗಳು ಸಾರಸ್ವತ ಲೋಕಕ್ಕೆ ಸೇರಲೆಂದು ಬಯಸುತ್ತೇನೆ.

ದೀಪಾಲಿ ಸಾಮಂತ
ದಾಂಡೇಲಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ