You are currently viewing ಅಪ್ಪನ ಚಪ್ಪಲಿ

ಅಪ್ಪನ ಚಪ್ಪಲಿ

ನನ್ನ ಅಪ್ಪನ ಬಾರವನ್ನು ಹೊತ್ತು
ತಿರುಗಿದ ಚಪ್ಪಲಿ ಇಂದು ನಮ್ಮ
ಮನೆಯ ಅಟ್ಟವನ್ನೇರಿದೆ

ಅದೇಷ್ಟೋ ಸಾರಿ ಮುಳ್ಳಿನಿಂದ
ಕಲ್ಲಿನಿಂದ ನನ್ನ ಅಪ್ಪನ ಪಾದ
ಕಾಪಾಡಿದ ಚಪ್ಪಲಿ ಇಂದು ಜೇಡರ
ಹುಳುವಿಗೆ ಆಸರೆಯಾಗಿದೆ

ತಂದಾಗಿನಿಂದ ಮುಳ್ಳುಗಳಿಂದ
ಚುಚ್ಚಿಸಿಕೊಂಡು ಮಳೆಯ ನೀರಿನಿಂದ
ತೊಯ್ದು ಬಿಸಿಲಿನ ತಾಪಕ್ಕೆ ಮೆತ್ತಗಾಗಿ
ನನ್ನ ಅಪ್ಪನ ಕಾಲು ತಾಕಿದ ತಕ್ಷಣ

ಎಲ್ಲವನ್ನೂ ಮರೆತು ಕಾಯಕ ನಿರತವಾದ
ಚಪ್ಪಲಿ ಇಂದು ಬಿಸಿಲಿನ ತಾಪವೂ
ಇಲ್ಲದೆ, ಮಳೆ ಹನಿಯ ತಂಪುಯಿಲ್ಲದೆ
ಮೂಲೆಯ ಅತಿಥಿಯಾಗಿದೆ

ಅನೇಕ ತ್ಯಾಪೆಗಳಿಂದ ಅಲಂಕೃತವಾದ
ಚಪ್ಪಲಿ ನನ್ನ ಹೊಸ ಬಟ್ಟೆ ಶೋಕಿಗಾಗಿ
ನೊಂದಿದೆ ಹಗಲು ರಾತ್ರಿ ಎನ್ನದೆ
ಹೊಲ, ಮನೆಯ ದಾರಿ ತುಳಿದಿದೆ

ನನ್ನ ಕಾಲಿಗೆ ಹೊಸ ಚಪ್ಪಲಿ ಸೇರಿಸಲು
ದಣಿದಿದೆ ಹೊಸ ಅಂಗಿ, ಹೊಸ ಜೀವನ,
ಹೊಸ ಊರಿನ ಪ್ರಯಾಣಕೆ ಮೆಟ್ಟಿಲಾಗಿದೆ

ನನ್ನ ಅಪ್ಪನ ಹಳೆಚಪ್ಪಲಿ
ನನ್ನ ಹೊಸ ಜೀವನಕ್ಕೆ ದುಡಿದಿದೆ
ಅಪ್ಪನ ಕಾಲಿಗೆ ಮುಳ್ಳು ಚುಚ್ಚದೆ
ಅವನ ಕಷ್ಟಕ್ಕೆ ಜೊತೆಯಾಗಿದೆ
ನನ್ನ ಬದುಕಿಗೆ ದಾರಿ ತೋರಿದೆ

ಡಾ ಶರಣಪ್ಪ ಆಡಕಾರ
ಸಾ. ಚಿಂಚಲಿ
ತಾ.ಜಿ. ಗದಗ ೫೮೨೧೧೭
೮೯೭೦೫೮೪೪೨೦


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.