ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ
ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು
ಕನ್ನಡಕ ಊದಲು ಉಸಿರಿಲ್ಲದೆ ನಿತ್ರಾಣಗೊಂಡ
ಮುದುಕ ಮಮ್ಮಲ ಮರುಗಿದ್ದಾನೆ
ಶತಮಾನದ ಹಿಂದೆ ಉಪವಾಸ
ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ
ನೆತ್ತಿಗೆ ನೆರಳು ಹೊಟ್ಟಿಗೆ ಕೂಳು
ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ
ಗಲ್ಲಿ ಗಲ್ಲಿಗಳಲ್ಲಿ
ಮಚ್ಚು-ಲಾಂಗು ಗಸ್ತು
ತಿರುಗುವುದನ್ನು ಕಂಡು ಬೊಚ್ಚು
ಬಾಯಿಯ ಮುದುಕ ಬೆಚ್ಚಿ ಬಿದ್ದಿದ್ದಾನೆ
ಅರಮನೆ ಗುರುಮನೆ
ಸೆರೆಮನೆಗಳಲೂ ಕಿಡಿನುಡಿಯ ಕೆನ್ನಾಲಿಗೆ
ಚಾಚಿ ಝೇಂಕಾರ ವಾಡುತ್ತಿರುವುದನು
ಕಂಡು ದಿಗ್ಭ್ರಾಂತನಾಗಿದ್ದಾನೆ
ಅಗಸಿ ಬಾಗಿಲಲ್ಲಿ ಜಾತೀಯತೆಯ
ಹೆಬ್ಬಾವು ಬಾಯಿ ತೆರೆದಿರುವುದನ್ನು
ಕಂಡು ಪೆಚ್ಚುಮೋರೆ ಮಾಡಿ ಸೌಹಾರ್ದತೆಯ
ಓಣಿಗೆ ಹೆಜ್ಜೆ ಹಾಕಲು ನಡುಗುತ್ತಿದ್ದಾನೆ
ಮೂರಕ್ಕೆ ಮೂರು ಬಿಟ್ಟು ಆರನೇರಿ
ಗುಬ್ಬಿಯ ಉದರದಲ್ಲಿ ಬಂದೂಕಿನ
ಬೀಜ ಬಿತ್ತಿದಹೊಲದೊಡೆಯನ
ಕಂಡು ಕಸಿವಿಸಿಗೊಂಡಿದ್ದಾನೆ
ಖಾದಿ ಕೇಂದ್ರ ಘೋಷಿಸಿದ
ರಿಬೇಟಿನಲ್ಲಿ ಮಾರ್ಕೆಟ್ ಮಾಲ್ ಗಳಲ್ಲಿ
ಗಾಂಧಿಗಿರಿ ಕೊಳ್ಳಲು ಮುಗೆಬಿದ್ದ
ಗ್ರಾಹಕರಿಗೆ ಕಂಡು ತಬ್ಬಿಬ್ಬು ಗೊಂಡಿದ್ದಾನೆ
ನಗ್ನ ಫಕೀರನ ಬೆತ್ತಕೆ ಪಶ್ಚಿಮದ
ಬೆಟ್ಟವೂಅದುರಿರಲು ನೂಲಿಲ್ಲದ
ಚರಕ ತಿರುಗಿಸಲುಪೈಪೋಟಿಗಿಳಿದ
ಸೆಲ್ಫಿಗಳ ಕಂಡು ಕನಿಕರ ಪಡುತ್ತಿದ್ದಾನೆ
ರಕ್ತಸಿಕ್ತ ಕರಗಳಲಿ ಹಿಡಿದ
ಪೊರಕೆಯಿಂದ ಸ್ವಚ್ಛ ಭಾರತ ಘೋಷಣೆ
ಮನೆ ಮನದ ಅಂಗಳದಲ್ಲೂ ನೆತ್ತರದ
ರಂಗೋಲಿ ಕಂಡು ಚಿಂತಾಕ್ರಾಂತನಾಗಿದ್ದಾನೆ
ಮೂರು ಕೋತಿಗಳ ಜಾಗೆಯಲ್ಲಿ
ಮತ್ತೊಂದು ಕೋತಿ ಸೇರಿದೆಉರಿಯುವ
ಮನೆಗಳ ಗಳ ಹಿರಿಯುವವರನು
ಕಂಡು ಕಣ್ ಕಣ್ ಪಿಳಿಕಿಸುತ್ತಿದ್ದಾನೆ
ಗುಂಡಿಗೆ ಗುಂಡಿಗೆಯೊಡ್ಡುತ್ತಲೇ
ತಿಂಗಳ ತಿಳಿವು ಮನೆ ಅಂಗಳಕೆ ಬರಲೆಂದು
ಗಾಂಧಿ ಸರ್ಕಲ್ ನಲ್ಲಿ ನಿಂತ ಭೈರಾಗಿಗೆ
ಕಂಡು ಮುದುಕ ಮೌನವಾಗಿದ್ದಾನೆ
ಲೋಕದ ನಿಯಮದಂತೆ ಕವಿ ಸತ್ತು
ಕವಿತೆ ಉಳಿಯಬೇಕು ಗಾಂಧಿ ಸತ್ತು ಗಾಂಧಿ
ತತ್ವ ಗಳು ಉಳಿಯದಿರುವುದಕೆ ಶಾಂತಿಯ
ಪಾರಿವಾಳ ಹಿಂಡು ಗೊಣಗುತ್ತಿವೆ
ಬಡಕಲು ಶರೀರದಲ್ಲೂ ಸಾವಿರ ವಿದ್ಯುತ್ ಬಲ್ಬುಗಳ
ಬೆಳಕಿನ ಶಕ್ತಿಅಂಬರದೆತ್ತರದ ನಿಲುವಿನ ಉಕ್ಕಿನೆದೆಯ
ವೀರನಿಗೆ ಭಾರತ ಮಾತೆ ಅಶ್ರುತರ್ಪಣ ಗೈದು ಮತ್ತೊಂದು
ಕರ್ಬಲಾದ ಪಡಸಾಲಿಯಲಿ ಶಾಂತಿ ಮಂತ್ರ ಜಪಿಸುತಿಹಳು
ಆತ್ಮ ಸಾಕ್ಷಿಯ ಸಾಕ್ಷಾತ್ಕಾರ
ಪ್ರೇಮದ ಹಾದಿಯ ಪಥಿಕನ
ಬರುವಿಕೆಗಾಗಿ ಸತ್ಯ ಮಾರ್ಗದ ದಂಡಕ
ಹಿಡಿದುಗಾಂಧಿ ಬೀಜ ಬಿತ್ತುತ್ತಿದ್ದೇನೆ
ರಾಮ ರಹೀಮ್ ಹೇ ರಾಮ್
ಬಂದು ಒಕ್ಕಲು ಮಾಡಿ
ನನ್ನ ಜೊತೆಗೂಡಿ ಅವರು
ಇವರು ಎಲ್ಲರೂ ಬರಲಿ ರಾಶಿ ಕಣದಲ್ಲಿ
ಸಂಬ್ರುದ್ಧ ಫಸಲು ತುಂಬಲು
ಎ ಎಸ್. ಮಕಾನದಾರ
ನಿರಂತರ ಪ್ರಕಾಶನ
ಎಂ ಆರ್ ಅತ್ತಾರ ಬಿಲ್ಡಿಂಗ್
ಅಮರೇಶ್ವರ್ ನಗರ 5ನೆ ಕ್ರಾಸ್
ಗದಗ 582103
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.